
ಇಂದು ನಾಡಿನೆಲ್ಲೆಡೆ ನಾಗರ ಪಂಚಮಿಯ (Nag Panchami) ಸಂಭ್ರಮ. ಒಂದೊಂದು ಊರಲ್ಲಿ ಒಂದೊಂದು ರೀತಿಯ ಪೂಜೆ ಮಾಡುತ್ತಾರೆ. ಅದರಲ್ಲೂ ತುಳುನಾಡಿನಲ್ಲಿ ನಾಗರ ಪಂಚಮಿ ಹಬ್ಬವನ್ನು ಬಹಳ ಭಕ್ತಿ ಪೂರ್ವಕವಾಗಿ ಆಚರಿಸಲಾಗುತ್ತದೆ. ಈ ದಿನ ಪ್ರತಿಯೊಬ್ಬರು ತಮ್ಮ ಕುಟುಂಬದ ನಾಗನ ವಿಗ್ರಹಕ್ಕೆ ಹಾಲೆರೆಯುವ ಮೂಲಕ ನಾಗನ ಕೃಪೆಗೆ ಪಾತ್ರರಾಗುತ್ತಾರೆ. ಇಲ್ಲಿನ ಇನ್ನೊಂದು ವಿಶೇಷವೇನೆಂದರೆ, ನಾಗಾರಾಧನೆಯೇ ಆಗಿರಲಿ ಅಥವಾ ದೈವಾರಾಧನೆಯೇ ಆಗಿರಲಿ ದೇವರಿಗೆ ಹೆಚ್ಚಾಗಿ ಹಿಂಗಾರ ಹೂವನ್ನೇ (betel nut flower) ಅರ್ಪಿಸುತ್ತಾರೆ. ಅದರಲ್ಲೂ ನಾಗನಿಗೆ ಹಿಂಗಾರದ ಹೂವು ಬಲು ಪ್ರಿಯ ಎಂದು ಹೇಳ್ತಾರೆ. ಅಷ್ಟಕ್ಕೂ ನಾಗನಿಗೆ ಹಿಂಗಾರದ ಹೂವು ಏಕೆ ಪ್ರಿಯ, ನಾಗಾರಾಧನೆಯಲ್ಲಿ ಈ ಹೂವನ್ನೇ ಪ್ರಧಾನವಾಗಿ ಏಕೆ ಬಳಸಲಾಗುತ್ತದೆ ಎಂಬ ಮಾಹಿತಿಯನ್ನು ಕಶೆಕೋಡಿ ಸೂರ್ಯನಾರಾಯಣ ಭಟ್ ಟಿವಿ 9 ನೊಂದಿಗೆ ಹಂಚಿಕೊಂಡಿದ್ದಾರೆ.
ವಿಶೇಷವಾಗಿ ತುಳುನಾಡಿನಲ್ಲಿ ಹಿಂಗಾರಕ್ಕೆ ವಿಶೇಷ ಮಹತ್ವವಿದೆ. ಇಲ್ಲಿನ ನಾಗಾರಾಧನೆ, ದೈವಾರಾಧನೆ ಸೇರಿದಂತೆ ಪ್ರತಿಯೊಂದು ಪೂಜೆಗಳಲ್ಲೂ ಪ್ರಧಾನವಾಗಿ ಪಿಂಗಾರ ಅಂದರೆ ಹಿಂಗಾರದ ಹೂವನ್ನೇ ಬಳಸಲಾಗುತ್ತದೆ. ಅದರಲ್ಲೂ ನಾಗನಿಗೆ ಹಿಂಗಾರದ ಹೂವನ್ನೇ ಅರ್ಪಿಸಲಾಗುತ್ತದೆ. ನಾಗನಿಗೆ ಹಿಂಗಾರದ ಹೂವು ಪ್ರಿಯ ಎಂಬ ಕಾರಣದಿಂದ ಇಲ್ಲಿ ನಾಗಾರಾಧನೆಯಲ್ಲಿ ಈ ಹೂವನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಶಾಸ್ತ್ರಗಳಲ್ಲಿಯೂ ಹಿಂಗಾರ ನಾಗನಿಗೆ ಪ್ರಿಯವಾದ ಅಂದರೆ ಪ್ರೀತಿಯ ಹೂವು ಎಂಬ ಉಲ್ಲೇಖವಿದೆ. ನಾಗನಿಗೆ, ಸುಬ್ರಮಣ್ಯನಿಗೆ, ದೈವಗಳಿಗೆ ಈ ಹೂವು ಪ್ರಿಯವಾದದ್ದು, ಆದರೆ ಯಾಕೆ ಇದೇ ಹೂವು ನಾಗನಿಗೆ ಪ್ರಿಯವೆಂಬ ಉಲ್ಲೇಖವಿಲ್ಲ ಎಂದು ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದ್ದಾರೆ.
ಹಿಂದಿನಿಂದಲೂ ಆಯಾ ಊರುಗಳಲ್ಲಿ ಯಾವ ಕೃಷಿ ಮಾಡುತ್ತಾರೋ ಅದನ್ನೇ ದೇವರಿಗೆ ಅರ್ಪಿಸುವ ಪದ್ಧತಿ ನಡೆದುಕೊಂಡು ಬಂದಿದೆ. ಅದೇ ರೀತಿ ತುಳುನಾಡಿನ ಕಡೆ ಹೆಚ್ಚಾಗಿ ಅಡಿಕೆ ಬೆಳೆಯುವ ಕಾರಣ ಅದರ ಹೂವಾದ ಹಿಂಗಾರವನ್ನೇ ಇಲ್ಲಿನ ಜನ ದೇವರಿಗೆ ಅರ್ಪಿಸುತ್ತಾರೆ. ನಾವು ಏನು ಬೆಳೆಯುತ್ತೇವೆಯೋ ಅದನ್ನೇ ದೇವರಿಗೆ ಅರ್ಪಿಸುವ ಕ್ರಮ ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತಹದ್ದು, ಅದೇ ರೀತಿ ತುಳುನಾಡಿನ ಭಾಗದ ಜನರ ಜೀವನಕ್ಕೆ ಆಧಾರವಾಗಿರುವಂತಹದ್ದು, ಒಂದು ಭತ್ತ ಇನ್ನೊಂದು ಅಡಿಕೆ. ಆದ ಕಾರಣ ಅಡಿಕೆಯ ಹೂವು ಹಿಂಗಾರವನ್ನೇ ದೇವರಿಗೆ ಅರ್ಪಿಸುವ ಸಂಪ್ರದಾಯ ನಡೆಯುತ್ತಾ ಬಂತು ಎಂದು ಅವರು ಹೇಳಿದ್ದಾರೆ.
ಶಾಸ್ತ್ರಗಳಲ್ಲಿ ಫಲ ಮತ್ತು ಪುಷ್ಪಗಳಲ್ಲಿ ಬಹುಪುತ್ರತ್ವಂ ಎಂಬುದಿದೆ. ಅದರಲ್ಲಿ ದಾಳಿಂಬೆ ಮತ್ತು ಹಿಂಗಾರದ ಹೂವು ಪ್ರಧಾನವಾದ್ದು. ಅಂದರೆ ಬಹು ಸಂತಾನ ಪ್ರಾಪ್ತಿಯಾಗಲು ದೇವರಿಗೆ ಇದನ್ನೇ ಅರ್ಪಿಸಲಾಗುತ್ತದೆ. ಫಲಗಳ ಪೈಕಿ ಗಣೇಶನಿಗೆ ದಾಳಿಂಬೆ ಅರ್ಪಿಸಿದರೆ, ನಾಗನಿಗೆ ಹಿಂಗಾರದ ಹೂವನ್ನು ಅರ್ಪಿಸಲಾಗುತ್ತದೆ.
ನಾಗನಿಗೆ ಹಿಂಗಾರದ ಹೂವು ಅರ್ಪಿಸುವ ಒಂದು ಉದ್ದೇಶವೆಂದರೆ, ಹಾವುಗಳು ರೈತರಿಗೆ ಕೃಷಿ ಸ್ನೇಹಿಗಳಾಗಿವೆ. ಕೃಷಿಗೆ ಯಾವುದು ಮಾರಕ ಆಗುತ್ತದೋ ಅಂದರೆ ಕೀಟ ಇತ್ಯಾದಿಗಳನ್ನು ನಾಗಗಳು ಅಂದರೆ ಹಾವುಗಳು ತಿನ್ನುತ್ತವೆ. ಹೀಗೆ ನಾಗಗಳು ಕೃಷಿ ಭೂಮಿಯ ಕೀಟಗಳನ್ನು ತಿಂದು ಕೃಷಿ ರಕ್ಷಣೆಯನ್ನು ಮಾಡುತ್ತವೆ ಎಂದು ಜನ ನಾಗಾರಾಧನೆಯ ಜೊತೆಗೆ ಹಿಂಗಾರದ ಹೂವನ್ನು ನಾಗನಿಗೆ ಅರ್ಪಿಸುತ್ತಾರೆ.
ಇದನ್ನೂ ಓದಿ: ನಾಗದರ್ಶನ ಹಾಗೂ ನಾಗ ಮಂಡಲದ ನಡುವಿನ ವ್ಯತ್ಯಾಸವೇನು? ಏನಿದರ ವಿಶೇಷತೆ?
ನಾಗನನ್ನು ಪ್ರಧಾನವಾಗಿ ಆರಾಧನೆ ಮಾಡುವುದರ ಹಿಂದೆ ಇರುವ ಇನ್ನೊಂದು ಮುಖ್ಯ ಉದ್ದೇಶವೆಂದರೆ, ಅದು ಸಂತಾನ ಪ್ರಾಪ್ತಿ. ನಾಗ ಸಂತಾನ ಭಾಗ್ಯವನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಇದೆ. ಅಂದರೆ ದಾಂಪತ್ಯ ಸುಖವನ್ನು ಅನುಗ್ರಹ ಮಾಡುವವರು ನಾಗ ದೇವತೆಗಳು. ಆದ್ದರಿಂದ ಪುತ್ರ ಸಂತಾನಕ್ಕಾಗಿ ಜನ ನಾಗ ದೇವರನ್ನು ಆರಾಧಿಸುತ್ತಾರೆ. ನಾಗ ಬಹು ಸಂತಾನವನ್ನು ಅನುಗ್ರಹ ಮಾಡುತ್ತಾನೆ ಎಂಬ ನಂಬಿಕೆಯಿಂದ ಹಿಂದಿನಿಂದಲೂ ನಾಗನಿಗೆ ಹಿಂಗಾರದ ಹೂವನ್ನೇ ಅರ್ಪಿಸುವ ಪದ್ಧತಿ ರೂಢಿಯಲ್ಲಿದೆ.
ಇತರ ಹೂವುಗಳಿಗೆ ಹೋಲಿಸಿದರೆ ಹಿಂಗಾರದ ಹೂವಿನಲ್ಲಿ ಸಾವಿರಾರು ಎಸಳುಗಳಿರುತ್ತವೆ. ಮತ್ತು ಈ ಪುಷ್ಪಗಳಿಂದ ಫಲಗಳು ಅಂದರೆ ಅಡಿಕೆಗಳು ಕೂಡ ಗೊಂಚಲು ಗೊಂಚಲಾಗಿಯೇ ಬಿಡುತ್ತವೆ. ಅದೇ ರೀತಿ ಬಹು ಸಂತಾನವನ್ನು ಅನುಗ್ರಹ ಮಾಡುವವನು ನಾಗ. ಹೀಗೆ ಒಂದು ಕೃಷಿ ಇನ್ನೊಂದು ಬಹು ಪುತ್ರತ್ವ ಈ ಎರಡು ಉದ್ದೇಶಗಳಿಗಾಗಿ ಉಳಿದ ಹೂವುಗಳಿಗಿಂತ ನಾಗನಿಗೆ ಹಿಂಗಾರದ ಹೂವನ್ನೇ ಅರ್ಪಿಸುವ ಸಂಪ್ರದಾಯ, ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ ಎಂದು ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ