ಇತ್ತೀಚೆಗಿನ ದಿನಗಳಲ್ಲಿ ಫ್ಯಾಷನ್ ಲೋಕವು ವಿಸ್ತಾರವಾಗಿದೆ. ಹೀಗಾಗಿ ವಿವಿಧ ದೇಶಗಳ ಸಂಪ್ರಾದಾಯಿಕ ಉಡುಗೆ ತೊಡುಗೆಗಳು ನಾನಾ ರೀತಿಯ ಬದಲಾವಣೆಗಳೊಂದಿಗೆ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿವೆ. ಈ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಬದಲಾವಣೆಗಳಾದರೂ ಆಯಾ ದೇಶದ ಜನರು ತಮ್ಮ ತಮ್ಮ ಸಾಂಪ್ರದಾಯಿಕ ಉಡುಗೆಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ.
ಜಪಾನ್‌ನಲ್ಲಿ, ಸಾಂಪ್ರದಾಯಿಕ ಉಡುಗೆ ಕಿಮೋನೊ ಆಗಿದೆ. ಈ ಉಡುಗೆಯಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಉಡುಪಿನ ವಿನ್ಯಾಸವು ಸ್ವಲ್ಪ ಭಿನ್ನವಾಗಿರುತ್ತದೆ. ಜಪಾನೀಗರು ಈ ಕಿಮೋನೋ ಉಡುಪನ್ನು ಮುಖ್ಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಧರಿಸುತ್ತಾರೆ. ಅದಲ್ಲದೇ ಧರಿಸುವುದಕ್ಕೆ ಆರಾಮದಾಯಕವಾಗಿದ್ದು, ನೋಡುವುದಕ್ಕೂ ಆಕರ್ಷಕವಾಗಿದೆ.
ಮ್ಯಾನ್ಮಾರ್‌ನ ಸಾಂಪ್ರದಾಯಿಕ ಉಡುಗೆಯಾಗಿರುವ ಲಾಂಗಿಯನ್ನು ಪುರುಷರು ಹಾಗೂ ಮಹಿಳೆಯರು ಇಬ್ಬರೂ ಧರಿಸುತ್ತಾರೆ. ಪುರುಷರ ಲಾಂಗಿಯನ್ನು ಪಾಸೊ ಎಂದು ಕರೆಯಲಾಗುತ್ತದೆ. ಮಹಿಳೆಯರು ಧರಿಸುವ ಉಡುಗೆಯನ್ನು ಹ್ಟಮೈನ್ ಎಂದು ಕರೆಯಲಾಗುತ್ತದೆ. ಸಿಲಿಂಡರಾಕಾರದ ಆಕಾರದಲ್ಲಿ ಹೊಲಿಯಲಾದ ಬಟ್ಟೆಯಾಗಿದ್ದು, ಮೈಗೆ ಸುತ್ತಿದ್ದಂತಿದ್ದು, ಸ್ಕರ್ಟ್‌ನಂತೆ ಕಾಣುತ್ತದೆ.
ಚುಟ್ ಥಾಯ್ ಈ ಉಡುಗೆ ಥೈಲ್ಯಾಂಡ್‌ನಲ್ಲಿ ಮಹಿಳೆಯರ ಸಾಂಪ್ರಾದಾಯಿಕ ಉಡುಗೆಯಾಗಿದೆ. ಮಹಿಳೆಯರು ಕುಪ್ಪಸ ಹಾಗೂ ಶರ್ಟ್ ಧರಿಸಿ, ಕುಪ್ಪಸದ ಮೇಲೆ ರೇಷ್ಮೆಯ ಶಾಲನ್ನು ಧರಿಸಲಾಗುತ್ತದೆ. ಥೈಲ್ಯಾಂಡ್‌ನಲ್ಲಿ ಪುರುಷರ ಸಾಂಪ್ರದಾಯಿಕ ಉಡುಗೆಯಾಗಿ ಸೂಯಾ ಫ್ರರಾತ್ಚಾಥನ್ ಧರಿಸುತ್ತಾರೆ. ಈ ಉಡುಗೆಯು ಶರ್ಟ್, ಕೆಳಗೆ ಪ್ಯಾಂಟ್ ರೀತಿಯಿದ್ದು ಉದ್ದನೆಯ ತೋಳು, ಅಗಲವಾದ ಕಾಲರ್, ಸೊಂಟಕ್ಕೆ ಪಟ್ಟಿಯಿದ್ದು ಆಕರ್ಷಕವಾಗಿದೆ. ವಿವಿಧ ಹಬ್ಬಗಳ ವಿವಾಹ ಸಮಾರಂಭಗಳಲ್ಲಿ ಅಥವಾ ಧಾರ್ಮಿಕ ಸಮಾರಂಭಗಳಲ್ಲಿ ಈ ಉಡುಗೆಯನ್ನು ಧರಿಸುವುದನ್ನು ಕಾಣಬಹುದು.
ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಉಡುಗೆ ಸೀರೆಯಾಗಿದೆ ಆಯಾ ರಾಜ್ಯಗಳಲ್ಲಿ ಮಹಿಳೆಯರು ಸೀರೆಯನ್ನು ಉಡುವ ರೀತಿಯಲ್ಲಿ ಭಿನ್ನತೆಯನ್ನು ಕಾಣಬಹುದು. ಭಾರತೀಯ ಪುರುಷರ ಸಾಂಪ್ರಾದಾಯಿಕ ಉಡುಗೆಯಾಗಿ ರೇಷ್ಮೆ ಪಂಚೆ ಹಾಗೂ ಅಂಗಿಯನ್ನು ಧರಿಸುತ್ತಾರೆ. ಮದುವೆ, ಹಬ್ಬ ಹರಿದಿನ, ಪೂಜೆ ಸೇರಿದಂತೆ ಇನ್ನಿತ್ತರ ಸಮಾರಂಭಗಳಲ್ಲಿ ಭಾರತೀಯರು ಈ ಸಾಂಪ್ರದಾಯಿಕ ಉಡುಗೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಭೂತಾನ್ ಭಾರತದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಅತ್ಯಂತ ಚಿಕ್ಕ ದೇಶವಾಗಿದ್ದು, ಇಲ್ಲಿನ ಪುರುಷರು ಧರಿಸುವ ಸಾಂಪ್ರದಾಯಿಕ ಬಟ್ಟೆಗಳನ್ನು ಘೋ ಎನ್ನಲಾಗುತ್ತದೆ. ಮಹಿಳೆಯರ ಸಾಂಪ್ರದಾಯಿಕ ಉಡುಗೆಗಳನ್ನು ಕಿರಾ ಎಂದು ಕರೆಯಲಾಗುತ್ತದೆ. ಘೋ ಎಂಬುದು ಮೊಣಕಾಲಿನವರೆಗೆ ಇರುವ ನಿಲುವಂಗಿಯಾಗಿದ್ದು, ಸೊಂಟದ ಮೇಲೆ ಪಟ್ಟಿಯನ್ನು ಹೊಂದಿದೆ. ಮಹಿಳೆಯರ ಕಿರಾ ಉಡುಗೆಯು ಪುರುಷರ ಉಡುಗೆಯನ್ನೇ ಹೋಲುತ್ತದೆ. ಕಿರಾವು ಕಾಲಿನವರೆಗೆ ಇದ್ದು, ಬ್ರೂಚೆಸ್ ಸಹಾಯದಿಂದ ಭುಜದ ಮೇಲೆ ಕ್ಲಿಪ್ ಮಾಡಲಾಗಿರುತ್ತದೆ. ಪುರುಷರು ಸರ್ಕಾರಿ ಘಟಕಗಳು ಅಥವಾ ಶಾಲೆಗಳಲ್ಲಿ ಉದ್ಯೋಗದಲ್ಲಿದ್ದರೆ ಘೋ ಧರಿಸುವುದು ಕಡ್ಡಾಯವಾಗಿದೆ.
ಇಂಡೋನೇಷ್ಯಾದಲ್ಲಿ ಸಾಂಪ್ರದಾಯಿಕ ಉಡುಪುಗಳು ಈಗಲೂ ಬಹಳ ಪ್ರಚಲಿತದಲ್ಲಿವೆ. ಇಂಡೋನೇಷ್ಯಾದ ಬಟ್ಟೆಗಳು ಹೂವಿನ ಮಾದರಿಯನ್ನು ಹೊಂದಿದೆ. ಸಾಂಪ್ರದಾಯಿಕ ಉಡುಗೆಯಾಗಿರುವ ಸರೋಂಗ್ ಅನ್ನು ರೇಷ್ಮೆ, ಪಾಲಿಯೆಸ್ಟರ್ ಅಥವಾ ಹತ್ತಿಯಿಂದ ತಯಾರಿಸಲಾಗುತ್ತದೆ. ಸುಂಡಾನೀಸ್, ಬಲಿನೀಸ್ ಮತ್ತು ಜಾವಾನೀಸ್ ಜನರು ಈ ಸರೋಂಗ್ ಅನ್ನು ಬ್ಲೌಸ್ ಮತ್ತು ಬ್ರೂಚ್‌ನೊಂದಿಗೆ ಧರಿಸುತ್ತಾರೆ. ಪಾಶ್ಚಿಮಾತ್ಯ ಸಂಸ್ಕೃತಿಯಿಂದಾಗಿ ಈ ಸಾಂಪ್ರದಾಯಿಕ ಬಟ್ಟೆಗಳಿಗೆ ಹಲವಾರು ಮಾರ್ಪಡುಗಳನ್ನು ಮಾಡಲಾಗಿದೆ.
ಫರೋ ದ್ವೀಪಗಳು ತನ್ನ ಸಾಂಪ್ರದಾಯಿಕ ಉಡುಗೆ ಸ್ವೆಟರ್ ವೆಸ್ಟ್. ಈ ಸ್ವೆಟರ್ ನಡುವಂಗಿಗಳನ್ನು ಸಾಮಾನ್ಯವಾಗಿ ಕರಕುಶಲತೆಯಿಂದ ಮಾಡಲಾಗಿದೆ. ಸ್ವೆಟರ್‌ನ ಮಧ್ಯದಲ್ಲಿ ಉದ್ದವಾದ ಲೇಸ್ ಇದ್ದು, ಆಕರ್ಷಕವಾಗಿ ಕಾಣುವಂತೆ ಮಾಡಿದೆ. ಆದರೆ ಇದೀಗ ಸ್ವೆಟರ್ ವೆಸ್ಟ್ ಉಡುಗೆಯಲ್ಲಿ ವಿವಿಧ ವಿನ್ಯಾಸದೊಂದಿಗೆ ಸಾಕಷ್ಟು ಬದಲಾವಣೆಯನ್ನು ಮಾಡಲಾಗಿದೆ.
ಮಡಗಾಸ್ಕರ್ ಸಾಂಪ್ರದಾಯಿಕ ಉಡುಗೆಯಾಗಿರುವ ಲಂಬಾವು ನೋಡುವುದಕ್ಕೆ ತುಂಬಾ ವರ್ಣರಂಜಿತವಾಗಿದೆ. ಲಂಬಾ ಆರಾಮದಾಯಕವಾಗಿದ್ದು ದೇಹದ ಸುತ್ತ ಸುತ್ತಿಕೊಂಡಿರುತ್ತಾರೆ. ಹಗುರವಾದ ಮತ್ತು ವರ್ಣರಂಜಿತ ವಿನ್ಯಾಸವನ್ನು ಹೊಂದಿದೆ.
ಇದನ್ನೂ ಓದಿ: ಭಾರತದ ಈ ನಗರದಲ್ಲಿ ಗೋಬಿ ಮಂಚೂರಿಯನ್ ಮಾರಾಟ ನಿಷೇಧ
ಪೋಲಿಷ್ ಸಾಂಪ್ರದಾಯಿಕ ಉಡುಗೆಯಲ್ಲಿ ಒಂದಾಗಿದ್ದು, ಲಿನಿನ್ ಮತ್ತು ಉಣ್ಣೆಯಿಂದ ತಯಾರಿಸಲಾಗುತ್ತದೆ. ಇದು ಗಾಢವಾದ ಬಣ್ಣಗಳು, ವಿಧವಾದ ಕಸೂತಿಯಿಂದ ಮಾಡಲ್ಪಟ್ಟಿದೆ ಈ ಉಡುಗೆಯಲ್ಲಿ ಉದ್ದನೆಯ ಸ್ಕರ್ಟ್ ಮತ್ತು ಏಪ್ರನ್‌ನೊಂದಿಗೆ ಬಿಳಿ ಕುಪ್ಪಸವನ್ನು ಹೊಂದಿದ್ದು, ವರ್ಣರಂಜಿತ ರಿಬ್ಬನ್‌ಗಳು ಮತ್ತು ಲೇಸ್‌ಗಳಿಂದ ಅಲಂಕರಿಸಲಾಗುತ್ತದೆ. ಪುರುಷರ ವೇಷಭೂಷಣಗಳು ಸಾಮಾನ್ಯವಾಗಿ ಉದ್ದನೆಯ ತೋಳಿನ ಅಂಗಿ ಮತ್ತು ಪ್ಯಾಂಟ್ ಮತ್ತು ವೆಸ್ಟ್ ಅಥವಾ ಜಾಕೆಟ್ ಅನ್ನು ಒಳಗೊಂಡಿರುತ್ತವೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಾಮಾನ್ಯವಾಗಿ ತಲೆಗೆ ಸ್ಕಾರ್ಫ್ ಅಥವಾ ಶಾಲು ಧರಿಸುತ್ತಾರೆ.
ಸಾಂಪ್ರದಾಯಿಕ ಬಲಿನೀಸ್ ಉಡುಗೆಯು ಗಾಢವಾದ ಬಣ್ಣವನ್ನು ಹೊಂದಿದ್ದು, ಕುಪ್ಪಸ ಮತ್ತು ಕೈನ್, ಸ್ಕಾರ್ಫ್ ನೊಂದಿಗೆ ಧರಿಸಲಾಗುತ್ತದೆ. ಸಾಂಪ್ರದಾಯಿಕ ಬಲಿನೀಸ್ ಉಡುಗೆಯು ಬಾಲಿ ಜನರ ಸ್ಥಾನಮಾನದ ಸಂಕೇತವಾಗಿದೆ. ಈ ಉಡುಗೆಯನ್ನು ಮದುವೆ, ಹಬ್ಬ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಧರಿಸಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ