
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೋದ್ಯಮ, ನಿಖರ ಮಾಹಿತಿ ನೀಡುವ ಮೂಲಕ ಸಮಾಜ ಹಾಗೂ ಆಡಳಿತ ವರ್ಗಗಳ ಅಂಕುಗೊಂಕುಗಳನ್ನು ತಿದ್ದಿ ಜವಾಬ್ದಾರಿಯುತ ಸಮಾಜವನ್ನು ನಿರ್ಮಿಸಲು ಶ್ರಮಿಸುತ್ತಿವೆ. ನಿಖರ ಸುದ್ದಿ ಕೊಡುವುದಷ್ಟೇ ಅಲ್ಲ ಪತ್ರಿಕೋದ್ಯಮವು ಸಾರ್ವಜನಿಕರು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ಕಾರ್ಯನಿವರ್ಹಿಸುತ್ತಿದೆ. ಪತ್ರಿಕೋದ್ಯಮದ ಗುರಿ ಜನರಿಗೆ ಎದುರಾಗುವ ಯಾವುದೇ ಅನ್ಯಾಯವನ್ನು ಬೆಳಕಿಗೆ ತರುವುದು ಮತ್ತು ಸಾರ್ವಜನಿಕ ವ್ಯವಸ್ಥೆಯ ದುಸ್ಥಿತಿಯನ್ನು ಎತ್ತಿ ತೋರಿಸುವುದಾಗಿದೆ. ಹೀಗೆ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವಲ್ಲಿ ಪತ್ರಿಕಾ ಮಾಧ್ಯಮವು ವಹಿಸುವ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ನವೆಂಬರ್ 16 ರಂದು ಭಾರತದಲ್ಲಿ ರಾಷ್ಟ್ರೀಯ ಪತ್ರಿಕಾ (National Press Day) ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ರಾಷ್ಟ್ರೀಯ ಪತ್ರಿಕಾ ದಿನವನ್ನು ನವೆಂಬರ್ 16, 1966 ರಂದು ಪ್ರಾರಂಭಿಸಲಾಯಿತು. ಈ ಆಚರಣೆಯ ಹಿನ್ನೆಲೆಯನ್ನು ನೋಡುವುದಾದರೆ 1956 ರಲ್ಲಿ ಮೊದಲ ಪತ್ರಿಕಾ ಆಯೋಗವು ಪತ್ರಿಕೋದ್ಯಮದ ನೈತಿಕತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಪೂರೈಸುವ ಉದ್ದೇಶದಿಂದ ಶಾಸನಬದ್ಧ ಅಧಿಕಾರವನ್ನು ಹೊಂದಿರುವ ಸಂಸ್ಥೆಯನ್ನು ರಚಿಸಲು ನಿರ್ಧರಿಸಿತು. ಈ ನಿಟ್ಟಿನಲ್ಲಿ 1966, ಜುಲೈ 04 ರಂದು ಪ್ರೆಸ್ ಕೌನ್ಸಿಲ್ ಅನ್ನು ಭಾರತದಲ್ಲಿ ಸ್ಥಾಪಿಸಲಾಯಿತು. ಅದರೆ ಈ ಸಂಸ್ಥೆ ನವೆಂಬರ್ 16, 1966 ರಿಂದ ತನ್ನ ಔಪಚಾರಿಕ ಕೆಲಸವನ್ನು ಪ್ರಾರಂಭಿಸಿತು. ದೇಶದಲ್ಲಿ ಆರೋಗ್ಯಕರ ಪ್ರಜಾಪ್ರಭುತ್ವವನ್ನು ಕಾಪಾಡುವಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಈ ಸಂಸ್ಥೆಯ ಸ್ಥಾಪನೆಯ ಸ್ಮರಣಾರ್ಥವಾಗಿ ರಾಷ್ಟ್ರೀಯ ಪತ್ರಿಕಾ ದಿನವನ್ನು ಪ್ರತಿವರ್ಷ ನವೆಂಬರ್ 16 ರಂದು ಆಚರಿಸಲಾಗುತ್ತದೆ.
ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು, ಇದು ಮಾಧ್ಯಮಗಳ ಕಾರ್ಯಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಹೊಂದಿದೆ. ಮತ್ತು ಇದು ದೇಶದಲ್ಲಿ ಆರೋಗ್ಯಕರ ಪ್ರಜಾಪ್ರಭುತ್ವವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಸಂಸ್ಥೆ ಪತ್ರಿಕೋದ್ಯಮದ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಕೆಲಸ ಮಾಡುತ್ತದೆ. ಇದರ ಜೊತೆಗೆ, ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಮಾಧ್ಯಮ ಸಂಬಂಧಿತ ದೂರುಗಳನ್ನು ಪರಿಹರಿಸಲು ಸಹ ಇದು ಕೆಲಸ ಮಾಡುತ್ತದೆ. ಪತ್ರಿಕಾ ಮಂಡಳಿಯು ಪತ್ರಕರ್ತರಿಗೆ ಮಾರ್ಗದರ್ಶನ ಮತ್ತು ಬೆಂಬಲವನ್ನು ಸಹ ನೀಡುತ್ತದೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿರುತ್ತಾರೆ. ಅವರನ್ನು ಹೊರತುಪಡಿಸಿ 28 ಇತರ ಸದಸ್ಯರಿದ್ದಾರೆ, ಅದರಲ್ಲಿ 20 ಮಂದಿ ಪತ್ರಿಕಾ ಮಾಧ್ಯಮದವರು, ಐವರು ಸದಸ್ಯರನ್ನು ಸಂಸತ್ತಿನ ಉಭಯ ಸದನಗಳಿಂದ ನಾಮನಿರ್ದೇಶನ ಮಾಡಲಾಗುತ್ತದೆ ಮತ್ತು ಉಳಿದ ಮೂವರು ಸದಸ್ಯರು ಸಾಂಸ್ಕೃತಿಕ, ಸಾಹಿತ್ಯ ಮತ್ತು ಕಾನೂನು ಕ್ಷೇತ್ರಗಳ ಪ್ರತಿನಿಧಿಗಳಾಗಿದ್ದಾರೆ.
ಇದನ್ನೂ ಓದಿ: ಇಂದಿನ ಮಕ್ಕಳೇ ನಾಳಿನ ದೇಶದ ಉಜ್ವಲ ಭವಿಷ್ಯ; ಮಕ್ಕಳ ದಿನಾಚರಣೆಯ ಹಿನ್ನೆಲೆಯೇನು?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ