ಒಂದು ಹೆಣ್ಣು ತಾಯಿಯಾದಾಗಲೇ ಆ ಹೆಣ್ಣಿನ ಜೀವನ ಪರಿಪೂರ್ಣವಾಗುತ್ತದೆ ಎನ್ನುವ ಮಾತಿದೆ. ಆದರೆ ತಾಯಿಯಾಗುವುದೆಂದರೆ ಅಷ್ಟು ಸುಲಭದ ಮಾತಲ್ಲ ಬಿಡಿ. ಹೆಣ್ಣು ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಆಕೆಯು ಅನುಭವಿಸುವ ನೋವನ್ನು ಹೇಳಲು ಅಸಾಧ್ಯ. ಹೆಣ್ಣು ಗರ್ಭಿಣಿಯಾದಾಗಿನಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಾಳೆ. ವಾಂತಿ, ವಾಕರಿಕೆ, ಮೂಡ್ ಬದಲಾವಣೆಗಳು ಮತ್ತು ಅಸಾಮಾನ್ಯ ಕಡುಬಯಕೆಗಳು ಈ ಎಲ್ಲಾ ಪರಿಸ್ಥಿತಿಗಳನ್ನು ಅನುಭವಿಸುತ್ತಾಳೆ. ಅದಲ್ಲದೇ, ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಸಾವನ್ನಪ್ಪಿದ ಅದೆಷ್ಟೋ ಪ್ರಕರಣಗಳಿವೆ. ಹೀಗಾಗಿ ಗರ್ಭಿಣಿಯರು ಹಾಗೂ ತಾಯಂದಿರ ಆರೋಗ್ಯ ರಕ್ಷಣೆಯ ಉದ್ದೇಶದಿಂದಲೇ ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಪ್ರತಿ ವರ್ಷ ಏಪ್ರಿಲ್ 11 ರಂದು ಆಚರಿಸಲಾಗುತ್ತಿದೆ.
2003 ರಲ್ಲಿ, ಭಾರತ ಸರ್ಕಾರವು ಏಪ್ರಿಲ್ 11 ರಂದು ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸಲು ಘೋಷಿಸಿತು. ಅದಕ್ಕೂ ಮೊದಲು ಈ ಅಭಿಯಾನವನ್ನು ವೈಟ್ ರಿಬ್ಬನ್ ಅಲೈಯನ್ಸ್ ಇಂಡಿಯ ಆರಂಭಿಸಿತು. ಈ ಸಂಸ್ಥೆಯು ತಾಯಂದಿರು ಮತ್ತು ಗರ್ಭಿಣಿಯರ ಆರೋಗ್ಯ ಸುರಕ್ಷತೆಯ ಪ್ರಾಮುಖ್ಯತೆಯ ಬಗ್ಗೆ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಕೊನೆಗೆ ಸರ್ಕಾರವು ಈ ದಿನವನ್ನು ಆಚರಿಸಲು ಮುಂದಾಯಿತು. ಅಂದಿನಿಂದ ಪ್ರತಿ ವರ್ಷವು ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಯುವಜನರಲ್ಲಿ ಹೃದಯಾಘಾತಕ್ಕೆ ಕಾರಣವೇನು? ಈ ತಪ್ಪು ಮಾಡಬೇಡಿ
ಮಹಿಳೆಯೂ ಗರ್ಭಧರಿಸಿದ ನಂತರದಲ್ಲಿ ಆಕೆಯ ಆರೋಗ್ಯವು ಬಹಳ ಮುಖ್ಯವಾಗುತ್ತದೆ. ಹೀಗಾಗಿ ಗರ್ಭಧಾರಣೆ, ಹೆರಿಗೆ ಹಾಗೂ ಹೆರಿಗೆಯ ನಂತರದ ಆರೋಗ್ಯ ಸೇವೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸಲಾಗುತ್ತದೆ. ಅದಲ್ಲದೇ ಸುರಕ್ಷಿತ ತಾಯ್ತನವನ್ನು ಪಡೆಯಲು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಹಾಗೂ ವೈದ್ಯಕೀಯ ತಪಾಸಣೆ ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಲಾಗುತ್ತದೆ. ಈ ಬಗ್ಗೆ ಪ್ರಾಥಮಿಕ ಆರೋಗ್ಯ ಸಂಸ್ಥೆಗಳು ಸೇರಿದಂತೆ ಇತರ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ