ವಿಮಾನ ಹಾರಾಟದ ಮೊದ್ಲು ಎಂಜಿನ್‌ಗಳ ಮೇಲೆ ಸತ್ತ ಕೋಳಿಗಳನ್ನು ಎಸೆಯೋದರ ಹಿಂದಿನ ಕಾರಣ ಗೊತ್ತಾ?
ವಿಮಾನ ಪ್ರಯಾಣವನ್ನು ಅತ್ಯಂತ ಸುರಕ್ಷಿತ ಸಾರಿಗೆ ವಿಧಾನವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ವಿಮಾನ ಹಾರಾಟಕ್ಕೂ ಮೊದಲು ಹಲವಾರು ಸುರಕ್ಷಿತ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅದರಲ್ಲಿ ಎಂಜಿನ್‌ಗಳ ಮೇಲೆ ಕೋಳಿ ಎಸೆಯೋದು ಕೂಡಾ ಒಂದು. ಅಷ್ಟಕ್ಕೂ ವಿಮಾನ ಹಾರಾಟಕ್ಕೂ ಮುನ್ನ ಕೋಳಿಗಳನ್ನು ಎಂಜಿನ್‌ಗಳ ಮೇಲೆ ಏಕೆ ಎಸೆಯುತ್ತಾರೆ? ಇದು ಯಾವ ರೀತಿಯ ಪರೀಕ್ಷೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ವಿಮಾನಯಾನವನ್ನು ವೇಗದ ಮಾತ್ರವಲ್ಲದೆ ಅತ್ಯಂತ ಸುರಕ್ಷಿತ ಸಾರಿಗೆ ವಿಧಾನವೆಂದು ಪರಿಗಣಿಸಲಾಗುತ್ತದೆ. ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಭೌತಿಕ ತಪಾಸಣೆ, ಬೋರ್ಡಿಂಗ್ ಪಾಸ್, ಪಾಸ್‌ಪೋರ್ಟ್ ಪರಿಶೀಲನೆಯನ್ನು ಮಾಡುವಂತೆ, ವಿಮಾನಯಾನ ಸಂಸ್ಥೆಗಳು ವಿಮಾನ ಹಾರಾಟಕ್ಕೂ ಮುನ್ನ ವಿಮಾನದಲ್ಲಿ ಯಾವುದೇ ದೋಷಗಳು, ತಾಂತ್ರಿಕ ತೊಂದರೆಗಳು ಇವೆಯೇ ಎಂದು ಭದ್ರತೆಯ ದೃಷ್ಟಿಯಿಂದ ವಿಮಾನವನ್ನು ಕೂಲಂಕುಷವಾಗಿ ಪರಿಶೀಲಿಸುತ್ತವೆ. ಅವುಗಳಲ್ಲಿ ವಿಮಾನವು (Flight) ಟೇಕ್ ಆಫ್ ಆಗುವ ಮೊದಲು ಸತ್ತ ಕೋಳಿಗಳನ್ನು ಎಂಜಿನ್‌ಗೆ ಏಕೆ ಎಸೆಯುವುದು ಕೂಡಾ ಒಂದು. ಆದರೆ ಹೆಚ್ಚಿನವರಿಗೆ ಹೀಗೆ ಸತ್ತ ಕೋಳಿಗಳನ್ನು ಎಂಜಿನ್ ಒಳಗೆ ಏಕೆ ಎಸೆಯುತ್ತಾರೆ, ಇದು ಎಂತಹ ಪರೀಕ್ಷೆ ಎಂಬುದರ ಬಗ್ಗೆ ಗೊತ್ತಿಲ್ಲ. ನಿಮಗೂ ಕೂಡಾ ಕೋಳಿಗಳನ್ನು ವಿಮಾನದ ಎಂಜಿನ್‌ಗಳ ಮೇಲೆ ಏಕೆ (Why Chickens Thrown At The Airplane Engines) ಎಸೆಯುತ್ತಾರೆ ಎಂಬುದು ಗೊತ್ತಿಲ್ವಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ.
ವಿಮಾನ ಹಾರಾಟಕ್ಕೂ ಮುನ್ನ ಎಂಜಿನ್‌ಗಳ ಮೇಲೆ ಕೋಳಿಗಳನ್ನು ಎಸೆಯೋದೇಕೆ?
ಕೆಲವೊಂದು ಬಾರಿ ವಿಮಾನ ಟೇಕ್ ಆಫ್ ಆಗುವಾಗ ಅಥವಾ ಲ್ಯಾಂಡಿಂಗ್ ಆಗುವಾಗ ಪಕ್ಷಿಗಳು ವಿಮಾನಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಇರುತ್ತದೆ. ಒಂದು ಸಣ್ಣ ಹಕ್ಕಿ ವಿಮಾನಕ್ಕೆ ಡಿಕ್ಕಿ ಹೊಡೆದರೂ ಇದರಿಂದ ದೊಡ್ಡ ಮಟ್ಟದ ಹಾನಿ ಉಂಟಾಗುತ್ತದೆ. ವಿಮಾನ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ಆಗುವಾಗ ಅದರ ವೇಗ 350 ರಿಂದ 500 ಕಿ.ಮೀ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಒಂದು ಸಣ್ಣ ಹಕ್ಕಿ ಡಿಕ್ಕಿ ಹೊಡೆದರೂ ವಿಮಾನ ವಿಂಡ್ ಶೀಲ್ಡ್ ಮುರಿಯುವ ಸಾಧ್ಯತೆ ಇರುತ್ತವೆ, ಇನ್ನೂ ಕೆಲವು ಅಪಾಯಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗೆ ವಿಮಾನದ ಮುಂಭಾಗದ ವಿಂಡ್ ಷೀಲ್ಡ್ ಮುರಿದು ಪೈಲಟ್‌ಗಳು ಗಾಯಗೊಂಡಿರುವ ಘಟನೆ ಹಲವು ಬಾರಿ ಸಂಭವಿಸಿವೆ.
ಒಂದು ಹಕ್ಕಿ ಎಂಜಿನ್ ಒಳಗೆ ಪ್ರವೇಶಿಸಿದರೆ ಅಥವಾ ಫ್ಲೈಟ್‌ಗೆ ಡಿಕ್ಕಿ ಹೊಡೆದರೆ, ವಿಮಾನದ ಎಂಜಿನ್ ನಿಂತು ಹೋಗುವ, ವಿಮಾನದಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಸೇರಿದಂತೆ ಒಂದಷ್ಟು ಅಪಾಯಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ಪ್ರಪಂಚದಾದ್ಯಂತ ವಿಮಾನಯಾನ ಕಂಪೆನಿಗಳು ವಿಮಾನ ಹಾರಾಟಕ್ಕೂ ಮುನ್ನ ಫ್ಲೈಟ್ ಎಂಜಿನ್‌ಗೆ ಕೋಳಿಗಳನ್ನು ಎಸೆಯುತ್ತವೆ. ಇದನ್ನು ʼಚಿಕನ್ ಗನ್ ಟೆಸ್ಟ್ʼ ಅಂತ ಕರೆಯುತ್ತಾರೆ.
ಈ ಪರೀಕ್ಷೆಯನ್ನು ಪ್ರಯೋಗಾಲಯದಲ್ಲಿ ಮಾಡಲಾಗುತ್ತದೆ. ವಿಮಾನದ ಗಾಜು ಮತ್ತು ಎಂಜಿನ್ ಉತ್ತಮ ಸ್ಥಿತಿಯಲ್ಲಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಚಿಕನ್ ಗನ್ ಪರೀಕ್ಷೆಯನ್ನು ಪ್ರಯೋಗಾಲಯದಲ್ಲಿ ಮಾಡಲಾಗುತ್ತದೆ. ಪ್ರಯೋಗಾಲಯದಲ್ಲಿ, ಎಂಜಿನಿಯರ್‌ಗಳು ಸಂಪೂರ್ಣ ಘಟನೆಯನ್ನು ಹೈ-ಸ್ಪೀಡ್ ಕ್ಯಾಮೆರಾಗಳೊಂದಿಗೆ ದಾಖಲಿಸುತ್ತಾರೆ. ನಂತರ ಅವರು ಹಕ್ಕಿ ಡಿಕ್ಕಿಯಿಂದ ಉಂಟಾದ ಹಾನಿಯನ್ನು ವಿಶ್ಲೇಷಿಸುತ್ತಾರೆ.
ಈ ಪರೀಕ್ಷೆ ಹೇಗೆ ನಡೆಯುತ್ತದೆ?
ವಿಮಾನ ಹಾರಾಟಕ್ಕೂ ಮುನ್ನ, ವಿಮಾನದ ಎಂಜಿನ್, ಕಾಕ್‌ಪಿಟ್ ವಿಂಡ್‌ಶೀಲ್ಡ್ ಮತ್ತು ರೆಕ್ಕೆಗಳನ್ನು ಬಲವಾದ ಚೌಕಟ್ಟಿನಲ್ಲಿ ಇರಿಸಲಾಗುತ್ತದೆ. ನಂತರ ಈ ಎಲ್ಲಾ ಭಾಗಗಳ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ವಿಮಾನದ ಹಾರಾಟದ ವೇಗಕ್ಕೆ ಹೋಲುವ ವ್ಯವಸ್ಥೆಗಳನ್ನು ಪ್ರಯೋಗಾಲಯದಲ್ಲಿ ಮಾಡಲಾಗುತ್ತದೆ. ನಂತರ ಸತ್ತ ಕೋಳಿ ಅಥವಾ ನಕಲಿ ಹಕ್ಕಿ ಇಲ್ಲವೆ ಜೆಲಾಟಿನ್ ಚೆಂಡುಗಳನ್ನು ಎಸೆದು ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಹೀಗೆ ಕೋಳಿಯನ್ನು ಎಂಜಿನ್‌ಗೆ ಎಸೆದ ಬಳಿಕ ಪ್ರತಿ ಕ್ಷಣವನ್ನು ವೀಡಿಯೊದಲ್ಲಿ ಎಚ್ಚರಿಕೆಯಿಂದ ವೀಕ್ಷಿಸಲಾಗುತ್ತದೆ.
ಕೋಳಿಯನ್ನು ಎಸೆಯುವುದರಿಂದ ಎಷ್ಟು ಮತ್ತು ಎಲ್ಲಿ ಹಾನಿಯಾಗಿದೆ ಎಂಬುದನ್ನು ನೋಡಿ, ನಂತರ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರು ಎಂಜಿನ್ ಬ್ಲೇಡ್ ಮುರಿದಿದೆಯೇ, ವಿಂಡ್‌ಶೀಲ್ಡ್ ಬಿರುಕು ಬಿಟ್ಟಿದೆಯೇ ಅಥವಾ ಇಲ್ಲವೇ, ವಿಮಾನದ ರೆಕ್ಕೆ ಹಾನಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತಾರೆ. ಯಾವುದೇ ಹಾನಿ ಉಂಟಾಗದಿದ್ದರೆ ಆ ವಿಮಾನ ಹಾರಾಟಕ್ಕೆ ಸೂಕ್ತ ಎಂದು ಪರಿಗಣಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ದೊಡ್ಡ ವಿಮಾನ ತಯಾರಿಕಾ ಕಂಪನಿಗಳು ಈ ವಿಧಾನವನ್ನು ಅಳವಡಿಸಿಕೊಳ್ಳುತ್ತಿವೆ. ಈ ಪರೀಕ್ಷೆಯಲ್ಲಿ ಪಾಸ್ ಆದ ವಿಮಾನಗಳು ಮಾತ್ರ ಹಾರಟ ನಡೆಸಲು ಅನುಮತಿಸಲ್ಪಡುತ್ತವೆ.
ವಿಮಾನ ಹಾರಾಟದ ಸಂದರ್ಭದಲ್ಲಿ ಹಕ್ಕಿಗಳಿಂದ ಉಂಟಾಗುವ ಅಪಘಾತಗಳನ್ನು ತಪ್ಪಿಸಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಹಕ್ಕಿ ಡಿಕ್ಕಿ ಹೊಡೆದರೆ ವಿಮಾನದ ಎಂಜಿನ್ ಕೆಲಸ ಮಾಡುವುದನ್ನು ನಿಲ್ಲಿಸಬಹುದು, ವಿಮಾನದಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು. ಆದ್ದರಿಂದ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಿಮಾನಯಾನ ಕಂಪೆನಿಗಳು ಈ ಟೆಸ್ಟ್ ಮಾಡುತ್ತವೆ.
ಎಷ್ಟು ಕೆಜಿ ಕೋಳಿ ಬಳಸಲಾಗುತ್ತದೆ?
ಈ ಪ್ರಕ್ರಿಯೆಯನ್ನು ನಿರ್ವಹಿಸಲು 2 ರಿಂದ 4 ಕೆಜಿ ತೂಕದ ಕೋಳಿಯನ್ನು ಈ ಪರೀಕ್ಷೆಯಲ್ಲಿ ಬಳಸಲಾಗುತ್ತದೆ. ಈ ಪರೀಕ್ಷೆ ಇಂದು ನಿನ್ನೆಯದಲ್ಲ, ಹಲವು ವರ್ಷಗಳಿಂದ ಮಾಡಲಾಗುತ್ತಿದೆ. ಇದರ ಮೂಲಕ ಎಂಜಿನ್ ಬೆಂಕಿ ಹೊತ್ತಿಕೊಳ್ಳುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಪರಿಶೀಲಿಸಲಾಗುತ್ತದೆ.
ವಿಮಾನಯಾನ ತಜ್ಞರ ಪ್ರಕಾರ, ವಿಮಾನವು ಟೇಕ್ ಆಫ್ ಆಗುವಾಗ ಅಥವಾ ಲ್ಯಾಂಡಿಂಗ್ ಆಗುವಾಗ ಏನಾದ್ರೂ ಹಕ್ಕಿ ಡಿಕ್ಕಿ ಹೊಡೆದರೆ, ಇದರಿಂದ ವಿಮಾನಕ್ಕೆ ಸಾಕಷ್ಟು ಹಾನಿ ಉಂಟಾಗುತ್ತದೆ. ಅದಕ್ಕಾಗಿಯೇ ವಿಮಾನ ತಯಾರಿಕಾ ಕಂಪನಿಗಳು ಕೋಳಿಗಳನ್ನು ಎಸೆಯುವ ಮೂಲಕ ಅದನ್ನು ಪರೀಕ್ಷಿಸುತ್ತವೆ.
ಇದನ್ನೂ ಓದಿ: ವಿಮಾನದ ಯಾವ ಸೀಟಲ್ಲಿ ಕೂರೋದು ಸೇಫ್; ಈ ಬಗ್ಗೆ FAA ವರದಿ ಏನು ಹೇಳುತ್ತೆ?
ಈ ಪ್ರಯೋಗವನ್ನು ಯಾವಾಗ ಮೊದಲು ಮಾಡಲಾಯಿತು?
ಮೊದಲು 1950 ರ ದಶಕದಲ್ಲಿ ಹರ್ಟ್‌ಫೋರ್ಡ್‌ಶೈರ್‌ನ ಡಿ ಹ್ಯಾವಿಲ್ಯಾಂಡ್ ಏರ್‌ಕ್ರಾಫ್ಟ್‌ನಲ್ಲಿ ಈ ಪರೀಕ್ಷೆಯನ್ನು ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ, ಸತ್ತ ಕೋಳಿಗಳನ್ನು ಬಳಸಲಾಗುತ್ತಿತ್ತು ಮತ್ತು ಎಂಜಿನ್ ಬೆಂಕಿಗೆ ಆಹುತಿಯಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲಾಗುತ್ತಿತ್ತು. ಈ ಪರೀಕ್ಷೆಯ ಸಮಯದಲ್ಲಿ ಎಂಜಿನ್‌ಗಳಿಗೆ ಬೆಂಕಿ ಹತ್ತಿಕೊಳ್ಳದಿದ್ದರೆ ಅಥವಾ ಯಾವುದೇ ಹಾನಿ ಉಂಟಾಗದಿದ್ದರೆ, ಅದನ್ನು ಹಾರಾಟಕ್ಕೆ ಸೂಕ್ತ ಎಂದು ಪರಿಗಣಿಸಲಾಗುತ್ತಿತ್ತು. ಇಂದಿಗೂ ಈ ಪರೀಕ್ಷೆಯನ್ನು ಮಾಡುತ್ತಾ ಬರಲಾಗುತ್ತಿದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Mon, 16 June 25