
ಹೇರ್‌ಕಟ್ (Hair Cut) ಮುಗಿದ ಬಳಿಕ ಬಾರ್ಬರ್ ಕುತ್ತಿಗೆಗೆ ಮಸಾಜ್ ಮಾಡಿ, ತಲೆಯನ್ನು ಎರಡೂ ಬದಿಗೆ ತಿರುಗಿಸಿ ‘ಕಟ್ ಕಟ್’ ಎಂಬ ಶಬ್ದ ಬರುವಂತೆ ಮಾಡುವುದು ಹಲವರಿಗೆ ಪರಿಚಿತ. ಕೆಲವರಿಗೆ ಇದರಿಂದ ಕುತ್ತಿಗೆಯ ಬಿಗಿತ ಕಡಿಮೆಯಾದಂತೆ ಅಥವಾ ಆರಾಮ ಸಿಕ್ಕಂತೆ ಅನಿಸಬಹುದು. ಆದರೆ ಕುತ್ತಿಗೆಯನ್ನು ಏಕಾಏಕಿ ಮತ್ತು ಬಲವಾಗಿ ತಿರುಗಿಸುವ ಇಂತಹ ವಿಧಾನಗಳಲ್ಲಿ ಅಪರೂಪದ ಸಂದರ್ಭಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಯ ಅಪಾಯವಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಕುತ್ತಿಗೆಯ ಮೂಲಕ ಮೆದುಳಿನ ಹಿಂಭಾಗಕ್ಕೆ ರಕ್ತವನ್ನು ಪೂರೈಸುವ ವರ್ಟಿಬ್ರಲ್ ಧಮನಿಗಳು ಹಾದುಹೋಗುತ್ತವೆ. ಕುತ್ತಿಗೆಯನ್ನು ಅತಿಯಾಗಿ ಹಿಂದಕ್ಕೆ ಬಾಗಿಸುವುದು ಅಥವಾ ವೇಗವಾಗಿ ತಿರುಗಿಸುವಂತಹ ಚಲನೆಗಳಿಂದ ಅಪರೂಪದ ಸಂದರ್ಭಗಳಲ್ಲಿ ಈ ರಕ್ತನಾಳದ ಒಳಪದರಕ್ಕೆ ಗಾಯವಾಗಬಹುದು. ಇದನ್ನು ವರ್ಟಿಬ್ರಲ್ ಆರ್ಟರಿ ಡಿಸೆಕ್ಷನ್ ಎಂದು ಕರೆಯಲಾಗುತ್ತದೆ.
ರಕ್ತನಾಳದ ಒಳಪದರದಲ್ಲಿ ಇಂತಹ ಗಾಯವಾದರೆ ಅಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿದೆ. ಹೆಪ್ಪುಗಟ್ಟಿದ ರಕ್ತವು ರಕ್ತದ ಹರಿವಿಗೆ ಅಡ್ಡಿಪಡಿಸಿದರೆ ಮೆದುಳಿಗೆ ರಕ್ತ ಪೂರೈಕೆ ಕಡಿಮೆಯಾಗಿ ಪಾರ್ಶ್ವವಾಯು ಉಂಟಾಗುವ ಅಪಾಯವಿದೆ.
ಕುತ್ತಿಗೆಯನ್ನು ತಿರುಗಿಸಿದಾಗ ಶಬ್ದ ಬರುವುದು ಮಾತ್ರವೇ ರಕ್ತನಾಳಕ್ಕೆ ಗಾಯವಾಗಿದೆ ಎಂಬುದರ ಸೂಚನೆಯಲ್ಲ. ಕೀಲುಗಳಲ್ಲಿನ ಒತ್ತಡ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ಇಂತಹ ಶಬ್ದ ಉಂಟಾಗಬಹುದು. ಆದರೆ ಶಬ್ದ ಬರಬೇಕು ಎಂಬ ಕಾರಣಕ್ಕೆ ಕುತ್ತಿಗೆಯನ್ನು ಬಲವಾಗಿ ಅಥವಾ ಪದೇಪದೇ ತಿರುಗಿಸುವುದು ಸೂಕ್ತವಲ್ಲ. ವಿಶೇಷವಾಗಿ ತರಬೇತಿ ಅಥವಾ ವೈದ್ಯಕೀಯ ಪರಿಣತಿ ಇಲ್ಲದ ವ್ಯಕ್ತಿಯಿಂದ ಕುತ್ತಿಗೆಗೆ ಬಲವಾದ ತಿರುವು ತಪ್ಪಿಸುವುದು ಸುರಕ್ಷಿತ.
ವೈದ್ಯರನ್ನು ಭೇಟಿ ಮಾಡುವ ಮುನ್ನ ಭಾರತೀಯರು ಕಾಯಿಲೆ ಬಗ್ಗೆ ಗೂಗಲ್‌ನಲ್ಲಿ ಏಕೆ ಹುಡುಕುತ್ತಾರೆ?
ಕುತ್ತಿಗೆ ಮಸಾಜ್ ಅಥವಾ ಬಲವಾದ ತಿರುವಿನ ಬಳಿಕ ಏಕಾಏಕಿ ತೀವ್ರ ತಲೆನೋವು, ಕುತ್ತಿಗೆ ನೋವು, ತಲೆತಿರುಗುವಿಕೆ, ಸಮತೋಲನ ಕಳೆದುಕೊಳ್ಳುವುದು, ವಾಂತಿ, ದೃಷ್ಟಿ ಮಸುಕಾಗುವುದು, ಮಾತು ತೊದಲುವುದು, ಮುಖ ಅಥವಾ ದೇಹದ ಒಂದು ಭಾಗದಲ್ಲಿ ಮರಗಟ್ಟುವಿಕೆ ಅಥವಾ ದೌರ್ಬಲ್ಯ ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಇವು ಪಾರ್ಶ್ವವಾಯುವಿನ ಎಚ್ಚರಿಕೆ ಲಕ್ಷಣಗಳಾಗಿರಬಹುದು.
ಹೇರ್‌ಕಟ್ ನಂತರ ಸೌಮ್ಯವಾಗಿ ಭುಜ ಅಥವಾ ಮೇಲಿನ ಬೆನ್ನಿನ ಭಾಗಕ್ಕೆ ಮಸಾಜ್ ಮಾಡಬಹುದು. ಆದರೆ ‘ಕಟ್ ಕಟ್’ ಎಂಬ ಶಬ್ದ ಬರಿಸುವ ಉದ್ದೇಶದಿಂದ ಕುತ್ತಿಗೆಯನ್ನು ಏಕಾಏಕಿ ತಿರುಗಿಸುವುದು ಅಥವಾ ಜರ್ಕ್ ನೀಡುವುದನ್ನು ತಪ್ಪಿಸುವುದು ಉತ್ತಮ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ