Oats Idli : ಮಲ್ಲಿಗೆಯಂತೆ ಮೃದುವಾದ ಓಟ್ಸ್ ಇಡ್ಲಿ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ರೆಸಿಪಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 05, 2024 | 5:00 PM

ದಕ್ಷಿಣ ಭಾರತದ ನೆಚ್ಚಿನ ಉಪಾಹಾರಗಳಲ್ಲಿ ಇಡ್ಲಿ ಕೂಡ ಒಂದು. ಬಿಸಿ ಬಿಸಿಯಾದ ಮೃದುವಾದ ಇಡ್ಲಿಗೆ ಚಟ್ನಿ ಹಾಕಿ ಸವಿದರೆ ಅದರ ಮಜಾನೇ ಬೇರೆ. ಆದರೆ ಒಂದೇ ರೀತಿಯ ಇಡ್ಲಿ ತಿಂದು ಬೋರ್ ಆಗಿದ್ದರೆ ಓಟ್ಸ್ ಇಡ್ಲಿಯನ್ನೊಮ್ಮೆ ಟ್ರೈ ಮಾಡಬಹುದು. ಈ ಓಟ್ಸ್ ಆರೋಗ್ಯಕರ ಆಯ್ಕೆಯಲ್ಲಿ ಒಂದು. ತೂಕ ಇಳಿಕೆಗೂ ಸಹಕಾರಿಯಾಗಿದ್ದು, ಹೀಗಾಗಿ ಇದರಿಂದ ತಯಾರಿಸಿ ಇಡ್ಲಿಯನ್ನು ಬೆಳಗ್ಗಿನ ಉಪಹಾರವಾಗಿ ಸವಿಯಬಹುದು. ಹಾಗಾದರೆ ಮನೆಯಲ್ಲೇ ಸುಲಭವಾಗಿ ಓಟ್ಸ್ ಇಡ್ಲಿ ಮಾಡೋದು ಹೇಗೆ? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Oats Idli : ಮಲ್ಲಿಗೆಯಂತೆ ಮೃದುವಾದ ಓಟ್ಸ್ ಇಡ್ಲಿ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ರೆಸಿಪಿ
ಸಾಂದರ್ಭಿಕ ಚಿತ್ರ
Follow us on

ನಮ್ಮ ದಕ್ಷಿಣ ಭಾರತದ ಪ್ರಮುಖ ತಿಂಡಿಗಳಲ್ಲಿ ಬಹುತೇಕರ ನೆಚ್ಚಿನ ತಿಂಡಿ ಈ ಇಡ್ಲಿ. ರವೆ ಇಡ್ಲಿ, ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ, ಮೈಸೂರು ಇಡ್ಲಿ, ಮಸಾಲೆ ಇಡ್ಲಿ ಹೀಗೆ ನಾನಾ ತರಹದ ಇಡ್ಲಿಗಳನ್ನು ಮಾಡುತ್ತೇವೆ. ಬೆಳಗ್ಗಿನ ತಿಂಡಿಗೆ ಇಡ್ಲಿ ಮಾಡಬೇಕೆಂದುಕೊಂಡಿದ್ದರೆ ಈ ಓಟ್ಸ್ ಇಡ್ಲಿಯನ್ನೊಮ್ಮೆ ಟ್ರೈ ಮಾಡಬಹುದು. ಬ್ರೇಕ್‌ಫಾಸ್ಟ್‌ಗೆ ಅತಿ ಕಡಿಮೆ ಸಮಯಯಲ್ಲಿ ಮಾಡಬಹುದಾದ ಬೆಸ್ಟ್‌ ರೆಸಿಪಿ ಇದಾಗಿದ್ದು ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು.

ಓಟ್ಸ್ ಇಡ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು

* ಕಾಲು ಕಪ್ ಓಟ್ಸ್

* ಒಂದು ಕಪ್ ಉದ್ದಿನ ಬೇಳೆ

* ಅರ್ಧ ಚಮಚ ಶುಂಠಿ ಪೇಸ್ಟ್

* ಒಂದು ಚಮಚ ಹಸಿಮೆಣಸಿನಕಾಯಿ ಪೇಸ್ಟ್

* ಎಣ್ಣೆ

* ರುಚಿಗೆ ತಕ್ಕಷ್ಟು ಉಪ್ಪು

ಓಟ್ಸ್ ಇಡ್ಲಿ ಮಾಡುವ ವಿಧಾನ

* ಓಟ್ಸ್ ಮತ್ತು ಉದ್ದಿನ ಬೇಳೆಯನ್ನು ನೀರು ಹಾಕದೇ ಮಿಕ್ಸಿಯ ಜಾರಿನಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ.

* ಈ ಪುಡಿಗೆ ಅಗತ್ಯವಿರುವಷ್ಟು ನೀರು ಹಾಕಿ ಕಲಸಿ ನುಣ್ಣನೆಯ ಮಿಶ್ರಣ ಮಾಡಿಕೊಳ್ಳಿ.

* ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸಿನಕಾಯಿಯ ಪೇಸ್ಟ್ ಹಾಗೂ ಶುಂಠಿ ಪೇಸ್ಟ್ ಸೇರಿಸಿಕೊಳ್ಳಿ.

* ಈ ಹಿಟ್ಟನ್ನು ಒಂದು ಘಂಟೆ ಕಾಲ ಹಾಗೆಯೇ ಹುದುಗಲು ಬಿಡಿ, ತದನಂತರದಲ್ಲಿ ಇಡ್ಲಿ ಪಾತ್ರೆಯ ಲೋಟಕ್ಕೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ.

* ಸುಮಾರು ಎಂಟರಿಂದ ಹತ್ತು ನಿಮಿಷಗಳ ಕಾಲ ಬೇಯಿಸಿದರೆ ಮೃದುವಾದ ಓಟ್ಸ್ ಇಡ್ಲಿ ಸವಿಯಲು ಸಿದ್ಧವಾಗಿರುತ್ತದೆ. ಇದನ್ನು ತೆಂಗಿನ ಕಾಯಿ ಚಟ್ನಿ ಜೊತೆ ಸವಿಯಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ