Kannada News Lifestyle On the day of the festival, if the relatives are coming home, prepare these simple snacks recipes for them
Deepavali Snacks Recipe: ಹಬ್ಬಕ್ಕೆ ಮನೆಗೆ ಬರುವ ಅತಿಥಿಗಳಿಗೆ ಮಾಡಿ ಈ ಸಿಂಪಲ್ ಸ್ನಾಕ್ಸ್ ರೆಸಿಪಿ
ದೀಪಾವಳಿ ಸಂತೋಷವನ್ನು ಹಂಚುವ ಹಬ್ಬವಾಗಿದೆ. ಈ ಹಬ್ಬದಲ್ಲಿ ಹೆಚ್ಚಿನವರು ತಮ್ಮ ಪ್ರೀತಿಪಾತ್ರರ ಮನೆಗೆ ಭೇಟಿ ನೀಡಿ, ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ನೀವು ಕೂಡಾ ನಿಮ್ಮ ಪ್ರೀತಿಪಾತ್ರರನ್ನು ಹಬ್ಬಕ್ಕೆ ಆಹ್ವಾನಿಸಿದ್ದರೆ, ಹಾಗೂ ಅವರಿಗೆ ವಿಶೇಷ ಸತ್ಕಾರವನ್ನು ನೀಡಲು ಬಯಸಿದರೆ ಹಾಗೂ ಅವರಿಗಾಗಿ ಏನಾದರೂ ಖಾರ ಖಾರವಾದ ಸ್ನ್ಯಾಕ್ಸ್ ಮಾಡಬೇಕೆಂದು ಬಯಸಿದರೆ ಈ ಕೆಲವು ಸ್ಯ್ನಾಕ್ಸ್ ರೆಸಿಪಿಗಳನ್ನು ನೀವು ತಯಾರಿಸಬಹುದು
ದೀಪಾವಳಿ ಹಬ್ಬ (Deepavali) ಬಂದೇ ಬಿಟ್ಟಿದೆ. ಭಾರತದಾದ್ಯಂತ ಬಹಳ ವಿಜೃಂಭನೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಲ್ಲದೆ ಹೆಚ್ಚಿನವರು ತಮ್ಮ ಕುಟುಂಬಸ್ಥರು, ಸ್ನೇಹಿತರು ಹೀಗೆ ಪ್ರೀತಿಪಾತ್ರರೊಂದಿಗೆ ಸೇರಿಕೊಂಡು ಜೊತೆಯಾಗಿ ಹಬ್ಬವನ್ನು ಆಚರಿಸುತ್ತಾರೆ. ಹಾಗೂ ರಾತ್ರಿ ಸಮಯದಲ್ಲಿ ದೀಪಾವಳಿ ಪಾರ್ಟಿ ಕೂಡಾ ಆಯೋಜನೆ ಮಾಡುತ್ತಾರೆ. ನೀವು ಕೂಡಾ ಈ ಬಾರಿಯ ಹಬ್ಬಕ್ಕೆ ನಿಮ್ಮ ಆತ್ಮೀಯರನ್ನು ಮನೆಗೆ ಆಹ್ವಾನಿಸಿದ್ದೀರಾ? ಹಾಗಿದ್ದರೆ, ಸಂಜೆ ಪಾರ್ಟಿ ಸಮಯದಲ್ಲಿ ತಿನ್ನಲು ಈ ಕೆಲವು ಗರಿಗರಿಯಾದ ಸ್ಯ್ನಾಕ್ಸ್ ರೆಸಿಪಿಗಳನ್ನು ತಯಾರಿಸಬಹುದು.
ಪನೀರ್ ಟಿಕ್ಕಾ:
ದೀಪಾವಳಿ ಪಾರ್ಟಿಯಲ್ಲಿ ಏನಾದರೂ ಸ್ಟಾರ್ಟರ್ಸ್ ರೆಸಿಪಿ ಮಾಡಬೇಕೆಂದು ಯೋಜಿಸುತ್ತಿದ್ದರೆ, ನೀವು ಸುಲಭವಾಗಿ ಪನೀರ್ ಟಿಕ್ಕಾ ತಯಾರಿಸಬಹುದು.
ಪನೀರ್ ಟಿಕ್ಕಾ ಮಾಡಲು ಬೇಕಾಗುವ ಸಾಮಾಗ್ರಿಗಳು:
• ಪನೀರ್ ಕ್ಯೂಬ್ -500 ಗ್ರಾಂ
• ಮೊಸರು – 1 ಕಪ್
• ಬೆಣ್ಣೆ – 2 ಟೀಸ್ಪೂನ್
• ಚಾಟ್ ಮಸಾಲಾ – 1 ಟೀಸ್ಪೂನ್
• ಜೀರಿಗೆ ಪುಡಿ – 1 ಟೀಸ್ಪೂನ್
• ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
• ಧನಿಯಾ ಪುಡಿ – 1 ಟೀಪೂನ್
• ಕರಿಮೆಣಸಿನ ಪುಡಿ – 1 ಟೀಸ್ಪೂನ್
• ಕಡ್ಲೆ ಹಿಟ್ಟು – 2 ಟೀಸ್ಪೂನ್
• ಅರಶಿನ – 1 ಟೀಸ್ಪೂನ್
• ಈರುಳ್ಳಿ – 2
• ಕೆಂಪು, ಹಸಿರು, ಹಳದಿ ಕ್ಯಾಪ್ಸಿಕಂ
• ಕಾಶ್ಮೀರಿ ಮೆಣಸಿನ ಪುಡಿ
• ಸ್ವಲ್ಪ ಕೊತ್ತಂಬರಿ ಸೊಪ್ಪು
• ರುಚಿಗೆ ತಕ್ಕಷ್ಟು ಉಪ್ಪು
ಪನೀರ್ ಟಿಕ್ಕಾ ಮಾಡುವ ಸುಲಭ ವಿಧಾನ:
• ಮೊದಲಿಗೆ 500 ಗ್ರಾಂ ಪನೀರ್ ತೆಗೆದುಕೊಂಡು ಅದನ್ನು ಚೌಕಾಕಾರದಲ್ಲಿ ಕತ್ತರಿಸಿಕೊಳ್ಳಿ. ಅಥವಾ ಮಾರುಕಟ್ಟೆಯಲ್ಲಿ ಕ್ಯೂಬ್ ಪನೀರ್ ಕೂಡಾ ಲಭ್ಯವಿದೆ ಅದನ್ನೇ ಬಳಸಬಹುದು. ನಂತರ ಈರುಳ್ಳಿ ಮತ್ತು ಮೂರು ಬಗೆಯ ಕ್ಯಾಪ್ಸಿಕಂಗಳನ್ನು ಕೂಡಾ ಚೌಕಾಕಾರದಲ್ಲಿ ಕತ್ತರಿಸಿಟ್ಟುಕೊಳ್ಳಿ.
• ಈಗ ಒಂದು ದೊಡ್ಡ ಬೌಲ್ಗೆ ಮೊಸರನ್ನು ಸೇರಿಸಿ, ಚೆನ್ನಾಗಿ ಬೀಟ್ ಮಾಡಿಕೊಳ್ಳಿ. ನಂತರ ಅದಕ್ಕೆ ಕಡ್ಲೆ ಹಿಟ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನಪುಡಿ, ಅರಶಿನ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಪುಡಿ, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
• ಈಗ ಈ ಮಿಶ್ರಣಕ್ಕೆ ಮೊದಲೇ ಕತ್ತರಿಸಿಟ್ಟ ಕ್ಯಾಪ್ಸಿಕಂ, ಈರುಳ್ಳಿ ಮತ್ತು ಪನೀರ್ ಹಾಕಿ ಮ್ಯಾರಿನೇಟ್ ಮಾಡಿ, ಫ್ರಿಜ್ನಲ್ಲಿ ಇಟ್ಟುಬಿಡಿ, ಹಾಗೂ 30 ನಿಮಿಷಗಳ ಬಳಿಕ ಮ್ಯಾರಿನೇಟ್ ಮಾಡಿಟ್ಟ ಪನೀರ್ ಮಿಶ್ರಣವನ್ನು ಹೊರತೆಗೆದು, ಪನೀರ್ ಈರುಳ್ಳಿ, ಕ್ಯಾಪ್ಸಿಕಂ ಹೀಗೆ ಎಲ್ಲವನ್ನೂ ಒಂದೊಂದಾಗೆ ಬಾರ್ಬೆಕ್ಯೂ ಸ್ಕೇವರ್ ಅಥವಾ ಮರದ ಕಡ್ಡಿಗೆ ಚುಚ್ಚಿಟ್ಟು, ಅದಕ್ಕೆ ಬೆಣ್ಣೆಯನ್ನು ಸವರಿ, ಮೈಕ್ರೋವೇವ್ನಲ್ಲಿ ಬೇಯಿಸಿಕೊಳ್ಳಿ. ಅಥವಾ ಒಂದು ತವಾ ತೆಗೆದುಕೊಂಡು ಅದಕ್ಕೆ ಬೆಣ್ಣೆ ಸವರಿ ಅದರಲ್ಲಿ ಸಹ ಬೇಯಿಸಿಕೊಳ್ಳಬಹುದು.
• ಹೀಗೆ ಪನೀರ್ ಟಿಕ್ಕಾ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೂ ಅದನ್ನು ಬೇಯಿಸಿಕೊಳ್ಳಿ, ನಂತರ ಪನೀರ್ ಟಿಕ್ಕಾದ ಮೇಲೆ ಚಾಟ್ ಮಸಾಲಾವನ್ನು ಉದುರಿಸಿ ಸರ್ವ್ ಮಾಡಿ.
ಆಲೂ ಚೀಸ್ ಬಾಲ್:
ದೀಪಾವಳಿ ಹಬ್ಬದ ಪಾರ್ಟಿಯಲ್ಲಿ ವಿಶೇಷವಾಗಿ ಮಕ್ಕಳಿಗೆ ಇಷ್ಟವಾಗುವಂತಹ ಸ್ನ್ಯಾಕ್ ರೆಸಿಪಿ ಮಾಡಬೇಕೆಂದು ಯೋಚಿಸುತ್ತಿದ್ದರೆ, ನೀವು ಸುಲಭವಾಗಿ ಆಲೂ ಚೀಸ್ ಬಾಲ್ ತಯಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು:
• ಆಲೂಗಡ್ಡೆ – 2
• ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
• ಕೊತ್ತಂಬರಿ ಸೊಪ್ಪು ಸ್ವಲ್ಪ
• ಚಿಲ್ಲಿ ಫ್ಲೆಕ್ಸ್ – 1 ಚಮಚ
• ಕರಿಮೆಣಸಿನ ಪುಡಿ – ½ ಟೀಸ್ಪೂನ್
• ಬ್ರೆಡ್ ಕ್ರಂಬ್ಸ್
• ಕಾರ್ನ್ ಫ್ಲೋರ್ – 2 ಟೀಸ್ಪೂನ್
• ರುಚಿಗೆ ತಕ್ಕಷ್ಟು ಉಪ್ಪು
• ಚೀಸ್ ತುಂಡು
ಚೀಸ್ ಬಾಲ್ ಮಾಡುವ ವಿಧಾನ:
• ಮೊದಲಿಗೆ ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿಕೊಂಡು ಬಳಿಕ ಅದರ ಚಿಪ್ಪೆಯನ್ನು ಸುಳಿದು , ಅವುಗಳನ್ನು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ. ಈಗ ಅದಕ್ಕೆ ಬ್ರೆಡ್ ಕ್ರಂಬ್ಸ್ ಅಥವಾ ಪುಡಿಮಾಡಿದ ಅವಲಕ್ಕಿ, ಕರಿಮೆಣಸಿನ ಪುಡಿ, ಚಿಲ್ಲಿ ಫ್ಲೆಕ್ಸ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
• ಆಲೂಗಡ್ಡೆಯನ್ನು ಚೆನ್ನಾಗಿ ಮಿಶ್ರಣಮಾಡಿದ ನಂತರ ಅದರಿಂದ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿಕೊಳ್ಳಿ. ಈಗ ಒಂದೊಂದೇ ಉಂಡೆಯನ್ನು ತೆಗೆದುಕೊಂಡು ಅದನ್ನು ಚಪ್ಪಟೆಯಾಕಾರಕ್ಕೆ ಲಟ್ಟಿಸಿ, ಅದರ ಮಧ್ಯೆ ಚೀಸ್ ತುಂಡನ್ನು ಇಟ್ಟು, ಮತ್ತೊಮ್ಮೆ ಮೆಲ್ಲಗೆ ಉಂಡೆ ಕಟ್ಟಿಕೊಳ್ಳಿ.
• ಚೀಸ್ ಬಾಲ್ ತಯಾರದ ಬಳಿಕ, ಒಂದು ಬೌಲ್ನಲ್ಲಿ ಕಾರ್ನ್ಫ್ಲೋರ್ ಹಿಟ್ಟನ್ನು ತಯಾರಿಸಿಕೊಂಡು ಆ ಹಿಟ್ಟಿನಲ್ಲಿ ಚೀಸ್ ಬಾಲ್ಗಳನ್ನು ಅದ್ದಿ, ಬಳಿಕ ಅದನ್ನು ಬ್ರೆಡ್ ಕ್ರಂಬ್ಸ್ನಲ್ಲಿ ಹರಡಿ, ಎಣ್ಣೆಯಲ್ಲಿ ಕರಿಯಿರಿ. ಹೀಗೆ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವರೆಗೆ ಫ್ರೈ ಮಾಡಿದರೆ ಆಲೂ ಚೀಸ್ ಬಾಲ್ ಸವಿಯಲು ಸಿದ್ಧ.
ಬೆಣ್ಣೆ ಮುರುಕು :
ದೀಪಾವಳಿ ಹಬ್ಬಕ್ಕೆ ಸ್ವೀಟ್ಸ್ ಜೊತೆಗೆ ಗರಿಗರಿಯಾದ ಸ್ನ್ಯಾಕ್ಸ್ ಮಾಡಬೇಕೆಂದು ಬಯಸಿದರೆ, ನೀವು ಬೆಣ್ಣೆ ಮುರುಕು ತಯಾರಿಸಬಹುದು.
• ಮೊದಲಿಗೆ ಹುರಿಗಡಲೆಯನ್ನು ಮಿಕ್ಸಿಜಾರಿನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ನಂತರ ಒಂದು ದೊಡ್ಡ ಬೌಲ್ ತೆಗೆದುಕೊಂಡು ಅದಕ್ಕೆ ಅಕ್ಕಿಹಿಟ್ಟು ಹಾಗೂ ಹುರಿಗಡಲೆ ಪುಡಿಯನ್ನು ಸೇರಿಸಿಕೊಳ್ಳಿ. ಹಾಗೂ ಅದಕ್ಕೆ ಕಡ್ಲೆ ಹಿಟ್ಟನ್ನು ಕೂಡಾ ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
• ಈಗ ಆ ಮಿಶ್ರಣಕ್ಕೆ ಜೀರಿಗೆ, ಅಚ್ಚಖಾರದ ಪುಡಿ, ಇಂಗು, ಅರಶಿನ, ರುಚಿಗೆ ತಕ್ಕಷ್ಟು ಹಾಗೂ ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ತಯಾರಿಸಿಕೊಳ್ಳಿ. ಜೊತೆಗೆ ಅದಕ್ಕೆ ಬೆಣ್ಣೆ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟನ್ನು ತಯಾರಿಸಿಕೊಳ್ಳಿ.
• ಹಿಟ್ಟು ತಯಾರಾದ ಬಳಿಕ, ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಲು ಇಟ್ಟು, ಎಣ್ಣೆ ಕಾದ ಬಳಿಕ ಚಕ್ಕುಲಿ ಅಚ್ಚನ್ನು ಉಪಯೋಗಿಸಿಕೊಂಡು ಉಪಯೋಗಿಸಿಕೊಂಡು ತಯಾರಿಸಿಟ್ಟ ಹಿಟ್ಟಿನಿಂದ ಮುರುಕು ತಯಾರಿಸಿ ಎಣ್ಣೆಯಲ್ಲಿ ಕರಿಯಿರಿ. ಸಂಜೆ ಟೀ ಸಮಯಕ್ಕೆ ಅಥಿತಿಗಳಿಗೆ ಗರಿಗರಿಯಾದ ಈ ಬೆಣ್ಣೆ ಮುರುಕನ್ನು ಸರ್ವ್ ಮಾಡಬಹುದು.