ಸಾಮಾನ್ಯವಾಗಿ ಅಡುಗೆ ಅಂದಾಕ್ಷಣ ಈರುಳ್ಳಿಯನ್ನು ಬಳಸುತ್ತೇವೆ. ಅದರಲ್ಲಿಯೂ ಮಸಾಲಾ ಪದಾರ್ಥಗಳಲ್ಲಿ ಹೆಚ್ಚು ಈರುಳ್ಳಿಯನ್ನು ಬಳಸುತ್ತೇವೆ. ಈರುಳ್ಳಿ ಸಿಪ್ಪೆ ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಹೊರಗಡೆ ಎಸೆಯುವುದು ಸಾಮಾನ್ಯ. ಆದರೆ ನಿಮಗೆ ಗೊತ್ತಿರಲಿ ಈರುಳ್ಳಿ ಸಿಪ್ಪೆಯಿಂದಲೂ ಪ್ರಯೋಜನಗಳಿವೆ. ನೀವು ಬಿಸಾಡುತ್ತಿರುವ ಈರುಳ್ಳಿ ಸಿಪ್ಪೆಯಲ್ಲಿ ವಿಟಮಿನ್ ಎ, ಸಿ, ಇ, ಆಂಟಿ-ಆಕ್ಸಿಡೆಂಟ್ ಅಂಶವಿರುತ್ತದೆ. ಅವುಗಳನ್ನು ಎಸೆಯು ಬದಲು ಹೆಚ್ಚು ಪ್ರಯೋಜನಗಳನ್ನು ಪಡೆದುಕೊಳ್ಳಿ. ಆರೋಗ್ಯಕ್ಕೆ ಉತ್ತಮ ಎಂದಾದಾಗ ಸಿಪ್ಪೆಯನ್ನೇಕೆ ಹೊರಗಡೆ ಬಿಸಾಡಬೇಕು ಅಲ್ವೇ? ಈರುಳ್ಳಿ ಸಿಪ್ಪೆಯಿಂದ ಚಹಾ, ಸೂಪ್, ಸಸ್ಯಗೊಬ್ಬರ, ಕೂದಲು ಬಣ್ಣ ಹೀಗೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ
ವಯಸ್ಸಾದಂತೆಯೇ ಕೂದಲು ಉದುರುವ ಸಮಸ್ಯೆ ಕಾಡತೊಡಗುತ್ತದೆ. ಅದರಲ್ಲಿಯೂ ಕೆಲವರಿಗೆ ಚಿಕ್ಕ ವಯಸ್ಸಿರುವಾಗಲೇ ಕೂದಲಿನ ಬಣ್ಣ ಬಿಳಿಯಾಗಿರುತ್ತದೆ. ಕೂದಲು ಕಪ್ಪಾಗಿಸಲು ಕೆಲವು ರಾಸಾಯನಿಕ ವಸ್ತುಗಳನ್ನು ಅಥವಾ ಕೆಮಿಕಲ್ ಯುಕ್ತ ಬಣ್ಣವನ್ನು ಬಳಸುತ್ತೇವೆ. ಇದರಿಂದ ಚರ್ಮದ ಇನ್ಫೆಕ್ಷನ್ ಹಾಗೂ ಕೂದಲು ಹೆಚ್ಚು ಉದುರಲು ಕಾರಣವಾಗುತ್ತದೆ. ಹಾಗಿದ್ದಾಗ ಮನೆಯಲ್ಲಿಯೇ ಇರುವ ಈರುಳ್ಳಿ ಸಿಪ್ಪೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಒಂದು ಪಾತ್ರೆಯಲ್ಲಿ 4-5 ಈರುಳ್ಳಿ ಸಿಪ್ಪೆಯನ್ನು ಹಾಕಿ ಹಾಗೂ 2 ಕಪ್ ನೀರನ್ನು ಸೇರಿಸಿ ಸರಿಯಾಗಿ ಕುದಿಸಿ. ನಂತರ ಆ ನೀರನ್ನು ಶೋಧಿಸಿ ಇಟ್ಟುಕೊಳ್ಳಿ. ತಲೆ ಸ್ನಾನ ಮಾಡುವ 2 ಗಂಟೆಯ ಮುಂಚಿತವಾಗಿ ತಲೆಯ ನೆತ್ತಿಭಾಗಕ್ಕೆ ಈ ನೀರನ್ನು ಹಚ್ಚಿಕೊಂಡು ನಂತರ ಸ್ನಾನ ಮಾಡುವ ಮೂಲಕ ಕೂದಲುದುರುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ಹಾಗೂ ಕೂದಲು ಬಿಳಿ ಬಣ್ಣಕ್ಕೆ ತಿರುಗುವ ಸಮಸ್ಯೆಗೂ ಪರಿಹಾರ ಸಿಗುತ್ತದೆ.
ಕೂದಲಿನ ಬೆಳವಣಿಗೆ
ಹೆಚ್ಚಿನ ಜನರಿಗೆ ಉದ್ದವಾದ ತಲೆಕೂದಲು ಹೊಂದಿರಬೇಕು ಎಂಬ ಆಸೆಯಿರುತ್ತದೆ. ಹೀಗಿರುವಾಗ ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ತಲೆಗೆ ಹಚ್ಚಿಕೊಳ್ಳುವ ಮೂಲಕ ದಟ್ಟವಾದ ಕೂದಲು ಪಡೆಯಬಹುದು. ಅದಲ್ಲದೆ ತಲೆಹೊಟ್ಟು ನಿವಾರಣೆ ಆಗುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ಹಾಗೂ ನೈಸರ್ಗಿಕ ಕಪ್ಪು ಕೂದಲು ಪಡೆಯಲು ಸಹಾಯವಾಗುತ್ತದೆ.
ಗಂಟಲು ನೋವು ನಿವಾರಣೆ
ನೆಗಡಿ, ಗಂಟಲು ನೋವಿನಂತಹ ಸಮಸ್ಯೆಯನ್ನು ತೆಗೆದು ಹಾಕಲು ಈರುಳ್ಳಿ ಸಿಪ್ಪೆ ಸಹಕಾರಿಯಾಗಿದೆ. ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಆ ನೀರಿನ ಮೂಲಕ ಗಾರ್ಗಲ್ ಮಾಡುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.
ಇದನ್ನೂ ಓದಿ:
ಅಕ್ಕಿ ತೊಳೆದ ನೀರಿನಿಂದ ನುಣುಪಾದ ಸದೃಢ ತಲೆಕೂದಲು; ಮನೆಮದ್ದಿನಲ್ಲೇ ಇದೆ ಸಮಸ್ಯೆಗೆ ಪರಿಹಾರ
Aloe Vera Benefits: ಕೂದಲು ಮತ್ತು ಚರ್ಮದ ಆರೈಕೆಗೆ ಅಲೋವೆರಾ; ಬಳಸುವ ಕ್ರಮ ಹೇಗೆ ಗೊತ್ತಾ?