
ಮನೆಯಲ್ಲಿ ದೈನಂದಿನ ಪೂಜೆಯ ಸಮಯದಲ್ಲಿ ಹೂವುಗಳನ್ನು (flower) ದೇವರಿಗೆ ಅರ್ಪಿಸಲಾಗುತ್ತದೆ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬ ಸೇರಿದಂತೆ ಪ್ರತಿಯೊಂದು ಹಬ್ಬದಲ್ಲೂ ಚೆಂಡು ಹೂವು, ಸೇವಂತಿಗೆ, ಮಲ್ಲಿಗೆ, ಗುಲಾಬಿ ಹೂವುಗಳನ್ನು ಹೆಚ್ಚಾಗಿ ಬಳಸುತ್ತೇವೆ. ಸಂಪೂರ್ಣ ದೇವರ ಮನೆಯನ್ನು ಬಗೆಬಗೆಯ ಹೂವುಗಳಿಂದ ಅಲಂಕಾರ ಮಾಡುತ್ತೇವೆ. ಪೂಜೆ ಮುಗಿದ ಬಳಿಕ ಮರುದಿನ ದೇವರಿಗೆ ಬಳಸಿದ ಆ ಹೂವುಗಳನ್ನು ಎಸೆದು ಬಿಡುತ್ತೇವೆ. ಹೆಚ್ಚಿನವರು ಈ ಹೂವುಗಳಿಂದ ಯಾವುದೇ ಪ್ರಯೋಜನಗಳಿಲ್ಲ ಎಂದು ಎಸೆದು ಬಿಡುತ್ತಾರೆ. ಆದ್ರೆ ಏನು ಗೊತ್ತಾ, ದೇವರಿಗೆ ಬಳಸಿದ ಹೂವನ್ನು ಸಹ ಮರುಬಳಕೆ ಮಾಡಬಹುದು. ಹೌದು ಈ ಹೂವುಗಳಿಂದ ಸುಲಭವಾಗಿ ಮನೆಯಲ್ಲಿಯೇ ಕೆಮಿಕಲ್ ಫ್ರೀ ಧೂಪವನ್ನು ತಯಾರಿಸಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಬ್ಬ ಅಥವಾ ಪೂಜೆಯ ಸಮಯದಲ್ಲಿ ಬಳಸಿದ ದಾಸವಾಳ, ಸೇವಂತಿಗೆ, ಚೆಂಡೆಹೂವು ಇತ್ಯಾದಿ ಹೂವುಗಳ ದಳವನ್ನು ತೆಗೆದುಕೊಂಡು, ಸ್ವಚ್ಛವಾದ ಬಟ್ಟೆ ಅಥವಾ ಒಂದು ತಟ್ಟೆಯಲ್ಲಿ ಹರಡಿ 2 ರಿಂದ 3 ದಿನಗಳವರೆಗೆ ಉತ್ತಮ ಗಾಳಿ ಮತ್ತು ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಇರಿಸಿ.ಚೆನ್ನಾಗಿ ಒಣಗಿಸಿಕೊಳ್ಳಿ. ಹೂವುಗಳು ಸಂಪೂರ್ಣವಾಗಿ ತೇವಮುಕ್ತವಾಗಿರಬೇಕು. ನಿಮ್ಮ ಬಳಿ ಸಾಕಷ್ಟು ಸಮಯವಿಲ್ಲದಿದ್ದರೆ ನೀವು ಹೂವುಗಳ ದಳವನ್ನು ಡ್ರೈ ರೋಸ್ಟ್ ಮಾಡಿಕೊಳ್ಳಬಹುದು.
ಹೂವಿನ ದಳಗಳು ಸಂಪೂರ್ಣವಾಗಿ ಒಣಗಿದ ಬಳಿಕ ಅವುಗಳನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಇದಾಗ ಬಳಿಕ ಆ ಹೂವಿನ ಪುಡಿಗೆ ತೆಂಗಿನ ನಾರು, ಹವನ ಸಾಮಾಗ್ರಿ, ಗಗ್ಗುಳ, ಸುಗಂಧಕ್ಕೆ ಶ್ರೀಗಂಧ, ಸಾಂಬ್ರಾಣಿ ಅಥವಾ ಕರ್ಪೂರದಂತಹ ನೈಸರ್ಗಿಕ ಸುಗಂಧ ದ್ರವ್ಯಗಳನ್ನು ಬಳಸಿ ಎಲ್ಲವನ್ನೂ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ನಂತರ ಪುಡಿಯನ್ನು ಜರಡಿ ಮೂಲಕ ಶೋಧಿಸಿ ಇಟ್ಟುಕೊಳ್ಳಿ. ನೀವು ಬೇಕಿದ್ದರೆ ಈ ಮಿಶ್ರಣಕ್ಕೆ ಪಲಾವ್ ಎಲೆ, ದಾಲ್ಚಿನ್ನಿ, ಹಸುವಿನ ಒಣ ಸಗಣಿಯನ್ನು ಸಹ ಸೇರಿಸಬಹುದು. ಇವುಗಳನ್ನು ಸೇರಿಸುವುದರಿಂದ ಸೊಳ್ಳೆ ಕೀಟಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಬಹುದು.
ಇದನ್ನೂ ಓದಿ: ಮನೆಯಲ್ಲಿರುವ ಈ ಒಂದು ವಸ್ತುವಿನಿಂದ ಜಿಡ್ಡುಗಟ್ಟಿದ ಗ್ಯಾಸ್ ಸ್ಟೌವ್ನ ಕ್ಷಣದಲ್ಲೇ ಕ್ಲೀನ್ ಮಾಡ್ಬೋದು
ಮೊದಲೇ ತಯಾರಿಸಿಟ್ಟ ಹೂವಿನ ದಳದ ಪುಡಿಯನ್ನು ಒಂದು ಬಟ್ಟಲಿಗೆ ಹಾಕಿ ಅದಕ್ಕೆ ಸ್ವಲ್ಪ ತುಪ್ಪವನ್ನು ಸೇರಿಸಿ ಮೃದುವಾದ ಉಂಡೆಯನ್ನು ತಯಾರಿಸಿಕೊಳ್ಳಿ. ನಂತರ ಒಂದೊಂದೇ ಸಣ್ಣ ಉಂಡೆಗಳನ್ನು ತೆಗೆದುಕೊಂಡು ಕೋನ್ ಆಕಾರದಲ್ಲಿ ಧೂಪವನ್ನು ತಯಾರಿಸಿಕೊಳ್ಳಿ.
ತಯಾರಾದ ಧೂಪಗಳನ್ನು ಸ್ವಚ್ಛವಾದ ತಟ್ಟೆ ಅಥವಾ ಬಟ್ಟೆಯ ಮೇಲೆ ಇರಿಸಿ. ನೆರಳಿರುವ ಹಾಗೂ ಚೆನ್ನಾಗಿ ಗಾಳಿ ಬೀಸುವ ಪ್ರದೇಶದಲ್ಲಿ ಇಟ್ಟು 1 ರಿಂದ 2 ದಿನಗಳವರೆಗೆ ಒಣಗಲು ಬಿಡಿ. ಧೂಪವನ್ನು ನೇರ ಸೂರ್ಯನ ಬೆಳಕಿನಲ್ಲಿ ಒಣಗಿಸಬಾರದು , ಏಕೆಂದರೆ ಇದು ಸುವಾಸನೆಯನ್ನು ಕಡಿಮೆ ಮಾಡುತ್ತದೆ. ಧೂಪ ತುಂಡುಗಳು ಸಂಪೂರ್ಣವಾಗಿ ಒಣಗಿದ ನಂತರ, ಅವುಗಳನ್ನು ಪೂಜೆಯ ಸಮಯದಲ್ಲಿ ಬಳಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ