ನಿದ್ರೆ ಕೊರತೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು? ಇಮ್ಯೂನಿಟಿ ಮತ್ತು ನಿದ್ರೆಗಿರುವ ಸಂಬಂಧವೇನು?
ಇತ್ತೀಚಿನ ದಿನಗಳಲ್ಲಿ, ಕಾರ್ಯನಿರತ ಜೀವನಶೈಲಿಯಿಂದಾಗಿ, ಅನೇಕರಿಗೆ ಸರಿಯಾಗಿ ನಿದ್ರೆ ಬರುತ್ತಿಲ್ಲ. ಇದು ರೋಗನಿರೋಧಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಈ ರೀತಿ ಆಗುವುದಕ್ಕೆ ಕಾರಣವೇನು, ನಿದ್ರೆ ಕೊರತೆಯಿಂದ ಇಮ್ಯೂನ್ ಸಿಸ್ಟಮ್ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ನಿದ್ರೆ ಚೆನ್ನಾಗಿ ಬರಲು ಯಾವ ರೀತಿಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರಾತ್ರಿ ತಡವಾಗಿ ಮೊಬೈಲ್ ಬಳಸುವುದು, ಕೆಲಸದ ಒತ್ತಡ, ಓದು ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಹಲವರ ನಿದ್ರೆಯ ಸಮಯ ಕಡಿಮೆಯಾಗುತ್ತಿದೆ. ಪ್ರತಿದಿನ ಸಾಕಷ್ಟು ನಿದ್ರೆ ಮಾಡದೆ ತಡರಾತ್ರಿ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸ ದೀರ್ಘಕಾಲ ಮುಂದುವರಿದರೆ, ಅದರ ಪರಿಣಾಮ ಕೇವಲ ದಣಿವು ಮತ್ತು ನಿದ್ದೆಯಷ್ಟೇ ಆಗಿರುವುದಿಲ್ಲ. ನಿದ್ರೆ ಕೊರತೆಯು ದೇಹದ ರೋಗನಿರೋಧಕ ಶಕ್ತಿ ಅಥವಾ ಇಮ್ಯೂನ್ ಸಿಸ್ಟಮ್ ಮೇಲೂ ಪರಿಣಾಮ ಬೀರಬಹುದು. ನ್ಯಾಷನಲ್ ಹಾರ್ಟ್, ಲಂಗ್ ಅಂಡ್ ಬ್ಲಡ್ ಇನ್‌ಸ್ಟಿಟ್ಯೂಟ್ (NHLBI) ಪ್ರಕಾರ, ನಿದ್ರೆ ದೇಹದ ಇಮ್ಯೂನ್ ವ್ಯವಸ್ಥೆಯ ಕಾರ್ಯನಿರ್ವಹಣೆಯೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ. ಹೀಗಾಗಿ ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಲು ಆಹಾರ ಮತ್ತು ವ್ಯಾಯಾಮದ ಜೊತೆಗೆ ನಿದ್ರೆಯೂ ಅತ್ಯಗತ್ಯ.
ನಿದ್ರೆ ಕೊರತೆಯಿಂದ ಇಮ್ಯೂನ್ ಸಿಸ್ಟಮ್ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?
ನಾವು ನಿದ್ರೆ ಮಾಡುವ ಸಮಯದಲ್ಲಿ ದೇಹ ವಿಶ್ರಾಂತಿ ಪಡೆಯುವುದರ ಜೊತೆಗೆ ಹಲವು ಪ್ರಮುಖ ಜೈವಿಕ ಪ್ರಕ್ರಿಯೆಗಳು ನಡೆಯುತ್ತವೆ. ಇಮ್ಯೂನ್ ಸಿಸ್ಟಮ್‌ನ ಕೆಲವು ಕೋಶಗಳು ಮತ್ತು ರಾಸಾಯನಿಕ ಪ್ರಕ್ರಿಯೆಗಳು ಸೋಂಕುಗಳ ವಿರುದ್ಧ ದೇಹವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ನಿರಂತರವಾಗಿ ನಿದ್ರೆ ಕಡಿಮೆಯಾದರೆ ಈ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಬಹುದು. ಪರಿಣಾಮವಾಗಿ ಸೋಂಕುಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯ ದುರ್ಬಲವಾಗುವ ಸಾಧ್ಯತೆ ಇದೆ. ಇದರಿಂದ ಕೆಲವರಲ್ಲಿ ನೆಗಡಿ, ಜ್ವರದಂತಹ ಸಾಮಾನ್ಯ ಸೋಂಕುಗಳು ಕಾಡುವ ಸಾಧ್ಯತೆ ಹೆಚ್ಚಾಗಬಹುದು. ಆದ್ದರಿಂದ ಕೆಲಸ ಅಥವಾ ಮೊಬೈಲ್‌ಗಾಗಿ ಪ್ರತಿದಿನ ನಿದ್ರೆಯನ್ನು ಕಡಿಮೆ ಮಾಡುವುದು ಆರೋಗ್ಯಕರ ಅಭ್ಯಾಸವಲ್ಲ.
ನಿದ್ರೆ ಕಡಿಮೆ ಮಾಡುವುದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು?
ದೀರ್ಘಕಾಲ ನಿದ್ರೆ ಸರಿಯಾಗಿ ಆಗದಿದ್ದರೆ ದೇಹ ಮತ್ತು ಮೆದುಳಿನ ಕಾರ್ಯಗಳ ಮೇಲೂ ಪರಿಣಾಮ ಬೀಳಬಹುದು. ಉದಾಹರಣೆಗೆ:
- ದಿನವಿಡೀ ದಣಿವು ಮತ್ತು ಆಲಸ್ಯ
- ಗಮನ ಕೇಂದ್ರೀಕರಿಸಲು ತೊಂದರೆ
- ಯೋಚಿಸುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ
- ನೆನಪಿನ ಶಕ್ತಿಯಲ್ಲಿ ವ್ಯತ್ಯಾಸ
- ಹಸಿವು ಹೆಚ್ಚಾಗುವುದು
- ತೂಕ ಹೆಚ್ಚಾಗುವ ಸಾಧ್ಯತೆ
- ಅಧಿಕ ರಕ್ತದೊತ್ತಡದ ಅಪಾಯ
- ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯ
ಸಾಕಷ್ಟು ನಿದ್ರೆ ಇಲ್ಲದಿರುವುದು ಹಸಿವು ಮತ್ತು ಆಹಾರ ಸೇವನೆಯನ್ನು ನಿಯಂತ್ರಿಸುವ ದೇಹದ ಪ್ರಕ್ರಿಯೆಗಳ ಮೇಲೂ ಪರಿಣಾಮ ಬೀರಬಹುದು. ಇದರಿಂದ ಕೆಲವರಿಗೆ ಹೆಚ್ಚು ತಿನ್ನುವ ಬಯಕೆ ಉಂಟಾಗಿ ತೂಕ ಹೆಚ್ಚಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಸ್ಕಿನ್ ಗ್ಲೋ ಆಗಿ ಕಾಣಲು ಮೊದಲು ನಿದ್ರೆ ಸರಿಯಾಗಿ ಮಾಡಿ! ಚರ್ಮದ ಆರೋಗ್ಯಕ್ಕೆ ಎಷ್ಟು ಗಂಟೆ ನಿದ್ರೆ ಮಾಡ್ಬೇಕು ಗೊತ್ತಾ?
ನಿದ್ರೆ ಚೆನ್ನಾಗಿ ಬರಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ಆರೋಗ್ಯಕರ ನಿದ್ರೆಗೆ ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಮತ್ತು ಎದ್ದೇಳುವುದು ಉತ್ತಮ ಅಭ್ಯಾಸ. ವಾರಾಂತ್ಯದಲ್ಲಿಯೂ ನಿದ್ರೆಯ ಸಮಯದಲ್ಲಿ ದೊಡ್ಡ ಬದಲಾವಣೆ ಮಾಡದಿರುವುದು ಸಹಾಯಕವಾಗಬಹುದು. ಮಲಗುವ ಮುನ್ನ ಮೊಬೈಲ್, ಟಿವಿ, ಲ್ಯಾಪ್‌ಟಾಪ್ ಸೇರಿದಂತೆ ಸ್ಕ್ರೀನ್ ಬಳಕೆಯನ್ನು ಕಡಿಮೆ ಮಾಡಿ. ರಾತ್ರಿ ತಡವಾಗಿ ಚಹಾ ಅಥವಾ ಕಾಫಿ ಕುಡಿಯುವುದನ್ನು, ಅತಿಯಾಗಿ ಆಹಾರ ಸೇವಿಸುವುದನ್ನು ತಪ್ಪಿಸಿ. ಮಲಗುವ ಕೋಣೆ ಶಾಂತವಾಗಿ, ಕತ್ತಲೆ ಮತ್ತು ಆರಾಮದಾಯಕವಾಗಿರುವಂತೆ ನೋಡಿಕೊಳ್ಳಿ. ಹಗಲಿನಲ್ಲಿ ನಿಯಮಿತವಾಗಿ ದೈಹಿಕ ಚಟುವಟಿಕೆ ಮಾಡಿ. ಆದರೆ ಮಲಗುವ ಸಮಯಕ್ಕೆ ಕೆಲವೇ ಗಂಟೆಗಳ ಮುನ್ನ ಹೆಚ್ಚು ವ್ಯಾಯಾಮ ಮಾಡುವುದನ್ನು ತಪ್ಪಿಸುವುದು ಉತ್ತಮ.
ಪದೇಪದೇ ನಿದ್ರೆ ಹಾಳಾಗುತ್ತಿದ್ದರೆ ನಿರ್ಲಕ್ಷಿಸಬೇಡಿ
ಒಂದೆರಡು ದಿನ ನಿದ್ರೆ ಸರಿಯಾಗಿ ಆಗದಿರುವುದು ಸಾಮಾನ್ಯವಾಗಿರಬಹುದು. ಆದರೆ ದೀರ್ಘಕಾಲದಿಂದ ನಿದ್ರೆ ಬರದಿರುವುದು, ರಾತ್ರಿ ಪದೇಪದೇ ಎಚ್ಚರವಾಗುವುದು ಅಥವಾ ಸಾಕಷ್ಟು ಸಮಯ ಮಲಗಿದರೂ ದಿನವಿಡೀ ಹೆಚ್ಚು ನಿದ್ರೆ ಮತ್ತು ದಣಿವು ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇಮ್ಯೂನಿಟಿ ಬಲವಾಗಿರಲು ಪೌಷ್ಟಿಕ ಆಹಾರ, ದೈಹಿಕ ಚಟುವಟಿಕೆ ಮತ್ತು ಒತ್ತಡ ನಿಯಂತ್ರಣದ ಜೊತೆಗೆ ಸಾಕಷ್ಟು ನಿದ್ರೆಯೂ ಬಹಳ ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




