ರಾತ್ರಿ ನಿದ್ರೆ ಸರಿಯಾಗಿ ಬರುತ್ತಿಲ್ಲವೇ? ಈ ಸರಳ ಅಭ್ಯಾಸಗಳನ್ನು ರೂಢಿಸಿಕೊಂಡರೆ ನಿದ್ರೆ ಕ್ವಾಲಿಟಿ ಸುಧಾರಿಸಬಹುದು
ಸಾಮಾನ್ಯವಾಗಿ ಅನೇಕರಿಗೆ ರಾತ್ರಿ ಸಮಯದಲ್ಲಿ ನಿದ್ರೆ ಮಾಡುವುದಕ್ಕೆ ತೊಂದರೆಯಾಗುತ್ತದೆ. ನಿದ್ರೆ ಚೆನ್ನಾಗಿ ಬರಲು ಕೇವಲ ಹೆಚ್ಚು ಹೊತ್ತು ಹಾಸಿಗೆಯಲ್ಲಿ ಇರುವುದು ಸಾಕಾಗುವುದಿಲ್ಲ. ನಿಯಮಿತ ನಿದ್ರೆಯ ಸಮಯ ಮತ್ತು ಮಲಗುವ ಮುನ್ನದ ಅಭ್ಯಾಸಗಳಿಗೂ ಹೆಚ್ಚಿನ ಮಹತ್ವವಿದೆ. ಹಾಗಾಗಿ ಕೆಲವು ಸರಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಚೆನ್ನಾಗಿ ನಿದ್ರೆ ಮಾಡಬಹುದು.

ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಒತ್ತಡ, ತಡರಾತ್ರಿಯವರೆಗೆ ಮೊಬೈಲ್ ಬಳಕೆ, ಅನಿಯಮಿತ ಆಹಾರ ಪದ್ಧತಿ ಮತ್ತು ಬದಲಾಗಿರುವ ನಿದ್ರೆಯ ಸಮಯದಿಂದಾಗಿ ಹಲವರ ನಿದ್ರೆಯ ಗುಣಮಟ್ಟ ಕುಸಿಯುತ್ತಿದೆ. ರಾತ್ರಿ ಸರಿಯಾಗಿ ನಿದ್ರೆ ಬರದಿರುವುದು ಕೇವಲ ಮರುದಿನದ ಆಯಾಸಕ್ಕೆ ಕಾರಣವಾಗುವುದಿಲ್ಲ ಮನಸ್ಥಿತಿ ಮತ್ತು ದೈನಂದಿನ ಕಾರ್ಯಗಳ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ನಿದ್ರೆ ಚೆನ್ನಾಗಿ ಬರಲು ಕೇವಲ ಹೆಚ್ಚು ಹೊತ್ತು ಹಾಸಿಗೆಯಲ್ಲಿ ಇರುವುದು ಸಾಕಾಗುವುದಿಲ್ಲ. ನಿಯಮಿತ ನಿದ್ರೆಯ ಸಮಯ ಮತ್ತು ಮಲಗುವ ಮುನ್ನದ ಅಭ್ಯಾಸಗಳಿಗೂ ಹೆಚ್ಚಿನ ಮಹತ್ವವಿದೆ.
ನಿದ್ರೆ ಉತ್ತಮವಾಗಲು ರಾತ್ರಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಏಳುವುದಕ್ಕೆ ಪ್ರಯತ್ನಿಸಿ: ಪ್ರತಿದಿನ ಸಾಧ್ಯವಾದಷ್ಟು ಒಂದೇ ಸಮಯಕ್ಕೆ ಮಲಗುವುದು ಮತ್ತು ಬೆಳಗ್ಗೆ ಏಳುವುದು ದೇಹದ ನೈಸರ್ಗಿಕ ಬಾಡಿ ಕ್ಲಾಕ್ ಅನ್ನು ನಿಯಮಿತವಾಗಿಡಲು ಸಹಾಯ ಮಾಡಬಹುದು. ವಾರಾಂತ್ಯದಲ್ಲೂ ನಿದ್ರೆಯ ಸಮಯದಲ್ಲಿ ಹೆಚ್ಚಿನ ವ್ಯತ್ಯಾಸವಾಗದಂತೆ ನೋಡಿಕೊಳ್ಳುವುದು ಉತ್ತಮ.
ಮಲಗುವ ಮುನ್ನ ಮೊಬೈಲ್ ಬಳಕೆ ಕಡಿಮೆ ಮಾಡಿ: ರಾತ್ರಿ ಮಲಗುವ ಮುನ್ನ ಮೊಬೈಲ್, ಟಿವಿ, ಲ್ಯಾಪ್‌ಟಾಪ್‌ನಂತಹ ಸ್ಕ್ರೀನ್‌ಗಳನ್ನು ದೀರ್ಘಕಾಲ ನೋಡುವುದನ್ನು ತಪ್ಪಿಸಿ. ಸ್ಕ್ರೀನ್ ಬಳಕೆ ಮನಸ್ಸನ್ನು ಹೆಚ್ಚು ಸಕ್ರಿಯವಾಗಿರಿಸಬಹುದು. ಆದ್ದರಿಂದ ಮಲಗುವ ಸಮಯ ಹತ್ತಿರವಾದಂತೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ.
ರಾತ್ರಿ ಅತಿಯಾಗಿ ಆಹಾರ ಸೇವಿಸಬೇಡಿ: ಮಲಗುವ ಮುನ್ನ ತುಂಬಾ ಹೊಟ್ಟೆ ತುಂಬುವಂತೆ ಅಥವಾ ಭಾರವಾದ ಆಹಾರ ಸೇವಿಸಿದರೆ ಹೊಟ್ಟೆ ಭಾರವಾಗಬಹುದು ಮತ್ತು ಕೆಲವರಿಗೆ ನಿದ್ರೆಗೆ ತೊಂದರೆಯಾಗಬಹುದು. ರಾತ್ರಿ ಸಾಧ್ಯವಾದಷ್ಟು ಹಗುರವಾದ ಆಹಾರ ಸೇವಿಸುವುದು ಉತ್ತಮ.
ಸಂಜೆ ನಂತರ ಚಹಾ-ಕಾಫಿ ಕಡಿಮೆ ಮಾಡಿ: ಚಹಾ ಮತ್ತು ಕಾಫಿಯಲ್ಲಿರುವ ಕ್ಯಾಫೀನ್ ಕೆಲವರಲ್ಲಿ ಹೆಚ್ಚು ಸಮಯ ಎಚ್ಚರವಾಗಿರುವಂತೆ ಮಾಡಬಹುದು. ವಿಶೇಷವಾಗಿ ಸಂಜೆ ಅಥವಾ ರಾತ್ರಿ ಕ್ಯಾಫೀನ್ ಇರುವ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡುವುದು ನಿದ್ರೆಗೆ ಸಹಾಯಕವಾಗಬಹುದು.
ಹಗಲಿನಲ್ಲಿ ದೈಹಿಕ ಚಟುವಟಿಕೆ ಇರಲಿ: ನಿಯಮಿತವಾಗಿ ವಾಕಿಂಗ್, ವ್ಯಾಯಾಮ ಅಥವಾ ಇತರ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಒಟ್ಟಾರೆ ಆರೋಗ್ಯದ ಜೊತೆಗೆ ನಿದ್ರೆಯ ಗುಣಮಟ್ಟಕ್ಕೂ ಸಹಾಯ ಮಾಡಬಹುದು. ಆದರೆ ಮಲಗುವ ಸಮಯಕ್ಕೆ ತೀರಾ ಹತ್ತಿರದಲ್ಲಿ ತೀವ್ರ ವ್ಯಾಯಾಮ ಮಾಡುವುದನ್ನು ತಪ್ಪಿಸುವುದು ಉತ್ತಮ.
ಮಲಗುವ ಕೋಣೆಯನ್ನು ಆರಾಮದಾಯಕವಾಗಿಡಿ: ಮಲಗುವ ಕೋಣೆ ಶಾಂತ, ಕತ್ತಲೆ ಮತ್ತು ಆರಾಮದಾಯಕವಾಗಿರುವಂತೆ ನೋಡಿಕೊಳ್ಳಿ. ಸೂಕ್ತ ತಾಪಮಾನ, ಆರಾಮದಾಯಕ ಹಾಸಿಗೆ ಮತ್ತು ಸರಿಯಾದ ದಿಂಬು ಕೂಡ ಉತ್ತಮ ನಿದ್ರೆಗೆ ಸಹಾಯ ಮಾಡಬಹುದು.
ಮಲಗುವ ಮುನ್ನ ಮನಸ್ಸನ್ನು ಶಾಂತಗೊಳಿಸಿ: ಮಲಗುವ ಮುನ್ನ ಪುಸ್ತಕ ಓದುವುದು, ನಿಧಾನವಾದ ಸಂಗೀತ ಕೇಳುವುದು ಅಥವಾ ಕೆಲವು ನಿಮಿಷ ವಿಶ್ರಾಂತಿ ಪಡೆಯುವುದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡಬಹುದು. ಒತ್ತಡ ಮತ್ತು ಚಿಂತೆ ಹೆಚ್ಚಿದ್ದರೆ ನಿದ್ರೆ ಬರುವುದಕ್ಕೂ ತೊಂದರೆಯಾಗಬಹುದು.
ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ರೆ ಮಾಡಬೇಡಿ: ದೀರ್ಘ ಸಮಯ ಹಗಲಿನಲ್ಲಿ ನಿದ್ರೆ ಮಾಡುವ ಅಭ್ಯಾಸ ರಾತ್ರಿ ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ಅಗತ್ಯವಿದ್ದರೆ ಸಣ್ಣ ಅವಧಿಯ ನಿದ್ರೆ ಮಾಡಬಹುದು. ಆದರೆ ರಾತ್ರಿ ನಿದ್ರೆ ಬರಲು ತೊಂದರೆಯಾಗುತ್ತಿದ್ದರೆ ಹಗಲಿನ ನಿದ್ರೆಯ ಅವಧಿಯನ್ನು ಗಮನಿಸಿಕೊಳ್ಳುವುದು ಮುಖ್ಯ.
ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
ಕೆಲವೊಮ್ಮೆ ಒತ್ತಡ, ಪ್ರಯಾಣ ಅಥವಾ ದಿನಚರಿಯ ಬದಲಾವಣೆಯಿಂದ ನಿದ್ರೆ ಹಾಳಾಗಬಹುದು. ಆದರೆ ನಿರಂತರವಾಗಿ ನಿದ್ರೆ ಬರದಿರುವುದು, ರಾತ್ರಿ ಪದೇಪದೇ ಎಚ್ಚರವಾಗುವುದು ಅಥವಾ ತುಂಬಾ ಬೇಗ ಎಚ್ಚರವಾಗಿ ಮತ್ತೆ ನಿದ್ರೆ ಬರದಿರುವುದು ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ರಾತ್ರಿ ಜೋರಾಗಿ ಗೊರಕೆ ಹೊಡೆಯುವುದರ ಜೊತೆಗೆ ಉಸಿರಾಟ ನಿಲ್ಲುವಂತೆ ಆಗುವುದು, ಹಠಾತ್ ಉಸಿರು ತೆಗೆದುಕೊಳ್ಳಲು ಎಚ್ಚರವಾದರೆ ಅಥವಾ ಹಗಲಿನಲ್ಲಿ ಅತಿಯಾದ ನಿದ್ರೆ ಮತ್ತು ಆಯಾಸ ಇದ್ದರೂ ವೈದ್ಯಕೀಯ ಸಲಹೆ ಪಡೆಯಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




