
ಹಿಂದೂ (Hindu)ನಂಬಿಕೆ ಹಾಗೂ ಧರ್ಮ ಗ್ರಂಥಗಳ ಪ್ರಕಾರ, ಭಗವಾನ್ ವಿಷ್ಣುವು (Lord Vishnu) ಭೂಮಿಯ ಮೇಲೆ ರಾಜರು ಮಾಡಿದ ಅನ್ಯಾಯ, ಅನೀತಿ ಮತ್ತು ಪಾಪಕಾರ್ಯಗಳನ್ನು ನಾಶ ಮಾಡಲು ಪರಶುರಾಮರಾಗಿ (Parshuram ) ಅವತರಿಸಿದನು ಎಂದು ಹೇಳಲಾಗುತ್ತದೆ. ವಿಷ್ಣುವು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಪರಶುರಾಮರಾಗಿ ಭೂಮಿಯ ಮೇಲೆ ಅವರತರಿಸಿದನು ಎಂದು ಹೇಳಲಾಗುತ್ತದೆ. ಹಾಗಾಗಿ ಪ್ರತಿ ವರ್ಷ ವೈಶಾಖ ಮಾಸದ ಶುಕ್ಷ ಪಕ್ಷದ ಮೂರನೇ ದಿನದಂದು ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮರ ಜನ್ಮ ಜಯಂತಿಯನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಋಷಿ ಜಮದಗ್ನಿ ಮತ್ತು ರೇಣುಕಾ ದಂಪತಿಯ ಐವರು ಪುತ್ರರಲ್ಲಿ ಪರುಶುರಾಮ ನಾಲ್ಕನೆಯವರು. ಇವರು ಮಹಾನ್ ಶಿವ ಭಕ್ತರಾಗಿರುವ ಇವರು ಏಳು ಚಿರಂಜೀವಿ ಪುರುಷರಲ್ಲಿ ಒಬ್ಬರಾಗಿದ್ದು, ಈ ಕಲಿಯುಗದಲ್ಲಿ ಇಂದಿಗೂ ಅವರು ಭೂಮಿಯ ಮೇಲೆ ಇದ್ದಾರೆ ಎಂಬ ನಂಬಿಕೆಯಿದೆ.
ಅನ್ಯಾಯದ ವಿರುದ್ಧ ನ್ಯಾಯವನ್ನು ಸ್ಥಾಪಿಸಲು, ಭೂಮಿಯ ಮೇಲಿನ ದುಷ್ಟತನವನ್ನು ನಾಶ ಮಾಡಲು ಮತ್ತು ಧರ್ಮ ಮತ್ತು ನೀತಿವಂತ ರಾಜ್ಯವನ್ನು ಸ್ಥಾಪನೆ ಮಾಡುವ ಸಲುವಾಗಿ ಪರಶುರಾಮರು ಭೂಮಿಯ ಮೇಲೆ ಅವತರಿಸಿದರು ಎಂದು ಹೇಳಲಾಗುತ್ತದೆ.
ಪರಶುರಾಮರ ಜನ್ಮ ನಾಮ ರಾಮ. ಬ್ರಾಹ್ಮಣನಾಗಿ ಜನಿಸಿದ ಇವರು ಕ್ಷತ್ರೀಯ ಗುಣಗಳನ್ನು ಹೊಂದಿದ್ದವರು. ಅವರು ತನ್ನ ಕಠಿಣ ತಪಸ್ಸಿನಿಂದ ಶಿವನನ್ನು ಮೆಚ್ಚಿಸಿದರು. ಅದರ ನಂತರ ಶಿವನು ಅವರಿಗೆ ಅನೇಕ ಆಯುಧಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಕೊಟ್ಟನು. ಅದರಲ್ಲಿ ಪರಶು ಕೂಡ ಒಂದು. ಇದೇ ಕಾರಣಕ್ಕೆ ಇವರಿಗೆ ಪರಶುರಾಮ ಎಂದು ಹೆಸರು ಬಂತು. ಅಲ್ಲದೆ ಶಿವನೇ ಪರಶುರಾಮರಿಗೆ ಯುದ್ಧ ಕಲೆಗಳನ್ನು ಕಲಿಸಿದನು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಹಿಂದೂ ಧರ್ಮದಲ್ಲಿ ಗಂಡ ಬದುಕಿರುವಾಗ ಕರಿಮಣಿ ತೆಗೆದಿಡುವುದಕ್ಕೆ ಅವಕಾಶವಿದೆಯೇ? ಮಾಂಗಲ್ಯ ಬದಲಾವಣೆ ಯಾವಾಗ?
ಕಥೆಗಳ ಪ್ರಕಾರ, ಒಮ್ಮೆ ಪರಶುರಾಮರ ತಾಯಿ ರೇಣುಕಾ ಒಂದು ಅಪರಾಧ ಮಾಡಿದ್ದಳು. ಇದರಿಂದ ಕೋಪಗೊಂಡ ಜಮದಗ್ನಿ ತನ್ನ ಎಲ್ಲಾ ಮಕ್ಕಳಿಗೆ ತಾಯಿಯನ್ನು ಕೊಲ್ಲುವಂತೆ ಆದೇಶಿಸಿದನು. ತಂದೆಯ ಮಾತಿಗೆ ಎಲ್ಲಾ ಮಕ್ಕಳು ನಿರಾಕರಿಸಿದರು. ಆದರೆ ಪರಶುರಾಮರು ಮಾತ್ರ ತಂದೆಯ ಆಜ್ಞೆಯಂತೆ ತನ್ನ ಹೆತ್ತ ತಾಯಿಯ ಶಿರವನ್ನು ಕಡಿಯುತ್ತಾರೆ. ಮತ್ತು ತಾಯಿಯ ಜೀವವನ್ನು ಮರಳಿ ನೀಡುವಂತೆ, ಸಹೋದರರಿಗೆ ನೀಡಿದ ಶಾಪವನ್ನು ಹಿಂಪಡೆಯುವಂತೆ ಮತ್ತು ತಾನು ಯಾವುದೇ ಯುದ್ಧದಲ್ಲಿ ಸೋಲಬಾರದು ಎಂದು ತಂದೆಯಿಂದ ಮೂರು ವರವನ್ನು ಪಡೆದರು.
ಗಣೇಶ ಪುರಾಣದ ಪ್ರಕಾರ, ಒಮ್ಮೆ ಪರಶುರಾಮರು ಶಿವನ ದರ್ಶನಕ್ಕಾಗಿ ಕೈಲಾಸ ಪರ್ವತವನ್ನು ತಲುಪಿದ್ದರು. ಆದರೆ ಶಿವ ಮತ್ತು ಪಾರ್ವತಿಯ ಪುತ್ರನಾದ ಗಣೇಶನು ಪರಶುರಾಮರಿಗೆ ಶಿವನನ್ನು ಭೇಟಿಯಾಗಲು ಬಿಡಲಿಲ್ಲ. ಇದರಿಂದ ಕೋಪಗೊಂಡ ಪರಶುರಾಮರು ತನ್ನ ಪರಶು ಆಯುಧದಿಂದ ಗಣೇಶನ ದಂತವನ್ನು ಮುರಿದರು. ಇದಾದ ನಂತರ ಗಣೇಶನಿಗೆ ಏಕದಂತ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.
ಪರಶುರಾಮ ಜಯಂತಿಯಂದು ದೇವರನ್ನು ಪೂಜಿಸುವುದರಿಂದ ಮೋಕ್ಷ ದೊರೆಯುತ್ತದೆ, ಮಕ್ಕಳಿಲ್ಲದವರು ಈ ದಿನ ಉಪವಾಸ ವ್ರತಾಚರಣೆಗಳನ್ನು ಮಾಡುವುದರಿಂದ ಅವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ಅಲ್ಲದೆ ಈ ದಿನ ದೇವರನ್ನು ಭಕ್ತಿಯಿಂದ ಪೂಜಿಸಿದರೆ ವಿಷ್ಣುವಿನ ಅನುಗ್ರಹವೂ ಲಭಿಸುತ್ತದೆ ಎಂದು ನಂಬಿಕೆಯಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:50 am, Tue, 29 April 25