ಬೇಸಿಗೆ ಕಾಲ ಪ್ರಾರಂಭವಾಗಿದೆ. ನೀವೆಲ್ಲಾ ದೇಹದ ಶಾಖವನ್ನು ಕಡಿಮೆ ಮಾಡುವ ಸಲುವಾಗಿ ಹಣ್ಣುಗಳು, ಪಾನೀಯ ಹಾಗೂ ಅಧಿಕ ಪ್ರಮಾಣದಲ್ಲಿ ನೀರನ್ನು ಸೇವನೆ ಮಾಡಲು ಪ್ರಾರಂಭಿಸಿರಬಹುದು. ನಿಮ್ಮಂತೆಯೇ ಸಾಕು ಪ್ರಾಣಿಗಳಿಗೂ ಬೇಸಿಗೆಯ ಬಿಸಿ ಶಾಖವು ಅನಾರೋಗ್ಯವನ್ನು ಉಂಟುಮಾಡಬಹುದು. ಆದ್ದರಿಂದ ಅವುಗಳ ಆಹಾರದಲ್ಲಿಯೂ ಕೂಡಾ ಕೆಲವೊಂದು ಬದಲಾವಣೆಗಳನ್ನು ಮಾಡಬೇಕಾದ ಅಗತ್ಯವಿದೆ. ಅವುಗಳ ಆಹಾರವನ್ನು ಹೈಡ್ರೇಟಿಕರಿಸುವುದು ಮುಖ್ಯವಾಗಿದೆ. ಇದರಿಂದ ಅವುಗಳ ದೇಹ ತಂಪಾಗಿರುತ್ತದೆ. ಜಸ್ಟ್ ಡಾಗ್ಸ್ ಸಹ ಸಂಸ್ಥಾಪಕಿ ಪೂರ್ವಿ ಅಂಥೋನಿ ಅವರು ಈ ಬೇಸಿಗೆಯಲ್ಲಿ ನಾಯಿಗಳಿಗೆ ನೀಡಬೇಕಾದ ಆಹಾರಗಳ ಬಗ್ಗೆ ಸಲಹೆ ನೀಡಿದ್ದಾರೆ.
ಬೇಸಿಗೆಯಲ್ಲಿ ನಿಮ್ಮ ಸಾಕು ಪ್ರಾಣಿಗಳು ಸೇವಿಸಲು ಕಲ್ಲಂಗಡಿ ಹಣ್ಣು ತುಂಬಾ ಪ್ರಯೋಜನಕಾರಿಯಾಗಿದೆ. ಈ ಹಣ್ಣು ಪ್ರಾಣಿಗಳಿಗೆ ಸುರಕ್ಷಿತವಾಗಿದೆ ಮತ್ತು ಅವುಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿನಾಂಶವಿರುವ ಕಾರಣ, ಸಾಕು ಪ್ರಾಣಿಗಳ ಅಗತ್ಯ ಪ್ರಮಾಣದ ಜಲಸಂಚಯನ ಕೂಡಾ ದೊರೆಯುತ್ತದೆ. ಈ ಹಣ್ಣು ನಿಮ್ಮ ಸಾಕು ಪ್ರಾಣಿಗಳು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವ ಅನೇಕ ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕ ಅಂಶಗಳಿಂದ ತುಂಬಿದೆ. ನಿಮ್ಮ ಸಾಕು ಪ್ರಾಣಿಗಳಿಗೆ ಹಣ್ಣಿನ ಬೀಜಗಳನ್ನು ತೆಗೆದು ನಂತರ ತಿನ್ನಲು ಕೊಡಿ. ಏಕೆಂದರೆ ಕಲ್ಲಂಗಡಿ ಬೀಜ ಪ್ರಾಣಿಗಳಿಗೆ ಹಾನಿಕಾರವಾಗಬಹುದು.
ಸೌತೆಕಾಯಿ ದೇಹವನ್ನು ತುಂಬಾ ತಂಪಾಗಿರಿಸುತ್ತದೆ. ಇದರಲ್ಲಿರುವ ವಿಟಮಿನ್ ಬಿ1, ಬಿ2, ವಿಟಮಿನ್ ಸಿ, ಕೆ ಮತ್ತು ತಾಮ್ರ, ಪೊಟ್ಯಾಸಿಯಂ, ಮೆಗ್ನೇಸಿಯಂ ಖನಿಜಾಂಶಗಳು ಸಾಕು ಪ್ರಾಣಿಗಳು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸೌತೆಕಾಯಿಯಲ್ಲಿ ಸಾಕಷ್ಟು ನೀರಿನಾಂಶ ಇರುವುದರಿಂದ ಇದು ಸಾಕು ಪ್ರಾಣಿಗಳಿಗೆ ಅಗತ್ಯವಿರುವ ಜಲಸಂಚಯನವನ್ನು ಒದಗಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಜಗತ್ತಿನ ಅತಿ ದೊಡ್ಡ ಜೀವಿ ತಿಮಿಂಗಿಲದ ಹೃದಯ ನೋಡಿದ್ದೀರಾ? ಇದರ ತೂಕ 181 ಕೆಜಿ, 3.2ಕಿ.ಮಿ ವರೆಗೂ ಇದರ ಎದೆ ಬಡಿತ ಕೇಳುತ್ತೆ
ಅನೇಕ ಬಾರಿ ಸಾಕು ಪ್ರಾಣಿಗಳು ಆಹಾರದ ರುಚಿಯ ಆಸಕ್ತಿಯ ಕೊರತೆಯಿಂದ ನೀರನ್ನು ಕುಡಿಯಲು ನಿರಾಕರಿಸುತ್ತವೆ. ಈ ನಿಟ್ಟಿನಲ್ಲಿ ಬೇಸಿಗೆಯಲ್ಲಿ ಸಾಕು ಪ್ರಾಣಿಗಳ ಆಹಾರದಲ್ಲಿ ಜಲಸಂಚಯನವನ್ನು ಪರಿಚಯಿಸಲು ತೆಂಗಿನ ನೀರನ್ನು ಅವುಗಳಿಗೆ ಕುಡಿಸಬಹುದು. ಇದು ನಿಮ್ಮ ಸಾಕು ಪ್ರಾಣಿಗಳಿಗೆ ಸುರಕ್ಷಿತವಾಗಿದೆ ಮತ್ತು ಅಗತ್ಯ ಪೋಷಕಾಂಶಗಳಾದ ಕ್ಯಾಲ್ಸಿಯಂ, ಮೆಗ್ನೇಸಿಯಂ, ಪೊಟ್ಯಾಸಿಯಂನ್ನು ಒದಗಿಸುತ್ತದೆ. ಮತ್ತು ಬೇಸಿಗೆ ಶಾಖದಲ್ಲಿ ಪ್ರಾಣಿಗಳ ದೇಹ ತಂಪಾಗಿರಿಸುವಂತೆ ಮಾಡುತ್ತದೆ.
ಮೊಸರು ಮತ್ತು ಮಜ್ಜಿಗೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಸಾಕುಪ್ರಾಣಿಗಳಿಗೆ ತುಂಬಾ ಒಳ್ಳೆಯದು. ಇವುಗಳ ಪ್ರೋಬಯೊಟಿಕ್ ಅಂಶವು ಸಾಕು ಪ್ರಾಣಿಗಳ ಕರುಳಿನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ವಿಟಮಿನ್ ಎ, ಬಿ6, ಸಿ, ಇ ಮತ್ತು ಅಗತ್ಯ ಉತ್ಕರ್ಷಣ ನಿರೋಧಕ ಅಂಶಗಳು ಮಾವಿನ ಹಣ್ಣಿನಲ್ಲಿದೆ. ಇದು ನಿಮ್ಮ ನಾಯಿಗಳಿಗೆ ಆರೋಗ್ಯಕರವಾದ ಮತ್ತು ರುಚಿಕರವಾದ ಆಹಾರವಾಗಿದೆ. ಮಾವಿನ ಹಣ್ಣಿನ ಸಿಪ್ಪೆ ಮತ್ತು ಬೀಜಗಳನ್ನು ತೆಗೆದು ಹಣ್ಣನ್ನು ತಿನ್ನಲು ಕೊಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: