ಮನೆಯ ಹೂದೋಟದಲ್ಲಿ ಚಿಟ್ಟೆಗಳು ಹಾರಾಡಬೇಕೆಂದರೆ ಈ ಗಿಡಗಳನ್ನು ನೆಡಿ

ಬಣ್ಣ ಬಣ್ಣದ ಚಿಟ್ಟೆಗಳನ್ನು ಇಷ್ಟಪಡದವರೇ ಇಲ್ಲ ಅಂತ ಹೇಳಬಹುದು. ಮಕ್ಕಳಿಂದ ಹಿಡಿದು ವಯಸ್ಕರರವರೆಗೆ ಬಹುತೇಕ ಎಲ್ಲರೂ ಚಿಟ್ಟೆಗಳನ್ನು ಇಷ್ಟಡುತ್ತಾರೆ. ಈ ವರ್ಣರಂಜಿತ ಚಿಟ್ಟೆಗಳನ್ನು ನೋಡಿದಾಕ್ಷಣ ಮನಸ್ಸಿಗೇನೋ ಖುಷಿ ಲಭಿಸುತ್ತದೆ. ಪ್ರಕೃತಿಯ ಸೌಂದರ್ಯವನ್ನು ದುಪ್ಪಟ್ಟುಗೊಳಿಸುವ ಈ ಚಿಟ್ಟೆಗಳು ಮನೆ ಸುತ್ತಲೂ ಹಾರುತ್ತಿದ್ದರೆ, ಅದೆಷ್ಟು ಚೆಂದ ಇರಬಹುದಲ್ವಾ. ನಿಮಗೂ ನಿಮ್ಮ ಮನೆ ಸುತ್ತಲೂ ಬಣ್ಣ ಬಣ್ಣದ ಚಿಟ್ಟೆಗಳು ಹಾರಾಡಬೇಕು ಎಂಬ ಆಸೆ ಇದ್ಯಾ? ಹಾಗಿದ್ರೆ ಮನೆ ಅಂಗಳ ಮತ್ತು ಬಾಲ್ಕನಿಯಲ್ಲಿ ಈ ಹೂವಿನ ಗಿಡಗಳನ್ನು ನೆಡಿ.

ಮನೆಯ ಹೂದೋಟದಲ್ಲಿ ಚಿಟ್ಟೆಗಳು ಹಾರಾಡಬೇಕೆಂದರೆ ಈ ಗಿಡಗಳನ್ನು ನೆಡಿ
ಸಾಂದರ್ಭಿಕ ಚಿತ್ರ
Image Credit source: Pexels

Updated on: Nov 04, 2026 | 5:30 PM

ಚಿಟ್ಟೆಗಳು (butterflies) ಪ್ರಕೃತಿಯ ಅದ್ಭುತ ಜೀವಿ ಅಂತಾನೇ ಹೇಳಬಹುದು. ಈ ಬಣ್ಣ ಬಣ್ಣದ ಚಿಟ್ಟೆಗಳು ಪ್ರಕೃತಿಯ ಸೌಂದರ್ಯವನ್ನು ದುಪ್ಪಟ್ಟುಗೊಳಿಸುವುದು ಮಾತ್ರವಲ್ಲ ನಮ್ಮ ಮನಸ್ಸಿಗೂ ಮುದವನ್ನು ನೀಡುತ್ತವೆ. ಹೌದು ಹೂವಿನ ಗಿಡಗಳ ಸುತ್ತ ಹಾರಾಡುವ ವರ್ಣರಂಜಿತ ಚಿಟ್ಟೆಗಳನ್ನು ನೋಡಿದಾಕ್ಷಣ ಮನಸ್ಸಿಗೆ ಸಂತೋಷವಾಗುತ್ತದೆ. ಸಾಮಾನ್ಯವಾಗಿ ಉದ್ಯಾನವನಗಳಲ್ಲಿ ಹೂವಿನ ಗಿಡಗಳ ಸುತ್ತಾ ಬಣ್ಣ ಬಣ್ಣದ ಚಿಟ್ಟೆಗಳು ಹಾರಾಡುತ್ತಿರುತ್ತವೆ. ಇವುಗಳ ಹಾರಾಟದಿಂದ ಉದ್ಯಾನವನದ ಸೌಂದರ್ಯವೇ ದ್ವಿಗುಣಗೊಳ್ಳುತ್ತವೆ. ಪಾರ್ಕ್‌ಗಳಲ್ಲಿರುವಂತೆ ನಿಮ್ಮ ಮನೆ ಅಂಗಳ ಮತ್ತು ಬಾಲ್ಕನಿ ಗಾರ್ಡನ್‌ನಲ್ಲಿಯೂ ಅಂದ ಚೆಂದ ಚಿಟ್ಟೆಗಳು ಹಾರಾಡಬೇಕೇ? ಹಾಗಿದ್ರೆ ತಪ್ಪದೇ ಈ ಹೂವಿನ ಗಿಡಗಳನ್ನು ಮನೆಗಳಲ್ಲಿ ನೆಡಿ. ಈ ವಿಶೇಷ ಹೂವಿನ ಗಿಡಗಳು ಚಿಟ್ಟೆಗಳು ಬಲು ಬೇಗನೇ ಆಕರ್ಷಿಸುತ್ತವೆ.

ಚಿಟ್ಟೆಗಳನ್ನು ಆಕರ್ಷಿಸುವ ಗಿಡಗಳಿವು:

ಚಿಟ್ಟೆಗಳು ಮನೆ ಗಾರ್ಡನ್‌ನ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಪರಾಗಸ್ಪರ್ಶ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ. ಇದು ತೋಟದಲ್ಲಿ ಹೆಚ್ಚು ಹೂವುಗಳು ಅರಳಲು ಕಾರಣವಾಗುತ್ತದೆ. ಹೀಗಿರುವಾಗ ಚಿಟ್ಟೆಗಳಂತಹ ಪರಾಗಸ್ಪರ್ಶಕಗಳನ್ನು ನಿಮ್ಮ ತೋಟಕ್ಕೆ ಆಕರ್ಷಿಸಲು, ಲ್ಯಾವೆಂಡರ್, ಚೆಂಡು ಹೂವು, ಜೀನಿಯಾ, ಪೆಂಟಾಸ್ ಮತ್ತು ಸೂರ್ಯಕಾಂತಿಗಳಂತಹ ಸಮೃದ್ಧ ಮಕರಂದ ಮತ್ತು ಪರಿಮಳಯುಕ್ತ ಹೂಬಿಡುವ ಸಸ್ಯಗಳನ್ನು ನೆಡಿ.

Loading...

ಲ್ಯಾವೆಂಡರ್‌ ಗಿಡ:

ಲ್ಯಾವೆಂಡರ್ ತನ್ನ ಸೂಕ್ಷ್ಮ ಪರಿಮಳ ಮತ್ತು ನೇರಳೆ ಹೂವುಗಳಿಗೆ ಹೆಸರುವಾಸಿಯಾಗಿದೆ. ಇದರ ಹೂವುಗಳು ಮಕರಂದದಿಂದ ಸಮೃದ್ಧವಾಗಿದ್ದು, ಇವು ಚಿಟ್ಟೆಗಳನ್ನು ಸುಲಭವಾಗಿ ಆಕರ್ಷಿಸುತ್ತವೆ. ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣು ಮತ್ತು ಉತ್ತಮ ಸೂರ್ಯನ ಬೆಳಕಿನಲ್ಲಿ ಇದನ್ನು ನೆಡಿ. ಈ ಗಿಡ ನೆಟ್ಟರೆ ನಿಮ್ಮ ಗಾರ್ಡನ್ ಯಾವಾಗಲೂ ಚಿಟ್ಟೆಗಳಿಂದ ಗಿಜಿಗುಡುತ್ತಿರುತ್ತವೆ.

ಚೆಂಡುಹೂವಿನ ಗಿಡ:

ಚೆಂಡುಹೂವಿನ ಗಿಡವನ್ನು ಮನೆ ಗಾರ್ಡನ್‌ನಲ್ಲಿ ನೆಡಿ. ಇದರ ಸುವಾಸನೆ, ಪ್ರಕಾಶಮಾನವಾದ ಹಳದಿ ಮತ್ತು ಕಿತ್ತಳೆ ಹೂವುಗಳು ಚಿಟ್ಟೆಗಳನ್ನು ಆಕರ್ಷಿಸುತ್ತವೆ. ಅಲ್ಲದೆ ಇದರ ಸೌಮ್ಯವಾದ ಪರಿಮಳವು ಅನೇಕ ಹಾನಿಕಾರಕ ಕೀಟಗಳು ಮನೆಯೊಳಗೆ ಪ್ರವೇಶಿಸದಂತೆ ಸಹಾಯ ಮಾಡುತ್ತದೆ. ಸಾಕಷ್ಟು ಸೂರ್ಯನ ಬೆಳಕು ಮತ್ತು ನಿಯಮಿತ ನೀರಾವರಿಯನ್ನು ಒದಗಿಸಿದರೆ, ಇದು ದೀರ್ಘಕಾಲದವರೆಗೆ ನಿರಂತರವಾಗಿ ಅರಳುತ್ತದೆ.

ಜೀನಿಯಾ ಗಿಡ:

ಜೀನಿಯಾ ಹೂವಿನ ಗಿಡ ಗಾರ್ಡನ್‌ನ ಸೌಂದರ್ಯವನ್ನು ದುಪ್ಪಟ್ಟು ಗೊಳಿಸುವುದರ ಜೊತೆಗೆ ಚಿಟ್ಟೆಗಳನ್ನು ಸಹ ಆಕರ್ಷಿಸುತ್ತವೆ. ಕೆಂಪು, ಗುಲಾಬಿ, ಹಳದಿ, ಬಿಳಿ ಮತ್ತು ನೇರಳೆ ಬಣ್ಣಗಳಲ್ಲಿ ಲಭ್ಯವಿರುವ ಇವುಗಳ ಹೂವುಗಳು ಮಕರಂದದಿಂದ ಸಮೃದ್ಧವಾಗಿದ್ದು, ಇವು ಸುಲಭವಾಗಿ ಚಿಟ್ಟೆಗಳನ್ನು ಆಕರ್ಷಿಸುತ್ತವೆ.

ದಾಸವಾಳ ಗಿಡ:

ದಾಸವಾಳದ ಹೂವುಗಳ ಮೇಲೆ ಚಿಟ್ಟೆಗಳು ಗುಂಪು ಗುಂಪಾಗಿ ಬಂದು ಅವುಗಳ ಮಕರಂದವನ್ನು ಹೀರುತ್ತವೆ. ಹಾಗಾಗಿ ಈ ಗಿಡವನ್ನು ನೆಡುವ ಮೂಲಕ ನಿಮ್ಮ ಗಾರ್ಡನ್‌ಗೆ ಚಿಟ್ಟೆಗಳನ್ನು ಸುಲಭವಾಗಿ ಆಕರ್ಷಿಸಬಹುದು.

ಕಾಸ್ಮೋಸ್ ಗಿಡ:

ಸುಂದರವಾದ ಹೂವುಗಳನ್ನು ಬಿಡುವ ಕಾಸ್ಮೋಸ್ ಸಸ್ಯಗಳು  ಮನೆಯ ಗಾರ್ಡನ್‌ನ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ಚಿಟ್ಟೆಗಳನ್ನು ಸಹ ಆಕರ್ಷಿಸುತ್ತವೆ.

ಇದನ್ನೂ ಓದಿ: ಕಿತ್ತಳೆ ಸಿಪ್ಪೆಯ ಸಾಬೂನು; ಈ ಕೆಮಿಕಲ್‌ ಫ್ರೀ ಸೋಪ್ ತಯಾರಿಸೋದು ಬಲು ಸುಲಭ

ಪೆಂಟಾಸ್ ಗಿಡ:

ನಕ್ಷತ್ರದ ಆಕಾರದ ಹೂವುಗಳನ್ನು ಬಿಡುವ ಪೆಂಟಾಸ್ ಗಿಡವನ್ನು  ಚಿಟ್ಟೆಗಳ ನೆಚ್ಚಿನ ಸಸ್ಯವೆಂದು ಪರಿಗಣಿಸಲಾಗುತ್ತದೆ. ಇದರ ಚಿಕ್ಕ, ಗೊಂಚಲು ಹೂವುಗಳು ಸಮೃದ್ಧವಾದ ಮಕರಂದವನ್ನು ಹೊಂದಿರುತ್ತವೆ, ಇದು ಹೆಚ್ಚಿನ ಸಂಖ್ಯೆಯ ಜೇನುನೊಣಗಳು ಮತ್ತು ಚಿಟ್ಟೆಗಳನ್ನು ಆಕರ್ಷಿಸುತ್ತದೆ.

ಸೂರ್ಯಕಾಂತಿ ಗಿಡ:

ಸೂರ್ಯಕಾಂತಿ ಹೂವುಗಳು ದೂರದಿಂದಲೇ ಪರಾಗಸ್ಪರ್ಶಕಗಳನ್ನು ಆಕರ್ಷಿಸುತ್ತವೆ. ಅವುಗಳ ಹೂವುಗಳು ಜೇನುನೊಣ, ಚಿಟ್ಟೆಗಳಿಗೆ ಹೇರಳವಾದ ಮಕರಂದವನ್ನು ಒದಗಿಸಿದರೆ, ಅವುಗಳ ಮಾಗಿದ ಬೀಜಗಳು ಪಕ್ಷಿಗಳಿಗೆ ಆಹಾರವನ್ನು ಒದಗಿಸುತ್ತವೆ. ನೀವು ಮುಕ್ತ ಮತ್ತು ವಿಶಾಲ  ಸ್ಥಳವನ್ನು ಹೊಂದಿದ್ದರೆ, ಅಲ್ಲಿ ಈ ಗಿಡವನ್ನು ನೆಡಿ.

ಗೆಜ್ಜೆ ಗಿಡ:

ಕ್ರೊಟಲೇರಿಯಾ ರೆಟುಸಾ ಅಥವಾ ಬಟರ್‌ಫ್ಲೈ ಪ್ಲಾಂಟ್‌ ಅಂತಾನೆ ಕರೆಯಲ್ಪಡುವ ಗೆಜ್ಜೆ ಗಿಡಗಳು ಚಿಟ್ಟೆಗಳನ್ನು ಆಕರ್ಷಿಸುವ ವಿಶಿಷ್ಟ ಗಿಡಗಳಾಗಿವೆ. ಈ ಗಿಡವನ್ನು ಕೂಡ ನೀವು ನಿಮ್ಮ ಮನೆ ಗಾರ್ಡನ್‌ನಲ್ಲಿ ನೆಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us