Pulwama Attack: ಫೆಬ್ರವರಿ 14 ಭಾರತೀಯರಿಗೆ ಕರಾಳ ದಿನ, ಈ ಉಗ್ರರ ದಾಳಿಗೆ ಭಾರತ ಪ್ರತ್ಯುತ್ತರ ಹೇಗೆ ನೀಡಿತ್ತು? ಇಲ್ಲಿದೆ ಮಾಹಿತಿ
ಫೆಬ್ರವರಿ 14 ಬಂತೆಂದರೆ ಸಾಕು ಇಡೀ ಜಗತ್ತು ಪ್ರೇಮಿಗಳ ದಿನದ ಸಂಭ್ರಮದಲ್ಲಿರುತ್ತದೆ. ಆದರೆ ಭಾರತದ ಪಾಲಿಗೆ ಪ್ರೇಮಿಗಳ ದಿನ ಕರಾಳ ದಿನ. ಹೌದು, ಈ ದಿನ ಭಾರತೀಯರಿಗೆ ಕರಾಳ ಭಯೋತ್ಪಾದಕ ದಾಳಿಯ ನೆನಪು ಕಾಡುತ್ತದೆ. ಸರಿಸುಮಾರು 40 ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಯೋಧರನ್ನು ಬಲಿ ತೆಗೆದುಕೊಂಡ ಭೀಕರ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದ ದಿನ. ಈ ಬಾರಿ ಆರನೇ ವರ್ಷದ ಕರಾಳ ದಾಳಿಯ ದಿನವನ್ನು ಆಚರಿಸಲಾಗುತ್ತದೆ. 2019 ಫೆಬ್ರವರಿ 14 ರಂದು ನಡೆದದ್ದೇನು? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಫೆಬ್ರವರಿ 14 ಭಾರತೀಯರ ಪಾಲಿಗೆ ಕರಾಳ ದಿನ. ನಮ್ಮ ವೀರ ಯೋಧರು ತಾಯಿ ನೆಲೆಕ್ಕಾಗಿ ಪ್ರಾಣ ಅರ್ಪಿಸಿದ ದಿನ. ಆರು ವರ್ಷಗಳ ಹಿಂದೆ ಪುಲ್ವಾಮಾದಲ್ಲಿ ಭಾರತೀಯ ಸೇನೆ ಭದ್ರತಾಪಡೆಗಳ ಮೇಲೆ ನಡೆದ ದಾಳಿಯಿಂದಾಗಿ 40 ಕ್ಕೂ ಯೋಧರು ಕೊನೆಯುಸಿರೆಳೆದಿದ್ದರು. ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ ಭಾರತೀಯ ಸೇನೆಯ ವಾಹನದಲ್ಲಿ ತೆರಳುತ್ತಿದ್ದ ಯೋಧರು ಬಲಿಯಾಗಿದ್ದರು. ಹುತಾತ್ಮರಾದ ಸೈನಿಕರನ್ನು ಗೌರವಿಸಲು ಮತ್ತು ರಾಷ್ಟ್ರಕ್ಕಾಗಿ ಅವರ ತ್ಯಾಗವನ್ನು ಸ್ಮರಿಸಲು ಫೆಬ್ರವರಿ 14 ರಂದು ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದಂದು ಈ ದಾಳಿಯಲ್ಲಿ ಜೀವ ಕಳೆದುಕೊಂಡ ಯೋಧರಿಗೆ ನಮನ ಸಲ್ಲಿಸಲಾಗುತ್ತದೆ.
2019 ರ ಫೆಬ್ರವರಿ 14 ರಂದು ನಡೆದದ್ದೇನು?
ಅಂದು ಫೆಬ್ರವರಿ 14ರ ಮದ್ಯಾಹ್ನ 3 ಗಂಟೆ ಸಮಯ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರ ಬಳಿಯ ಅವಾಂತಿಪೋರಾ ಬಳಿ ಶ್ರೀನಗರಕ್ಕೆ 2500 ಕ್ಕೂ ಹೆಚ್ಚು ಭಾರತೀಯ ಭದ್ರತಾ ಸಿಬ್ಬಂದಿಗಳಿದ್ದ 78 ಸೇನಾ ವಾಹನಗಳು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ತೆರಳುತ್ತಿತ್ತು. ಆ ವೇಳೆ 350 ಕೆಜಿ ಸ್ಫೋಟಕಗಳಿದ್ದ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯೊಂದು ಸೇನಾ ವಾಹನಕ್ಕೆ ಬಂದು ಢಿಕ್ಕಿ ಹೊಡೆಯಿತು. ಇದರ ಪರಿಣಾಮವಾಗಿ 40 ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಎರಡು ಬಸ್ ಗಳು ಹೊತ್ತಿ ಉರಿದಿತ್ತು.
ಇದನ್ನೂ ಓದಿ: ಫೆಬ್ರವರಿ 13 ರಂದೇ ವಿಶ್ವ ರೇಡಿಯೋ ದಿನ ಆಚರಿಸುವುದು ಏಕೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ
ಈ ದಾಳಿಯಲ್ಲಿ ನಲವತ್ತು ಹೆಚ್ಚು ಸೈನಿಕರು ಮೃತ ಪಟ್ಟರೆ ಕೆಲವರಿಗೆ ಗಂಭೀರ ಗಾಯವಾಗಿತ್ತು. ತದನಂತರದಲ್ಲಿ ಜೈಶ್-ಇ-ಮೊಹಮ್ಮದ್ ಸಂಘಟನೆ ವೀಡಿಯೋ ಬಿಡುಗಡೆ ಮಾಡಿತ್ತು. ಆದರೆ ಭಾರತವು ಮಾತ್ರ ಸುಮ್ಮನೆ ಇರಲಿಲ್ಲ. ಈ ಪಾಕ್ ಗೆ ಪ್ರತ್ಯುತ್ತರವನ್ನು ನೀಡುವ ಮೂಲಕ ಹನ್ನೆರಡು ದಿನಗಳ ಬಳಿಕ ಭಾರತೀಯ ವಾಯುಪಡೆಯ ಜೆಟ್‌ಗಳು ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾದಲ್ಲಿರುವ ಬಾಲಾಕೋಟ್‌ನಲ್ಲಿರುವ ಜೆಇಎಂ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸುವಲ್ಲಿ ಯಶಸ್ವಿಯಾಗಿತ್ತು. ಕೊನೆಗೆ ಭಾರತ ಪಾಕ್ ವಿರುದ್ಧ ನಡೆಸಿದ್ದ ದಾಳಿಯಲ್ಲಿ 250 ಪಾಕ್ ಉಗ್ರರು ಬಲಿಯಾದರು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:58 am, Fri, 14 February 25