ನೀವು ಪುನುಗು ಬೆಕ್ಕಿನ ಬಗ್ಗೆ ಕೇಳಿರಬಹುದು. ಇದು ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಒಂದಾಗಿದೆ. ಇದು ವೈವಿರಿಡೀ ಎಂಬ ಕುಟುಂಬಕ್ಕೆ ಸೇರಿದ್ದು, ಇದರಲ್ಲಿ 38 ಜಾತಿಯ ಬೆಕ್ಕುಗಳಿವೆ. ಆದರೆ ಏಷ್ಯಾದಲ್ಲಿ ಕಂಡುಬರುವ ಪುನುಗು ಬೆಕ್ಕಿನಲ್ಲಿ ಒಂದು ವಿಶೇಷ ಲಕ್ಷಣಗಳಿವೆ. ಅದರ ದೇಹದಿಂದ ಸುಗಂಧ ದ್ರವ್ಯವನ್ನು ಹೊರಹಾಕುತ್ತದೆ. ಇವುಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದ್ದು ದೇವರ ಪೂಜೆಗೂ ಬಳಸಲಾಗುತ್ತದೆ.
ಆದರೆ ಈ ಪುನುಗು ಬೆಕ್ಕಿಗೂ ಪ್ರಸಿದ್ಧ ತಿರುಮಲ ಕ್ಷೇತಕ್ಕೂ ವಿಶೇಷ ಸಂಬಂಧವಿದೆ ಎಂದರೆ ನೀವು ನಂಬುತ್ತೀರಾ? ಹೌದು, ಈ ತಳಿಗಳು ತಿರುಪತಿ ಬಳಿಯ ಶೇಷಾಚಲಂ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಬೆಕ್ಕಿನ ಪ್ರಜನನಾಂಗಗಳ ಬಳಿ ಸುಗಂಧ ದ್ರವ್ಯ ಅಥವಾ ತೈಲ ಸ್ರವಿಸುವ ಗ್ರಂಥಿಗಳಿವೆ. ಇದು ಪುನುಗು ಅಥವಾ ಗುದದ್ವಾರದ ಬಳಿ ಇರುವ ಸಂಚಿಯೊಂದರಲ್ಲಿ ಸಂಗ್ರಹಗೊಳ್ಳುತ್ತದೆ. ಇದನ್ನು ತೆಗೆದು ಅದಕ್ಕೆ ಸಮ ಪ್ರಮಾಣದಲ್ಲಿ ನೀರು ಬೆರೆಸಿದಾಗ ಮತ್ತಷ್ಟು ಸುವಾಸನೆಯನ್ನು ಕೊಡುತ್ತದೆ. ಈ ಪರಿಮಳ ಸರಿಸುಮಾರು 30 ರಿಂದ 40 ಕಿ. ಮೀ. ವರೆಗೂ ವ್ಯಾಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿ ತೆಗೆದ ಎಣ್ಣೆಯನ್ನು ತಿರುಮಲ ಮೂಲ ಮೂರ್ತಿಗೆ ಅಭಿಷೇಕ ಮಾಡಲಾಗುತ್ತದೆ. ಪ್ರತಿ ಹತ್ತು ದಿನಗಳಿಗೊಮ್ಮೆ, ಈ ಪುನುಗು ಬೆಕ್ಕಿನ ಚರ್ಮದ ಮೇಲೆ ಗುಳ್ಳೆಗಳು ರೂಪುಗೊಳ್ಳುತ್ತವೆ. ಅವುಗಳಿಂದ ಪರಿಮಳಯುಕ್ತ ಎಣ್ಣೆ ಬರುತ್ತದೆ. ನೋವನ್ನು ಶಮನ ಮಾಡಲು ಈ ಎಣ್ಣೆ ತುಂಬಾ ಉಪಯುಕ್ತಕಾರಿಯಾಗಿದ್ದು ಪ್ರಪಂಚದಾದ್ಯಂತ ಉತ್ತಮ ಬೇಡಿಕೆಯಿದೆ.
ಈ ಪುನುಗು ತಳಿಗಳನ್ನು ತಿರುಮಲ ದೇವರ ಅಭಿಷೇಕದ ಸೇವೆಗೆ ಬಳಸಲಾಗುತ್ತದೆ. ಆದರೆ ಪುನುಗು ಬೆಕ್ಕುಗಳ ಸಂತತಿ ನಶಿಸುತ್ತಿರುವುದರಿಂದ ತಿರುಮಲ ತಿರುಪತಿ ದೇವಸ್ಥಾನವು ವಿಶೇಷ ರೀತಿಯಲ್ಲಿ ಇದನ್ನು ನೋಡಿಕೊಳ್ಳುತ್ತಿದೆ. ಇಲ್ಲಿನ ಗೋಶಾಲೆಯಲ್ಲಿ ಇದನ್ನು ಪಾಲನೆ ಪೋಷಣೆ ಮಾಡಿ ಬೆಳೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಬೆಕ್ಕು ಕಾಡುಪ್ರಾಣಿಯಾಗಿರುವುದರಿಂದ ಇದನ್ನು ಸಾಕಬಾರದು ಎಂಬ ಆಕ್ಷೇಪ ಈ ಹಿಂದೆಯೂ ಇತ್ತು. ಬಳಿಕ 1972 ರ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಷರತ್ತಿನ ಪ್ರಕಾರ, ಈ ಪ್ರಾಣಿಗಳ ಸೇವೆಯನ್ನು ದೈವಿಕ ಕಾರ್ಯಗಳಿಗೆ ಬಳಸಬಹುದು ಎಂಬ ತೀರ್ಮಾನ ಹೊರಬಿತ್ತು. ಆ ನಂತರ ಟಿಟಿಡಿಯವರು ಕಾನೂನಿನ ಪ್ರಕಾರವಾಗಿಯೇ ಈ ಬೆಕ್ಕುಗಳನ್ನು ಸಾಕುತ್ತಿದೆ. ಈ ಬೆಕ್ಕು ಅಳಿವಿನಂಚಿನಲ್ಲಿರುವ ಜಾತಿಗಳಲ್ಲಿ ಒಂದಾಗಿರುವುದರಿಂದ ಅಪರೂಪದ ಪ್ರಾಣಿ ಎಂದು ಪರಿಗಣಿಸಲಾಗಿದೆ. ಈ ಬೆಕ್ಕು ಭಾರತವನ್ನು ಹೊರತುಪಡಿಸಿ ಸಿಂಗಾಪುರ, ಆಫ್ರಿಕ, ಬರ್ಮ, ಭೂತಾನ್ ಮತ್ತು ಶ್ರೀಲಂಕಾದಲ್ಲಿ ಮಾತ್ರ ಕಂಡುಬರುತ್ತದೆ.
ಎಲ್ಲರ ಆರಾಧ್ಯ ದೈವವಾಗಿರುವ ವೆಂಕಟೇಶ್ವರ ಸ್ವಾಮಿ ಇಂದಿಗೂ ಸಕಲ ದಿವ್ಯ ತೇಜಸ್ಸಿನಿಂದ ಕಂಗೊಳಿಸುತ್ತಿರುವುದಕ್ಕೆ ಪುನುಗು ಬೆಕ್ಕಿನ ಎಣ್ಣೆಯೇ ಕಾರಣ. ಪ್ರತಿ ಶುಕ್ರವಾರ ಅಭಿಷೇಕವಾದ ಬಳಿಕ ಇದರ ಎಣ್ಣೆಯನ್ನು ತಲೆಯಿಂದ ಪಾದದವರೆಗೆ ಲೇಪಿಸುತ್ತಾರೆ. ಈ ಸಂಪ್ರದಾಯವನ್ನು ಈಗಲೂ ಮುಂದುವರಿಸಿಕೊಂಡು ಹೋಗಲಾಗುತ್ತಿದ್ದು. ಈ ಪುನುಗು ಬೆಕ್ಕಿನ ಎಣ್ಣೆಯು ಸ್ವಾಮಿಯ ವಿಗ್ರಹವು ಬಿರುಕು ಬಿಡುವುದನ್ನು ತಡೆಯುವುದಲ್ಲದೆ, ಅದರ ಹೊಳಪನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತದೆ. ಇದೆಲ್ಲದರ ಜೊತೆಗೆ ಈ ತೈಲ ಸ್ವಾಮಿಯ ದೇಹವನ್ನು ತಂಪಾಗಿರಿಸುತ್ತದೆ ಎಂದು ನಂಬಲಾಗಿದೆ. ಸದ್ಯ ಸ್ವಾಮಿಯ ಅಭಿಷೇಕಕ್ಕೆ ಬಳಸುವ ಬೆಕ್ಕಿನ ಎಣ್ಣೆಯನ್ನು ಟಿಟಿಡಿ ಸಂಗ್ರಹಿಸುತ್ತದೆ.
ಇದನ್ನೂ ಓದಿ: ಹಾಸಿಗೆಯ ಪಕ್ಕದಲ್ಲಿ ಈ ವಸ್ತುಗಳಿದ್ದರೆ ಒಳ್ಳೆಯದು!
ಪುನುಗು ಬೆಕ್ಕಿನಿಂದ ಎಣ್ಣೆ ತೆಗೆಯಲು ದೇವಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪುನುಗು ಬೆಕ್ಕನ್ನು ಕಬ್ಬಿಣದ ಜರಡಿ ಅಥವಾ ಪಂಜರದಲ್ಲಿ ಬಿಟ್ಟು. ಅದರ ಬಳಿ ಶ್ರೀಗಂಧದ ಕಡ್ಡಿ ಅಥವಾ ಕೋಲನ್ನು ಇಡಲಾಗುತ್ತದೆ. ಆ ಬೆಕ್ಕು ತನ್ನ ದೇಹವನ್ನು ಅದಕ್ಕೆ ಒರೆಸಿಕೊಂಡು ಅಥವಾ ತಾಗಿಸಿಕೊಂಡು ಹೋಗುವಾಗ ಅದು ಸ್ರವಿಸುವ ತೈಲವು ಶ್ರೀಗಂಧದ ಕೋಲಿಗೆ ಅಂಟಿಕೊಳ್ಳುತ್ತದೆ. ಇದು ಪ್ರತಿ ಹತ್ತು ದಿನಗಳಿಗೊಮ್ಮೆ ದೇಹದ ಗ್ರಂಥಿಗಳ ಮೂಲಕ ಈ ರೀತಿ ಸುಂಗಧವನ್ನು ಹೊರಹಾಕುತ್ತದೆ. ಆ ಕಡ್ಡಿಗೆ ಅಂಟಿನಂತೆ ಅಂಟಿಕೊಂಡಿರುವ ದ್ರವ್ಯವನ್ನು ಹೊರತೆಗೆದು ದೇವರಿಗೆ ಎಣ್ಣೆಯ ರೀತಿಯಲ್ಲಿ ಹಚ್ಚಲಾಗುತ್ತದೆ. ಈ ಪದ್ಧತಿ ಇಂದಿಗೂ ರೂಢಿಯಲ್ಲಿದ್ದು ಪ್ರತಿ ಶುಕ್ರವಾರ ದೇವರಿಗೆ ಅಭಿಷೇಕವಾದ ಬಳಿಕ ಈ ದ್ರವ್ಯವನ್ನು ದೇವರ ಮೂರ್ತಿಗೆ ಲೇಪಿಸಲಾಗುತ್ತದೆ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ