
ರಾಜಸ್ಥಾನ, ಮೇ 17: ಇತ್ತೀಚಿಗಂತೂ ಸಣ್ಣಪುಟ್ಟ ಜಗಳ, ವರದಕ್ಷಿಣೆಯ ಕಿರುಕುಳ ಇತ್ಯಾದಿ ಕಾರಣಗಳಿಗೆ ಡಿವೋರ್ಸ್ (divorce) ಗಾಗಿ ಗಂಡ-ಹೆಂಡ್ತಿ ಕೋರ್ಟ್ ಮೆಟ್ಟಿಲೇರಿದಂತಹ ಪ್ರಕರಣಗಳು ಹೆಚ್ಚುತ್ತಲೇ ಇದೆ. ಜೈಪುರ (jaipur) ದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ವಾಯುಪಡೆಯ ಮಹಿಳಾ ಅಧಿಕಾರಿಯೊಬ್ಬರು ತನ್ನ ಪತಿಯ ಮುಂದೆ ವಧುದಕ್ಷಿಣೆಗೆ ಬೇಡಿಕೆಯಿಟ್ಟಿದ್ದಾರೆ. ಹೌದು, ನೀವು ನಾವು ಕೇಳಿದ್ದನ್ನು ಕೊಡಲಿಲ್ಲವೆಂದರೆ ನಿನಗೆ ಡಿವೋರ್ಸ್ ಕೊಡುವುದಾಗಿ ಬೆದರಿಕೆ ಹಾಕಿದ್ದು, ಇದರಿಂದ ನೊಂದ ಮರ್ಚೆಂಟ್ ನೇವಿ ಅಧಿಕಾರಿ ಅಭಿನವ್ ಜೈನ್ (merchant navy officer abhinav jain) ತನಗೆ ನ್ಯಾಯ ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಕೊನೆಗೂ ಮರ್ಚೆಂಟ್ ನೇವಿ ಅಧಿಕಾರಿಯ ಪರವಾಗಿ ಜೈಪುರ ಮೆಟ್ರೋ ನ್ಯಾಯಾಲಯವು ತೀರ್ಪು ನೀಡಿದೆ.
ಅಭಿನವ್ ಜೈನ್ ಹೇಳುವಂತೆ, ಪತ್ನಿಯ ಅತ್ತೆ-ಮಾವ 5 ಕೋಟಿ ರೂಪಾಯಿ ನಗದು ಹಾಗೂ ಬಿಎಂಡಬ್ಲ್ಯು ಕಾರನ್ನು ವಧುದಕ್ಷಿಣೆಯಾಗಿ ಕೊಡಬೇಕು. ಮೊತ್ತ ನೀಡಲು ನಿರಾಕರಿಸಿದರೆ ಪತ್ನಿಯಿಂದ ವಿಚ್ಛೇದನ ಕೊಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅದಲ್ಲದೇ, ಮಾರ್ಚ್ 19, 2025 ರಂದು ವಾಯುಪಡೆ ನಿಲ್ದಾಣಕ್ಕೆ ಹೋದಾಗ ಮಗನನ್ನು ಭೇಟಿಯಾಗಲು ಸಹ ಬಿಡಲಿಲ್ಲ. ಮಗನನ್ನು ಭೇಟಿಯಾಗಲು 5 ಕೋಟಿ ರೂ. ಮತ್ತು ಐಷಾರಾಮಿ ಕಾರನ್ನು ನೀಡಬೇಕೆಂದು ಷರತ್ತು ವಿಧಿಸಿದ್ದರು ಎಂದು ಆರೋಪಿಸಿದ್ದಾರೆ.
ಪತ್ನಿ ಹಾಗೂ ಆಕೆಯ ಹೆತ್ತವರ ಬೆದರಿಕೆಗೆ ಮನನೊಂದು ಕೋರ್ಟ್ ಮೆಟ್ಟಿಲೇರಿದ್ದ ಅಭಿನವ್ ಜೈನ್ ಪರವಾಗಿ ಕೋರ್ಟ್ ತೀರ್ಪು ನೀಡಿದೆ. ಬಿಎಂಡಬ್ಲ್ಯೂ ಕಾರು ಮತ್ತು 5 ಕೋಟಿ ರೂ. ವಧುದಕ್ಷಿಣೆ ನೀಡುವಂತೆ ಪತ್ನಿ ಹಾಗೂ ಆಕೆಯ ಹೆತ್ತವರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು. ಕೊನೆಗೂ ಪತಿ ನೀಡಿದ ದೂರಿನ ಮೇರೆಗೆ ಜೈಪುರ ಮೆಟ್ರೋ ನ್ಯಾಯಾಲಯವು ಪತ್ನಿ ಹಾಗೂ ಆಕೆಯ ಪೋಷಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶ ನೀಡಿದೆ.
ಇದನ್ನೂ ಓದಿ : ಈ ಆಹಾರಗಳ ಸೇವನೆ ಮಾಡಿದರೆ ಮುಖದಲ್ಲಿ ಕಪ್ಪು ಕಲೆಗಳು ಬರುವುದು ಖಚಿತ
ಅಭಿನವ್ ಜೈನ್ ರಾಜಸ್ಥಾನ ರಾಜ್ಯದ ಜಗತ್ಪುರದ ನಿವಾಸಿ. ಇವರಿಗೆ ಇದು ಎರಡನೇ ಮದುವೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯದಿಂದ ಮೊದಲ ಪತ್ನಿಯಿಂದ ದೂರವಾದರು. ಆ ವೇಳೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಾಯುಪಡೆಯ ಮಹಿಳಾ ಅಧಿಕಾರಿಯ ಸ್ನೇಹವಾಯಿತು. ಹೀಗಾಗಿ ನೋಡಲು ಸುಂದರವಾಗಿ ಕಾಣುತ್ತಿದ್ದ ವಾಯುಪಡೆ ಅಧಿಕಾರಿಯನ್ನು ಇಷ್ಟ ಪಟ್ಟರು. ಈ ವಾಯುಪಡೆ ಮಹಿಳಾ ಅಧಿಕಾರಿಯಾಗಿದ್ದ ಈಕೆಗೂ ಈ ಹಿಂದೆ ಮದುವೆಯಾಗಿತ್ತು. ಆದರೆ ಮೊದಲ ಪತಿ 2014ರ ವಿಮಾನ ಅಪಘಾತದಲ್ಲಿ ಮೃತ ಪಟ್ಟಿದ್ದರು. ಆ ಬಳಿಕ ಅಭಿನವ್ ಜೈನ್ ಜೊತೆಗಿನ ಒಡನಾಟ ಹಾಗೂ ಸ್ನೇಹವು ಆತ್ಮೀಯತೆಗೆ ತಿರುಗಿ 2022ರ ಫೆಬ್ರವರಿ 10ರಂದು ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಗೆ ಮುನ್ನ ಅಭಿನವ್ ಜೈನ್ ತನ್ನ ಮೊದಲ ಪತ್ನಿಯ ಜೊತೆಗೆ ಡಿವೋರ್ಸ್ ಬಗ್ಗೆಯೂ ತಿಳಿಸಿದ್ದರು. ಇಬ್ಬರೂ ಇಷ್ಟ ಪಟ್ಟು ಮದುವೆಯಾಗಿದ್ದು ಜೂನ್ 23, 2023 ರಲ್ಲಿ ಮಗುವನ್ನು ಪಡೆದರು. ಅಭಿನವ್ ಅವರು ಹೇಳುವಂತೆ, ಮದುವೆಗೆ 15 ಲಕ್ಷ ರೂ. ವೆಚ್ಚವಾಗಿದ್ದು, ಅದನ್ನು ಅವರೇ ಭರಿಸಿದ್ದಾರೆ ಎನ್ನಲಾಗಿದೆ. ಅದಲ್ಲದೇ, ಮದುವೆಯ ನಂತರ ಅವರ ಪತ್ನಿಯ ನಡವಳಿಕೆ ಬದಲಾಯಿತು ಎಂದು ಆರೋಪ ಮಾಡಿದ್ದಾರೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Sat, 17 May 25