Ramadan 2023: ರಂಜಾನ್ ಹಬ್ಬದ ವಿಶೇಷ ಪಾಕವಿಧಾನಗಳು ಇಲ್ಲಿವೆ

Akshatha Vorkady

|

Updated on: Mar 18, 2023 | 7:00 AM

ರಂಜಾನ್ ಹಬ್ಬದ ಈ ವಿಶೇಷ ತಿನಿಸುಗಳನ್ನು ನೀವು ಕೂಡಾ ಮನೆಯಲ್ಲಿ ಟ್ರೈ ಮಾಡಿ. ಇದು ರುಚಿಕರ ಮಾತ್ರವಲ್ಲದೇ ಆರೋಗ್ಯಕರವಾಗಿಯೂ ಇರುತ್ತದೆ.

Ramadan 2023: ರಂಜಾನ್ ಹಬ್ಬದ ವಿಶೇಷ  ಪಾಕವಿಧಾನಗಳು ಇಲ್ಲಿವೆ
ರಂಜಾನ್‌ನ ವಿಶೇಷ ಪಾಕವಿಧಾನಗಳು
Image Credit source: Onmanorama

ರಂಜಾನ್ ಇನ್ನೇನು ಸಮೀಪಿಸುತ್ತಿದೆ. ಪ್ರಪಂಚದಾದ್ಯಂತ ಮುಸ್ಲಿಮರಿಗೆ ಇದು ಉಪವಾಸ ಮತ್ತು ಪವಿತ್ರ ತಿಂಗಳಾಗಿದೆ. ರಂಜಾನ್ ಸಮಯದಲ್ಲಿ ಉಪವಾಸವು ಸವಾಲಿನದ್ದಾಗಿದೆ. ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ಬಿಸಿಲಿನ ಶಾಖದ ಮಟ್ಟದಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಮತ್ತು ದೇಹವನ್ನು ಹೈಡ್ರೀಕರಿಸುವುದು ಮುಖ್ಯವಾಗಿರುತ್ತದೆ. ಈ ರಂಜಾನ್‌ನಲ್ಲಿ ಆರೋಗ್ಯಕರ ಹಾಗೇನೇ ರುಚಿಕರ ಆಹಾರವನ್ನು ತಯಾರಿಸುವ ಮೂಲಕ ರಂಜಾನ್ ತಿಂಗಳ ಉಪವಾಸ ಮತ್ತು ಹಬ್ಬವನ್ನು ಆಚರಿಸಬಹುದು. ರಂಜಾನ್ ಹಬ್ಬದಂದು ಈ ವಿಶೇಷ ತಿನಿಸುಗಳನ್ನು ನೀವು ಕೂಡಾ ಮನೆಯಲ್ಲಿ ಟ್ರೈ ಮಾಡಿ. ಇದು ರುಚಿಕರ ಮಾತ್ರವಲ್ಲದೇ ಆರೋಗ್ಯಕರವಾಗಿಯೂ ಇರುತ್ತದೆ.

ರಂಜಾನ್‌ನ ವಿಶೇಷ ಪಾಕವಿಧಾನಗಳು:

ಶೀರ್ ಖುರ್ಮಾ:

ಬೇಕಾಗುವ ಪದಾರ್ಥಗಳು:

1/2 ಕಪ್ ನೀರು, 1 ಟಿನ್ ಕಂಡೆನ್ಸ್ಡ್ ಮಿಲ್ಕ್,1 ಲೀಟರ್ ಹಾಲು, 7 ರಿಂದ 8 ಖರ್ಜೂರ, ಏಲಕ್ಕಿ ಪುಡಿ, 1/2ಕಪ್ ಸಕ್ಕರೆ, 1/4 ತುಪ್ಪ, ಸ್ವಲ್ಪ ಒಣದ್ರಾಕ್ಷಿ, ಸ್ವಲ್ಪ ಪಿಸ್ತಾ, 8 ರಿಂದ 10 ಬಾದಾಮಿ, 2 ಟೀ ಸ್ಪೂನ್ ಚಿರೋಂಜಿ, 8 ರಿಂದ 10 ಗೋಡಂಬಿ, 1 ಕಪ್ ಶ್ಯಾವಿಗೆ, ಕೇಸರಿ ದಳ.

ವಿಧಾನ:

ಒಂದು ಕುಕ್ಕರ್‌ನಲ್ಲಿ ನೀರನ್ನು ಸೇರಿಸಿ ಮತ್ತು ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ ಸೇರಿಸಿ. ಅದನ್ನು ಮಧ್ಯಮ ಉರಿಯಲ್ಲಿ 2 ಸೀಟಿ ಬರುವವರೆಗೆ ಬೇಯಿಸಿ. ಇದು ಬೇಯುವಾಗ ಇತ್ತಕಡೆ ಒಂದು ಆಳವಾದ ತಳದ ಕಡಾಯಿ ತೆಗೆದುಕೊಂದು ಅದರಲ್ಲಿ ಹಾಲು ಬಿಸಿ ಮಾಡಿ. ಮತ್ತು ಅದಕ್ಕೆ ಖರ್ಜೂರವನ್ನು ಸೇರಿಸಿ. ಖರ್ಜೂರದ ಬಣ್ಣ ಹಾಲಿನಲ್ಲಿ ಬೆರೆಯುವವರೆಗೆ ಚೆನ್ನಾಗಿ ಬೇಯಿಸಿ ನಂತರ ಪುಡಿ ಮಾಡಿದ ಏಲಕ್ಕಿ ಬೀಜಗಳನ್ನು ಸೇರಿಸಿ 3 ರಿಂದ 4 ನಿಮಿಷಗಳ ಕಾಲ ಬೇಯಿಸಿ ಬಳಿಕ ಸಕ್ಕರೆಯನ್ನು ಸೇರಿಸಿ. ಸಕ್ಕರೆ ಪೂರ್ತಿ ಕರಗಿದ ಬಳಿಕ ಕುಕ್ಕರ್‌ನಲ್ಲಿ ಬೇಯಿಸಲು ಇಟ್ಟ ಕಂಡೆನ್ಸ್ಡ್ , ಹಾಲಿನ ಮಿಶ್ರಣಕ್ಕೆ ಸೇರಿಸಿ, ಈ ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿ.

ಇನ್ನೊಂದು ಬಾಣಲೆಯಲ್ಲಿ 2 ಚಮಚ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಚಿರೋಂಜಿ ಸೇರಿಸಿ ಸ್ವಲ್ಪ ಹುರಿಯಿರಿ. ನಂತರ ಇಸ್ತಾ, ಬಾದಾಮಿ, ಗೋಡಂಬಿ ಚೂರುಗಳನ್ನು ಸೇರಿಸಿ ಅವುಗಳು ನಸು ಕಂದು ಬಣ್ಣಕ್ಕೆ ತಿರುಗಿದ ಬಳಿಕ ಒಣದ್ರಾಕ್ಷಿಯನ್ನು ಅದಕ್ಕೆ ಸೇರಿಸಿ. ನಂತರ ಅದಕ್ಕೆ ಶ್ಯಾವಿಗೆ ಸೇರಿಸಿ ಅದು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಇದಾದ ಬಳಿಕ ಶ್ಯಾವಿಗೆ ಮತ್ತು ಡ್ರೈ ಫ್ರೂಟ್ಸ್​​​​ ಮಿಶ್ರಣವನ್ನು ಹಾಲಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅವುಗಳ ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿ. ಕೊನೆಯಲ್ಲಿ ಡ್ರೈ ಫ್ರೂಟ್ಸ್ ಮತ್ತು ಕೇಸರಿಯಿಂದ ಶೀರ್ ಖೂರ್ಮವನ್ನು ಅಲಂಕರಿಸಿ ಬಿಸಿಯಾಗಿ ಬಡಿಸಿ.

ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ರಾಜ್ಮಾ ಚಾವಲ್ ಸಲಾಡ್‌

ಚಿಕನ್ ಬಿರಿಯಾನಿ:

ಬೇಕಾಗುವ ಪದಾರ್ಥಗಳು:

1 1/2 ಕಪ್ ಬಾಸ್ಮತಿ ಅಕ್ಕಿ, 750 ಗ್ರಾಂ ಚಿಕನ್, 2 ಪಲಾವ್ ಎಲೆ, 5-6 ಲವಂಗ, 8-10 ಕರಿಮೆಣಸು, 2 ಕಪ್ಪು ಏಲಕ್ಕಿ, 6-7 ಹಸಿರು ಏಲಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, 2 ಟೀ ಸ್ಪೂನ್ ತುಪ್ಪ, 1 ಇಂಚು ದಾಲ್ಚಿನ್ನಿ, 1 ಟೀಸ್ಪೂನ್ ಶಾಹಿ ಜೀರಾ, 2-3 ಹಸಿ ಮೆಣಸಿನಕಾಯಿ, 2 ಈರುಳ್ಳಿ, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 1 ಚಮಚ ಬಿರಿಯಾನಿ ಮಸಾಲ, 1 ಟೀಸ್ಪೂನ್ ಕೊತ್ತಂಬರಿ ಪುಡಿ, 1/2 ಟೀಸ್ಪೂನ್ ಅರಶಿನ ಪುಡಿ, 1 ಟೀಸ್ಪೂನ್ ಅಚ್ಚ ಖಾರದ ಪುಡಿ, 1/2 ಕಂದು ಬಣ್ಣಕ್ಕೆ ಹುರಿದ ಈರುಳ್ಳಿ, 1/2 ಕಪ್ ಮೊಸರು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, 2 ಟೀಸ್ಪೂನ್ ಕೇದಗೆ ನೀರು, 3-4 ಫ್ರೆಶ್ ಕ್ರೀಮ್ ಮತ್ತು ಬೆಣ್ಣೆ, ಕೇಸರಿ ದಳದ ನೀರು.

ವಿಧಾನ:

ನಾನ್‌ಸ್ಟಕ್ ಪ್ಯಾನ್‌ನಲ್ಲಿ 5 ಕಪ್ ನೀರನ್ನು ಬಿಸಿ ಮಾಡಿ. ಅದಕ್ಕೆ ಪಲಾವ್ ಎಲೆ, ಲವಂಗ, ಕಾಳುಮೆಣಸು, ಏಲಕ್ಕಿ ಸೇರಿಸಿ, ಚೆನ್ನಾಗಿ ಕುದಿಸಿ. ನಂತರ ಅದಕ್ಕೆ ಉಪ್ಪು ಸೇರಿಸಿ ಒಮ್ಮೆ ಕೈಯಾಡಿಸಿ, ಬಳಿಕ ಅಕ್ಕಿಯನ್ನು ಅದಕ್ಕೆ ಸೇರಿಸಿ ಬೇಯಿಸಿ. ಇನ್ನೊಂದು ಆಳವಾದ ನಾನ್‌ಸ್ಟಿಕ್ ಪ್ಯಾನ್‌ನಲ್ಲಿ 2 ಟೇಬಲ್‌ಸ್ಪೂನ್ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಏಲಕ್ಕಿ, ಕರಿಮೆಣಸು, ಲವಂಗ, ದಾಲ್ಚಿನ್ನಿ, ಪಲಾವ್ ಎಲೆ ಸೇರಿಸಿ ಪರಿಮಳ ಬರುವವರೆಗೂ ಹುರಿಯಿರಿ. ನಂತರ ಅದಕ್ಕೆ ಹಸಿ ಮೆಣಸಿನಕಾಯಿ ಸೇರಿಸಿ ಸ್ವಲ್ಪ ಫ್ರೈ ಮಾಡಿ. ಬಳಿಕ ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಮತ್ತೊಂದು ಬಾರಿ ಫ್ರೈ ಮಾಡಿ, ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 1 ನಿಮಿಷಗಳ ಕಾಲ ಹುರಿಯಿರಿ.

ಇದಾದ ಬಳಿಕ ಬಿರಿಯಾನಿ ಮಸಾಲೆ, ಚಿಕನ್ ತುಂಡುಗಳು ಹಾಗೂ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ 4 ರಿಂದ 5 ನಿಮಿಷಗಳ ಕಾಲ ಬೇಯಿಸಿ. ಬಳಿಕ ಕೊತ್ತಂಬರಿ ಪುಡಿ, ಮೆಣಸಿನ ಪುಡಿ ಸೇರಿಸಿ 1 ನಿಮಿಷಗಳ ಕಾಲ ಮತ್ತೊಮ್ಮೆ ಬೇಯಿಸಿ. ನಂತರ ಹುರಿದ ಈರುಳ್ಳಿ, ಮೊಸರು, ಕೊತ್ತಂಬರಿ ಸೊಪ್ಪು, ಪುದೀನಾ ಎಲೆಗಳನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಕೇದಗೆ ನೀರನ್ನು ಸ್ವಲ್ಪ ಸೇರಿಸಿ, ಇನ್ನೊಂದು ಬಾರಿ ಬೇಯಿಸಿಕೊಳ್ಳಿ. ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಈ ಚಿಕನ್ ಗ್ರೇವಿ ರೆಡಿ ಆದ ಬಳಿಕ ಇದರ ಮೇಲೆ ಮೊದಲೇ ಬೇಯಿಸಿಟ್ಟ ಬಾಸುಮತಿ ಅನ್ನವನ್ನು ಹರಡಿ ಅದರ ಮೇಲೆ ಬೆಣ್ಣೆ ಮತ್ತು ಕೇಸರಿಯ ನೀರನ್ನು ಹರಡಿ. ಮತ್ತು ಅದರ ಮೇಲೆ ಕೊತ್ತಂಬರಿ ಸೊಪ್ಪು, ಪುದೀನ ಎಲೆ, ಹುರಿದ ಈರುಳ್ಳಿಯನ್ನು ಹರಡಿ. ನಂತರ ಮುಚ್ಚಳವನ್ನು ಬಿಗಿಯಾಗಿ ಗೋಧಿ ಹಿಟ್ಟಿನಿಂದ ಮುಚ್ಚಿ ದಮ್ ಕಟ್ಟಿ 10 ರಿಂದ 15 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿದರೆ, ಬಿಸಿ ಬಿಸಿ ಚಿಕನ್ ಬಿರಿಯನಿ ತಿನ್ನಲು ಸಿದ್ಧ.

ಮಟನ್​​ ಗ್ರೇವಿ ಕರಿ:

ಬೇಕಾಗುವ ಪದಾರ್ಥಗಳು:

1 ಕೆಜಿ ಕುರಿ ಮಾಂಸ, 3 ಈರುಳ್ಳಿ, ಟೇಬಲ್‌ಸ್ಪೂನ್ ಎಣ್ಣೆ, ದಾಲ್ಚಿನ್ನಿ, ಲವಂಗ, ಕರಿಮೆಣಸು, ಪಲಾವ್ ಎಲೆ, ಟೀಸ್ಪೂನ್ ಜೀರಿಗೆ, ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೀಸ್ಪೂನ್ ಜೀರಿಗೆ ಪುಡಿ, 1 ಟೀಸ್ಪೂನ್ ಅರಶಿನ ಪುಡಿ, 2 ಟೀಸ್ಪೂನ್ ಕಾಶ್ಮೀರಿ ಮೆಣಸಿನ ಪುಡಿ, 2 ಟೀಸ್ಪೂನ್ ಕರಾಹಿ ಮಸಾಲೆ, ಉಪ್ಪು, 2 ಟೀಸ್ಪೂನ್ ಕರಿ ಮೆಣಸು, 2 ಟೊಮೆಟೊ, 2 ಟೀಸ್ಪೂನ್ ಟೊಮೆಟೊ ಪ್ಯೂರಿ.

ವಿಧಾನ:

ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಕತ್ತರಿಸಿದ ಈರುಳ್ಳಿ, ದಾಲ್ಚಿನ್ನಿ, ಲವಂಗ, ಕರಿಮೆಣಸು, ಪಲಾವ್ ಎಲೆ, ಜೀರಿಗೆ ಹಾಕಿ ಎಲ್ಲವನ್ನು ಚೆನ್ನಾಗಿ ಫ್ರೈ ಮಾಡಿ. ನಂತರ ಅದಕ್ಕೆ ಕುರಿ ಮಾಂಸ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಅರಶಿನ ಪುಡಿ ಸೇರಿಸಿ ಮಿಶ್ರಣ ಮಾಡಿ, ಮಾಂಸದಿಂದ ಬಿಡಿಗಡೆಯಾಗುವ ನೀರು ಆವಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ. ನಂತರ ಕೊತ್ತಂಬರಿ ಸೊಪ್ಪು ಮತ್ತು ಜೀರಿಗೆ ಪುಡಿ ಸೇರಿಸಿ. ಹಾಗೂ ಮೆಣಸಿನ ಪುಡಿ, ಕಾಶ್ಮೀರಿ ಮೆಣಸಿನ ಪುಡಿ, ಕರಾಹಿ ಮಸಾಲೆ, ತಾಜಾ ಟಿನ್ ಟೊಮೆಟೊ, ಟೊಮೆಟೊ ಪ್ಯೂರಿ ಸೇರಿಸಿ, ಟೊಮೆಟಪ ಕರಗುವವರೆಗೆ ಮಿಶ್ರಣವನ್ನು ಬೇಯಿಸಿ. ನಂತರ ನಿಮಗೆ ಬೇಕಾದ ಗ್ರೇವಿಯ ಹದಕ್ಕೆ ನೀರು ಸುರಿಯಿರಿ. ಅದಕ್ಕೆ ಸಣ್ಣ ಸಣ್ಣ ಆಲೂಗಡ್ಡೆಯನ್ನು ಸೇರಿಸಿ. ಮಾಂಸ ತುಂಡುಗಳು ಚೆನ್ನಾಗು ಮೃದುವಾಗುವವರೆಗೆ ಬೇಯಿಸಿ. ಬೆಂದ ಬಳಿಕ ಕೊತ್ತಂಬರಿ ಸೊಪ್ಪಿನಿಂದ ಗ್ರೇವಿಯನ್ನು ಅಲಂಕರಿಸಿ.

ಚಿಕನ್ ಕೀಮಾ ಪಕೋಡಾ:

ಬೇಕಾಗುವ ಪದಾರ್ಥಗಳು:

ಚಿಕನ್ ಅಥವಾ ಇತರ ಯಾವುದೇ ಮಾಂಸ 1 ಕೆ.ಜಿ. 2 ದೊಡ್ಡ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಕಡ್ಲೆ ಹಿಟ್ಟು, ಎಣ್ಣೆ, ಅರಶಿನ ಪುಡಿ 1/4 ಟೀಸ್ಪೂನ್, ಕೊತ್ತಂಬರಿ ಪುಡಿ 1ಟೀಸ್ಪೂನ್, ಜೀರಿಗೆ ಪುಡಿ 1 ಟೀಸ್ಪೂನ್, ಮೆಣಸಿನ ಪುಡಿ 1/2 ಟೀಸ್ಪೂನ್

ವಿಧಾನ:

ಒಂದು ಬಟ್ಟಲಿನಲ್ಲಿ ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಉಪ್ಪು ಮತ್ತು ಜೀರಿಗೆಯನ್ನು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ, ನಂತರ ಅದಕ್ಕೆ ಎಲ್ಲಾ ಮಸಾಲೆಗಳನ್ನು ಸೇರಿಸಿ ಮತ್ತು ಅದನ್ನು ಮಿಶ್ರಣ ಮಾಡಿ ಅದಕ್ಕೆ ಸಣ್ಣದಾಗಿ ಕೊಚ್ಚಿದ ಕೋಳಿ ಮಾಂಸವನ್ನು ಸೇರಿಸಿ. ಇದಕ್ಕೆ ಕಡ್ಲೆ ಹಿಟ್ಟನ್ನು ಸೇರಿಸಿ, ಪಕೋಡಾ ಮಾಡಲು ಬೆಕಾದ ಹದಕ್ಕೆ ಹಿಟ್ಟನ್ನು ತಯಾರಿಸಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಚಿಕನ್ ಪಕೋಡಾ ಉಂಡೆಗಳನ್ನು ಎಣ್ಣೆಯಲ್ಲಿ ಡೀಪ್‌ ಫ್ರೈ ಮಾಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada