Republic Day 2026: ಗಣರಾಜ್ಯೋತ್ಸವದಂದು ಮನೆಯಲ್ಲಿ ಮಾಡಿ ತ್ರಿವರ್ಣ ಬಣ್ಣದ ರುಚಿಕರ ಭಕ್ಷ್ಯ
ದೇಶದಲ್ಲಿ ಸ್ವಾತಂತ್ರ್ಯ ದಿನವನ್ನು ಹೇಗೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆಯೋ ಅದೇ ರೀತಿ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನು ಸಹ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಾರಿ 77 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ವಿಶೇಷ ದಿನದಂದು ತ್ರಿವರ್ಣ ಬಣ್ಣದ ಬಗೆಬಗೆಯ ಭಕ್ಷ್ಯಗಳನ್ನು ಮಾಡಿ ವಿಶೇಷ ರೀತಿಯಲ್ಲಿ ನೀವು ಗಣರಾಜ್ಯೋತ್ಸವ ದಿನವನ್ನು ಆಚರಿಸಬಹುದು.

77ನೇ ಗಣರಾಜ್ಯೋತ್ಸವವನ್ನು (Republic Day) ಆಚರಿಸಲು ದೇಶಾದ್ಯಂತ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಭಾರತದಲ್ಲಿ ಪ್ರಜಾಪ್ರಭುತ್ವ ಉದಯವಾದ ಐತಿಹಾಸಿಕ ದಿನವಾದ ಜನವರಿ ಜನವರಿ 26 ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ದಿನ. ಸ್ವಾತಂತ್ರ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸುವಂತೆ ಗಣರಾಜ್ಯೋತ್ಸವ ದಿನವನ್ನು ಸಹ ದೇಶಾದ್ಯಂತ ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹೌದು ಶಾಲಾ ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ, ಮುಖ್ಯವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಐತಿಹಾಸಿಕ ಪರೇಡ್ ಕೂಡ ನಡೆಯುತ್ತದೆ. ಈ ಸಂದರ್ಭದಲ್ಲಿ ನೀವು ಕೂಡ ತ್ರಿವರ್ಣ ಬಣ್ಣದ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಮನೆ ಮಂದಿಗೆಲ್ಲಾ ಬಡಿಸುವ ಮೂಲಕ ಗಣರಾಜ್ಯೋತ್ಸವ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಬಹುದು. ನೀವು ಮನೆಯಲ್ಲಿಯೇ ತಯಾರಿಸಬಹುದಾದ ತ್ರಿವರ್ಣ ಬಣ್ಣದ ಸುಲಭ ರೆಸಿಪಿ ಇಲ್ಲಿವೆ.
ತ್ರಿವರ್ಣ ಬಣ್ಣದ ರುಚಿಕರ ಭಕ್ಷ್ಯಗಳು:
ತ್ರಿವರ್ಣ ಸ್ಯಾಂಡ್‌ವಿಚ್:

ಇದು ಮಕ್ಕಳು ಮತ್ತು ವಯಸ್ಕರಿಗೆ ಇಷ್ಟವಾದ ತಿಂಡಿಯಾಗಿದ್ದು, ಇದನ್ನು ತಯಾರಿಸುವುದು ತುಂಬಾ ಸುಲಭ. ನಿಮಗೆ ಮೂರು ಬ್ರೆಡ್ ಸ್ಲೈಸ್‌ಗಳು ಬೇಕಾಗುತ್ತವೆ. ಸ್ಯಾಂಡ್‌ವಿಚ್ ತಯಾರಿಸಲು, ಮೊದಲು ಬ್ರೆಡ್ ಹೋಳುಗಳ ಅಂಚುಗಳನ್ನು ಕತ್ತರಿಸಿ ಲಘುವಾಗಿ ಬೆಣ್ಣೆ ಹಚ್ಚಿ. ನಂತರ, ತುರಿದ ಕ್ಯಾರೆಟ್ ಅನ್ನು ಸ್ವಲ್ಪ ಚೀಸ್ ನೊಂದಿಗೆ ಬೆರೆಸಿ ಬ್ರೆಡ್‌ನ ಮೊದಲ ಪದರಕ್ಕೆ ಸಮವಾಗಿ ಹಚ್ಚಿ. ನಂತರ, ಮೇಯನೇಸ್ ಮತ್ತು ಬೇಯಿಸಿದ ಆಲೂಗಡ್ಡೆಯ ಪೇಸ್ಟ್ ತಯಾರಿಸಿ ಬ್ರೆಡ್‌ನ ಎರಡನೇ ಪದರಕ್ಕೆ ಹಚ್ಚಿ. ಈಗ, ಮೂರನೇ ಪದರದ ಬ್ರೆಡ್ ಮೇಲೆ ಪಾಲಕ್ ಪ್ಯೂರಿ ಅಥವಾ ಕೊತ್ತಂಬರಿ ಚಟ್ನಿಯನ್ನು ಹರಡಿ. ಸ್ಯಾಂಡ್‌ವಿಚ್‌ನ ಎಲ್ಲಾ ಮೂರು ಲೇಯರ್‌ಗಳು ಸಿದ್ಧವಾದ ನಂತರ, ಈ ಸ್ಯಾಂಡ್‌ವಿಚ್ ಅನ್ನು ಒಂದರ ಮೇಲೊಂದು ತ್ರಿವರ್ಣ ಅನುಕ್ರಮದಲ್ಲಿ ಜೋಡಿಸಿ. ಮನೆ ಮಂದಿಗೆ ಬಡಿಸಿ.
ತ್ರಿವರ್ಣ ಬಣ್ಣದ ಇಡ್ಲಿ:

ತ್ರಿವರ್ಣ ಇಡ್ಲಿ ಉತ್ತಮ ಮತ್ತು ಆರೋಗ್ಯಕರ ಉಪಹಾರ ಆಯ್ಕೆಯಾಗಿದೆ. ಮೊದಲಿಗೆ ಇಡ್ಲಿ ಹಿಟ್ಟನ್ನು ತಯಾರಿಸಿ ಮೂರು ಭಾಗಗಳಾಗಿ ವಿಂಗಡಿಸಿ. ಒಂದು ಭಾಗಕ್ಕೆ ಪಾಲಕ್ ಪ್ಯೂರಿ (ಹಸಿರು) ಸೇರಿಸಿ. ಎರಡನೇ ಭಾಗವನ್ನು ಸಾದಾ (ಬಿಳಿ) ಬಿಡಿ. ಮೂರನೇ ಭಾಗಕ್ಕೆ ತುರಿದ ಕ್ಯಾರೆಟ್ ಅಥವಾ ಕ್ಯಾರೆಟ್ ಪ್ಯೂರಿ ಸೇರಿಸಿ. ನಂತರ ಇದನ್ನು ತ್ರಿವರ್ಣ ಪದರದಲ್ಲಿ ಹಾಕಿ ಸ್ಟೀಮರ್‌ನಲ್ಲಿ ಬೇಯಿಸಬಹುದು, ಅಥವಾ ಮೂರು ಬಣ್ಣದ ಇಡ್ಲಿಯನ್ನು ಪ್ರತ್ಯೇಕವಾಗಿಯೂ ಬೇಯಿಸಬಹುದು. ಇದೇ ವಿಧಾನದಲ್ಲಿ ತ್ರಿವರ್ಣ ದೋಸೆಯನ್ನೂ ತಯಾರಿಸಬಹುದು.
ತ್ರಿವರ್ಣ ಪಲಾವ್:

ಗಣರಾಜ್ಯೋತ್ಸವ ದಿನದಂದು ತ್ರಿವರ್ಣ ಬಣ್ಣದ ಪಲಾವ್ ತಯಾರಿಸಬಹುದು. ಅದಕ್ಕಾಗಿ ಅನ್ನವನ್ನು ಮೂರು ಪ್ರತ್ಯೇಕ ಪಾತ್ರೆಗಳಲ್ಲಿ ಬೇಯಿಸಿ. ಒಂದು ಭಾಗಕ್ಕೆ ಕೇಸರಿ ಪ್ಯೂರಿ, ಇನ್ನೊಂದು ಭಾಗವನ್ನು ಪಾಲಕ್ ಪ್ಯೂರಿಯೊಂದಿಗೆ ಬೇಯಿಸಿ, ಇನ್ನೊಂದು ಭಾಗ ಬಿಳಿಯಾಗಿಯೇ ಇರಲಿ. ಅನ್ನ ಬೆಂದ ನಂತರ ಒಂದರ ಮೇಲೊಂದರೆಂತೆ ಪದರದ ರೀತಿಯಲ್ಲಿ ಹರಡಿದರೆ ತ್ರಿವರ್ಣ ಬಣ್ಣದ ಪಲಾವ್ ಸಿದ್ಧ.
ಇದನ್ನೂ ಓದಿ: ಈ ಗಣರಾಜ್ಯೋತ್ಸವಕ್ಕೆ 830 ರೂ.ನಲ್ಲಿ 7 ಕಡೆ ಟ್ರಿಪ್ ಹೋಗಬಹುದು!: KSTDC ವಿಶೇಷ ಪ್ಯಾಕೇಜ್
ತ್ರಿವರ್ಣ ಬರ್ಫಿ:

ಯಾವುದೇ ಭಾರತೀಯ ಹಬ್ಬವು ಸಿಹಿತಿಂಡಿಗಳಿಲ್ಲದೆ ಅಪೂರ್ಣ. ಹಾಗಾಗಿ ಗಣರಾಜ್ಯೋತ್ಸವ ದಿನದಂದು ನೀವು ತೆಂಗಿನಕಾಯಿ ಬರ್ಫಿಯನ್ನು ಮಾಡಬಹುದು. ತ್ರಿವರ್ಣ ಬರ್ಫಿ ತಯಾರಿಸಲು, ದಪ್ಪ ತಳವಿರುವ ಬಾಣಲೆಯಲ್ಲಿ ಹಾಲನ್ನು ಕುದಿಸಿ. ಹಾಲು ಕುದಿಯಲು ಪ್ರಾರಂಭಿಸಿದ ನಂತರ, ಖೋಯಾ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಬೇಯಿಸಿ ನಂತರ ಸಕ್ಕರೆ ಸೇರಿಸಿ ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿ. ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ಸಂಪೂರ್ಣವಾಗಿ ದಪ್ಪ ಹದಕ್ಕೆ ಬಂದ ನಂತರ ಗ್ಯಾಸ್ ಆಫ್ ಮಾಡಿ ಮೂರು ಭಾಗಗಳಾಗಿ ವಿಂಗಡಿಸಿ, ಮೊದಲ ಭಾಗಕ್ಕೆ ಕೇಸರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎರಡನೇ ಭಾಗವನ್ನು ಹಾಗೆಯೇ ಬಿಡಿ. ಮೂರನೇ ಭಾಗಕ್ಕೆ ರುಬ್ಬಿದ ಪಿಸ್ತಾವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅಚ್ಚು ಅಥವಾ ತಟ್ಟೆಯ ಮೇಲೆ ಈ ಮೂರು ಬಣ್ಣದ ಮಿಶ್ರಣವನ್ನು ಹರಡಿ, ಲಘುವಾಗಿ ಒತ್ತಿದರೆ ಬರ್ಫಿ ಸಿದ್ಧ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




