Kannada News Lifestyle How to stop worrying about what other people think of you? kannada News
ಬೇರೆಯವರು ಏನು ಅಂದುಕೊಳ್ತಾರೋ ಎಂದು ಯೋಚಿಸುವುದನ್ನು ಬಿಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಯಾವ ಕೆಲಸಕ್ಕೆ ಕೈಹಾಕಿದರೂ ಕೂಡ ಅವರು ಏನು ಅಂದುಕೊಳ್ಳುತ್ತಾರೆ, ಇವರೇನು ಅಂದುಕೊಳ್ಳುತ್ತಾರೆ. ನಾನೇನಾದ್ರೂ ತಪ್ಪು ಮಾಡ್ತಾ ಇದ್ದೇನಾ ಹೀಗೆ ನಾನಾ ರೀತಿಯ ಯೋಚನೆಗಳು ತಲೆಯಲ್ಲಿ ಓಡಾಡುತ್ತದೆ. ಇದರಿಂದ ಅಂದುಕೊಂಡ ಕೆಲಸವು ಪೂರ್ಣವಾಗುವುದಿಲ್ಲ. ಅದಲ್ಲದೇ ಮಾನಸಿಕ ನೆಮ್ಮದಿಯು ಹಾಳಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಬೇರೆಯವರು ಏನು ಅಂದುಕೊಳ್ಳುತ್ತಾರೋ ಎನ್ನುವ ಬಗ್ಗೆ ಯೋಚಿಸದೇ ಇರುವುದು ಒಳ್ಳೆಯದು.
ಸಾಂದರ್ಭಿಕ ಚಿತ್ರ
Follow us on
ಜೀವನದಲ್ಲಿ ಪ್ರತಿಯೊಬ್ಬರು ಖುಷಿಯಾಗಿರಬೇಕು, ಅಂದುಕೊಂಡಂತೆ ಬದುಕಬೇಕು ಅಂದುಕೊಳ್ಳುತ್ತಾರೆ. ಆದರೆ ಎಷ್ಟೋ ಸಲ ನಮ್ಮ ಸುತ್ತಮುತ್ತಲಿನ ಜನರೇ ನಾವು ಮಾಡುವ ಕೆಲಸದ ಬಗ್ಗೆ ಕೊಂಕು ಮಾತನಾಡುತ್ತಾರೆ. ಇಲ್ಲದಿದ್ದರೆ ಅವರ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಇಂತಹ ಜನರ ಮಾತಿನ ಬಗ್ಗೆ ಗಮನ ಕೊಡದೇ ನಮ್ಮ ಪಾಡಿಗೆ ನಾವು ಇರುವುದು ಹೇಗೆ ಎನ್ನುವುದಕ್ಕೆ ಈ ಕೆಲವು ಸಲಹೆಗಳು ಇಲ್ಲಿದೆ.
ಜೀವನದಲ್ಲಿ ಮುಖ್ಯ ಏನೆಂದು ಅರ್ಥಮಾಡಿಕೊಳ್ಳಿ: ನಿಮ್ಮ ಜೀವನಕ್ಕೆ ಏನು ಬೇಕು ಏನು ಬೇಡ ಎನ್ನುವ ಬಗ್ಗೆ ನಿಮ್ಮಷ್ಟು ಅರಿತುಕೊಂಡವರು ಯಾರು ಇಲ್ಲ. ಎಲ್ಲರಿಗೂ ಕೂಡ ವಿಭಿನ್ನ ಆದ್ಯತೆಗಳಿರುತ್ತದೆ. ಹೀಗಾಗಿ ನೀವು ಏನು ಮಾಡುತ್ತಿದ್ದೀರಿ ಮತ್ತು ಏಕೆ ಮಾಡುತ್ತಿದ್ದೀರಿ ಎಂಬ ಬಗ್ಗೆ ತಿಳಿದಿರಲಿ. ಬೇಡದವರ ಮಾತಿಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು, ನಿಮ್ಮ ಸ್ವಂತ ಆಲೋಚನೆಯಲ್ಲಿಯೇ ಮುಂದುವರೆಯಿರಿ. ಬೇರೆಯವರ ಮಾತನ್ನು ಅಭಿಪ್ರಾಯವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವುದು ಸರಿಯಲ್ಲ.
ನೀವೇನು ಮಾಡಬೇಕೆಂಬುದನ್ನು ನೀವೇ ನಿರ್ಧರಿಸಿ: ಕೆಲವೊಮ್ಮೆ ನಮ್ಮ ನಿರ್ಧಾರದ ಬಗ್ಗೆ ಬೇರೆಯವರ ಬಳಿ ಅಭಿಪ್ರಾಯ ಅಥವಾ ಸಲಹೆಯನ್ನು ಕೇಳುತ್ತೇವೆ. ಆದರೆ ನಿಮ್ಮ ಸುತ್ತಮುತ್ತಲಿನ ವ್ಯಕ್ತಿಗಳು ಯೋಚಿಸುವ ರೀತಿಯು ಭಿನವಾಗಿರುವುದರಿಂದ ಅವರು ನೀಡುವ ಸಲಹೆ ಸೂಚನೆಗಳು ಸರಿಯೆನಿಸದೇ ಇರಬಹುದು. ಹೀಗಾಗಿ ನೀವೇನು ಮಾಡಬೇಕು ಎನ್ನುವ ಬಗ್ಗೆ ಸ್ಪಷ್ಟ ಚಿತ್ರಣವಿರಲಿ.
ಇತರರ ಯೋಚನೆಯನ್ನು ಬದಲಾಯಿಸಲು ಸಾಧ್ಯವಿಲ್ಲ: ನಮ್ಮ ಸುತ್ತ ಮುತ್ತಲಿನ ವ್ಯಕ್ತಿಗಳು ನಾವು ಏನೇ ಮಾತನಾಡಿದರೂ ಕೂಡ ಅವರಿಗೆ ತೋಚಿದ್ದನ್ನೇ ಮಾತನಾಡುತ್ತಾರೆ. ಹೀಗಾಗಿ ಜನರ ಯೋಚನೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಹಾಗೂ ನಿಯಂತ್ರಿಸಲು ಆಗುವುದಿಲ್ಲ ಎನ್ನುವ ವಾಸ್ತವವನ್ನು ಅರಿತುಕೊಳ್ಳಿ. ನೀವು ಸದಾ ಚಟುವಟಿಕೆಯಿಂದ ಇದ್ದು, ಅವರಿರವರ ಅಭಿಪ್ರಾಯಕ್ಕೆ ಗಮನ ಕೊಡದೆ ಇರುವ ಮೂಲಕ ಅಂತಹ ವ್ಯಕ್ತಿಗಳಿಂದ ದೂರವಿರಲು ಸಾಧ್ಯ.
ಎಲ್ಲರೂ ಪರಿಪೂರ್ಣರಾಗಿರಲು ಸಾಧ್ಯವಿಲ್ಲ: ಈ ಲೋಕದಲ್ಲಿ ಪರಿಪೂರ್ಣವಾದ ವ್ಯಕ್ತಿಯು ಯಾರು ಇಲ್ಲ. ನಿಮ್ಮ ಸುತ್ತಮುತ್ತಲಿನ ವ್ಯಕ್ತಿಗಳು ಕೂಡ ಪರಿಪೂರ್ಣರಲ್ಲ. ನೀವು ಮಾಡುವ ಪ್ರತಿಯೊಂದು ಕೆಲಸವನ್ನು ಶ್ರಮವಹಿಸಿ ಮಾಡಿ, ಎಲ್ಲ ಕೆಲಸದಲ್ಲಿ ಪರಿಪೂರ್ಣತೆಯನ್ನು ಬಯಸದಿರಿ. ಕೆಲಸದಲ್ಲಿ ತಪ್ಪಾದಾಗ ಸರಿ ಪಡಿಸಿಕೊಂಡು ಮುಂದೆ ಸಾಗುವುದು ಮುಖ್ಯ. ಅವರಿವರ ಕೊಂಕು ಮಾತನ್ನು ಪರಿಗಣಿಸಬೇಡಿ.
ನಿಮ್ಮ ದೃಷ್ಟಿಕೋನ ಸರಿಯಾಗಿದ್ದಿರಬಹುದು : ಹೆಚ್ಚಿನವರ ಬೇರೆಯವರ ಅಭಿಪ್ರಾಯಗಳಿಗೆ ಬೆಲೆ ಕೊಟ್ಟು, ಅದರಂತೆ ನಡೆದುಕೊಳ್ಳುತ್ತಾರೆ. ಆದರೆ ಎಷ್ಟೋ ನಿಮ್ಮ ಜೀವನ ಗೊತ್ತುಗುರಿಗಳ ಬಗ್ಗೆ ನಿಮಗೆ ತಿಳಿದಿರುವಷ್ಟು ಬೇರೆ ಯಾರು ತಿಳಿದವರಿಲ್ಲ. ಹೀಗಾಗಿ ನಿಮ್ಮ ಅಭಿಪ್ರಾಯಗಳು, ನಿರ್ಧಾರಗಳು ಸರಿಯಾಗಿರಬಹುದು. ಬೇರೆಯವರು ಯೋಚಿಸುವ ವಿಧಾನಗಳು ತಪ್ಪಾಗಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಿಮ್ಮ ಮೇಲೆ ನಿಮಗೆ ನಂಬಿಕೆಯಿರಲಿ.
ನಿಮ್ಮ ನಿರ್ಧಾರಗಳ ಬಗ್ಗೆ ವಿಶ್ವಾಸವಿರಲಿ : ನೀವು ಬೇರೆಯವರನ್ನು ಮೆಚ್ಚಿಸುವ ಸಲುವಾಗಿ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಹೀಗಾಗಿ ಯೋಚಿಸುವ ರೀತಿ ಹಾಗೂ ನಿರ್ಧಾರದ ಬಗ್ಗೆ ಆತ್ಮವಿಶ್ವಾಸವಿರುವುದು ಮುಖ್ಯ. ಹೀಗಾಗಿ ಗುರಿ ತಲುಪಲು ಸುಲಭವಾಗುವ ರೀತಿಯಲ್ಲಿ ನೀವೆ ನಿರ್ಧಾರವನ್ನು ಕೈಗೊಳ್ಳಿ. ನಿಮ್ಮ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಅವರಿವರ ಜೊತೆಗೆ ಚರ್ಚಿಸುವುದು ಬೇಡ. ಇದರಿಂದ ಅವರ ಮೂಗಿನ ನೇರಕ್ಕೆ ಮಾತನಾಡುವ ಸಾಧ್ಯತೆಯೇ ಹೆಚ್ಚು.