ಟ್ಯಾಟೂ ಎಂಬುದು ಇತ್ತೀಚೆಗೆ ಯುವಪೀಳಿಗೆಯನ್ನು ಮಾತ್ರವಲ್ಲದೆ ಎಲ್ಲ ವಯೋಮಾನದವರನ್ನೂ ಸೆಳೆಯುತ್ತಿದೆ. ಹಿಂದಿನ ಕಾಲದಲ್ಲಿ ಹಾಕಿಸಿಕೊಳ್ಳುತ್ತಿದ್ದ ಹಚ್ಚೆ ಈಗ ಆಧುನಿಕ ರೂಪದಲ್ಲಿ ಮತ್ತೆ ಜನರನ್ನು ಸೆಳೆಯುತ್ತಿದೆ. ಹಲವು ರಾಸಾಯನಿಕಗಳನ್ನು ಬಳಸಿ ಬಣ್ಣ ಬಣ್ಣದ ಟ್ಯಾಟೂಗಳನ್ನು ಕೂಡ ಹಾಕಲಾಗುತ್ತದೆ. ಕೈ, ಎದೆ, ತೋಳು, ಕಾಲು, ಕುತ್ತಿಗೆ, ಸೊಂಟ, ಬೆರಳು ಹೀಗೆ ದೇಹದ ನಾನಾ ಭಾಗಗಳಲ್ಲಿ ಟ್ಯಾಟೂ ತನ್ನ ಸ್ಥಾನ ಪಡೆಯುತ್ತಿದೆ. ಹೀಗಾಗಿಯೇ ಬೆಂಗಳೂರಿನಂತಹ ಮಹಾನಗರಗಳಲ್ಲಿ ಟ್ಯಾಟೂ ಹಾಕುವುದು ಕೂಡ ದೊಡ್ಡ ಉದ್ಯಮವಾಗಿದೆ. ಆದರೆ, ಈ ಟ್ಯಾಟೂ ಹಾಕಿಸಿಕೊಳ್ಳುವ ಕ್ರೇಜ್ಗೆ ನಿಮ್ಮ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ಉಂಟಾಗಬಹುದು ಎಂಬುದು ನಿಮಗೆ ಗೊತ್ತಾ?
ಇತ್ತೀಚೆಗೆ ವ್ಯಕ್ತಿಯೊಬ್ಬ ಟ್ಯಾಟೂ ಹಾಕಿಸಿಕೊಂಡ ನಂತರ ಸೆಪ್ಸಿಸ್‌ನಿಂದ ಸಾವನ್ನಪ್ಪಿದ್ದಾನೆ. ಸೆಪ್ಸಿಸ್ ಎಂಬುದು ಬ್ಯಾಕ್ಟೀರಿಯಾದ ಸೋಂಕು. ಇದು ದೇಹಕ್ಕೆ ಹರಡಿದರೆ ಜೀವಕ್ಕೇ ಅಪಾಯ ಉಂಟಾಗಬಹುದು. ಮಿಡಲ್ಸ್‌ಬರೋಗ್‌ನ ಟೀಸೈಡ್‌ನ 32 ವರ್ಷದ ಬೆನ್ ಲ್ಯಾರಿ ಎಂಬಾತ ಲೈಸೆನ್ಸ್ ಪಡೆಯದ ಟ್ಯಾಟೂ ಕಲಾವಿದರಿಂದ ಟ್ಯಾಟೂ ಹಾಕಿಸಿಕೊಂಡು, ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೂಪರ್ ಫುಡ್ಗಳು ಇಲ್ಲಿವೆ
ಟ್ಯಾಟೂ ಹಾಕಿಸಿಕೊಳ್ಳುವಾಗ ಹರಡುವ ಸೆಪ್ಸಿಸ್ ಎಂಬ ಸೋಂಕು ಬಹಳ ಅಪಾಯಕಾರಿಯಾಗಿದೆ. ಇದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಹದಗೆಟ್ಟು, ದೇಹದ ಅಂಗಗಳು ಮತ್ತು ಅಂಗಾಂಶಗಳನ್ನು ತೀವ್ರವಾಗಿ ಹಾನಿಗೊಳಿಸುತ್ತದೆ. ಹೀಗಾಗಿ, ಟ್ಯಾಟೂ ಹಾಕಿಸಿಕೊಳ್ಳಲೇಬೇಕೆಂಬ ಆಸೆಯಿದ್ದರೆ ಉತ್ತಮ ಟ್ಯಾಟೂ ಕಲಾವಿದರನ್ನು ಮತ್ತು ಲೈಸೆನ್ಸ್ ಪಡೆದ ಟ್ಯಾಟೂ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ಉತ್ತಮ.
ಸೆಪ್ಸಿಸ್ನ ಲಕ್ಷಣಗಳೇನು?:
ಸೆಪ್ಸಿಸ್ ಯಾರಿಗಾದರೂ ಹರಡಬಹುದು. ವೈದ್ಯರ ಪ್ರಕಾರ, ಇದು ಗರ್ಭಿಣಿಯರು, ವಯಸ್ಸಾದವರು, ಯುವಜನರು ಅಥವಾ ಬೇರೆ ಇತರೆ ರೋಗಗಳಿಂದ ಬಳಲುತ್ತಿರುವವರಿಗೆ ಹೆಚ್ಚು ಅಪಾಯವನ್ನು ಉಂಟುಮಾಡುತ್ತದೆ.
ಸೆಪ್ಸಿಸ್ನ ಲಕ್ಷಣಗಳು ಹೀಗಿವೆ:
– ಮೈ ವಿಪರೀತ ಬಿಸಿಯಾಗುವುದು
– ಗೊಂದಲ
– ಡೆಲಿರಿಯಮ್
– ಚಳಿ
– ಜ್ವರ
– ಹೃದಯ ವೇಗವಾಗಿ ಬಡಿದುಕೊಳ್ಳುವುದು
– ಚರ್ಮದ ಮೇಲೆ ಕಲೆಗಳು
– ದದ್ದುಗಳು
ಇದನ್ನೂ ಓದಿ: ಚಳಿಗಾಲದಲ್ಲಿ ಹೃದಯಾಘಾತದ ಅಪಾಯದಿಂದ ಪಾರಾಗುವುದು ಹೇಗೆ?
ಟ್ಯಾಟೂ ಹಾಕಿಸಿಕೊಳ್ಳುವುದು ನೋವನ್ನು ಉಂಟುಮಾಡುತ್ತದೆ ಎಂಬುದು ಗೊತ್ತಿದ್ದರೂ ಟ್ಯಾಟೂ ಹಾಕಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿಲ್ಲ. ಆದರೆ, ಟ್ಯಾಟೂ ಹಾಕುವ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ ಎಂದು ವೈದ್ಯರು ಹೇಳುತ್ತಾರೆ. ಟ್ಯಾಟೂದಿಂದ ಕೆಲವರಿಗೆ ಗಂಭೀರವಾದ ರಕ್ತದ ಸೋಂಕುಗಳು, ಸೆಪ್ಸಿಸ್ ಅಥವಾ ಹೆಚ್ಐವಿ/ ಏಡ್ಸ್ ರೀತಿಯ ಗಂಭೀರ ಸಮಸ್ಯೆ ಕೂಡ ಹರಡಬಹುದು. ಟ್ಯಾಟೂ ಎನ್ನುವುದು ಚರ್ಮದ ಮೇಲಿನ ಪದರಕ್ಕೆ ಸೂಜಿಯ ಮೂಲಕ ವರ್ಣದ್ರವ್ಯಗಳನ್ನು ಸೇರಿಸುವ ಮೂಲಕ ಚರ್ಮದ ಮೇಲೆ ಮಾಡುವ ವಿನ್ಯಾಸವಾಗಿದೆ. ಇದಕ್ಕಾಗಿ ಸಣ್ಣ ಯಂತ್ರವನ್ನು ಬಳಸಲಾಗುತ್ತದೆ. ಈ ಪ್ರಕ್ರಿಯೆಯು ರಕ್ತಸ್ರಾವ ಮತ್ತು ಸ್ವಲ್ಪ ನೋವನ್ನು ಉಂಟುಮಾಡುತ್ತದೆ. ಇದರಿಂದ ಕೆಲವರಿಗೆ ಸೋಂಕು ಕೂಡ ಹರಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ