Mahashivratri 2022: ಶಿವರಾತ್ರಿಯಂದು ಕರ್ನಾಟಕದ ಈ ಸ್ಥಳಗಳಿಗೆ ತೆರಳಿ ಶಿವನ ದರ್ಶನ ಪಡೆಯಬಹುದು

| Updated By: Pavitra Bhat Jigalemane

Updated on: Feb 26, 2022 | 4:30 PM

ಹಂಪಿಯಲ್ಲಿನ ಬಡವಿಲಿಂಗ ಶಿವರಾತ್ರಿಯ ದಿನ ಅಗತ್ಯವಾಗಿ ಭೇಟಿ ನೀಡುವ ಕ್ಷೇತ್ರವಾಗಿದೆ.  ಭಾರತದ ಅತೀ ಎತ್ತರದ ಶಿವಲಿಂಗಗಳಲ್ಲಿ ಒಂದು ಹಂಪಿಯ ಬಡವಿಲಿಂಗ. 15 ನೇ ಶತಮಾನದಲ್ಲಿ ಈ ದೇವಾಲಯನ್ನು ನಿರ್ಮಿಸಲಾಗಿದೆ.

Mahashivratri 2022: ಶಿವರಾತ್ರಿಯಂದು ಕರ್ನಾಟಕದ ಈ ಸ್ಥಳಗಳಿಗೆ ತೆರಳಿ ಶಿವನ ದರ್ಶನ ಪಡೆಯಬಹುದು
ಶಿವ (ಪ್ರಾತಿನಿಧಿಕ ಚಿತ್ರ)
Follow us on

ಭಾರತೀಯರಲ್ಲಿ ಹಬ್ಬಗಳ ಆಚರಣೆಗೆ ಹೆಚ್ಚು ಮಹತ್ವವಿದೆ. ಪ್ರತೀ ಹಬ್ಬವನ್ನು ಕೂಡ ವಿಶೇಷ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಇನ್ನೇನು ಶಿವರಾತ್ರಿ ಹಬ್ಬ ಸಮೀಪಿಸುತ್ತಿದೆ. ಮೂರು ಲೋಕಗಳ ಒಡೆಯ ಮಹಾದೇವನನ್ನು ಆರಾಧಿಸುವ ಈ ದಿನ ಪ್ರತೀ ಹಿಂದೂವಿಗೆ ವಿಶೇಷವಾಗಿದೆ, ಈ ಬಾರಿ ಮಾರ್ಚ್​1 ರಂದು ಶಿವರಾತ್ರಿಯ ಆಚರಣೆ  ಮಾಡಲಾಗುತ್ತಿದೆ. ಮಾಘ ಕೃಷ್ಣ ಚತುರ್ದಶಿಯಂದು ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಶಿವನ ದೇವಸ್ಥಾನಗಳಿಗೆ ತೆರಳಿ, ಶಿವನಿಗೆ ನೀರಿನ ಅಭಿಷೇಕ ಮಾಡಿ ಬಿಲ್ಪಪತ್ರೆ, ಹಾಲು ಅರ್ಪಿಸಿ ನೈವೇದ್ಯ ಮಾಡುವ ಮೂಲಕ  ಭಕ್ತಿಯಿಂದ ಆಚರಿಸಲಾಗುತ್ತದೆ. ಶಿವನ ದೇವಸ್ಥಾನಗಳಲ್ಲಿ ಶಿವರಾತ್ರಿಯಂದು ವಿಶೇಷ ಪೂಜೆ ನಡೆಸಲಾಗುತ್ತದೆ. ಹಾಗಾದರೆ ನೀವು ಶಿವರಾತ್ರಿಯಂದು ಕರ್ನಾಟಕದ ಯಾವೆಲ್ಲಾ ದೇವಸ್ಥಾನಗಳಿಗೆ ತೆರಳಿ ಜಗನ್ನಾಥನ ದರ್ಶನ ಪಡೆಯಬಹದು ಎನ್ನುವ ಮಾಹಿತಿ ಇಲ್ಲಿದೆ ನೋಡಿ,

ಗೋಕರ್ಣ:


ಮಹಾಬಲೇಶ್ವರನ ಕ್ಷೇತ್ರವಾದ ಗೋಕರ್ಣದಲ್ಲಿ ಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದೇವಸ್ಥಾನವನ್ನು ಶಾಸ್ತ್ರೀಯ ದ್ರಾವಿಡ ವಾಸ್ತುಶಿಲ್ಪದ ಪ್ರಕಾರವಾಗಿ ನಿರ್ಮಿಸಲಾಗಿದೆ. ಅಲ್ಲದೆ ಆತ್ಮಲಿಂಗವಿರುವ ಈ ಕ್ಷೇತ್ರ ಕರ್ನಾಟಕದ ಹೆಚ್ಚು ಪ್ರಸಿದ್ಧಿ ಪಡೆದ ಕ್ಷೇತ್ರವೂ ಆಗಿದೆ.  ಹೀಗಾಗಿ ನೀವು ಶಿವರಾತ್ರಿಯಂದು ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ತೆರಳಬಹುದು.

ಮುರುಡೇಶ್ವರ:

ಜಗತ್ತಿನ ಎರಡನೇ ಅತೀ ಎತ್ತರದ ಶಿವನ ಪ್ರತಿಮೆ ಹೊಂದಿರುವ ಸ್ಥಳ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಮುರುಡೇಶ್ವರ ಕ್ಷೇತ್ರ. ಮುರುಡೇಶ್ವರದ ಶಿವನ ದೇವಾಲಯ ಕಂದುಕ ಬೆಟ್ಟ ಮತ್ತು ಮೂರು ಕಡೆ ಅರಬ್ಬಿ ಸಮುದ್ರದ ನೀರಿನಿಂದ ಆವೃತವಾಗಿದೆ. ದೇವಾಲಯವು 20 ಅಂತಸ್ತಿನ ಗೋಪುರವನ್ನು ಹೊಂದಿದೆ. ಶಿವರಾತ್ರಿಯಂದು ಇಲ್ಲಿ ಶಿವನಿಗೆ ವಿಶೇಷ ಪೂಜೆ ಇರಲಿದೆ.

ಬಡವಿಲಿಂಗ:


ಹಂಪಿಯಲ್ಲಿನ ಬಡವಿಲಿಂಗ ಶಿವರಾತ್ರಿಯ ದಿನ ಅಗತ್ಯವಾಗಿ ಭೇಟಿ ನೀಡುವ ಕ್ಷೇತ್ರವಾಗಿದೆ.  ಭಾರತದ ಅತೀ ಎತ್ತರದ ಶಿವಲಿಂಗಗಳಲ್ಲಿ ಒಂದು ಹಂಪಿಯ ಬಡವಿಲಿಂಗ.  15 ನೇ ಶತಮಾನದಲ್ಲಿ ಈ ದೇವಾಲಯನ್ನು ನಿರ್ಮಿಸಲಾಗಿದೆ. ಒಬ್ಬ ರೈತ ಮಹಿಳೆ ಈ ಲಿಂಗವನ್ನು ಸ್ಥಾಪಿಸಿದ್ದಳು ಹೀಗಾಗಿ ಈ ಶಿವಲಿಂಗ ಬಡವಿಲಿಂಗ ಎಂದೇ ಹೆಸರು ಪಡೆದಿದೆ. ಅದೇ ರೀತಿ ಹಂಪಿಯಲ್ಲಿ ಭೇಟಿ ನೀಡಬಹುದಾದ ಇನ್ನೊಂದು ಕ್ಷೇತ್ರವೆಂದರೆ ಹಂಪಿಯ ವಿರೂಪಾಕ್ಷ ದೇವಾಲಯ. ಇಲ್ಲಿಯೂ ಶಿವರಾತ್ರಿಯಂದು ವಿಶೇಷ ಪೂಜೆ ಇರುತ್ತದೆ.

ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ:


ಬೆಂಗಳೂರಿನ ಬಳಿಯ ಶ್ರೀನಿವಾಸಪುರದ ಬಳಿ ಓಂಕಾರೇಶ್ವರ ಗುಡ್ಡದಲ್ಲಿ ಈ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನವಿದೆ. ಶಿವರಾತ್ರಿಯಂದು ಭೇಟಿ ನೀಡಿ ಮಹಾದೇವನ ದರ್ಶನ ಪಡೆದು ಬರಲು ಉತ್ತಮ ಸ್ಥಳವಾಗಿದೆ. ಇಲ್ಲಿ, 12 ಜ್ಯೋತಿರ್ಲಿಂಗ ಹಾಗೂ ಓಂಕಾರೇಶ್ವರ ಜ್ಯೋತಿರ್ಲಿಂಗವಿದೆ. ಶಿವರಾತ್ರಿಯಂದು ಭೇಟಿ ನೀಡಿ ಭಕ್ತಿಯಿಂದ ಬೇಡಿಕೊಳ್ಳಲು ಉತ್ತಮ ಸ್ಥಳವಾಗಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಭೇಟಿ ನೀಡಬಹುದಾದ ಇನ್ನೊಂದು ಶಿವನ ಆಲಯವೆಂದರೆ ಶಿವೋಹಂ ಶಿವ ದೇವಸ್ಥಾನ.  ಹಳೆ ಏರ್​ಪೋರ್ಟ್​ ರಸ್ತೆಯಲ್ಲಿರುವ ಈ ದೇವಾಲಯದಲ್ಲಿ 65 ಅಡಿ ಎತ್ತರದ ಶಿವನ ಮೂರ್ತಿಯಿದೆ. ಇಲ್ಲಿಗೂ ನೀವು ಶಿವರಾತ್ರಿಯ ದಿನ ಭೇಟಿ ನೀಡಿ ರುದ್ರಶಂಕರನ ದರ್ಶನ ಪಡೆಯಬಹುದು.

ಸಹಸ್ರಲಿಂಗ:


ಉತ್ತರಕನ್ನಡ ಜಿಲ್ಲೆಯ ಶಿರಸಿಬಳಿ ಇರುವ ಶಿವನ ಕ್ಷೇತ್ರ ಸಹಸ್ರಲಿಂಗ. ಶಾಲ್ಮಲಾ ನದಿಯ ದಂಡೆಯ ಮೇಲೆ ಕಾಣುವ ಸಹಸ್ರಾರು ಲಿಂಗಗಳು, ನಂದಿ ವಿಗ್ರಹಗಳು,  ಶೈಲ ಸಂಬಂಧಿ ಶಿಲ್ಪಗಳಿಂದಾಗಿ ಈ ಪ್ರದೇಶಕ್ಕೆ ಸಹಸ್ರಲಿಂಗ ಎನ್ನುವ ಹೆಸರು ಬಂದಿದೆ.  ಶಿವರಾತ್ರಿಯಂದು ಈ ಕ್ಷೇತ್ರದಲ್ಲಿ ನೂರಾರು ಮಂದು ಭಕ್ತರು ಬಂದು ನೀರಿನಲ್ಲಿ ಇರುವ ಶಿವಲಿಂಗಗಳಿಗೆ ಪೂಜೆ ಮಾಡಿ ಇಷ್ಟಾರ್ಥಗಳನ್ನು ಸಿದ್ಧಸುವಂತೆ ಮುಕ್ಕಣ್ಣನಲ್ಲಿ ಬೇಡಿಕೊಳ್ಳುತ್ತಾರೆ.

ಯಾಣ:


ಹಸಿರ ಪ್ರಕೃತಿಯ ನಡುವೆ ಕತ್ತೆತ್ತಿ ನೋಡುವಷ್ಟು ಎತ್ತರಕ್ಕೆ ಬೆಳೆದು ನಿಂತ ಕಲ್ಲುಗಳ ಮಧ್ಯೆ ಭೈರವೇಶ್ವರ ಯಾಣದಲ್ಲಿ ನೆಲೆಸಿದ್ದಾನೆ. ಶಿವರಾತ್ರಿಯ ದಿನ ನೀವೇನಾದರೂ ಟ್ರೆಕಿಂಗ್ ಮಾಡಿ ದೇವರ ದರ್ಶನ ಪಡೆಯಬೇಕು ಎಂದುಕೊಂಡಿದ್ದರೆ ಯಾಣ ಉತ್ತಮ ಸ್ಥಳವಾಗಲಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಯಾಣ ಪೌರಾಣಿಕ ಇತಿಹಾಸವನ್ನೂ ಹೊಂದಿರುವ ಸ್ಥಳವಾಗಿದೆ. ಹೀಗಾಗಿ ನೀವು ಶಿವರಾತ್ರಿಯಂದು ಶಿವನ ದರ್ಶನ ಪಡೆಯಲು ಯಾಣಕ್ಕೆ ಭೇಟಿ ನೀಡಬಹುದು.

ಇದನ್ನೂ ಓದಿ:

Mahashivratri 2022: ಶಿವರಾತ್ರಿಯಂದು ಯಾವ ರಾಶಿಯವರು ಯಾವ ಮಂತ್ರ ಪಠಿಸಬೇಕು?: ಇಲ್ಲಿದೆ ನೋಡಿ

Published On - 4:10 pm, Sat, 26 February 22