ರಸಭರಿತ ಸಿಹಿಯಾದ ಕಿತ್ತಳೆ ಹಣ್ಣನ್ನು ಖರೀದಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 18, 2024 | 2:04 PM

ಚಳಿಗಾಲ ಶುರುವಾಯಿತೆಂದರೆ ಕಿತ್ತಳೆ ಹಣ್ಣಿನ ಸೀಸನ್ ಆರಂಭವಾಗುತ್ತದೆ. ಮಾರುಕಟ್ಟೆ ತುಂಬೆಲ್ಲಾ ಕಿತ್ತಳೆ ಹಣ್ಣುಗಳದ್ದೇ ರಾಶಿ. ಈ ಋತುವಿನಲ್ಲಿ ಕಿತ್ತಳೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವ ಕಾರಣಕ್ಕೆ ಹೆಚ್ಚಾಗಿ ಇದನ್ನೇ ಖರೀದಿಸುತ್ತಾರೆ. ಎಷ್ಟೋ ಸಲ ಕಿತ್ತಳೆ ಹಣ್ಣನ್ನು ಖರೀದಿಸುವಾಗ ಹೆಚ್ಚಿನವರು ಮೋಸ ಹೋಗುತ್ತಾರೆ. ನೋಡಲು ಹೊರಗೆ ಚೆನ್ನಾಗಿದೆ ಎಂದು ಖರೀದಿಸಿ, ಆದರೆ ಈ ಕಿತ್ತಳೆ ಹಣ್ಣು ಹುಳಿಯಾಗಿರುತ್ತದೆ. ಹುಳಿ ರುಚಿಯ ಕಾರಣ ತಿನ್ನಲು ಆಗುವುದಿಲ್ಲ. ಹೀಗಾಗಿ ಕಿತ್ತಳೆ ಹಣ್ಣನ್ನು ಖರೀದಿಸುವಾಗ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿ.

ರಸಭರಿತ ಸಿಹಿಯಾದ ಕಿತ್ತಳೆ ಹಣ್ಣನ್ನು ಖರೀದಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Follow us on

ಮಕ್ಕಳಿಂದ ಹಿಡಿದು ದೊಡ್ಡವರೆಗೂ ಇಷ್ಟಪಟ್ಟು ತಿನ್ನುವ ಹಣ್ಣುಗಳಲ್ಲಿ ಕಿತ್ತಳೆ ಕೂಡ ಒಂದು. ಈ ಹಣ್ಣು ವಿಟಮಿನ್ ಸಿ ಮತ್ತು ಅನೇಕ ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ. ಚಳಿಗಾಲದ ಸೀಸನಲ್ ಫ್ರೂಟ್ಸ್ ಆಗಿರುವ ಕಾರಣ, ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಬಹುತೇಕರು ಕಿತ್ತಳೆ ಹಣ್ಣಿನ ಸಿಪ್ಪೆಯ ಬಣ್ಣ ನೋಡಿಯೇ ಈ ಹಣ್ಣುಗಳನ್ನು ಖರೀದಿ ಮಾಡುತ್ತಾರೆ. ಆದರೆ ಎಷ್ಟೋ ಸಲ ಮಾರುಕಟ್ಟೆಯಿಂದ ಖರೀದಿಸಿ ತಂದ ಕಿತ್ತಳೆ ಹಣ್ಣು ಸಿಹಿಯಾಗಿಲ್ಲದೇ ಹುಳಿಯಾಗಿದ್ದು, ಬಿಸಾಡುವುದೇ ಹೆಚ್ಚು. ಹೀಗಾಗಿ ಕಿತ್ತಳೆ ಹಣ್ಣುಗಳನ್ನು ಖರೀದಿಸುವಾಗ ಈ ಕೆಲವು ವಿಷಯಗಳು ತಲೆಯಲ್ಲಿರಲಿ.

  • ಕಿತ್ತಳೆಯನ್ನು ಖರೀದಿ ಮಾಡುವಾಗ ಬೆರಳುಗಳಿಂದ ಹಣ್ಣನ್ನು ನಿಧಾನವಾಗಿ ಒತ್ತಿ ನೋಡಿ. ಒತ್ತುವಾಗ ಗಟ್ಟಿಯಾಗಿದ್ದರೆ ಅದು ಕಾಯಿಯಾಗಿರಬಹುದು. ಒತ್ತಿದ ಕೂಡಲೇ ಹಣ್ಣು ಒಳಗೆ ಹೋದರೆ ಅಥವಾ ಮೃದುವಾಗಿದ್ದರೆ ಹಣ್ಣು ಮಾಗಿದ್ದು, ರಸಭರಿತ ಹಾಗೂ ಸಿಹಿಯಾಗಿದೆ ಎಂದು ಅರ್ಥ ಮಾಡಿಕೊಳ್ಳಿ.
  • ಕಿತ್ತಳೆ ಹಣ್ಣನ್ನು ಖರೀದಿಸುವಾಗ ಕೈಯಲ್ಲಿಯೇ ಸುಲಭವಾಗಿ ತಾಜಾ ಹಣ್ಣೇ ಎಂದು ಪರೀಕ್ಷಿಸಿಕೊಳ್ಳಬಹುದು. ಕಿತ್ತಳೆ ಹಗುರವಾಗಿದ್ದರೆ ಅದು ರಸಭರಿತವಾಗಿಲ್ಲ ಎಂದರ್ಥ. ಹಗುರವಾದ ಹಣ್ಣುಗಳು ಕಡಿಮೆ ನೀರಿನ ಅಂಶವನ್ನು ಹೊಂದಿರುತ್ತದೆ. ಹೀಗಾಗಿ ಇದು ಹುಳಿಯಾಗಿರುತ್ತದೆ. ಕೈಯಲ್ಲಿ ಹಿಡಿದಾಗ ಕಿತ್ತಳೆ ಹಣ್ಣು ಭಾರವೆನಿಸಿದರೆ ಹೆಚ್ಚು ರಸಭರಿತವಾಗಿದ್ದು ಸಿಹಿಯಾಗಿದೆ ಎಂದು ತಿಳಿಯಿರಿ.
  • ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ನೋಡಿಯೂ ಈ ಹಣ್ಣು ಸಿಹಿಯಾಗಿದೆಯೇ ಹುಳಿಯಾಗಿದೆಯೇ ಎಂದು ನಿರ್ಣಯಿಸಬಹುದು. ದಪ್ಪವಾದ ಸಿಪ್ಪೆಗಳು, ಕಲೆಗಳು ಅಥವಾ ರಂಧ್ರಗಳನ್ನು ಹೊಂದಿರುವ ಕಿತ್ತಳೆಗಳನ್ನು ಆಯ್ಕೆ ಮಾಡಬೇಡಿ, ಈ ಹಣ್ಣುಗಳು ಹಾಳಾಗಿರಬಹುದು. ಹಣ್ಣಿನ ಮೇಲಿನ ಭಾಗ ಒರಟಾಗಿದ್ದರೆ ಅದು ರಸಭರಿತವಾಗಿ ಸಿಹಿಯಾಗಿರುತ್ತದೆ ಎಂದರ್ಥ.
  • ಕಿತ್ತಳೆ ಹಣ್ಣಿನ ಪರಿಮಳಕ್ಕೆ ಎಷ್ಟೋ ಜನರು ಈ ಹಣ್ಣನ್ನು ಖರೀದಿ ಮಾಡುತ್ತಾರೆ. ಆದರೆ ಈ ಹಣ್ಣಿನ ಪರಿಮಳದಿಂದಲೇ ಇದು ಸಿಹಿ ಹಾಗೂ ರಸಭರಿತವಾಗಿದೆಯೇ ಎಂದು ಪತ್ತೆ ಹಚ್ಚಬಹುದು. ಈ ಹಣ್ಣನ್ನು ಖರೀದಿಸುವಾಗ ಸಿಪ್ಪೆಯನ್ನು ಒಮ್ಮೆ ಲಘುವಾಗಿ ಉಜ್ಜಿಕೊಳ್ಳಿ. ಗಾಢವಾದ ಪರಿಮಳವು ಹೊರಹೊಮ್ಮಿದ್ದರೆ ಸಿಹಿಯಾಗಿದೆ ಎಂದರ್ಥ.
  • ಕಿತ್ತಳೆ ಹಣ್ಣಿನ ಗಾತ್ರದಿಂದಲೇ ಸಿಹಿ ಹುಳಿ ರಸಭರಿತವಾಗಿದೆಯೇ ಎಂದು ಕಂಡುಕೊಳ್ಳಬಹುದು. ಕಿತ್ತಳೆಯ ಗಾತ್ರವು ಸಣ್ಣದಾಗಿದ್ದರೆ ಅದು ರಸಭರಿತವಾಗಿಲ್ಲ ಹುಳಿಯಾಗಿದೆ ಎಂದು ಅರ್ಥ ಮಾಡಿಕೊಳ್ಳಿ. ಹಣ್ಣಿನ ಗಾತ್ರವು ದೊಡ್ಡದಿದ್ದಲ್ಲಿ ರಸಭರಿತವಾಗಿ ಸಿಹಿಯಾಗಿದೆ ಎನ್ನುವುದರ ಸೂಚಕವಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ