Minorities Rights Day in India 2024 : ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ
ಭಾರತ ಸಂವಿಧಾನವು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡಿದೆ. ಈಗಾಗಲೇ ಭಾಷಾ, ಜನಾಂಗೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಹಲವಾರು ಕ್ರಮಗಳನ್ನು ಅಳವಡಿಸಿಕೊಂಡಿದೆ. ಈ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಪ್ರತಿ ವರ್ಷ ಡಿಸೆಂಬರ್ 18 ರಂದು ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಹಾಗಾದರೆ ಈ ದಿನದ ಆಚರಣೆಯೂ ಯಾವಾಗ ಆರಂಭವಾಯಿತು? ಈ ದಿನದ ಮಹತ್ವವೇನು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ವೈವಿಧ್ಯಮಯ ಸಂಸ್ಕಾರ, ಭಾಷೆ, ಸಂಸ್ಕೃತಿಯನ್ನು ಒಳಗೊಂಡು ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶವಾಗಿದೆ. ಭಾರತದ ಸಂವಿಧಾನವು ದೇಶದ ಎಲ್ಲಾ ನಾಗರಿಕರಿಗೆ ಅವರ ಭಾಷಾ, ಜನಾಂಗೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಲೆಕ್ಕಿಸದೆ ಸಮಾನ ಹಕ್ಕುಗಳನ್ನು ನೀಡಿದೆ. ಹೀಗಿರುವಾಗ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸಾಂವಿಧಾನಿಕವಾಗಿ ಖಾತರಿಪಡಿಸಿದ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ್ 18 ರಂದು ಭಾರತದಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಿನದ ಇತಿಹಾಸ
1992 ರ ಡಿಸೆಂಬರ್ 18 ರಂದು ವಿಶ್ವಸಂಸ್ಥೆಯು ಧಾರ್ಮಿಕ ಅಥವಾ ಭಾಷಾ ರಾಷ್ಟ್ರೀಯ ಅಥವಾ ಜನಾಂಗೀಯ ಅಲ್ಪಸಂಖ್ಯಾತರಿಗೆ ಸೇರಿದ ವ್ಯಕ್ತಿಯ ಹಕ್ಕುಗಳ ಹೇಳಿಕೆಯನ್ನು ಅಂಗೀಕರಿಸಿತು. ವಿಶ್ವಸಂಸ್ಥೆಯ ಪ್ರಕಟಣೆಯು ಅಲ್ಪಸಂಖ್ಯಾತರ ಸಾಂಸ್ಕೃತಿಕ, ಧಾರ್ಮಿಕ ಭಾಷಾ ಮತ್ತು ರಾಷ್ಟ್ರೀಯ ಗುರುತನ್ನು ಎತ್ತಿ ತೋರಿಸುವ ಉದ್ದೇಶವನ್ನು ಈ ದಿನವು ಹೊಂದಿತ್ತು. ಈ ಹಿನ್ನಲೆಯಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಿನದ ಆಚರಣೆಯೂ ಪ್ರಾರಂಭವಾಯಿತು.
ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಿನದ ಮಹತ್ವ
ಪ್ರತಿ ರಾಷ್ಟ್ರವು ವಿಭಿನ್ನ ಜನಾಂಗೀಯ, ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಗುಂಪನ್ನು ಹೊಂದಿದೆ. ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಅವರ ಸುರಕ್ಷತೆಯ ಬಗ್ಗೆ ಉತ್ತಮ ತಿಳಿವಳಿಕೆಯನ್ನು ತರುವ ಮತ್ತು ಜನರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಈ ದಿನದ ಆಚರಣೆಯೂ ಮಹತ್ವದ್ದಾಗಿದೆ.
ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ವಲಸೆ ಹೋಗುವವರ ಸಂಖ್ಯೆಯಲ್ಲಿ ಏರಿಕೆ, ಭಾರತಕ್ಕೆ ಎಷ್ಟನೇ ಸ್ಥಾನ? ಇಲ್ಲಿದೆ ಮಾಹಿತಿ
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಕರ್ತವ್ಯಗಳೇನು?
ರಾಷ್ಟ್ರೀಯ ಅಲ್ಪಸಂಖ್ಯಾತರ ಕಾಯ್ದೆ 1992 ರ ಅಡಿಯಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವನ್ನು (ಎನ್‌ಸಿಎಂ) ಸ್ಥಾಪಿಸಿತು. ಪ್ರಾರಂಭದಲ್ಲಿ ಐದು ಧಾರ್ಮಿಕ ಸಮುದಾಯಗಳಾದ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಪಾರ್ಸಿಗಳು ಅಲ್ಪಸಂಖ್ಯಾತ ಸಮುದಾಯ ಎಂದು ಸೂಚಿಸಲಾಗಿತ್ತು. ಆದಾದ ಬಳಿಕ 2014 ರ ಜನವರಿ 27 ರಂದು ಅಧಿಸೂಚನೆಯ ವಿವರಗಳ ಪ್ರಕಾರ, ಜೈನರನ್ನು ಮತ್ತೊಂದು ಅಲ್ಪಸಂಖ್ಯಾತ ಸಮುದಾಯವೆಂದು ಸೂಚಿಸಲಾಯಿತು.
ಕೇಂದ್ರ ಸರ್ಕಾರವು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವನ್ನು ನವದೆಹಲಿ ಹಾಗೂ ವಿವಿಧ ರಾಜ್ಯಗಳು ಆಯಾ ರಾಜ್ಯಗಳಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗಗಳನ್ನು ಸ್ಥಾಪಿಸಿವೆ. ಅದರ ಕಚೇರಿಗಳು ರಾಜ್ಯಗಳ ರಾಜಧಾನಿಯಲ್ಲಿಯೂ ಇವೆ. ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ನೊಂದ ವ್ಯಕ್ತಿಗಳು ತಮ್ಮ ಕುಂದುಕೊರತೆಗಳ ಪರಿಹಾರಕ್ಕಾಗಿ ಸಂಬಂಧಿತ ರಾಜ್ಯ ಅಲ್ಪಸಂಖ್ಯಾತರ ಆಯೋಗಗಳನ್ನು ಸಂಪರ್ಕಿಸಬಹುದಾಗಿದೆ. ಈ ಸಂಸ್ಥೆಗಳು ಭಾರತದ ಸಂವಿಧಾನ, ಸಂಸತ್ತು ಹಾಗೂ ರಾಜ್ಯ ಶಾಸಕಾಂಗಗಳು ಜಾರಿಗೊಳಿಸಿದ ಕಾನೂನುಗಳನ್ನು ಹಾಗೂ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುವಂತಹ ಕೆಲಸವನ್ನು ಮಾಡುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ