Menopause Diet : ಮುಟ್ಟು ನಿಲ್ಲುವ ಸಮಯದಲ್ಲಿ ಮಹಿಳೆಯರ ಆಹಾರ ಕ್ರಮ ಹೇಗಿರಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 11, 2024 | 4:33 PM

ಋತುಚಕ್ರದಂತೆ, ಋತುಬಂಧವು ಕೂಡ ಮಹಿಳೆಯರಲ್ಲಿ ಆಗುವ ನೈಸರ್ಗಿಕವಾದ ಕ್ರಿಯೆಯಾಗಿದೆ. ಈ ವೇಳೆಯಲ್ಲಿ ಮಹಿಳೆಯ ದೇಹದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತದೆ. ಮುಟ್ಟಿನ ದಿನಗಳಲ್ಲಿ ಮಾತ್ರವಲ್ಲ ಮುಟ್ಟು ನಿಲ್ಲುವ ಸಂದರ್ಭದಲ್ಲಿ ಕೂಡ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸುತ್ತಾಳೆ. ಹೀಗಾಗಿ ಈ ಅವಧಿಯಲ್ಲಿ ಮಹಿಳೆಯರು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನ ಕೊಟ್ಟರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ.

Menopause Diet : ಮುಟ್ಟು ನಿಲ್ಲುವ ಸಮಯದಲ್ಲಿ ಮಹಿಳೆಯರ ಆಹಾರ ಕ್ರಮ ಹೇಗಿರಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Follow us on

ಋತುಬಂಧವು ಮಹಿಳೆಯ ಮುಟ್ಟು ನಿಲ್ಲುವ ಸಮಯವಾಗಿದೆ. ಆ ಬಳಿಕ ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರತಿಯೊಬ್ಬ ಮಹಿಳೆಯೂ ನಲವತ್ತೈದು ವರ್ಷ ಸಮೀಪಿಸುತ್ತಿದ್ದಂತೆ ಮಾಸಿಕ ಚಕ್ರದಲ್ಲಿನ ಬದಲಾವಣೆಯನ್ನು ಎದುರಿಸಲೇ ಬೇಕಾಗುತ್ತದೆ. ಮಹಿಳೆಯರಲ್ಲಿ ಋತುಬಂಧವು ಪ್ರಕ್ರಿಯೆಯೂ 50 ವಯಸ್ಸಿಗಿಂತ ಮೊದಲು ಅಥವಾ ನಂತರವೂ ಆಗಿರಬಹುದು. ಆದರೆ ಈ ಋತುಬಂಧವು ಸಹಜ ಪ್ರಕ್ರಿಯೆಯಾಗಿದ್ದರೂ ಹಾರ್ಮೋನ್ ಬದಲಾವಣೆಯಿಂದಾಗಿ ಆರೋಗ್ಯದಲ್ಲಿ ನಾನಾ ರೀತಿಯ ಬದಲಾವಣೆಯಾಗುತ್ತದೆ.

ಋತುಬಂಧದ ವೇಳೆ ಮಹಿಳೆಯ ದೇಹದಲ್ಲಿ ಆಗುವ ಬದಲಾವಣೆಗಳೇನು?

ಮಹಿಳೆಗೆ ವಯಸ್ಸಾಗುತ್ತಾ ಹೋದ ಹಾಗೆ, ಆಕೆಯ ಅಂಡಾಶಯದಲ್ಲಿ ಅವರ ಸಂತಾನೋತ್ಪತ್ತಿ ವ್ಯವಸ್ಥೆಯ ಬಹುಮುಖ್ಯ ಹಾರ್ಮೋನ್‌ಗಳಾದ ಈಸ್ಟ್ರೋಜನ್‌ ಮತ್ತು ಪ್ರಾಜೆಸ್ಟರಾನ್‌ಗಳ ಸ್ರವಿಸುವಿಕೆ ಕಡಿಮೆಯಾಗುತ್ತದೆ. ಹೀಗಾಗಿ ಋತುಚಕ್ರಗಳ ನಡುವಿನ ಅವಧಿಯೂ ಸಹ ದೀರ್ಘ‌ವಾಗಬಹುದು. ಬಹಳಷ್ಟು ಮಹಿಳೆಯರಲ್ಲಿ ಮೈ ಬಿಸಿಯಾಗುವುದು, ಸ್ವಲ್ಪ ಖಿನ್ನತೆ, ಆಯಾಸ, ಒತ್ತಡ, ಕೋಪ, ನಿದ್ರಾಹೀನತೆ, ಮರೆವು, ಮೂಡ್ ಸ್ವಿಂಗ್ ನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಪ್ರತಿ ಮಹಿಳೆಯರಲ್ಲಿಯೂ ಮುಟ್ಟು ನಿಲ್ಲುವ ಲಕ್ಷಣಗಳೂ ಭಿನ್ನವಾಗಿದ್ದು, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ತ್ವಚೆಯ ಹೊಳಪು ಹೆಚ್ಚಾಗಲು ಸಾಸಿವೆ ಎಣ್ಣೆ ಹೀಗೆ ಬಳಸಿ, ಆದ್ರೆ ಈ ಟಿಪ್ಸ್ ಪಾಲಿಸಿ

ಮುಟ್ಟು ನಿಲ್ಲುವ ಅವಧಿಯಲ್ಲಿ ಮಹಿಳೆಯರ ಆಹಾರ ಕ್ರಮ ಹೀಗಿರಲಿ

  • ಪ್ರತಿದಿನ ಎರಡರಿಂದ ನಾಲ್ಕು ಸರ್ವಿಂಗ್ಸ್‌ ಹಾಲಿನ ಉತ್ಪನ್ನಗಳು ಮತ್ತು ಕ್ಯಾಲ್ಸಿಯಂಯುಕ್ತ ಆಹಾರಗಳಾದ ಹಾಲಿನ ಉತ್ಪನ್ನಗಳು, ಮೀನುಗಳು ಹಾಗೂ ಬ್ರಾಕಲಿ, ದವಸ ಧಾನ್ಯಗಳನ್ನು ಸೇವನೆಯತ್ತ ಗಮನ ಕೊಡಬೇಕು.
  • ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಕಬ್ಬಿಣಾಂಶಯುಕ್ತ ಆಹಾರವಾಗಿರುವ ತೆಳು ಮಾಂಸ, ಮೊಟ್ಟೆ, ಮೀನು, ಚಿಕನ್‌, ಹಸಿರು ಸೊಪ್ಪು ತರಕಾರಿಗಳು, ಬೀಜಗಳನ್ನು ಸೇವಿಸುವುದು ಒಳ್ಳೆಯದು.
  • ನಾರಿನ ಅಂಶವಿರುವ ಆಹಾರಗಳಾದ ಇಡಿಯ ಧಾನ್ಯದ ಬ್ರೆಡ್‌, ಪಾಸ್ತಾ, ಅನ್ನ, ತಾಜಾ ಹಣ್ಣುಗಳು ಮತ್ತು ತರಕಾರಿಗಳ ಆಹಾರ ಕ್ರಮದಲ್ಲಿ ಸೇರಿರಲಿ.
  • ಋತುಬಂಧ ಸಮೀಪಿಸುತ್ತಿದ್ದಂತೆ ಮಹಿಳೆಯರು ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು.
  • ಅಧಿಕ ಕೊಬ್ಬು ಇರುವ ಆಹಾರ ಸೇವನೆಯನ್ನು ಆದಷ್ಟು ತಪ್ಪಿಸುವುದು ಒಳ್ಳೆಯದು. ಸ್ಯಾಚುರೇಟೆಡ್‌ ಕೊಬ್ಬು ಕೊಲೆಸ್ಟ್ರಾಲ್‌ ಮಟ್ಟವನ್ನು ಹೆಚ್ಚಿಸಿ, ಹೃದಯದ ಕಾಯಿಲೆಯ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿರುತ್ತದೆ.
  • ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ ಆಹಾರ ಸೇವನೆಯೂ ಇತಿಮಿತಿಯಲ್ಲಿರಲಿ. ಹೆಚ್ಚಾಗಿ ಆಹಾರಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: