
ಬೆಳಗ್ಗೆ ಚೆನ್ನಾಗಿ ಪ್ರಾರಂಭವಾದರೆ, ನಿಮ್ಮ ಇಡೀ ದಿನ ಚೆನ್ನಾಗಿ ಮತ್ತು ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಹೌದು ನಮ್ಮ ಇಡೀ ದಿನ ಹೇಗಿರುತ್ತದೆ ಎಂಬುದು ಬೆಳಗಿನ ದಿನಚರಿಯ ಮೇಲೆ ಅವಲಂಬಿತವಾಗಿರುತ್ತದೆ. ಸಕಾರಾತ್ಮಕವಾಗಿ (Positivity) ದಿನ ಆರಂಭವಾದರೆ ಆ ಇಡೀ ದಿನವೇ ಉಲ್ಲಾಸದಾಕವಾಗಿರುತ್ತದೆ. ಅದೇ ರೀತಿ ನಮ್ಮ ಬೆಳಗ್ಗಿನ ಕೆಲವೊಂದು ದಿನಚರಿಗಳಿಂದ (morning habits) ಇಡೀ ದಿನವೇ ಹಾಳಾಗುತ್ತಂತೆ. ನಿಮಗೂ ನಿಮ್ಮ ದಿನ ಧನಾತ್ಮಕವಾಗಿ ಆರಂಭವಾಗಬೇಕು, ಇಡೀ ದಿನ ಚೆನ್ನಾಗಿರಬೇಕು ಎಂಬ ಹಂಬಲವೇ? ಹೀಗೆ ನಿಮ್ಮ ಇಡೀ ದಿನ ಚೆನ್ನಾಗಿರಬೇಕೆಂದರೆ ಈ ಕೆಲವೊಂದಿಷ್ಟು ಅಭ್ಯಾಸಗಳನ್ನುಬಿಟ್ಟು ಬಿಡಬೇಕು. ಹಾಗಿದ್ರೆ ದಿನವನ್ನು ಹಾಳು ಮಾಡುವ ಬೆಳಗ್ಗಿನ ಆ ಅಭ್ಯಾಸಗಳು ಯಾವುದೆಂಬುದನ್ನು ನೋಡೋಣ ಬನ್ನಿ.
ಬೆಳಗ್ಗೆ ಎದ್ದ ತಕ್ಷಣ ಫೋನ್ ನೋಡುವುದು: ಅನೇಕರಿಗೆ ಬೆಳಗ್ಗೆ ಎದ್ದ ತಕ್ಷಣವೇ ಫೋನ್ ನೋಡುವ ಅಭ್ಯಾಸ ಇರುತ್ತದೆ. ಹೇಳಬೇಕೆಂದರೆ ಅವರ ದಿನ ಪ್ರಾರಂಭವಾಗುವುದೇ ಫೋನ್‌ನಿಂದ. ಹೀಗೆ ಬೆಳಗ್ಗೆ ಎದ್ದ ತಕ್ಷಣ ಫೋನ್ ನೋಡಬಾರದು. ಏಕೆಂದರೆ ಇದು ಮೆದುಳಿನ ಮೇಲಿನ ಹೊರೆಯನ್ನು ಹೆಚ್ಚಿಸುತ್ತದೆ, ಇದರಿಂದ ನೀವು ಕೆಲಸದ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇನ್ನೊಂದು ಏನಪ್ಪಾ ಅಂದ್ರೆ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡಿದಾಗ ಕೆಟ್ಟ ಸುದ್ದಿಗಳನ್ನು ನೋಡಿದರೆ ನಿಮ್ಮ ಇಡೀ ದಿನವೇ ಹಾಳಾಗುತ್ತದೆ. ಆದ್ದರಿಂದ ಈ ಅಭ್ಯಾಸವನ್ನು ಬಿಟ್ಟುಬಿಡಿ.
ಉಪಹಾರ ಸೇವನೆ ಮಾಡದಿರುವುದು: ಕಾಲೇಜಿಗೆ, ಆಫೀಸ್‌ಗೆ ಲೇಟ್ ಆಯ್ತು ಎಂಬ ಕಾರಣಕ್ಕೆ ಅನೇಕರು ಬೆಳಗ್ಗಿನ ಉಪಹಾರವನ್ನೇ ಬಿಟ್ಟುಬಿಡುತ್ತಾರೆ. ಹೀಗೆ ಬೆಳಗ್ಗೆ ಆಹಾರ ಸೇವನೆ ಮಾಡದೆ ಹಸಿವಿನಿಂದ ಇರುವುದು ಹಾನಿಕಾರಕ. ಹೌದು ಇದು ಮೆದುಳಿನ ಶಕ್ತಿಯನ್ನು ಕುಗ್ಗಿಸುತ್ತದೆ. ಮತ್ತು ಇದು ನಿಮ್ಮ ಏಕಾಗ್ರತೆ, ಮನಸ್ಥಿತಿ ಎರಡರ ಮೇಲೂ ಪರಿಣಾಮ ಬೀರುತ್ತದೆ.
ನೀರು ಕುಡಿಯದಿರುವುದು: ಬೆಳಗ್ಗೆ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ದೇಹವನ್ನು ಹೈಡ್ರೇಟ್ ಆಗಿಡುವುದು ಬಹಳ ಮುಖ್ಯ. ಅದಕ್ಕಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಹೀಗೆ ಬೆಳಿಗ್ಗೆ ನೀರು ಕುಡಿಯುವುದುದರಿಂದ ಮೆದುಳಿನ ಕೋಶಗಳು ತುಂಬಾ ಚುರುಕಾಗುತ್ತವೆ.
ಇದನ್ನೂ ಓದಿ: ಗಂಟೆಗಟ್ಟಲೆ ರೀಲ್ಸ್ ನೋಡುತ್ತಾ ಸಮಯ ಕಳೆಯುತ್ತಿದ್ದೀರಾ? ಈ ಗೀಳಿನಿಂದ ಹೊರ ಬರಲು ಈ ಸಲಹೆ ಪಾಲಿಸಿ
ಬೆಳಗ್ಗೆ ತಡವಾಡಿ ಏಳುವುದು: ಬೆಳಗ್ಗೆ ತಡವಾಗಿ ಏಳುವುದು ಕೂಡಾ ಒಳ್ಳೆಯದಲ್ಲ. ಹೀಗೆ ತಡವಾಗಿ ಎದ್ದರೆ, ಇಡೀ ದಿನ ಜಡತ್ವದಿಂದ ಕೂಡಿರುತ್ತದೆ. ನೀವು ಚೈತನ್ಯಶೀಲರಾಗಿರಬೇಕೆಂದರೆ, ದಿನಪೂರ್ತಿ ಆಕ್ಟಿವ್ ಆಗಿರಬೇಕೆಂದರೆ ಮುಂಜಾನೇ ಬೇಗ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
ನೋವುಗಳ ಬಗ್ಗೆ ಯೋಚಿಸುವುದು: ಹೆಚ್ಚಿನವರಿಗೆ ಬೆಳಿಗ್ಗೆ ಎಚ್ಚರವಾದ ಬಳಿಕ ಹಾಸಿಗೆಯ ಮೇಲೆ ಒಂದಷ್ಟು ಹೊತ್ತು ಕುಳಿತು ತಮ್ಮ ನೋವಿನ ಸಂಗತಿಗಳನ್ನು ಮೆಲುಕು ಹಾಕುವ ಅಭ್ಯಾಸ ಇರುತ್ತದೆ. ಇದರಿಂದ ಮನಸ್ಸಿನ ಶಾಂತಿ ಎನ್ನುವಂತಹದ್ದು ಕದಡಿ ಹೋಗುತ್ತದೆ. ಜೊತೆಗೆ ಇದರಿಂದಾಗಿ ನಿಮ್ಮ ಇಡೀ ದಿನವೇ ಕಿರಿಕಿರಿದಾಯಕವಾಗಿರುತ್ತದೆ. ಹಾಗಾಗಿ ಸಕಾರಾತ್ಮಕ ಯೋಚನೆಗಳೊಂದಿಗೆ ದಿನವನ್ನು ಆರಂಭಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ