ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡಲು ಸಹಕಾರಿ ಈ ಎರಡು ಯೋಗಾಸನ
ಈ ಚಳಿಗಾಲದಲ್ಲಿ ದೇಹವನ್ನು ಒಳಗಿನಿಂದ ಬೆಚ್ಚಗಿಡುವುದು ತುಂಬಾನೇ ಮುಖ್ಯ. ಇದಕ್ಕಾಗಿ ಅನೇಕ ಜನರು ಸೂಪ್, ಬಿಸಿ ಪಾನೀಯ, ಕಷಾಯಗಳನ್ನು ಸೇವನೆ ಮಾಡುತ್ತಾರೆ. ಇದರ ಜೊತೆಗೆ ಈ ಎರಡು ಯೋಗ ಭಂಗಿಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡುವ ಮೂಲಕವೂ ದೇಹವನ್ನು ನೀವು ನಿಮ್ಮ ಒಳಗಿನಿಂದ ಬೆಚ್ಚಗಿಡಬಹುದು.

ಚಳಿಗಾಲದಲ್ಲಿ (winter) ಬಾಹ್ಯ ತಂಪಿನಿಂದ ದೇಹವನ್ನು ರಕ್ಷಿಸಿಕೊಳ್ಳುವುದು ತುಂಬಾನೇ ಮುಖ್ಯ. ಈ ಸಮಯದಲ್ಲಿ ಚಳಿಯಿಂದ ಪಾರಾಗಲು, ದೇಹವನ್ನು ಬೆಚ್ಚಗಿರಿಸಲು ಸ್ವೆಟರ್ ಜಾಕೆಟ್ ಅಂತ ಮೈತುಂಬಾ ಬಟ್ಟೆ ಧರಿಸುತ್ತೇವೆ. ದೇಹವನ್ನು ಒಳಗಿನಿಂದ ಬೆಚ್ಚಗಿಡಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನೇಕರು ಸೂಪ್, ಬಿಸಿ ಬಿಸಿ ಕಷಾಯಗಳನ್ನು ಸೇವನೆ ಮಾಡುತ್ತಾರೆ. ಇವುಗಳ ಜೊತೆಗೆ ಈ ಎರಡು ಯೋಗಾಸನಗಳನ್ನು ಮಾಡುವ ಮೂಲಕವೂ ದೇಹವನ್ನು ಬೆಚ್ಚಗಾಗಿರಿಸಲು ಈ ಎರಡು ಯೋಗಾಸನಗಳನ್ನು ಅಭ್ಯಾಸ ಮಾಡಿ.
ದೇಹವನ್ನು ಬೆಚ್ಚಗಿಡಲು ಸಹಕಾರಿ ಈ ಯೋಗ:
ಉತ್ತಾನಾಸನ
ಉತ್ತಾನಾಸನವು ದೇಹವನ್ನು ಚೈತನ್ಯಗೊಳಿಸಲು ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಲು ತುಂಬಾನೇ ಸಹಕಾರಿ. ಅಲ್ಲದೆ ಇದು ಶೀತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಒತ್ತಡವನ್ನು ನಿವಾರಿಸುತ್ತದೆ. ಇದು ಮುಖದ ಸುಕ್ಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ಯೋಗಾಸನವನ್ನು ನಿಯಮಿತವಾಗಿ ಮಾಡುವುದರಿಂದ ದೇಹವು ಆಂತರಿಕವಾಗಿ ಬೆಚ್ಚಗಾಗುತ್ತದೆ.
ಉತ್ತಾನಾಸನ ಮಾಡುವುದು ಹೇಗೆ?
ಉತ್ತಾನಾಸನ ಮಾಡಲು ನೇರವಾಗಿ ನಿಂತುಕೊಳ್ಳಿ. ಕಾಲುಗಳನ್ನು ಕೊಂಚ ದೂರದಲ್ಲಿಡಿ. ನಂತರ ನಿಧಾನವಾಗಿ ಬಗ್ಗುತ್ತಾ ಬಂದು ನಿಮ್ಮ ಅಂಗೈಗಳನ್ನು ನೆಲದ ಮೇಲೆ ಇರಿಸಿ. 10-30 ಸೆಕೆಂಡುಗಳ ಕಾಲ ಈ ಸ್ಥಾನದಲ್ಲಿರಿ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳುವ ಮೂಲಕ ಮತ್ತೆ ಮೊದಲಿನ ಸ್ಥಿತಿಗೆ ಬನ್ನಿ.
ಉಷ್ಟ್ರಾಸನ
ಕ್ಯಾಮೆಲ್ ಪೋಸ್ ಎಂದೂ ಕರೆಯಲ್ಪಡುವ ಇದು, ದೇಹದಲ್ಲಿ ಶಕ್ತಿಯ ಹರಿವನ್ನು ಹೆಚ್ಚಿಸಲು ಮತ್ತು ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಉಷ್ಟ್ರಾಸನದ ನಿಯಮಿತ ಅಭ್ಯಾಸವು ಬೆನ್ನು ನೋವನ್ನು ನಿವಾರಿಸುತ್ತದೆ, ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಉಸಿರಾಟದ ಸಮಸ್ಯೆಗಳನ್ನು ನಿವಾರಿಸುತ್ತದೆ, ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಒತ್ತಡವನ್ನು ಸಹ ನಿವಾರಿಸುತ್ತದೆ.
ಇದನ್ನೂ ಓದಿ: ಚಂದ್ರನಂತೆ ಹೊಳೆಯುವ ಮುಖ ನಿಮ್ಮದಾಗಲು ಕುಡಿಯಿರಿ ಈ ಜ್ಯೂಸ್
ಉಷ್ಟ್ರಾಸನ ಮಾಡುವುದು ಹೇಗೆ?
ಉಷ್ಟ್ರಾಸನ ಮಾಡಲು, ನಿಮ್ಮ ಮೊಣಕಾಲುಗಳ ಮೇಲೆ ಕುಳಿತು ನಿಮ್ಮ ಕೈಗಳನ್ನು ನಿಮ್ಮ ಸೊಂಟದ ಮೇಲೆ ಇರಿಸಿ. ನಿಮ್ಮ ಬೆನ್ನನ್ನು ಹಿಂದಕ್ಕೆ ಬಗ್ಗಿಸಿ, ಕಾಲಿನ ಬೆರಳುಗಳನ್ನು ಕೈ ಬೆರಳುಗಳಿಂದ ಹಿಡಿದುಕೊಳ್ಳಿ. ಇದೇ ಭಂಗಿಯಲ್ಲಿ 5 ರಿಂದ 6 ಸೆಕೆಂಡುಗಳ ಕಾಲ ಇದ್ದು, ನಂತರ ಮೊದಲಿನ ಸ್ಥಿತಿಗೆ ಬನ್ನಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:57 am, Sun, 30 November 25




