ಪ್ರತಿಯೊಬ್ಬರು ತಮ್ಮ ತ್ವಚೆ ಹಾಗೂ ಕೂದಲಿನ ಆರೋಗ್ಯದ ಬಗ್ಗೆ ಕಳಜಿ ವಹಿಸುವ ಹಾಗೆ ಉಗುರುಗಳ ಸೌಂದರ್ಯದ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಉಗುರುಗಳು ನಮ್ಮ ಕೈಗಳ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದರೆ ಕೆಲವೊಮ್ಮೆ ಆರೋಗ್ಯ ಉತ್ತಮವಾಗಿಲ್ಲದಿದ್ದರೆ ಅಥವಾ ಉಗುರುಗಳ ಆರೈಕೆ ಮತ್ತು ಪೋಷಣೆಯ ಕೊರತೆಯಿಂದಾಗಿ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುವಂತಹದ್ದು ಅಥವಾ ಉಗುರುಗಳಲ್ಲಿ ಕಲೆಗಳ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಿರುವಾಗ ಅನೇಕರು ಉಗುರುಗಳ ಹೊಳಪನ್ನು ಹೆಚ್ಚಿಸಲು ದುಬಾರಿ ಸಲೂನ್ ಚಿಕಿತ್ಸೆಗಳು ಅಥವಾ ರಾಸಾಯನಿಕ ಉತ್ಪನ್ನಗಳನ್ನು ಉಗುರುಗಳಿಗೆ ಅನ್ವಯಿಸುತ್ತಾರೆ. ಈ ದುಬಾರಿ ಉತ್ಪನ್ನಗಳ ಬದಲಾಗಿ ನೈಸರ್ಗಿಕ ವಿಧಾನದ ಮೂಲಕವೂ ಹೊಳೆಯುವ ಸುಂದರವಾದ ಉಗುರುಗಳನ್ನು ಪಡೆಯಬಹುದು. ಜೊತೆಗೆ ಉಗುರಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕಾಂಶ ಮತ್ತು ಪ್ರೋಟೀನ್ನಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದು ಸಹ ಮುಖ್ಯವಾಗಿದೆ. ನೈಸರ್ಗಿಕ ಮಾರ್ಗದ ಮೂಲಕ ಉಗುರುಗಳನ್ನು ಪೋಷಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಆರೋಗ್ಯಕರ ಆಹಾರ ಕ್ರಮ:
ಆರೋಗ್ಯಕ ಉಗುರುಗಳನ್ನು ಪಡೆಯಬೇಕೆಂದರೆ ಮೊದಲಿಗೆ ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವನೆ ಮಾಡುವುದು ಬಹಳ ಮುಖ್ಯ. ಈ ಆಹಾರಗಳು ಉಗುರುಗಳನ್ನು ಬಲಪಡಿಸುವುದರ ಜೊತೆಗೆ ಉತ್ತಮ ಪೋಷಣೆಯನ್ನು ನೀಡುತ್ತದೆ. ಇದರ ಹೊರತಾಗಿ ಜಲಸಂಚಯನವೂ ಮುಖ್ಯವಾಗಿದೆ. ಅದಕ್ಕಾಗಿ ಪ್ರತಿನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವನೆ ಮಾಡುವುದು ಅವಶ್ಯಕ.
ತೆಂಗಿನ ಎಣ್ಣೆ:
ತೆಂಗಿನೆಣ್ಣೆಯು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ಅದು ಉಗುರುಗಳನ್ನು ಬಲಪಡಿಸುತ್ತದೆ ಮತ್ತು ಪೋಷಿಸುತ್ತದೆ. ಮಲಗುವ ಮುನ್ನ ನಿಮ್ಮ ಉಗುರುಗಳ ಮೇಲೆ ಸ್ವಲ್ಪ ಪ್ರಮಾಣದ ತೆಂಗಿನ ಎಣ್ಣೆಯನ್ನು ನಿಧಾನವಾಗಿ ಮಸಾಜ್ ಮಾಡಿ. ಇದು ನಿಮ್ಮ ಉಗುರುಗಳನ್ನು ಶಿಲೀಂಧ್ರಗಳ ಸೋಂಕುಗಳಿಂದ ರಕ್ಷಿಸುತ್ತದೆ. ಮತ್ತು ಉಗುರನ್ನು ಆರೋಗ್ಯಕರವಾಗಿರಿಸುತ್ತದೆ.
ನಿಂಬೆ ರಸ:
ನಿಂಬೆ ರಸವು ಉಗುರುಗಳಿಗೆ ಹೊಳಪು ನೀಡಲು ಮತ್ತು ಉಗುರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಉಗುರುಗಳನ್ನು ಹೊಳೆಯುವಂತೆ ಮಾಡುವುದಲ್ಲದೆ, ಧೂಳು, ಮಾಲಿನ್ಯ ಅಥವಾ ಯಾವುದೇ ರಾಸಾಯನಿಕದಿಂದ ಉಂಟಾಗಬಹುದಾದ ಕಲೆಗಳನ್ನು ಸಹ ತೆಗೆದುಹಾಕುತ್ತದೆ. ಆದ್ದರಿಂದ ಆರೋಗ್ಯಕ ಮತ್ತು ಹೊಳಪಿನ ಉಗುರುಗಳನ್ನು ಪಡೆಯಲು ಉಗುರುಗಳಿಗೆ ನಿಂಬೆ ರಸವನ್ನು ಅನ್ವಯಿಸಿ. ಅದಕ್ಕಾಗಿ ನಿಂಬೆ ರಸ ಮತ್ತು ಆಲಿವ್ ಎಣ್ಣೆಯನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಮತ್ತು ನಿಮ್ಮ ಉಗುರುಗಳನ್ನು ಈ ದ್ರಾವಣದಲ್ಲಿ ಕೆಲವು ನಿಮಿಷಗಳ ಕಾಲ ನೆನೆಸಿ. ಇದು ಉಗುರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ದೇಹದ ತೂಕವನ್ನು ಕಡಿಮೆ ಮಾಡಲು ಇಲ್ಲಿವೆ ಸರಳ ಸಲಹೆಗಳು
ಟೀ ಟ್ರೀ ಆಯಿಲ್:
ಟೀ ಟ್ರೀ ಆಯಿಲ್ ಆಂಟಿಫಂಗಲ್ ಗುಣಗಳನ್ನು ಹೊಂದಿದ್ದು, ಅದು ಉಗುರುಗಳಲ್ಲಿ ಉಂಟಾಗುವ ಸೋಂಕುಗಳ್ನು ತಡೆಯಲು ಸಹಾಯ ಮಾಡುತ್ತದೆ. ಅದಕ್ಕಾಗಿ ಕೆಲವು ಹನಿ ಟೀ ಟ್ರೀ ಆಯಿಲ್ ನ್ನು ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಉಗುರುಗಳಿಗೆ ಅನ್ವಯಿಸಿ.
ಆಲಿವ್ ಎಣ್ಣೆ:
ನಿಮ್ಮ ಉಗುರುಗಳು ವೇಗವಾಗಿ ಬೆಳೆಯುತ್ತಿಲ್ಲ ಎಂದಾದರೆ ನೀವು ಉಗುರುಗಳಿಗೆ ಆಲಿವ್ ಎಣ್ಣೆಯನ್ನು ಹಚ್ಚಬಹುದು. ಅದಕ್ಕಾಗಿ ನೀವು ಆಲಿವ್ ಎಣ್ಣೆಗೆ ವಿಟಮಿನ್ ಇ ಕ್ಯಾಪ್ಸುಲ್ ಬೆರೆಸಿ ಉಗುರುಗಳಿಗೆ ಅನ್ವಯಿಸಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ನಿಮ್ಮ ಉಗುರುಗಳು ವೇಗವಾಗಿ ಬೆಳೆಯುತ್ತವೆ. ಅಲ್ಲದೆ ಇದು ನಿಮ್ಮ ಉಗುರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿ ಪೋಷಣೆಗಾಗಿ ಇದಕ್ಕೆ ಕೆಲವು ಹನಿ ನಿಂಬೆ ರಸವನ್ನು ಸೇರಿಸಿ ಉಗುರುಗಳಿಗೆ ಅನ್ವಯಿಸಿ.
ಬೆಳ್ಳುಳ್ಳಿ:
ಬೆಳ್ಳುಳ್ಳಿಯು ಸೆಲೆನಿಯಮ್ನ್ನು ಹೊಂದಿರುತ್ತದೆ. ಇದು ಉಗುರುಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಹಾಗಾಗಿ ಆರೋಗ್ಯಕರ ಉಗುರುಗಳನ್ನು ಪಡೆಯಬೇಕೆಂದಿದ್ದರೆ, ಕೆಲವು ಎಸಳು ಬೆಳ್ಳುಳ್ಳಿಯನ್ನು ರುಬ್ಬಿಕೊಂಡು ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ ಉಗುರುಗಳಿಗೆ ಹಚ್ಚಿ, 10 ನಿಮಿಷಗಳ ಬಳಿಕ ಕೈ ತೊಳೆಯಿರಿ.
ರೋಸ್ ವಾಟರ್:
ರೋಸ್ ವಾಟರ್ ಮುಖದ ಹೊಳಪನ್ನು ಹೆಚ್ಚಿಸುವಂತೆ ಉಗುರುಗಳ ಹೊಳಪನ್ನು ಕೂಡಾ ಹೆಚ್ಚಿಸುತ್ತದೆ. ಪ್ರತಿದಿನ ಉಗುರುಗಳಿಗೆ ರೋಸ್ ವಾಟರ್ ಅನ್ವಯಿಸುವುದರಿಂದ ಉಗುರುಗಳಿಗೆ ಹೊಳಪು ಬರುತ್ತದೆ ಮತ್ತು ಅವು ಆರೋಗ್ಯಕರವಾಗಿರುತ್ತದೆ. . ಇದರ ಹೊರತಾಗಿ ನಿಮ್ಮ ಉಗುರುಗಳ ಮೇಲೆ ಕಲೆಗಳಿದ್ದರೆ, ನಿಂಬೆ ರಸಕ್ಕೆ ಸ್ವಲ್ಪ ರೋಸ್ ವಾಟರ್ ಮಿಶ್ರಣ ಮಾಡಿ ವಾರದಲ್ಲಿ ಮೂರು ಬಾರಿ ಇದನ್ನು ಉಗುರುಗಳಿಗೆ ಹಚ್ಚಿ. ಇದರಿಂದ ನೀವು ಆರೋಗ್ಯಕರ ಹಾಗೂ ಹೊಳೆಯುವ ಉಗುರುಗಳನ್ನು ಪಡೆಯಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: