Interview Tips: ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸುವ ಮಾರ್ಗ ಇಲ್ಲಿದೆ

ಫಸ್ಟ್ ಇಂಪ್ರೆಶನ್ ಈಸ್ ದಿ ಬೆಸ್ಟ್ ಇಂಪ್ರೆಶನ್ ಎಂಬ ಮಾತು ಉದ್ಯೋಗ ಸಂದರ್ಶನಗಳಲ್ಲಿ ಸಂಪೂರ್ಣವಾಗಿ ಅನ್ವಯಿಸುತ್ತದೆ. ನೀವು ಸಂದರ್ಶಕರ ಜೊತೆಗೆ ಯಾವುದೇ ಭಯವಿಲ್ಲದೆ ಆತ್ಮವಿಶ್ವಾಸದಿಂದ ಮಾತನಾಡಿದಾಗ ನಿಮ್ಮ ಕೌಶಲ್ಯ, ಕಾರ್ಯವೈಖರಿಯ ಬಗ್ಗೆ ಧನಾತ್ಮಕ ಮಾತುಗಳ ಮೂಲಕ ಸಂದರ್ಶಕರನ್ನು ಪ್ರಭಾವಿಸಿದಾಗ, ನೀವು ಉದ್ಯೋಗವನ್ನು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.

Interview Tips: ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸುವ ಮಾರ್ಗ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 29, 2023 | 6:27 PM

ಯಶಸ್ವಿ ಸಂದರ್ಶನಕ್ಕೆ ಆತ್ಮವಿಶ್ವಾಸವು ಕೀಲಿಯಾಗಿದೆ. ಉದ್ಯೋಗ ಸಂದರ್ಶನಗಳಲ್ಲಿ ಆತ್ಮವಿಶ್ವಾಸದಿಂದಿರುವುದು ಮುಖ್ಯವಾಗಿದೆ. ಏಕೆಂದರೆ ಸ್ವಯಂ ನಂಬಿಕೆಯು ಇತರರು ನಮ್ಮನ್ನು ನಂಬುವಂತೆ ಮಾಡುತ್ತದೆ. ನೀವು ಉತ್ತಮ ಕೌಶಲ್ಯಗಳನ್ನು ಹೊಂದಿದ್ದು, ಆದರೆ ಸಂದರ್ಶಕರೊಂದಿಗೆ ಆತ್ಮವಿಶ್ವಾಸದಿಂದ, ನಿಮ್ಮ ಸಾಧನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದಿದ್ದರೆ ನೀವು ಕೆಲಸವನ್ನು ಪಡೆಯಲೂ ಸಾಧ್ಯವಾಗುವುದಿಲ್ಲ. ಆತ್ಮವಿಶ್ವಾಸವನ್ನು ಹೊಂದುವುದು ಎಂದರೆ ನಿಮ್ಮ ಮೇಲೆ ನೀವು ನಂಬಿಕೆಯನ್ನು ಇಡುವುದು. ಆತ್ಮವಿಶ್ವಾಸದಿಂದ ಸಂದರ್ಶನವನ್ನು ಎದುರಿಸಿದಾಗ, ನೀವು ಸಂದರ್ಶಕರ ನಂಬಿಕೆಯನ್ನು ಗಳಿಸಬಹುದು. ಅವರನ್ನು ನಿಮ್ಮ ಮಾತಿನ ಮೂಲಕ ಪ್ರಭಾವಿಸಿ ನೀವು ಆ ಕೆಲಸದ ಸ್ಥಾನಕ್ಕೆ ಅರ್ಹರಾಗಿದ್ದೀರಿ ಎಂದು ಸಂದರ್ಶಕರಿಗೆ ಮನವರಿಕೆ ಮಾಡಬೇಕು. ಆತಂಕವನ್ನು ಅನುಭವಿಸುವುದು ಸಾಮಾನ್ಯವಾಗಿದೆ ಹಾಗಾಗಿ ಆ ಆತಂಕವನ್ನು ಮೆಟ್ಟಿ ನಿಂತು ಸಂದರ್ಶನವನ್ನು ಆತ್ಮವಿಶ್ವಾಸದಿಂದ ಹೇಗೆ ಎದುರಿಸಬೇಕು ಎನ್ನುವ ಸಲಹೆಗಳು ಇಲ್ಲಿವೆ.

ಸಂದರ್ಶನಗಳಲ್ಲಿ ಆತ್ಮವಿಶ್ವಾಸದಿಂದ ಕಾಣಿಸಿಕೊಳ್ಳುವ ಮಾರ್ಗಗಳು:

ಸೂಕ್ತವಾದ ಉಡುಗೆ: ನಿಮ್ಮ ಸಂದರ್ಶನಕ್ಕೆ ಸರಿಯಾದ ಉಡುಪನ್ನು ಆರಿಸಿಕೊಳ್ಳುವುದು ನಿಮ್ಮ ಆತ್ಮವಿಶ್ವಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನೀವು ಹೋಗುತ್ತಿರುವ ಕಂಪೆನಿಯ ಯಾವ ರೀತಿಯ ಬಟ್ಟೆ ಧರಿಸಬೇಕೆಂದು ನೋಡಲು ಕಂಪೆನಿ ಡ್ರೆಸ್ ಕೋಡ್ ಬಗ್ಗೆ ತಿಳಿದುಕೊಳ್ಳಿ. ಇದಕ್ಕಾಗಿ ನೀವು ಕಂಪೆನಿಯ ವೆಬ್ ಸೈಟ್ ನ್ನು ಪರಿಶೀಲಿಸಬಹುದು. ಆದಷ್ಟು ಫಾರ್ಮಲ್ ಉಡುಗೆಗಳನ್ನು ತೊಟ್ಟುಕೊಳ್ಳಬೇಕು.

ಉಸಿರಾಟದ ತಂತ್ರಗಳು: ನೀವು ಸಂದರ್ಶನಗಳಲ್ಲಿ ಉದ್ವೇಗಕ್ಕೆ ಒಳಗಾಗುವ ಉದ್ಯೋಗಾಕಾಂಕ್ಷಿಯಾಗಿದ್ದರೆ, ನಿಧಾನವಾಗಿ ಆಳವಾಗಿ ಉಸಿರಾಟವನ್ನು ಅಭ್ಯಾಸ ಮಾಡುವುದರಿಂದ ನಿಮ್ಮನ್ನು ನೀವು ಕೇಂದ್ರೀಕರಿಸಲು ಮತ್ತು ಹೆಚ್ಚು ಸ್ಪಷ್ಟವಾಗಿ ಯೋಚಿಸಲು ಇದು ಸಹಾಯ ಮಾಡುತ್ತದೆ. ನಮ್ಮ ದೇಹವು ಒತ್ತಡಕ್ಕೆ ಒಳಗಾದಾಗ, ರಕ್ತವು ಮೆದುಳಿನಿಂದ ಸ್ನಾಯುವಿಗೆ ಹರಿಯುತ್ತದೆ. ಮತ್ತು ಮೆದುಳಿನ ರಕ್ತದ ಕೊರತೆಯು ಅರಿವಿನ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸಂದರ್ಶನದ ಒತ್ತಡದ ಸಂದರ್ಭದಲ್ಲಿ ನಿಧಾನವಾಗಿ ಮತ್ತು ಆಳವಾದ ಉಸಿರಾಟವನ್ನು ತೆಗೆದುಕೊಳ್ಳುವ ಮೂಲಕ ಶಾಂತ ಮತ್ತು ಸ್ಪಷ್ಟವಾದ ಮನಸ್ಸಿನ ಸ್ಥಿತಿಯನ್ನು ಸಾಧಿಸಬಹುದು.

ಇದನ್ನೂ ಓದಿ:Psychometric Assessments: ಏನಿದು ಸೈಕೋಮೆಟ್ರಿಕ್ ಪರೀಕ್ಷೆ? ಉದ್ಯೋಗ ಕ್ಷೇತ್ರದಲ್ಲಿ ಯಾಕೆ ಮುಖ್ಯ?

ನಿಮ್ಮ ಉತ್ತರಗಳ ಪೂರ್ವಭಾವಿ ಅಭ್ಯಾಸ ಮಾಡಿ: ಸಂದರ್ಶನದಲ್ಲಿ ಕೇಳುವ ಸಾಮಾನ್ಯ ಪ್ರಶ್ನೆಗಳಿಗೆ ಪೂರ್ವಭಾವಿಯಾಗಿ ಉತ್ತರಗಳನ್ನು ಸಿದ್ಧಪಡಿಸುವುದು ಸಂದರ್ಶನದಲ್ಲಿ ಹೆಚ್ಚು ಆತ್ಮವಿಶ್ವಾಸವನ್ನು ಅನುಭವಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರ ಜೊತೆ ವೀಡಿಯೋ ಕಾನ್ಫರೆನ್ಸ್ ಅಥವಾ ಮುಖಾಮುಖಿ ಕುಳಿತುಕೊಂಡು ಸಂದರ್ಶನದಲ್ಲಿ ಕೇಳಬಹುದಾದ ಪ್ರಶ್ನೆಗಳಿಗೆ ಅವರ ಮುಂದೆ ಕುಳಿತು ಉತ್ತರಿಸಿ. ಈ ಅಭ್ಯಾಸ ಸಂದರ್ಶನದ ದಿನ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಎಚ್ಚರವಾಗಿರಿ: ಯಾವುದೇ ರೀತಿಯ ಚಡಪಡಿಕೆಯಿಲ್ಲದೆ ಗಂಭೀರತೆಯಿಂದ ಇರಬೇಕು. ನಿಮ್ಮ ಗಾಂಭೀರ್ಯತೆ ಮತ್ತು ನೀವು ಕುಳಿತುಕೊಳ್ಳುವ ಭಂಗಿ ನಿಮ್ಮ ಸಂದರ್ಶನದ ಸಮಯದಲ್ಲಿ ನಿಮ್ಮನ್ನು ಆತ್ಮವಿಶ್ವಾಸದಿಂದಿರಲು ಸಹಾಯ ಮಾಡುತ್ತದೆ. ಹಾಗೂ ಸಂದರ್ಶಕರು ಕೇಳುವ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಆಲಿಸಿ, ನಂತರ ಆತ್ಮವಿಶ್ವಾಸದಿಂದ ಸಂಕ್ಷಿಪ್ತವಾಗಿ ಉತ್ತರಿಸಿ.

ಕಣ್ಣಿನ ಸಂಪರ್ಕ: ಸಂದರ್ಶನದ ಸಮಯದಲ್ಲಿ ಆತ್ಮವಿಶ್ವಾಸವನ್ನು ತೊರಿಸಲು ಅದ್ಭುತವಾದ ಮಾರ್ಗವೆಂದರೆ ಸಂದರ್ಶಕರೊಂದಿಗೆ ಕಣ್ಣಿನ ಸಂಪರ್ಕ ಇಟ್ಟುಕೊಳ್ಳುವುದು. ಸಂದರ್ಶನದಲ್ಲಿ ನೇರ ಕಣ್ಣಿನ ಸಂಪರ್ಕವು ವೃತ್ತಿಪರತೆಯನ್ನು ಪ್ರದರ್ಶಿಸುತ್ತದೆ, ನಂಬಿಕೆಯನ್ನು ಸೃಷ್ಟಿಸುತ್ತದೆ. ದೇಹ ಭಾಷೆ: ಚಡಪಡಿಕೆಯಂತಹ ಕೆಲವು ದೇಹದ ಚಲನೆಗಳು ಹೆದರಿಕೆಯ ಸಂಕೇತವಾಗಿರಬಹುದು. ಆದ್ದರಿಂದ ದೇಹದ ಚಲನೆಗಳು ಸಂದರ್ಶನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ನಿಮ್ಮ ಸಂದರ್ಶಕರನ್ನು ಧನಾತ್ಮಕವಾಗಿ ಪ್ರಭಾವಿಸಲು ಬಯಸಿದರೆ, ನೀವು ನಿಮ್ಮನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳಿ, ನೇರವಾಗಿ ಕುಳಿತುಕೊಳ್ಳಿ. ಮುಖ್ಯವಾಗಿ ನಿಮ್ಮ ಮನಸ್ಸಿನೊಳಗಿನ ಭಯವನ್ನು ತೋರ್ಪಡಿಸದೆ ನೇರವಾಗಿ ಕಣ್ಣಿನ ಸಂಪರ್ಕ ಇಟ್ಟುಕೊಳ್ಳಿ. ಇದು ಸಂದರ್ಶಕರ ಜೊತೆ ನಿವು ಆತ್ಮವಿಶ್ವಾಸದಿಂದ ಮಾತನಾಡಲು ಸಹಾಯಕವಾಗುತ್ತದೆ.

ಧನಾತ್ಮಕವಾಗಿ ಯೋಚಿಸಿ: ಸಕರಾತ್ಮಕ ಮನೋಭಾವವು ಸ್ವಯಂ ನಂಬಿಕೆಯ ಕೌಶಲ್ಯವಾಗಿದೆ. ಸಂದರ್ಶನದ ಸಮಯದಲ್ಲಿ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳಿ. ನಿಮ್ಮ ಸಾಮರ್ಥ್ಯವನ್ನು ನೀವು ಸಂದೇಹಿಸದೆ ಆತ್ಮವಿಶ್ವಾಸದಿಂದ ಸಂದರ್ಶನವನ್ನು ಎದುರಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ