
ಅಗತ್ಯವಾಗ ಜೀವಸತ್ವಗಳು, ಖನಿಜಗಳು, ಫೈಬರ್, ಉತ್ಕರ್ಷಣ ನಿರೋಧಕ ಸೇರಿದಂತೆ ಹಲವಾರು ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳು (fruits) ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ವೈದ್ಯರು ಕೂಡ ನಿತ್ಯ ಹಣ್ಣು ತಿನ್ನಲು ಶಿಫಾರಸ್ಸು ಮಾಡುತ್ತಾರೆ. ನೀವು ಕೂಡ ಸೇಬು, ಮಾವು, ಕಲ್ಲಂಗಡಿ ಅಂತೆಲ್ಲಾ ಪ್ರತಿನಿತ್ಯ ವೆರೈಟಿ ಹಣ್ಣುಗಳನ್ನು ತಿನ್ನುತ್ತೀರಿ ಅಲ್ವಾ. ಆದ್ರೆ ಈ ಜಗತ್ತಿನಲ್ಲಿ ಯಾವ ಹಣ್ಣನ್ನು ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ ಎಂಬ ಬಗ್ಗೆ ನಿಮಗೆ ತಿಳಿದಿದೆಯೇ? ಜನ ಯಾವ ಹಣ್ಣನ್ನು ಹೆಚ್ಚು ಸೇವನೆ ಮಾಡುತ್ತಾರೆ ಎಂಬುದರ ಇಂಟರೆಸ್ಟಿಂಗ್ ಮಾಹಿತಿಯನ್ನು ತಿಳಿದುಕೊಳ್ಳಿ.
ವಿಶ್ವದಲ್ಲೇ ಅತ್ಯಂತ ವ್ಯಾಪಕವಾಗಿ ಸೇವಿಸಲಾಗುವ ಹಣ್ಣು ಎಂದರೆ ಅದು ಬಾಳೆಹಣ್ಣು. ಈ ಹಣ್ಣು ವರ್ಷಪೂರ್ತಿ ಲಭ್ಯವಿರುವುದರಿಂದ, ಕೈಗೆಟಕುವ ಬೆಲೆಗೂ ದೊರಕುವುದರಿಂದ ಹಣ್ಣುಗಳಲ್ಲಿ ಬಾಳೆ ಹಣ್ಣನ್ನೇ ಹೆಚ್ಚು ಸೇವನೆ ಮಾಡಲಾಗುತ್ತದೆ. ಜೊತೆಗೆ ಸ್ಮೂಥಿಗಳು, ಸಿಹಿತಿಂಡಿಗಳು, ಚಿಪ್ಸ್, ಬೇಕರಿ ಉತ್ಪನ್ನಗಳು ಮತ್ತು ಮಕ್ಕಳ ಫುಡ್ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ತಯಾರಿಸಲು ಸಹ ಬಾಳೆಹಣ್ಣನ್ನು ಬಳಕೆ ಮಾಡಲಾಗುತ್ತದೆ.
ಬಾಳೆಹಣ್ಣುಗಳ ಜನಪ್ರಿಯತೆಯ ಹಿಂದಿನ ನಿಜವಾದ ಕಾರಣ ಅವುಗಳ ರುಚಿ, ಪೌಷ್ಟಿಕಾಂಶ, ಕೈಗೆಟುಕುವ ಬೆಲೆ ಮತ್ತು ಬಹುಮುಖತೆ. ಬಾಳೆಹಣ್ಣನ್ನು ಅದರ ಕೈಗೆಟುಕುವ ಬೆಲೆ, ಸುಲಭ ಲಭ್ಯತೆ ಮತ್ತು ಹೇರಳವಾದ ಪೌಷ್ಟಿಕಾಂಶದ ಗುಣಗಳಿಂದಾಗಿ ಪ್ರಪಂಚದಾದ್ಯಂತ ವ್ಯಾಪಕವಾಗಿ ಈ ಹಣ್ಣನ್ನು ಸೇವಿಸಲಾಗುತ್ತದೆ. ಚಿಕ್ಕ ಮಕ್ಕಳಿಂದ ವಯಸ್ಕರರವರೆಗೂ ಎಲ್ಲಾ ವಯಸ್ಸಿನ ಜನರು ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅಲ್ಲದೆ ಇದರಲ್ಲಿ ನೈಸರ್ಗಿಕ ಸಿಹಿ ಮತ್ತು ತ್ವರಿತ ಶಕ್ತಿಯನ್ನು ಒದಗಿಸುವ ಸಾಮರ್ಥ್ಯ ಇರುವುದರಿಂದ ಹೆಚ್ಚಿನವರು ತಿನ್ನಲು ಈ ಹಣ್ಣನ್ನೇ ಆಯ್ಕೆ ಮಾಡುತ್ತಾರೆ.
ಭಾರತದಲ್ಲಿ ಅತೀ ಹೆಚ್ಚು ಬಾಳೆಹಣ್ಣುಗಳನ್ನು ಬೆಳೆಯಲಾಗುತ್ತದೆ. ಬಾಳೆಹಣ್ಣು ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ದೇಶದ ಅನುಕೂಲಕರ ಹವಾಮಾನ ಮತ್ತು ಹೆಚ್ಚಿನ ಪ್ರಮಾಣದ ಕೃಷಿಯೋಗ್ಯ ಭೂಮಿ ಬಾಳೆಹಣ್ಣುಗಳ ದೊಡ್ಡ ಪ್ರಮಾಣದ ಉತ್ಪಾದನೆಗೆ ಕೊಡುಗೆ ನೀಡುತ್ತದೆ. ಭಾರತದ ಜೊತೆಗೆ ಚೀನಾ, ಇಂಡೋನೇಷ್ಯಾ, ಬ್ರೆಜಿಲ್ ಮತ್ತು ಈಕ್ವೆಡಾರ್ ಸೇರಿದಂತೆ ಉಷ್ಣವಲಯ ಪ್ರದೇಶದ ದೇಶಗಳು ಬಾಳೆಹಣ್ಣುಗಳನ್ನು ಬೆಳೆದು ವಿಶ್ವ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತವೆ.
ಇದನ್ನೂ ಓದಿ: ದಿಗಂಬರ ಜೈನ ಸನ್ಯಾಸಿಗಳು ಬಟ್ಟೆಗಳನ್ನೇಕೆ ಧರಿಸುವುದಿಲ್ಲ? ಇದರ ಹಿಂದಿನ ಕಾರಣವೇನು ಗೊತ್ತೇ?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ