ವಿವಾಹವನ್ನು ಒಂದು ಪವಿತ್ರ ಕಾರ್ಯವೆಂದು ಹೇಳಲಾಗುತ್ತದೆ. ವಿವಾಹ ಕಾರ್ಯಕ್ರಮದ ಸಮಯದಲ್ಲಿ ಹಲವು ವಿಧಿವಿಧಾನಗಳು ನಡೆಯುತ್ತದೆ. ವಿವಾಹದ ಬಳಿಕ ಮೊದಲ ರಾತ್ರಿ ಆಚರಣೆಯ ಪದ್ಧತಿಯೂ ಇದೆ. ನಾವು ಸಾಮಾನ್ಯವಾಗಿ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಮದುವೆಯ ಬಳಿಕ ವಧು ಒಂದು ದೊಡ್ಡ ಲೋಟದಲ್ಲಿ ಹಾಲನ್ನು ಹಿಡಿದುಕೊಂಡು ಹೋಗಿ ಪ್ರಸ್ಥದ ಕೋಣೆ ಪ್ರವೇಶಿಸುವ ದೃಶ್ಯವನ್ನು ನೋಡಿರುತ್ತೇವೆ. ನಿಜ ಜೀವನದಲ್ಲೂ ಈ ಸಂಪ್ರದಾಯ ಆಚರಣೆಯಲ್ಲಿದೆ. ಆದರೆ ಈ ಸಂಪ್ರದಾಯವನ್ನು ಏಕೆ ಪಾಲಿಸಲಾಗುತ್ತದೆ ಅದರ ಹಿಂದಿನ ಕಾರಣವೇನು ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಗಿದ್ದರೆ ಮದುವೆಯ ಮೊದಲ ರಾತ್ರಿಯಲ್ಲಿ ವಧುವಿನ ಕೈಯಲ್ಲಿ ಒಂದು ಲೋಟ ಹಾಲನ್ನು ಕೊಟ್ಟು ಪ್ರಸ್ಥದ ಕೋಣೆಗೆ ಕಳುಹಿಸುವ ಪದ್ಧತಿಯ ಹಿಂದಿನ ಹಿನ್ನೆಲೆ ಏನೆಂಬುದನ್ನು ನೋಡೋಣ.
ಮದುವೆಯು ಒಂದು ಪವಿತ್ರ ಕಾರ್ಯವಾಗಿದೆ. ಅನೇಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡ ಅನೇಕ ಸಂಪ್ರದಾಯಗಳಿವೆ. ಅವುಗಳಲ್ಲಿ ಮೊದಲ ರಾತ್ರಿಯೂ ಒಂದು. ಮೊದಲ ರಾತ್ರಿ ಆನಂದಮಯ ವೈವಾಹಿಕ ಜೀವನಕ್ಕೆ ಅಡಿಪಾಯ ಎಂದು ನಂಬಲಾಗಿದೆ. ಸಂಪ್ರದಾಯಗಳ ಪ್ರಕಾರ, ಒಂದು ಲೋಟ ಹಾಲಿನೊಂದಿಗೆ ವೈವಾಹಿಕ ಜೀವನವನ್ನು ಪ್ರಾರಂಭಿಸುವುದು ಸತಿ ಪತಿ ಸಂಬಂಧಕ್ಕೆ ಮಾಧುರ್ಯವನ್ನು ನೀಡುವ ಸಂಕೇತವಾಗಿದೆ. ಮಾತ್ರವಲ್ಲದೆ ನವವಿವಾಹಿತರಿಗೆ ಮೊದಲ ರಾತ್ರಿಯಲ್ಲಿ ನೀಡುವ ಹಾಲಿಗೆ ಕೇಸರಿ, ಬಾದಮಿ, ಸೋಂಪುಕಾಳುಗಳ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿ ಕೊಡಲಾಗುತ್ತದೆ.
ಹಿಂದಿನಿಂದಲೂ ಕೇಸರಿಯನ್ನು ಕಾಮೋತ್ತೇಜಕ ಎಂದು ಪರಿಗಣಿಸಲಾಗಿದೆ. ವೈಜ್ಞಾನಿಕವಾಗಿ ಕೇಸರಿಯು ಉತ್ತಮವಾದ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಮನಸ್ಥಿತಿಯನ್ನು ಸುಧಾರಿಸಲು, ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು, ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ ಇದನ್ನು ಹಾಲಿನೊಂದಿಗೆ ಬೆರೆಸಿ ನಿಯಮಿತವಾಗಿ ಸೇವಿಸುವುದರರಿಂದ ಖಿನ್ನತೆಯ ಆರಂಭಿಕ ಚಿಹ್ನೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ವಿವಾಹದ ಸಮಯದಲ್ಲಿ ನವವಧುವರರು ಅನೇಕ ಪೂಜಾ ಕೈಂಕರ್ಯಗಳಲ್ಲಿ, ಸಂಪ್ರದಾಯಗಳಲ್ಲಿ ಭಾಗಿಯಾಗಿರುತ್ತಾರೆ. ಸಹಜವಾಗಿಯೇ ಈ ಸಮಯದಲ್ಲಿ ಅವರಿಗೆ ದಣಿದ ಭಾವನೆ ಮೂಡುತ್ತದೆ. ಹಾಗಾಗಿ ದಣಿದ ದಂಪತಿಗಳಿಗೆ ವಿಶ್ರಾಂತಿ ಸಿಗಲೆಂದೇ ಒಂದು ಲೋಟ ಹಾಲನ್ನು ಮೊದಲ ರಾತ್ರಿಯಲ್ಲಿ ನೀಡಲಾಗುತ್ತದೆ. ಹಾಲು ಟ್ರಿಟೊಫಾನ್ ಎಂಬ ನಿದ್ರೆಯನ್ನು ಉಂಟುಮಾಡುವ ಅಂಶವನ್ನು ಹೊಂದಿರುತ್ತದೆ. ಆದ್ದರಿಂದ ಹಾಲು ಕುಡಿಯುವುದು ವಿಶ್ರಾಂತಿಗೆ ಉತ್ತಮ ಮಾರ್ಗವಾಗಿದೆ. ಇದು ದೇಹಕ್ಕೆ ವಿಶ್ರಾಂತಿ ನೀಡುತ್ತದೆ ಮತ್ತು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.
ಶಕ್ತಿಯುತ ಕಾಮೋತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ ಸಾಮಾನ್ಯವಾಗಿ ಮೊದಲ ರಾತ್ರಿಯಲ್ಲಿ ವಧು ವರರಿಗೆ, ಹಾಲಿಗೆ ಕೇಸರಿ, ಮೆಣಸು, ಬಾದಾಮಿಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ ಕೊಡಲಾಗುತ್ತದೆ. ಈ ಮಿಶ್ರಣವನ್ನು ಕುದಿಸಿದಾಗ ಆ ಪದಾರ್ಥಗಳು ಕಾಮಾಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ರಾಸಾಯನಿಕ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತದೆ.
ಇದನ್ನೂ ಓದಿ: ನೀವು 6 ಗಂಟೆಗಿಂತ ಕಡಿಮೆ ನಿದ್ರೆ ಮಾಡುತ್ತೀರಾ? ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ
ಹೊಸದಾಗಿ ಮದುವೆಯಾದ ದಂಪತಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡಕ್ಕೆ ಒಳಗಾಗಿರುತ್ತಾರೆ. ಈ ಒತ್ತಡವನ್ನು ಹೋಗಲಾಡಿಸಲು ಕೇಸರಿ ಮಿಶ್ರಿತ ಹಾಲು ತುಂಬಾ ಉಪಯುಕ್ತವಾಗಿದೆ. ಕೇಸರಿಯು ಟ್ರಿಪ್ಟೊಫಾನ್ ಎಂಬ ಸಂಯುಕ್ತವನ್ನು ಹೊಂದಿದೆ, ಈ ಅಂಶ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಅರ್ಧದಷ್ಟು ಹಾಲನ್ನು ಸತಿ ಪತಿ ಹಂಚಿಕೊಂಡು ಕುಡಿಯುವುದರಿಂದ ಇಬ್ಬರ ನಡುವೆ ಭಾಂದವ್ಯ ಉತ್ತಮವಾಗುತ್ತದೆ. ಹಾಲಿಗೆ ಕೇಸರಿ ಮತ್ತು ಸೋಂಪನ್ನು ಮಿಶ್ರಣ ಮಾಡಿ ನೀಡಲಾಗುತ್ತದೆ ಈ ಮಿಶ್ರಣದ ಪರಿಮಳವು ಎಂಡಾರ್ಫಿನ್ ಎಂಬ ಸಂತೋಷದ ಹಾರ್ಮೋನನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನೀವು ಸಂತೋಷ ಮತ್ತು ಶಾಂತತೆಯ ಭಾವನೆಯನು ಅನುಭವಿಸಬಹುದು.
ಕೇಸರಿ ಮಿಶ್ರಿತ ಹಾಲು ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಮತ್ತು ರೋಗನಿರೋಧಕ ವರ್ಧಕ ಗುಣಗಳನ್ನು ಹೊಂದಿದೆ. ಹಾಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮೊದಲ ರಾತ್ರಿಯಲ್ಲಿ ಕೇಸರಿ ಮಿಶ್ರಿತ ಹಾಲನ್ನು ನೀಡಲಾಗುತ್ತದೆ.
ಪುರಾತನ ಗ್ರಂಥಗಳ ಪ್ರಕಾರ, ಕಾಮಸೂತ್ರದಲ್ಲಿ ಈ ಹಾಲಿನ ಮಿಶ್ರಣವನ್ನು ಕುಡಿಯುವ ಪರಿಕಲ್ಪನೆಯನ್ನು ಪರಿಚಯಿಸಲಾಯಿತು. ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಆ ಕಾರಣದಿಂದ ಮೊದಲ ರಾತ್ರಿಯಲ್ಲಿ ಒಂದು ಲೋಟ ಹಾಲನ್ನು ನವ ವಧುವರರಿಗೆ ಕೊಡಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:32 pm, Sat, 29 July 23