ದಿಗಂಬರ ಜೈನ ಸನ್ಯಾಸಿಗಳು ಬಟ್ಟೆಗಳನ್ನೇಕೆ ಧರಿಸುವುದಿಲ್ಲ? ಇದರ ಹಿಂದಿನ ಕಾರಣವೇನು ಗೊತ್ತೇ?

ಜೈನ ಧರ್ಮದಲ್ಲಿ ಶ್ವೇತಾಂಬರರು ಮತ್ತು ದಿಗಂಬರರು ಎಂಬ ಎರಡು ಪಂಥಗಳಿದ್ದು, ಈ ಎರಡೂ ಪಂಥದ ಸನ್ಯಾಸಿಗಳು ಕಟ್ಟುನಿಟ್ಟಾದ, ಶಿಸ್ತಿನ ಜೀವನವನ್ನು ನಡೆಸುತ್ತಾರೆ. ಶ್ವೇತಾಂಬರ ಸಾಧುಗಳು ತಮ್ಮ ದೇಹದ ಮೇಲೆ ಬಿಳಿ ಬಣ್ಣದ ಹತ್ತಿ ಬಟ್ಟೆಯನ್ನು ಧರಿಸಿದರೆ, ದಿಗಂಬರ ಪಂಥದ ಸನ್ಯಾಸಿಗಳು ಬಟ್ಟೆಗಳನ್ನು ಧರಿಸುವುದೇ ಇಲ್ಲ. ದಿಗಂಬರ ಜೈನ ಸನ್ಯಾಸಿಗಳು ಬಟ್ಟೆಗಳನ್ನು ಏಕೆ ಧರಿಸುವುದಿಲ್ಲ ಮತ್ತು ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ.

ದಿಗಂಬರ ಜೈನ ಸನ್ಯಾಸಿಗಳು ಬಟ್ಟೆಗಳನ್ನೇಕೆ ಧರಿಸುವುದಿಲ್ಲ? ಇದರ ಹಿಂದಿನ ಕಾರಣವೇನು ಗೊತ್ತೇ?
ಜೈನ ಸನ್ಯಾಸಿ
Image Credit source: Getty Images

Updated on: Jun 23, 2026 | 6:42 PM

ಸಾಮಾನ್ಯವಾಗಿ ಸಾಧು, ಸಂತರು, ಸನ್ಯಾಸಿಗಳು (monks) ಕೇಸರಿ ಮತ್ತು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ಜೈನ ಧರ್ಮದಲ್ಲಿನ ದಿಗಂಬರ ಸನ್ಯಾಸಿಗಳು ಬಟ್ಟೆಗಳನ್ನು ಧರಿಸುವುದೇ ಇಲ್ಲ. ಶಾಂತಿ ಮತ್ತು ಅಹಿಂಸೆಯ ತತ್ವವನ್ನು ಪಾಲಿಸುವ ಮೂಲಕ ಕಠಿಣ ನಿಯಮದ, ಶಿಸ್ತಿನ ಜೀವನ ನಡೆಸುವ ದಿಗಂಬರ ಸನ್ಯಾಸಿಗಳು ಮೈ ಮೇಲೆ ಬಟ್ಟೆಗಳನ್ನು ಧರಿಸುವುದಿಲ್ಲ. ಶ್ವೇತಾಂಬರ ಪಂಥದ ಸನ್ಯಾಸಿಗಳು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ, ದಿಗಂಬರ ಜೈನ ಸನ್ಯಾಸಿಗಳು ತುಂಡು ಬಟ್ಟೆಯನ್ನು ಸಹ ಧರಿಸುವುದಿಲ್ಲ. ಇದು ಕೇವಲ ಸಂಪ್ರದಾಯದ ಒಂದು ಭಾಗವೇ? ಇದರ ಹಿಂದೆ ದೊಡ್ಡ ಕಾರಣವಿದೆಯೇ? ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ದಿಗಂಬರ ಜೈನ ಸನ್ಯಾಸಿಗಳು ಬಟ್ಟೆಗಳನ್ನೇಕೆ ಧರಿಸುವುದಿಲ್ಲ?

ದಿಗಂಬರ ಪಂಥದಲ್ಲಿ ಬಟ್ಟೆ ತ್ಯಜಿಸುವುದನ್ನು “ಅಪರಿಗ್ರಹ”ದ ಅಂತಿಮ ತತ್ವವೆಂದು ಪರಿಗಣಿಸಲಾಗುತ್ತದೆ. ದಿಗಂಬರ ಜೈನ ಮುನಿಗಳಿಗೆ ನಾಲ್ಕು ದಿಕ್ಕುಗಳೇ ಅವರ ಬಟ್ಟೆಗಳಂತೆ. ಒಂದು ನಿರ್ದಿಷ್ಟ ಉಡುಪಿನಲ್ಲಿ ತಮ್ಮನ್ನು ತಾವು ಕಟ್ಟಿಕೊಳ್ಳುವ ಬದಲು, ಅವರು ಇಡೀ ಜಗತ್ತನ್ನು ಮತ್ತು ಆಕಾಶವನ್ನು  ತಮ್ಮ ಬಟ್ಟೆಯೆಂದು ಪರಿಗಣಿಸುತ್ತಾರೆ. ಅವರಿಗೆ, ದೇವರು ಸೃಷ್ಟಿಸಿದ ಪ್ರಕೃತಿಯೇ ಅವರ ಮನೆ ಮತ್ತು ಬಟ್ಟೆ. ದಿಗಂಬರ ಸನ್ಯಾಸಿಗಳ ದಿನಚರಿ ಕಠಿಣವಾಗಿರುತ್ತದೆ. ಎಷ್ಟೇ ಚಳಿ ಇದ್ದರೂ ಸರಿ ಯಾವುದೇ ಋತುವಿನಲ್ಲೂ ಅವರು ಬಟ್ಟೆ ಧರಿಸುವುದೇ ಇಲ್ಲ. ಅವರು ಬರೀ ಪಿಂಚಿಕಾ ಅಂದರೆ ನವಿಲು ಗರಿಗಳ ಒಂದು ಗುಚ್ಛವನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾರೆ.  ದಿಗಂಬರ ಜೈನ ಸನ್ಯಾಸಿಗಳು ತಮ್ಮ ಮನಸ್ಸುಗಳು ಮತ್ತು ಜೀವನಗಳು ಕಲ್ಮಶಗಳಿಂದ ಮುಕ್ತವಾಗಿವೆ ಎಂದು ನಂಬುತ್ತಾರೆ ಮತ್ತು ಆದ್ದರಿಂದ ಅವರು ಬಟ್ಟೆಗಳನ್ನು ಧರಿಸುವುದಿಲ್ಲ.

ವಾಸ್ತವವಾಗಿ, ಜೈನ ಸನ್ಯಾಸಿಗಳು ಎಲ್ಲಾ ಲೌಕಿಕ ಆಸ್ತಿಗಳನ್ನು ತ್ಯಜಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯು ದುರ್ಗುಣಗಳಿಂದ ಸುತ್ತುವರೆದಿರುವಾಗ ಬಟ್ಟೆಗಳು ಬೇಕಾಗುತ್ತವೆ ಎಂದು ದಿಗಂಬರ ಸನ್ಯಾಸಿಗಳು ನಂಬುತ್ತಾರೆ. ಅವರ ಪ್ರಕಾರ, ಬಟ್ಟೆಗಳು ದುರ್ಗುಣಗಳನ್ನು ಮರೆಮಾಡಲು ಒಂದು ಸಾಧನವಾಗಿದೆ. ದಿಗಂಬರ ಸನ್ಯಾಸಿಗಳು ತಮ್ಮ ಹೃದಯದಲ್ಲಿ ಯಾವುದೇ ದುಷ್ಟತನವಿಲ್ಲ ಎಂದು ನಂಬುತ್ತಾರೆ, ದಿಗಂಬರ ಜೈನ ಪಂಥದ ಪ್ರಕಾರ, ಪ್ರಪಂಚದ ಬಟ್ಟೆಗಳು ಮತ್ತು ಎಲ್ಲಾ ವಸ್ತುಗಳು ಮೋಕ್ಷವನ್ನು ಪಡೆಯುವ ಹಾದಿಯಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತವೆ, ಆದ್ದರಿಂದ ಅವರು ನಾಲ್ಕು  ದಿಕ್ಕುಗಳನ್ನೇ ತಮ್ಮ ಬಟ್ಟೆಗಳೆಂದು ಪರಿಗಣಿಸಿದ್ದಾರೆ.

ಸರಳ, ನಿಷ್ಕಳಂಕ ಜೀವನ: ಜೈನ ಧರ್ಮಗ್ರಂಥಗಳ ಪ್ರಕಾರ, ಮೋಕ್ಷವನ್ನು ಪಡೆಯಲು, ಒಬ್ಬರು ಹುಟ್ಟಿನಿಂದಲೇ ಮುಗ್ಧ ಮಗುವಿನಂತೆ ಸರಳ ಮತ್ತು ಮುಗ್ಧರಾಗಿರಬೇಕು. ಚಿಕ್ಕ ಮಗು ಬಟ್ಟೆಯಿಲ್ಲದೆ ಮುಗ್ಧವಾಗಿ ಮತ್ತು ದುರ್ಗುಣಗಳಿಂದ ಮುಕ್ತವಾಗಿರುತ್ತದೆ. ಅದೇ ರೀತಿ, ಸನ್ಯಾಸಿಗಳು ಸಹ ಸರಳವಾಗಿರಬೇಕು, ನಾಚಿಕೆ ಮತ್ತು ಲೌಕಿಕತೆಯ ಬಂಧಗಳನ್ನು ಮುರಿಯಬೇಕು, ಇದಕ್ಕಾಗಿಯೂ ದಿಗಂಬ ಮುನಿಗಳು ಬಟ್ಟೆ ಧರಿಸುವುದಿಲ್ಲ.

ಇದನ್ನೂ ಓದಿ: ಮರಣ ಹೊಂದಿದ ವ್ಯಕ್ತಿಯ ಮೂಗಿಗೆ ಹತ್ತಿಯನ್ನಿಡುವುದೇಕೆ? ಇದರ ಹಿಂದಿನ ವೈಜ್ಞಾನಿಕ ಕಾರಣವನ್ನು ತಿಳಿಯಿರಿ

ಅನಾಸಕ್ತಿ: ಜೈನ ಧರ್ಮದಲ್ಲಿ ಅನಾಸಕ್ತಿ ಮುಖ್ಯ. ಅಂದರೆ ಏನನ್ನೂ ಸಂಗ್ರಹಿಸದಿರುವುದು. ನಿಜವಾದ ಜ್ಞಾನಿಗೆ ಈ ಜಗತ್ತಿನ ಯಾವುದೇ ವಸ್ತುವಿನ ಮೇಲೆಯೂ ಆಸಕ್ತಿ ಇರುವುದಿಲ್ಲ. ಬಟ್ಟೆಗಳನ್ನು ಧರಿಸಿದರೆ, ಅವುಗಳನ್ನು ಒಗೆಯುವುದು, ಒಣಗಿಸುವುದು ಮತ್ತು ಅವುಗಳನ್ನು ಕ್ರಮವಾಗಿ ಇಡುವುದು ಹೇಗೆ ಎಂದು ಯೋಚಿಸುತ್ತಾನೆ. ಈ ಎಲ್ಲಾ ವಸ್ತುಗಳು ಮತ್ತು ಪ್ರಲೋಭನೆಗಳಿಂದ ದೂರವಿರಲು, ಜೈನ ಮುನಿಗಳು ಬಟ್ಟೆಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ.

ಅಹಿಂಸೆ: ಜೈನ ಮುನಿಗಳು ಅಹಿಂಸೆಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಬಟ್ಟೆಗಳಲ್ಲಿ ಬೆವರು ಅಥವಾ ತೇವಾಂಶವಿದ್ದರೆ, ಸಣ್ಣ ಕೀಟಗಳು ಅಥವಾ ಸೂಕ್ಷ್ಮ ಜೀವಿಗಳು ಸೃಷ್ಟಿಯಾಗಬಹುದು, ಆ ಬಟ್ಟೆಗಳನ್ನು ತೊಳೆದಾಗ, ಆ ಮುಗ್ಧ ಜೀವಿಗಳು ಸಾಯಬಹುದು. ಕೊಲ್ಲುವ ಈ ಪಾಪವನ್ನು ತಪ್ಪಿಸಲು, ದಿಗಂಬರ ಮುನಿಗಳು ಬಟ್ಟೆಗಳನ್ನು ಧರಿಸುವುದಿಲ್ಲ.

ಶೀತ ಮತ್ತು ಶಾಖವನ್ನು ಜಯಿಸುವುದು: ಬಟ್ಟೆ ಇಲ್ಲದೆ ಬದುಕುವುದು ಸರಳ ವಿಷಯವಲ್ಲ. ಇದು ಮನಸ್ಸು ಮತ್ತು ದೇಹವನ್ನು ನಿಯಂತ್ರಣದಲ್ಲಿಡುತ್ತದೆ. ಜೈನ ಮುನಿಗಳು ಇದರ ಮೂಲಕ ತಮ್ಮನ್ನು ತಾವು ಬಲಪಡಿಸಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿಯ ಮನಸ್ಸು ಬಲವಾಗಿದ್ದರೆ, ನಡವಳಿಕೆಯಿಂದ ಸ್ಪಷ್ಟವಾಗುತ್ತದೆ ಎಂದು ಅವರು ನಂಬುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:41 pm, Tue, 23 June 26

Follow Us