World Animal Welfare Day 2023: ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಏಕೆ ಆಚರಿಸಲಾಗುತ್ತದೆ? ಅದರ ಇತಿಹಾಸ ಮಹತ್ವನ್ನು ತಿಳಿಯಿರಿ
ಪ್ರಾಣಿಗಳ ಹಕ್ಕುಗಳು, ಕಲ್ಯಾಣ ಮತ್ತು ಅವುಗಳ ರಕ್ಷಣೆಯ ತುರ್ತು ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಈ ಜಗತ್ತನ್ನು ಪ್ರಾಣಿಗಳಿಗೆ ಸುರಕ್ಷಿತ ಸ್ಥಳವನ್ನಾಗಿ ಮಾಡಲು ಪ್ರತಿವರ್ಷ ಅಕ್ಟೋಬರ್ 4 ರಂದು ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಿಸಲಾಗುತ್ತದೆ.

ನಮ್ಮ ಪರಿಸರ ವ್ಯವಸ್ಥೆಯ ಸಮತೋಲವನ್ನು ಕಾಯ್ದಿರಿಸುವಲ್ಲಿ ಪ್ರಾಣಿಗಳ ಪಾತ್ರ ಗಣನೀಯವಾದದ್ದು. ಆದರೆ ಮನುಷ್ಯನ ಸ್ವಾರ್ಥದ ಕಾರಣದಿಂದಾಗಿ ಇಂದು ಪ್ರಾಣಿಗಳ ಆವಸಸ್ಥಾನವಾದ ಕಾಡುಗಳ ನಾಶ, ಕಳ್ಳಬೇಟೆ, ನಗರೀಕರಣದಿಂದಾಗಿ ಅದೆಷ್ಟೋ ಪ್ರಾಣಿ ಪ್ರಭೇಧಗಳು, ಮರ ಗಿಡಗಳು ವಿನಾಶದ ಅಂಚಿನಲ್ಲಿವೆ. ಅಲ್ಲದೆ ಅದೆಷ್ಟೋ ಪ್ರಾಣಿ ಸಂತತಿಗಳು ಇಂದು ಕಣ್ಮರೆಯಾಗಿವೆ. ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಾಣಿಗಳು, ಸಸ್ಯರಾಶಿಗಳು ಮತ್ತು ಪಕ್ಷಿಗಳು ಮುಖ್ಯ. ಈ ನಿಟ್ಟಿನಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಬೇಧಗಳನ್ನು ರಕ್ಷಿಸಲು, ಪ್ರಾಣಿಗಳ ಹಕ್ಕುಗಳು, ಕಲ್ಯಾಣ ಮತ್ತು ಅವುಗಳ ರಕ್ಷಣೆಯ ತುರ್ತು ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಈ ಜಗತ್ತನ್ನು ಪ್ರಾಣಿಗಳಿಗೆ ಸುರಕ್ಷಿತ ಸ್ಥಳವನ್ನಾಗಿ ಮಾಡಲು ಪ್ರತಿವರ್ಷ ಅಕ್ಟೋಬರ್ 4 ರಂದು ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಪ್ರಾಣಿ ಕಲ್ಯಾಣ ದಿನದ ಇತಿಹಾಸ:
ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು 24 ನೇ ಮಾರ್ಚ್ 1925 ರಂದು ಜರ್ಮನಿಯ ಸೈನಾಜಿಸ್ಟ್ ಹೆನ್ರಿಕ್ ಝಿಮ್ಮರ್ ಮ್ಯಾನ್ ಬರ್ಲಿನ್ನಲ್ಲಿರುವ ಸ್ಪೋರ್ಟ್ಸ್ ಪ್ಯಾಲೇಸ್ ನಲ್ಲಿ ಆಯೋಜಿಸಿದರು. ಈ ಕಾರ್ಯಕ್ರಮದಲ್ಲಿ 5000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ನಂತರ 1931 ರಲ್ಲಿ ಇಟಲಿಯ ಫ್ಲಾರೆನ್ಸ್ ನಲ್ಲಿ ನಡೆದ ಅಂತರಾಷ್ಟ್ರೀಯ ಪ್ರಾಣಿ ಸಂರಕ್ಷಣಾ ಸಮ್ಮೇಳನವು ಅಕ್ಟೋಬರ್ 4 ನ್ನು ಅಂತರಾಷ್ಟ್ರೀಯ ಪ್ರಾಣಿ ಕಲ್ಯಾಣ ದಿನವನ್ನಾಗಿ ಆಚರಿಸಲು ನಿರ್ಣಯವನ್ನು ಅಂಗೀಕರಿಸಿತು. ಅಂದಿನಿಂದ ಪ್ರತಿವರ್ಷ ಜಗತ್ತಿನಾದ್ಯಂತ ಅಕ್ಟೋಬರ್ 4 ರಂದು ಪ್ರಾಣಿ ಕಲ್ಯಾಣ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಈ ದಿನವನ್ನು “ಪ್ರಾಣಿ ಪ್ರೇಮಿಗಳ ದಿನ” ಎಂದೂ ಕರೆಯಲಾಗುತ್ತದೆ. ಏಕೆಂದರೆ ಇದು ಪ್ರಾಣಿಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಒಳಗೊಳ್ಳುವಿಕೆಯ ಮೂಲಕ ಪ್ರಾಣಿಗಳ ಕಾಳಜಿ, ಪ್ರೀತಿ, ವಾತ್ಸಲ್ಯ ಮತ್ತು ರಕ್ಷಣೆಯನ್ನು ಪ್ರೋತ್ಸಾಹಿಸುತ್ತದೆ. ಪ್ರಾಣಿಗಳು ಎದುರಿಸುತ್ತಿರುವ ಸಮಸ್ಯೆಗಳ ಕಡೆಗೆ ಪ್ರಪಂಚದ ಗಮನವನ್ನು ಸೆಳೆಯಲು ಈ ದಿನವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಇದನ್ನೂ ಓದಿ: ಈ ರಕ್ತದ ಗುಂಪಿನ ಜನರಲ್ಲಿ ಹೃದ್ರೋಗದ ಅಪಾಯ ಹೆಚ್ಚು, ಜಾಗರೂಕರಾಗಿರಿ ಎನ್ನುತ್ತಾರೆ ತಜ್ಞರು
ವಿಶ್ವ ಪ್ರಾಣಿ ಕಲ್ಯಾಣ ದಿನದ ಪ್ರಾಮುಖ್ಯತೆ:
ಅಕ್ಟೋಬರ್ 4 ರಂದು ವಿಶ್ವದಾದ್ಯಂತ ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಿಸಲಾಗುತ್ತದೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ರಕ್ಷಿಸುವುದು ಮತ್ತು ಮಾನವರೊಂದಿಗಿ ಅವುಗಳ ಸಂಬಂಧವನ್ನು ಬಲಪಡಿಸುವುದು ವಿಶ್ವ ಪ್ರಾಣಿ ಕಲ್ಯಾಣ ದಿನದ ಮೂಲ ಉದ್ದೇಶವಾಗಿದೆ. ಈ ವಿಶೇಷ ದಿನವು ಜನರು ಒಗ್ಗೂಡಲು ಮತ್ತು ಪ್ರಾಣಿ ಕಲ್ಯಾಣಕ್ಕಾಗಿ ತಮ್ಮ ಬೆಂಬಲವನ್ನು ತೋರಿಸಲು ಅವಕಾಶವನ್ನು ನೀಡುತ್ತದೆ. ಈ ದಿನವು ಮನುಷ್ಯರಾದ ನಾವು ಪ್ರಾಣಿಗಳ ಯೋಗಕ್ಷೇಮಕ್ಕಾಗಿ ಅವುಗಳ ರಕ್ಷಣೆ, ಆರೈಕೆ ಮತ್ತು ಔಷಧಿಗಳಂತಹ ಕೆಲವು ಜವಬ್ದಾರಿಗಳನ್ನು ಹೊಂದಿದ್ದೇವೆ ಎಂಬುದನ್ನು ನೆನಪಿಸುತ್ತದೆ. ನಮ್ಮಂತೆ ಪ್ರಾಣಿಗಳಿಗೂ ಈ ಭೂಮಿಯ ಮೇಲೆ ಜೀವಿಸುವ ಸಮಾನ ಹಕ್ಕುಗಳಿವೆ. ಈ ದಿನವು ಪ್ರಾಣಿಗಳ ಜೀವನ ಸುಧಾರಣೆಗೆ ಪ್ರಯತ್ನ ಮಾಡಲು ಮತ್ತು ಅವುಗಳ ಹಕ್ಕುಗಳನ್ನು ಪ್ರತಿಪಾದಿಸಲು ಜನರನ್ನು ಪ್ರೋತ್ಸಾಹಿಸುತ್ತದೆ. ಇದಲ್ಲದೆ, ಪ್ರಪಂಚದಾದ್ಯಂತ ಪ್ರಾಣಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಂಸ್ಥೆಗಳು ಮತ್ತು ವ್ಯಕ್ತಿಗಳ ಕಠಿಣ ಪರಿಶ್ರಮವನ್ನು ಅಚರಿಸಲು ಇದು ಒಂದು ಅವಕಾಶವನ್ನು ನೀಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ