ದೂರದರ್ಶನವು ಮನರಂಜನೆ, ಶಿಕ್ಷಣ, ಸುದ್ದಿ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಸಮೂಹ ಸಂವಹನ ಮಾಧ್ಯಮವಾಗಿದೆ. ಕಪ್ಪು ಬಿಳುಪಿನ ಪರದೆಯಿಂದ ಆರಂಭವಾದ ಈ ಪಯಣ ಇಂದು ಸ್ಮಾರ್ಟ್ ಟಿವಿ ಹಂತಕ್ಕೆ ತಲುಪಿದೆ. ಇಂದು ಟಿವಿ ಇಲ್ಲದ ಯಾವುದೇ ಮನೆ ಇರಲು ಸಾಧ್ಯವಿಲ್ಲ. ಟಿವಿ ಕೇವಲ ಮನರಂಜನೆಯ ಸಾಧನ ಮಾತ್ರವಲ್ಲ, ಅದರ ಮೂಲಕ ನಾವು ಈ ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಕ್ಷಣಾರ್ಧದಲ್ಲಿ ತಿಳಿದುಕೊಳ್ಳುತ್ತೇವೆ. ಪ್ರಸ್ತುತ ಇಂಟರ್ನೆಟ್ ಜಗದಲ್ಲಿ ದೂರದರ್ಶನ ನೋಡುವ ಮಾದರಿ ಬದಲಾಗಿದೆ. ಆದರೂ ಇಂದಿಗೂ ಅದರ ಮಹತ್ವ ಕಡಿಮೆಯಾಗಿಲ್ಲ. ಹೀಗೆ ದೂರದರ್ಶನವು ಸಮಾಜ ಮತ್ತು ವ್ಯಕ್ತಿಗಳ ಮೇಲೆ ಬೀರುವ ಮಹತ್ವದ ಪ್ರಭಾವದ ಬಗ್ಗೆ ತಿಳಿಸಲು ಹಾಗೂ ಸಂವಹನ ಮತ್ತು ಜಾಗತೀಕರಣದಲ್ಲಿ ದೂರದರ್ಶನವು ವಹಿಸಿದ ಮುಖ್ಯ ಪಾತ್ರದ ಬಗ್ಗೆ ತಿಳಿಸಲು ಪ್ರತಿ ವರ್ಷ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತದೆ.
ನವೆಂಬರ್ 21, 1996 ರಂದು ವಿಶ್ವಸಂಸ್ಥೆಯು ಮೊದಲ ಬಾರಿಗೆ ವಿಶ್ವ ದೂರದರ್ಶನ ( ಟೆಲಿವಿಷನ್ ಫೋರಂ) ವೇದಿಕೆಯನ್ನು ಸ್ಥಾಪಿಸಿತು. ಇದರಿಂದ ದೂರದರ್ಶನದ ಮಹತ್ವವನ್ನು ಚರ್ಚಿಸಲು ಮಾಧ್ಯಮಗಳಿಗೆ ವೇದಿಕೆ ಸಿಕ್ಕಿತು. ಅಲ್ಲದೆ ಇಲ್ಲಿ ಜಗತ್ತನ್ನು ಬದಲಾಯಿಸಲು ಟೆಲಿವಿಷನ್ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಚರ್ಚೆ ಕೂಡಾ ನಡೆಯಿತು. ಹೀಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದೂರದರ್ಶನದ ಮಹತ್ವದ ಬಗ್ಗೆ ಹಾಗೂ ಸಂವಹನ ಮತ್ತು ಜಾಗತೀಕರಣದಲ್ಲಿ ದೂರದರ್ಶನವು ವಹಿಸಿದ ಮಹತ್ತರ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನವೆಂಬರ್ 21 ರಂದು ವಿಶ್ವ ದೂದರ್ಶನ ದಿನವನ್ನು ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು. ಅಂದಿನಿಂದ ಪ್ರತಿವರ್ಷ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇಂದು ನಮ್ಮ ಜೀವನದಲ್ಲಿ ದೂರದರ್ಶನವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಟಿವಿ ಮನರಂಜನೆಯ ಮೂಲ ಮಾತ್ರವಲ್ಲ, ಇದು ದೇಶ ಮತ್ತು ಪ್ರಪಂಚದಲ್ಲಿ ನಡೆಯುವ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಮಗೆ ಮಾಹಿತಿಯನ್ನು ತಿಳಿಸುತ್ತದೆ. ದೂರದರ್ಶನದ ಈ ಪ್ರಾಮುಖ್ಯತೆಯನ್ನು ಪರಿಗಣಿಸಿ, ವಿಶ್ವಸಂಸ್ಥೆಯು 1996 ರಲ್ಲಿ ವಿಶ್ವ ದೂರದರ್ಶನ ದಿನವನ್ನು ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು. ದೂರದರ್ಶನವು ಜನರನ್ನು ರಂಜಿಸುವ ಜೊತೆಗೆ ಕುಟುಂಬವನ್ನು ಒಗ್ಗೂಡಿಸುವಲ್ಲಿ, ಜ್ಞಾನವನ್ನು ಹೆಚ್ಚಿಸುವಲ್ಲಿ, ಶಿಕ್ಷಣವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ ಟಿವಿ ಮಾಧ್ಯಮವು ಸಮಜದಲ್ಲಿನ ಪ್ರಮುಖ ಸಮಸ್ಯೆಗಳು ಮತ್ತು ಘಟನೆಗಳ ಬಗ್ಗೆ ಪಕ್ಷಪಾತವಿಲ್ಲದೆ ಮಾಹಿತಿಯನ್ನು ಒದಗಿಸುತ್ತದೆ. ಈ ದಿನ ನಮ್ಮ ಜೀವನದಲ್ಲಿ ಮತ್ತು ಜಾಗತಿಕ ಸಮುದಾಯದಲ್ಲಿ ದೂರದರ್ಶನವು ವಹಿಸುವ ಪ್ರಮುಖ ಪಾತ್ರದ ಬಗ್ಗೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದ ಮಹತ್ವದ ಬಗ್ಗೆ ಜನರಿಗೆ ತಿಳಿಸಲಾಗುತ್ತದೆ.
ಇದನ್ನೂ ಓದಿ: ವಿಶ್ವ ಶೌಚಾಲಯ ದಿನದ ಇತಿಹಾಸ, ಮಹತ್ವ ಏನು?
1924 ರಲ್ಲಿ ಸ್ಕಾಟಿಷ್ ಇಂಜಿನಿಯರ್, ಜಾನ್ ಬೇರ್ಡ್ ದೂರದರ್ಶನವನ್ನು ಕಂಡುಹಿಡಿದರು. ಇದರ ನಂತರ 1927 ರಲ್ಲಿ, ಫಿಲೋ ಫಾರ್ನ್ಸ್ವರ್ತ್ ವಿಶ್ವ ಮೊದಲ ಕೆಲಸ ಮಾಡುವ ಟಿವಿಯನ್ನು ತಯಾರಿಸಿದರು. ಆದರೆ ಈ ಟಿವಿ ಭಾರತವನ್ನು ತಲುಪಲು ಸುಮಾರು ದಶಕಗಳೇ ಬೇಕಾಯಿತು. ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ನೆರವಿನೊಂದಿಗೆ ಭಾರತದಲ್ಲಿ ಸೆಪ್ಟೆಂಬರ್ 15, 1959 ರಂದು ನವದೆಹಲಿಯಲ್ಲಿ ದೂರದರ್ಶನವನ್ನು ಪ್ರಾರಂಭಿಸಲಾಯಿತು. ಆಲ್ ಇಂಡಿಯಾ ರೇಡಿಯೋ ಅಡಿಯಲ್ಲಿ ದೂರದರ್ಶನವನ್ನು ಕಾರ್ಯನಿವರ್ಹಿಸಲು ಪ್ರಾರಂಭಿಸಿತು. ಇದರ ನಂತರ ದೂರದರ್ಶನ ಕೇಂದ್ರವನ್ನು ನವದೆಹಲಿಯಲ್ಲಿ ಸ್ಥಾಪಿಸಲಾಯಿತು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: