World Toilet Day 2023: ವಿಶ್ವ ಶೌಚಾಲಯ ದಿನದ ಇತಿಹಾಸ, ಮಹತ್ವ ಏನು?
ಬಯಲು ಶೌಚದಿಂದಾಗುವ ಸಮಸ್ಯೆಗಳ ಬಗ್ಗೆ ವಿಶ್ವದಾದ್ಯಂತ ಜನರಿಗೆ ಅರಿವು ಮೂಡಿಸಲು, ಶೌಚಾಲಯಗಳ ಬಳಕೆಯನ್ನು ಉತ್ತೇಜಿಸಲು ಮತ್ತು ನೈರ್ಮಲ್ಯದ ಮಹತ್ವವನ್ನು ವಿವರಿಸುವ ಉದ್ದೇಶದಿಂದ ಪ್ರತಿವರ್ಷ ನವೆಂಬರ್ 19 ರಂದು ವಿಶ್ವ ಶೌಚಾಲಯ (World Toilet Day) ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಇತಿಗಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ.
ಇಂದಿಗೂ ಜಗತ್ತಿನಲ್ಲಿ ಹಲವು ಹಿಂದುಳಿದ ಪ್ರದೇಶಗಳ ಜನರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಅಷ್ಟು ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲಿ ತಮ್ಮ ಸಂಪ್ರದಾಯವಾದಿ ಚಿಂತನೆಯಿಂದ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳದ ಕುಟುಂಬಗಳು ಸಾಕಷ್ಟಿವೆ. ಇವರೆಲ್ಲಾ ಹೆಚ್ಚಾಗಿ ಬಯಲು ಪ್ರದೇಶದಲ್ಲಿಯೇ ಮಲವಿಸರ್ಜನೆ ಮಾಡುತ್ತಾರೆ. ಈ ಬಯಲು ಮಲವಿಸರ್ಜನೆ ಆರೋಗ್ಯದ ಮೇಲೆ ಮಾತ್ರವಲ್ಲದೆ ಪ್ರಕೃತಿಯ ಮೇಲೂ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಉದಾಹರಣೆಗೆ ನೀರಿನ ಮೂಲಗಳ ಬಳಿ ಮಲವಿಸರ್ಜನೆ ಮಾಡುವುದರಿಂದ ಜಲಮೂಲಗಳು ಕಲುಷಿತಗೊಳ್ಳುತ್ತವೆ ಮತ್ತು ಈ ಜಲಮೂಲಗಳ ಸಮೀಪ ವಾಸಿಸುವ ಜನರು ಅದೇ ನೀರನ್ನು ತಮ್ಮ ದೈನಂದಿನ ಬಳಕೆಗೆ ಬಳಸುತ್ತಾರೆ. ಇದರಿಂದ ಕಾಲಾರಾ, ಟೈಫಾಯಿಡ್, ಅತಿಸಾರ ಮುಂತಾದ ಅನೇಕ ರೋಗಗಳು ಬಾಧಿಸಬಹುದು. ಅಲ್ಲದೆ ಬಯಲು ಪ್ರದೇಶದಲ್ಲಿ ಮಲ ವಿಸರ್ಜನೆ ಮಾಡುವುದರಿಂದ ನೊಣಗಳು ಮತ್ತು ಇತರ ಕೀಟಗಳು ಸಹ ಅದರ ಮೇಲೆ ನೆಲೆಗೊಳ್ಳುತ್ತವೆ, ಈ ಸೂಕ್ಷ್ಮ ಜೀವಿಗಳು ನಮ್ಮ ದೇಹವನ್ನು ಸೋಕಿದಾಗ, ಇದರಿಂದ ಅನೇಕ ಗಂಭೀರ ಕಾಯಿಲೆಗಳು ಉಂಟಾಗಬಹುದು. ಇಷ್ಟು ಮಾತ್ರವಲ್ಲದೆ ಕಳಪೆ ಮಟ್ಟದ ಶೌಚಾಲಯ ವ್ಯವಸ್ಥೆಯಿಂದಲೂ ಹಲವಾರು ಕಾಯಿಲೆಗಳು ಬಾಧಿಸುತ್ತವೆ. ಶೌಚಾಲಯ ಕೂಡಾ ವಿವಿಧ ರೀತಿಯ ಬ್ಯಾಕ್ಟೀರಿಯಾ ಮತ್ತ ಸೂಕ್ಷಾಣುಜೀವಿಗಳಿಗೆ ನೆಲೆಯಾಗಿದೆ. ಹೀಗಿರುವಾದ ಪ್ರತಿನಿತ್ಯ ಶೌಚಾಲಯಗಳನ್ನು ಸ್ವಚ್ಛಗೊಳಿಸದಿದ್ದರೆ, ಇದರಿಂದ ಹಲವಾರು ಸೊಂಕುಗಳು ಉಂಟಾಗಬಹುದು. ಹಾಗಾಗಿ ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಬಯಲಿನಲ್ಲಿ ಮಲವಿಸರ್ಜನೆ ಮಾಡುವುದನ್ನು ತಡೆಯಲು ಮತ್ತು ಸರಿಯಾದ ನೈರ್ಮಲ್ಯ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಅಗತ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಶ್ವ ಶೌಚಾಲಯ (World Toilet Day) ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಶೌಚಾಲಯ ದಿನದ ಇತಿಹಾಸ:
ನವೆಂಬರ್ 19, 2001 ರಂದು ಸಿಂಗಾಪುರದ ಜ್ಯಾಕ್ ಸಿಮ್ ಅವರು ವಿಶ್ವ ಶೌಚಾಲಯ ಸಂಸ್ಥೆಯನ್ನು ಸ್ಥಾಪಿಸಿದರು ನಂತರ ಈ NGO ಸಂಸ್ಥೆಯ ಸ್ಥಾಪನೆಯ ದಿನವನ್ನು ವಿಶ್ವ ಶೌಚಾಲಯ ದಿನ ಎಂದು ಘೋಷಿಸಲಾಯಿತು. ಅದರ ನಂತರ ನೈರ್ಮಲ್ಯದ ಅಗತ್ಯತೆಯನ್ನು ಮನಗಂಡು 2013 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ವಿಶ್ವ ಶೌಚಾಲಯ ದಿನವನ್ನು ಅಧಿಕೃತವಾಗಿ ಆಚರಿಸಲು ಘೋಷಿಸಿತು. ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ, ಜನರು ಬಯಲಿನಲ್ಲಿ ಮಲವಿಸರ್ಜನೆ ಮಾಡುವುದನ್ನು ತಡೆಯುವುದುದಾಗಿದೆ. ಬಯಲು ಮಲವಿಸರ್ಜನೆಯಿಂದ ಸೋಂಕುಗಳು, ಮತ್ತಿತರ ಮಾರಣಾಂತಿಕ ರೋಗಗಳು ಬರುವ ಅಪಾಯವಿದೆ. ಹಾಗಾಗಿ ಪ್ರಂಚದಾದ್ಯಂತ ಸ್ವಚ್ಛತೆ, ನೈರ್ಮಲ್ಯ, ಆರೋಗ್ಯ ಮತ್ತು ಸುರಕ್ಷತಾ ನೀತಿಗಳನ್ನು ಬಲಪಡಿಸಲು ಈ ದಿನವನ್ನು ಆಚರಿಸುವುದು ಮುಖ್ಯವಾಗಿದೆ.
ಇದನ್ನೂ ಓದಿ: ಅವಳ ಭೂಮಿ ಅವಳ ಹಕ್ಕು! ಈ ಬಗ್ಗೆ ನಿಮಗೆಷ್ಟು ಗೊತ್ತು?
ವಿಶ್ವ ಶೌಚಾಲಯ ದಿನದ ಆಚರಣೆಯ ಮಹತ್ವ:
ವಿಶ್ವ ಸಂಸ್ಥೆಯ ವರದಿಯ ಪ್ರಕಾರ, ವಿಶ್ವದ 4.2 ಮಿಲಿಯನ್ ಜನರು ಮೂಲಭೂತ ಸುರಕ್ಷಿತ ನೈರ್ಮಲ್ಯ ಸೇವೆಗಳಿಂದ ವಂಚಿತರಾಗಿದ್ದಾರೆ. ಭಾರತದಲ್ಲಿನ 2011 ರ ಜನಗಣತಿಯ ಪ್ರಕಾರ, ಹಳ್ಳಿಗಳಲ್ಲಿ 67 ಶೇಕಡಾದಷ್ಟು ಹಾಗೂ ನಗರಗಳಲ್ಲಿ 13% ಶೇಕಡಾದಷ್ಟು ಕುಟುಂಬಗಳು ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತಿವೆ. ಈ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ನೈರ್ಮಲ್ಯ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಭಾರತದಲ್ಲಿಯೂ ಸ್ವಚ್ಛತೆಗೆ ಸಂಬಂಧಿಸಿದ ಹಲವಾರು ಅಭಿಯಾನಗಳು ನಡೆಯುತ್ತಿವೆ. ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬ ವ್ಯಕ್ತಿಯು ಶೌಚಾಲಯವನ್ನು ಬಳಸುವುದು ಅತ್ಯಂತ ಮುಖ್ಯವಾಗಿದೆ. ಅದರೊಂದಿಗೆ ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಶೌಚಾಲಯದ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಶ್ವದ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಶೌಚಾಲಯ ದಿನವನ್ನು ಆಚರಿಸುವುದು ಮುಖ್ಯವಾಗಿದೆ.
ಇಂದಿಗೂ ವಿಶ್ವದ ಲಕ್ಷಾಂತರ ಜನರು ಶೌಚಾಲಯಗಳನ್ನು ಬಳಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ 2030 ರ ವೇಳೆಗೆ ಜಗತ್ತಿನ ಎಲ್ಲಾ ಜನರಿಗೆ ಶೌಚಾಲಯ ಸೌಲಭ್ಯವನ್ನು ಕಲ್ಪಸಬೇಕು ಎಂಬುದು ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: