ಇತ್ತೀಚಿನ ದಿನಗಳಲ್ಲಿ ವಿಶ್ವದೆಲ್ಲೆಡೆ ವೇಗನ್ ಲೈಫ್ಸ್ಟೈಲ್ ಕ್ರೇಜ್ ಹೆಚ್ಚುತ್ತಿದೆ. ಹಲವು ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರು ಕೂಡಾ ಶುದ್ಧ ಸಸ್ಯಾಹಾರಿ ಆಹಾರ ಪದ್ಧತಿಯ ಪಾಲನೆ ಮಾಡುತ್ತಿದ್ದಾರೆ. ಶುದ್ಧ ಸಸ್ಯಾಹಾರಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಕಡಿಮೆ ಮಾಡುವುದರ ಜೊತೆಗೆ ನಮ್ಮ ಆರೋಗ್ಯಕರವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು ಮತ್ತು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಹೀಗೆ ಶುದ್ಧ ಸಸ್ಯಾಹಾರಿ ಆಹಾರ ಪದ್ಧತಿಯ ಮಹತ್ವನ್ನು ಗಮನದಲ್ಲಿಟ್ಟುಕೊಂಡು ಸಸ್ಯ ಆಧಾರಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೇರೇಪಿಸಲು ಮತ್ತು ಪರಿಸರವನ್ನು ರಕ್ಷಿಸುವ ಜೊತೆಗೆ ಶುದ್ಧ ಸಸ್ಯಾಹಾರಿ ಆಹಾರಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ನವೆಂಬರ್ 1 ರಂದು ವಿಶ್ವ ಸಸ್ಯಾಹಾರಿ ದಿನವನ್ನು ಆಚರಿಸಲಾಗುತ್ತದೆ.
ವೆಜ್ ಮತ್ತು ವೇಗನ್ ಆಹಾರ ಒಂದೇ ಎಂದು ಹಲವರು ಭಾವಿಸುತ್ತಾರೆ. ಆದರೆ ಈ ಎರಡರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಸಸ್ಯಾಹಾರಿ (ವೇಗನ್) ಆಹಾರ ಪದ್ಧತಿಯು ಪ್ರಾಣಿಗಳಿಗೆ ಯಾವುದೇ ಹಾನಿ ಮಾಡದೆ ಸಸ್ಯ ಮೂಲದಿಂದ ಪಡೆದ ಆಹಾರ ಮತ್ತು ಉತ್ಪನ್ನಗಳ ಸೇವನೆಯನ್ನು ಒಳಗೊಂಡಿರುತ್ತದೆ.
ವೇಗನ್ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವ ಜನರು ಎಲ್ಲಾ ರೀತಿಯ ಪ್ರಾಣಿ ಮೂಲಗಳ ಉತ್ಪನ್ನಗಳ ಸೇವನೆಯನ್ನು ತಪ್ಪಿಸಬೇಕು. ಪ್ರಾಣಿ ಮೂಲಗಳಿಂದ ಲಭ್ಯವಿರುವ ಹಾಲು, ಮೊಸರು, ಚೀಸ್ ಮತ್ತು ಇತರ ಡೈರಿ ಉತ್ಪನ್ನಗಳನ್ನು ಸಹ ಸೇವನೆ ಮಾಡುವಂತಿಲ್ಲ. ವೇಗನ್ ಆಹಾರ ಪದ್ಧತಿಯು ಮುಖ್ಯವಾಗಿ ಹಣ್ಣುಗಳು, ತರಕಾರಿಗಳು ಮತ್ತು ಸಸ್ಯ ಮೂಲದ ಉತ್ಪನ್ನಗಳ ಸೇವನೆಯನ್ನು ಒಳಗೊಂಡಿರುತ್ತದೆ. ಈ ಶುದ್ಧ ಸಸ್ಯಾಹಾರಿ ಆಹಾರವು ಪೋಷಕಾಂಶಗಳಿಂದ ಸಮೃದ್ಧವಾದ್ದು, ಇದು ಜನರ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಆಹಾರ ಪದ್ಧತಿಯ ಪಾಲನೆಯಿಂದ ಅನೇಕ ಅಪಾಯಕಾರಿ ಕಾಯಿಲೆಗಳು ಬಾರದಂತೆ ತಡೆಯಬಹುದು.
ಪ್ರತಿ ವರ್ಷ ನವೆಂಬರ್ 1 ರಂದು ಪ್ರಪಂಚದಾದ್ಯಂತ ಸಸ್ಯಹಾರಿ ದಿನವನ್ನು ಆಚರಿಸಲಾಗುತ್ತದೆ. ವೇಗನ್ ಜೀವನಶೈಲಿಯನ್ನು ಅನುಸರಿಸಲು ಜನರನ್ನು ಪ್ರೇರೇಪಿಸಲು ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಹಿಂದಿನ ಇತಿಹಾಸವನ್ನು ನೋಡುವುದಾದರೆ, 1994 ರಲ್ಲಿ ಇಂಗ್ಲೇಂಡಿನಲ್ಲಿರುವ ದಿ ವೇಗನ್ ಸೊಸೈಟಿಯ ಆಗಿನ ಅಧ್ಯಕ್ಷರಾದ ಲೂಯಿಸ್ ವಾಲಿಸ್ ಅವರು ಈ ಸಂಸ್ಥೆಯ ಸ್ಥಾಪನೆಯ 50 ನೇ ವಾರ್ಷಿಕೋತ್ಸವದ ನೆನಪಿಗಾಗಿ ವಿಶ್ವ ಸಸ್ಯಾಹಾರಿ ದಿನದ ಆಚರಣೆಯನ್ನು ಪ್ರಾರಂಭಿಸಿದರು. ಅಂದಿನಿಂದ ಪ್ರತಿವರ್ಷ ನವೆಂಬರ್ 1 ರಂದು ವಿಶ್ವದಾದ್ಯಂತ ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಆರೋಗ್ಯ, ಸೌಂದರ್ಯಕ್ಕೆರಡೂ ಮೊಟ್ಟೆಯಿಂದ ಆಗುವ ಪ್ರಯೋಜನ ಒಂದೆರಡಲ್ಲ!
ಶುದ್ಧ ಸಸ್ಯಾಹಾರಿ ಆಹಾರವು ಹೆಚ್ಚು ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ದೇಹಕ್ಕೆ ಪ್ರಯೋಜನಕಾರಿಯಾದ ಹಲವು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಈ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಂ, ಮೆಗ್ನೇಸಿಯಂ, ಫೋಲೇಟ್, ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇದ್ದು, ಈ ಈ ಎಲ್ಲಾ ಖನಿಜಗಳು ಮತ್ತು ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇವುಗಳ ನಿಯಮಿತ ಸೇವನೆಯಿಂದ ಗಂಭೀರ ಕಾಯಿಲೆಗಳು ಬಾರದಂತೆ ತಡೆಯಬಹುದು. ಅಲ್ಲದೆ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯನ್ನು ವೇಗನ್ ಆಹಾರ ಪದ್ಧತಿಯನ್ನು ಪಾಲಿಸುವ ಮೂಲಕ ಗುಣಪಡಿಸಬಹುದು ಎಂದು ಹೇಳಲಾಗುತ್ತದೆ.
ಹೀಗೆ ವೇಗನ್ ಆಹಾರವನ್ನು ಸೇವಿಸುವ ಮೂಲಕ ಪ್ರಾಣಿಗಳ ಮೇಲಿನ ಹಿಂಸೆಯನ್ನು ತಡೆಯಲು, ಪರಿಸರವನ್ನು ಸಂರಕ್ಷಿಸಲು ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಶ್ವ ಸಸ್ಯಾಹಾರಿ ದಿನವನ್ನು ಆಚರಿಸಲಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ