ಮೊದಲೆಲ್ಲ ಮಗುವಿಗೆ ಹುಟ್ಟಿದಾಗಿನಿಂದಲೇ ಆಗಾಗ ಹಸುವಿನ ಹಾಲು ಕೊಡುತ್ತಿದ್ದರು. ಆದರೆ, ಈಗ ಮಕ್ಕಳತಜ್ಞರು 7 ತಿಂಗಳವರೆಗೂ ತಾಯಿಯ ಎದೆಹಾಲನ್ನು ಬಿಟ್ಟು ಬೇರೆ ಯಾವ ಆಹಾರವನ್ನೂ ನೀಡಬಾರದು ಎನ್ನುತ್ತಾರೆ. ಒಂದುವೇಳೆ ತಾಯಿಯ ಎದೆಹಾಲು ಕಡಿಮೆಯಾದರೆ ಫಾರ್ಮುಲಾ ಮಿಲ್ಕ್ ಅಥವಾ ಪ್ಯೂರಿ, ಮಣ್ಣಿಗಳನ್ನು ನೀಡಬಹುದೇ ವಿನಃ ಹಸುವಿನ ಹಾಲು ಅಥವಾ ಮೇಕೆಯ ಹಾಲು ನೀಡಬಾರದು ಎಂದು ಪೋಷಕರಿಗೆ ಸೂಚಿಸುತ್ತಾರೆ. ಇದಕ್ಕೆ ಕಾರಣವೂ ಇದೆ.
ಹಿಂದಿನ ಕಾಲದಲ್ಲಿ ತಾಯಂದಿರು ಮಗುವಿಗೆ 2 ವರ್ಷವಾಗುವವರೆಗೂ ಹೊಟ್ಟೆತುಂಬ ಎದೆಹಾಲು ಕೊಡುವಷ್ಟು ಎದೆಹಾಲು ಉತ್ಪಾದನೆಯಾಗುತ್ತಿತ್ತು. ಆದರೆ, ಈಗೀಗ ಒತ್ತಡ, ಹಾರ್ಮೋನುಗಳ ಬದಲಾವಣೆ, ಆಹಾರ ಪದ್ಧತಿ ಹೀಗೆ ನಾನಾ ಕಾರಣಗಳಿಂದ 6 ತಿಂಗಳ ಬಳಿಕ ಎದೆಹಾಲಿನ ಉತ್ಪಾದನೆ ಕಡಿಮೆಯಾಗುತ್ತಾ ಹೋಗುತ್ತದೆ. ಅದರಲ್ಲೂ ಬಹುತೇಕ ತಾಯಂದಿರು ಉದ್ಯೋಗಿಗಳಾಗಿರುವುದರಿಂದ ಎದೆಹಾಲಿನ ಬದಲು ಫಾರ್ಮುಲಾ ಮಿಲ್ಕ್ ಅನ್ನೇ ಮಗುವಿಗೆ ಅಭ್ಯಾಸ ಮಾಡುತ್ತಾರೆ. ಇದು ಕೂಡ ಎದೆಹಾಲು ಕಡಿಮೆಯಾಗಲು ಮುಖ್ಯ ಕಾರಣ. ಇಂತಹ ಸಮಯದಲ್ಲಿ ಅಪ್ಪಿತಪ್ಪಿಯೂ ಮಗುವಿಗೆ ಹಸುವಿನ ಹಾಲು ಅಥವಾ ಪ್ಯಾಕೆಟ್ ಹಾಲು ಕೊಡಬೇಡಿ.
ಮಗುವಿಗೆ ಏಕೆ ಹಸುವಿನ ಹಾಲು ಕೊಡಬಾರದು?:
ವೈದ್ಯರ ಪ್ರಕಾರ, 1 ವರ್ಷಕ್ಕಿಂತ ಮೊದಲು ಶಿಶುಗಳಿಗೆ ಹಸುವಿನ ಹಾಲು ನೀಡುವುದು ಸೂಕ್ತವಲ್ಲ. ಆ ಬಳಿಕವೂ ಪ್ಯಾಕೆಟ್ ಹಾಲು ಕೊಡದಿರುವುದೇ ಉತ್ತಮ. ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದು ನಿಜವಾದರೂ ಹಳ್ಳಿಯ ದೇಸಿ ಹಸುಗಳು ಬೆಟ್ಟ-ಗುಡ್ಡ ತಿರುಗಿ ಹುಲ್ಲು, ಸೊಪ್ಪುಗಳನ್ನೆಲ್ಲ ತಿಂದು ಬರುವುದರಿಂದ ಆ ಹಾಲು ಮಗುವಿಗೆ ಕೊಡಲು ಯೋಗ್ಯ. ಆದರೆ, ಈಗ ಜರ್ಸಿ ದನಗಳಿಗೆ ಮನೆಯಲ್ಲೇ ಕಟ್ಟಿಹಾಕಿ ಹಿಂಡಿ, ಬೂಸಾಗಳಂತಹ ಆಹಾರ ನೀಡಲಾಗುತ್ತದೆ. ಈ ಆಹಾರ ತಿಂದ ಹಸುಗಳು ನೀಡುವ ಹಾಲು ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ.
ಇದನ್ನೂ ಓದಿ: ಜಾಗಿಂಗ್, ವ್ಯಾಯಾಮ ಶುರು ಮಾಡುವ ಮುನ್ನ ಈ 10 ಟೆಸ್ಟ್ಗಳನ್ನು ಮಾಡಿಸಲು ಮರೆಯದಿರಿ
1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳಿಗೆ ಹಸುವಿನ ಹಾಲನ್ನು ನೀಡುವುದು ಒಳ್ಳೆಯದಲ್ಲ. ಏಕೆಂದರೆ, ಹಸುವಿನ ಹಾಲು ಮಗುವಿಗೆ ಬೇಕಾದ ಪೋಷಕಾಂಶಗಳನ್ನು ಒದಗಿಸುವುದಿಲ್ಲ. ಅಲ್ಲದೆ, ನಿಮ್ಮ ಮಗುವಿಗೆ ಹಸುವಿನ ಹಾಲಿನಲ್ಲಿರುವ ಪ್ರೋಟೀನ್ ಮತ್ತು ಕೊಬ್ಬನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ನಿಮಗೆ ಕೊಡಲೇಬೇಕೆಂದರೆ, 1 ವರ್ಷದ ನಂತರ ಮಕ್ಕಳಿಗೆ ಹಸುವಿನ ಹಾಲನ್ನು ನೀಡಬಹುದು. ಆದರೆ, ಅದಕ್ಕೂ ಮುನ್ನ ನಿಮ್ಮ ಮಕ್ಕಳತಜ್ಞರ ಬಳಿ ಸಲಹೆ ಪಡೆಯಿರಿ.
ಕೆಲವು ಮಕ್ಕಳಿಗೆ ಹಸುವಿನ ಹಾಲಿನಲ್ಲಿರುವ ಕೊಬ್ಬಿನಾಂಶವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವು ಶಿಶುಗಳಿಗೆ ಹೊಟ್ಟೆ ನೋವು ಅಥವಾ ಸೆಳೆತ, ವಾಕರಿಕೆ ಮತ್ತು ವಾಂತಿ, ಅತಿಸಾರ ಸಮಸ್ಯೆಗಳು ಉಂಟಾಗಬಹುದು. ಹಾಲಿನ ತೀವ್ರವಾದ ಅಲರ್ಜಿಯಿಂದ ಕರುಳಿನಲ್ಲಿ ರಕ್ತಸ್ರಾವ ಕೂಡ ಉಂಟಾಗುವ ಸಾಧ್ಯತೆ ಇರುತ್ತದೆ. ಅದು ರಕ್ತಹೀನತೆಗೆ ಕಾರಣವಾಗಬಹುದು.
ಇದನ್ನೂ ಓದಿ: World Smile Day 2023: ಇಂದು ವಿಶ್ವ ನಗು ದಿನಾಚರಣೆ; ಈ ದಿನ ಇತಿಹಾಸ, ವಿಶೇಷತೆಯೇನು?
ಸಣ್ಣ ಕರುಳು ಲ್ಯಾಕ್ಟೇಸ್ ಕಿಣ್ವವನ್ನು ಸಾಕಷ್ಟು ಮಾಡದಿದ್ದಾಗ ಲ್ಯಾಕ್ಟೋಸ್ ಅಸಹಿಷ್ಣುತೆ ಉಂಟಾಗುತ್ತದೆ. ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವ ಮಗುವಿಗೆ ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಇದು ಹಾಲು ಮತ್ತು ಇತರ ಡೈರಿ ಉತ್ಪನ್ನಗಳಲ್ಲಿ ಕಂಡುಬರುವ ಒಂದು ರೀತಿಯ ಸಕ್ಕರೆ ಅಂಶವಾಗಿದೆ. ಇದು ಅತಿಸಾರಕ್ಕೆ ಕಾರಣವಾಗಬಹುದು. 1 ವರ್ಷದ ನಂತರ ಮಕ್ಕಳ ಜೀರ್ಣಕ್ರಿಯೆ ಸುಧಾರಿಸುವುದರಿಂದ ಹಾಲನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಹೊಂದುತ್ತಾರೆ. ಹೀಗಾಗಿ, ಮಗುವಿಗೆ ಹಸುವಿನ ಹಾಲು ನೀಡುವ ಮುನ್ನ ಎಚ್ಚರ ವಹಿಸುವುದು ಅಗತ್ಯ.
ಹಾಲಿನಿಂದ ಅಲರ್ಜಿಯಾಗಬಹುದು:
ಎದೆ ಹಾಲು ಅಥವಾ ಫಾರ್ಮುಲಾ ಮಿಲ್ಕ್ನಲ್ಲಿ ಪೋಷಕಾಂಶಗಳು ಇರುತ್ತವೆ. 1 ವರ್ಷಕ್ಕಿಂತ ಮೇಲ್ಪಟ್ಟ ಮಗುವಿಗೆ ಗಟ್ಟಿ ಆಹಾರ ನೀಡಬಹುದು. ಕೆಲವು ಮಕ್ಕಳಿಗೆ ಪ್ಯಾಕೆಟ್ ಹಾಲಿನಿಂದ ಅಲರ್ಜಿ ಉಂಟಾಗುತ್ತದೆ. ಹೀಗಾಗಿ, ಹಸುವಿನ ಹಾಲು ನೀಡುವ ಮೊದಲು ನಿಮ್ಮ ಮಕ್ಕಳತಜ್ಞರನ್ನು ಭೇಟಿಯಾಗಿ, ಅವರ ಸಲಹೆ ಪಡೆಯುವುದು ಉತ್ತಮ. ಹಸುವಿನ ಹಾಲಿನ ಬದಲು ಮಗುವಿಗೆ ರಾಗಿ ಹಾಲು, ಸೋಯಾ ಹಾಲು ನೀಡಬಹುದು.
ಅಲ್ಲದೆ, ಹಸುವಿನ ಹಾಲನ್ನು ನೀಡುವುದರಿಂದ ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆ ಕಂಡುಬರುತ್ತದೆ. ಇದರಿಂದ ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಕಬ್ಬಿಣದ ಪ್ರಮಾಣವನ್ನು ಪಡೆಯಲು ಶಿಶುವಿಗೆ ಕಷ್ಟವಾಗುತ್ತದೆ, ರಕ್ತಹೀನತೆ ಉಂಟಾಗುತ್ತದೆ. ಹಸುವಿನ ಹಾಲಿನಿಂದ ಮಗುವಿಗೆ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ಕ್ಯಾಸೀನ್ ಅಂಶ ಸಿಗುತ್ತದೆ. ಕ್ಯಾಲ್ಸಿಯಂ ಮತ್ತು ಕ್ಯಾಸಿನ್ ಎರಡೂ ಆಹಾರದ ನಾನ್ಹೀಮ್ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಪ್ರತಿಬಂಧಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ