World Lion Day 2025: ವಿಶ್ವ ಸಿಂಹ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ
ಸಿಂಹಗಳು ಕಾಡಿನ ರಾಜ ಮಾತ್ರವಲ್ಲ ಅವುಗಳು ಪ್ರಕೃತಿಯ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಇಂದು ನಿರಂತರವಾಗಿ ಸಿಂಹಗಳ ಸಂಖ್ಯೆ ಕ್ಷೀಣಿಸುತ್ತಿವೆ. ಆದ್ದರಿಂದ ಸಿಂಹಗಳು ಮತ್ತು ಅವುಗಳ ಆವಾಸಸ್ಥಾನವನ್ನು ರಕ್ಷಣೆ ಮಾಡಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಹೇಗೆ ಆರಂಭವಾಯಿತು ಎಂಬುದನ್ನು ನೋಡೋಣ ಬನ್ನಿ.

ಗತ್ತು ರಾಜ ಗಾಂಭೀರ್ಯಕ್ಕೆ ಮತ್ತೊಂದು ಹೆಸರೇ ಕಾಡಿನ ರಾಜ ಸಿಂಹ (Lion). ಪ್ಯಾಂಥೆರಾ ಲಿಯೋ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಈ ಸಿಂಹಗಳು ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿಯೂ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಇಂದು ಇವುಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಹೌದು ಆಧುನೀಕರಣ, ಮನುಷ್ಯನ ಸ್ವಾರ್ಥದ ಕಾರಣದಿಂದಾಗಿ ಸಿಂಹ, ಹುಲಿ ಸೇರಿದಂತೆ ಅದೆಷ್ಟೋ ಜೀವಿಗಳು ಅಳಿವಿನಂಚಿಗೆ ತಲುಪಿವೆ. ಅಕ್ರಮ ಬೇಟೆ, ಅರಣ್ಯ ನಾಶ, ಆವಾಸಸ್ಥಾನಗಳ ನಾಶ ಇವೆಲ್ಲದರ ಕಾರಣದಿಂದಾಗಿ ಕಾಡಿನ ರಾಜನ ಸಂತತಿ ಕ್ಷೀಣಿಸುತ್ತಿದೆ. ಹಾಗಾಗಿ ಸಿಂಹಗಳು ಮತ್ತು ಅವುಗಳ ಆವಾಸಸ್ಥಾನವನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪ್ರತಿವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹ ದಿನವನ್ನು (World Lion Day) ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ವಿಶ್ವ ಸಿಂಹ ದಿನದ ಆಚರಣೆ ಯಾವಾಗ ಪ್ರಾರಂಭವಾಯಿತು?
ವಿಶ್ವ ಸಿಂಹ ದಿನದ ಆಚರಣೆ 2013 ರಲ್ಲಿ ಪ್ರಾರಂಭವಾಯಿತು. ಸಿಂಹಗಳ ಉಳಿವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅವುಗಳ ರಕ್ಷಣೆಗಾಗಿ ಸಿಂಹ ಮತ್ತು ಹುಲಿಗಳ ರಕ್ಷಣೆಗಾಗಿ ಕೆಲಸ ಮಾಡುವ ಸಂಸ್ಥೆಯಾದ ಬಿಗ್ ಕ್ಯಾಟ್ಸ್ ರೆಸ್ಕ್ಯೂ ಸಂಸ್ಥೆಯ ಸಂಸ್ಥಾಪಕರಾದ ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ ಅವರು ನ್ಯಾಷನಲ್ ಜಿಯೋಗ್ರಾಫಿಕ್ ಸಹಭಾಗಿತ್ವದಲ್ಲಿ ಸಿಂಹ ದಿನದ ಆಚರಣೆಯನ್ನು ಪ್ರಾರಂಭಿಸಿದರು. ಕ್ಷೀಣಿಸುತ್ತಿರುವ ಸಿಂಹಗಳ ಸಂಖ್ಯೆ ಮತ್ತು ಅವುಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಮುಖು ಉದ್ದೇಶವಾಗಿದೆ.
ವಿಶ್ವ ಸಿಂಹ ದಿನವನ್ನು ಏಕೆ ಆಚರಿಸಲಾಗುತ್ತದೆ?
ಸಿಂಹಗಳು ತಮ್ಮ ಗತ್ತು ಗಾಂಭೀರ್ಯಕ್ಕೆ ಹೆಸರುವಾಸಿಯಾದ ಪ್ರಾಣಿಗಳಾಗಿವೆ. ಆದರೆ ಇಂದು ಅಕ್ರಮ ಬೇಟೆ, ಕಾಡುಗಳ ನಾಶದಿಂದಾಗಿ ಸಿಂಹಗಳ ಸಂತತಿ ಕ್ಷೀಣಿಸುತ್ತಿದೆ. ಆಹಾರ ಸರಪಳಿ, ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಿಂಹಗಳು ಈ ಭೂಮಿಯ ಮೇಲೆ ಇರುವುದು ಬಹಳ ಮುಖ್ಯ. ಆದ್ದರಿಂದ ಸಿಂಹಗಳನ್ನು ರಕ್ಷಿಸುವ, ಅವುಗಳ ಅಸ್ತಿತ್ವವನ್ನು ಉಳಿಸುವ ಹಾಗೂ ಅಭಯಾರಣ್ಯಗಳನ್ನು ಸಂರಕ್ಷಿಸುವ ಉದ್ದೇಶದಿಂದ ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಹುಲಿ ಸಂರಕ್ಷಣೆ ನಮ್ಮೆಲ್ಲರ ಹೊಣೆ; ಹುಲಿ ದಿನದ ಆಚರಣೆಯ ಬಗ್ಗೆ ನಿಮ್ಗೊತ್ತಾ?
ಇನ್ನೂ ವಿಶ್ವ ಸಿಂಹ ದಿನವನ್ನು ಜಾಗೃತಿ ಅಭಿಯಾನಗಳು, ನಿಧಿಸಂಗ್ರಹಣೆ ಕಾರ್ಯಕ್ರಮಗಳು ಮತ್ತು ಶಾಲೆಗಳು, ಸಮುದಾಯಗಳು ಮತ್ತು ಸಂಸ್ಥೆಗಳಿಂದ ಸಿಂಹ ಸಂರಕ್ಷಣೆಯ ಕುರಿತು ಚರ್ಚೆಗಳು, ಕಾರ್ಯಾಗಾರಗಳು ಮತ್ತು ಪ್ರದರ್ಶನಗಳು ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತದೆ. ಮತ್ತು ಈ ದಿನದ ಮಹತ್ವದ ಬಗ್ಗೆ ಪ್ರಚಾರ ಮಾಡಲು ಸಾಮಾಜಿಕ ಮಾಧ್ಯಮಗಳಲ್ಲಿ ವಿಶೇಷ ಅಭಿಯಾನಗಳನ್ನು ಸಹ ನಡೆಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








