World Mosquito Day 2024 : ಸೊಳ್ಳೆಗಳು ನಿಮ್ಮನ್ನೇ ಪದೇ ಪದೇ ಕಚ್ಚುತ್ತಿದೆಯೇ, ಇದೆ ಕಾರಣವಂತೆ
ಸೈಲೆಂಟ್ ಆಗಿ ರಕ್ತವನ್ನು ಹೀರುವ ಸೊಳ್ಳೆ ಗಳು ಮನುಷ್ಯರಿಗೆ ನೀಡುವ ತೊಂದರೆ ಒಂದೆರಡಲ್ಲ. ಗುಯ್ ಗುಯ್ ಎನ್ನುತ್ತಾ ರಕ್ತ ಹೀರುವ ಈ ಜೀವಿ ಸಣ್ಣದಾದರೂ ಇದರಿಂದ ಆಗುವ ತೊಂದರೆಯೂ ದೊಡ್ಡ ಮಟ್ಟದು. ಈ ಸೊಳ್ಳೆಯಿಂದ ಆಗುವ ಅಪಾಯ, ಹರಡುವ ರೋಗ ಹಾಗೂ ನಮ್ಮ ಮನೆಯ ಸುತ್ತಮುತ್ತಲಿನ ಸ್ಥಳಗಳ ನೈರ್ಮಲ್ಯದ ಅಗತ್ಯದ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಸೊಳ್ಳೆಗಳಿಗೂ ಒಂದು ದಿನವನ್ನು ಮೀಸಲಿಡಲಾಗಿದೆ. ಪ್ರತಿ ವರ್ಷ ಆಗಸ್ಟ್ 20 ರಂದು ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ.
ಸಂಜೆಯಾಗುತ್ತಿದ್ದಂತೆ ಮನೆಯೊಳಗೆ ನುಗ್ಗಿ ರಕ್ತವನ್ನು ಹೀರುವ ಸೊಳ್ಳೆಗಳನ್ನು ನಿರ್ಲಕ್ಷ್ಯ ಮಾಡುವುದರಿಂದ ಆಗುವ ಪರಿಣಾಮಗಳೇ ಬಹಳನೇ ದೊಡ್ಡದು. ಹೀಗಾಗಿ ಈ ಸೊಳ್ಳೆಗಳು ಮಲೇರಿಯಾ, ಚಿಕನ್‌ಗುನ್ಯಾ, ಡೆಂಗ್ಯೂ, ಝೀಕಾ ವೈರಸ್, ಹಳದಿ ಜ್ವರ ಹೀಗೆ ಹಲವು ರೋಗಗಳಿಗೂ ಕಾರಣವಾಗಬಹುದು. ಈ ಸೊಳ್ಳೆಗಳಿಂದ ಎದುರಾಗುವ ಅಪಾಯ ಹಾಗೂ ರೋಗಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ 20 ರಂದು ವಿಶ್ವ ಸೊಳ್ಳೆ ದಿನವನ್ನು ಆಚರಣೆ ಮಾಡಲಾಗುತ್ತದೆ.
ವಿಶ್ವ ಸೊಳ್ಳೆ ದಿನದ ಇತಿಹಾಸ ಹಾಗೂ ಮಹತ್ವ
ಭಾರತೀಯ ಮೂಲದ ಬ್ರಿಟನ್ ವೈದ್ಯ ರೊನಾಲ್ಡ್ ರಾಸ್ ಎನ್ನುವ ವ್ಯಕ್ತಿಯೂ 1897ರ ಆಗಸ್ಟ್ 20 ರಂದು ಮಲೇರಿಯಾ ಹರಡಲು ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯೇ ಕಾರಣ ಎಂಬ ವಿಷಯವನ್ನು ಕಂಡು ಹಿಡಿದರು. ರೊನಾಲ್ಡ್ ರಾಸ್ 1902 ರಲ್ಲೇ ವಿಶ್ವ ಸೊಳ್ಳೆ ದಿನ ಎಂದು ಮೊದಲ ಬಾರಿಗೆ ಘೋಷಿಸಿದರು. ಅವರ ಈ ಸಂಶೋಧನೆಯ ನೆನಪಾಗಿಯೂ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ. ಸೊಳ್ಳೆಗಳಿಂದ ಎದುರಾಗುವ ಅಪಾಯ ಮತ್ತು ರೋಗಗಳ ಕುರಿತು ಜಾಗೃತಿಯನ್ನು ಮೂಡಿಸಲು ಈ ದಿನವು ಮಹತ್ವಪೂರ್ಣವಾಗಿದೆ. ಹೀಗಾಗಿ ಈ ದಿನದಂದು ಜಾಗೃತಿ ಅಭಿಯಾನಗಳು ಸೇರಿದಂತೆ ಇನ್ನಿತ್ತರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಇದನ್ನೂ ಓದಿ: ಮನೆಯಲ್ಲಿ ಮಹಿಳೆಯರು ಅನುಸರಿಸುವ ಆರು ಅಭ್ಯಾಸಗಳಿಂದ ಹಣದ ಕೊರತೆ, ಸಮಸ್ಯೆಗಳು ಹೆಚ್ಚಾಗುತ್ತವೆ!
ಸೊಳ್ಳೆಗಳ ಬಗೆಗಿನ ಆಸಕ್ತಿದಾಯಕ ವಿಷಯಗಳಿವು
- ಸೊಳ್ಳೆಗಳು ಪದೇ ಪದೇ ಒಬ್ಬ ವ್ಯಕ್ತಿಗೆ ಕಚ್ಚುವುದನ್ನು ನೋಡಿರಬಹುದು. ಆದರೆ ಈ ಸೊಳ್ಳೆಗಳು ಕಾರ್ಬನ್ ಡೈಆಕ್ಸೈಡ್, ಚರ್ಮದ ವಾಸನೆ, ದೇಹದ ಉಷ್ಣಾಂಶದಿಂದ ಪದೇ ಪದೇ ಅದೇ ವ್ಯಕ್ತಿಯನ್ನು ಗುರುತಿಸಿ ಕಚ್ಚುತ್ತವೆಯಂತೆ.
- ಸೊಳ್ಳೆಗಳು ತಮ್ಮ ದೇಹದ ತೂಕದ ಮೂರು ಪಟ್ಟು ರಕ್ತವನ್ನು ಕುಡಿಯುತ್ತವೆ. ಈ ಸಣ್ಣ ಜೀವಿಯ ತೂಕವು 6 ಮಿಲಿಗ್ರಾಂಗಳಷ್ಟಿದ್ದು, ಒಮ್ಮೆ ಕಚ್ಚಿದಾಗ 1 ರಿಂದ 10 ಮಿಲಿಗ್ರಾಂ ರಕ್ತವನ್ನು ಹೀರಿಕೊಳ್ಳುತ್ತದೆ.
- ಸಣ್ಣ ಕೀಟವಾದ ಈ ಸೊಳ್ಳೆಗಳಿಗೆ ಹಲ್ಲುಗಳಿಲ್ಲ, ಬಾಯಿಯಲ್ಲಿ ತೀಕ್ಷ್ಣವಾದ ಕುಟುಕನ್ನು ಸೇರಿಸುವ ಮೂಲಕ ರಕ್ತವನ್ನು ಹೀರುತ್ತವೆ. ಮನುಷ್ಯನ ರಕ್ತವೇ ಈ ಸೊಳ್ಳೆಗಳ ಆಹಾರ.
- ಗಂಡು ಸೊಳ್ಳೆಗಳು ಸಸ್ಯ ಹಾಗೂ ಹೂವಿನ ರಸ ಸೇವಿಸಿ ತನ್ನ ಜೀವನ ಸಾಗಿಸುತ್ತವೆ. ಹೀಗಾಗಿ ಈ ಸೊಳ್ಳೆಗಳು ಆಹಾರಕ್ಕಾಗಿ ಮನುಷ್ಯನ ರಕ್ತ ಹೀರುವುದು ಕಡಿಮೆ.
- ಮನುಷ್ಯನಿಗೆ ಕಚ್ಚುವ ಹೆಚ್ಚಿನ ಸೊಳ್ಳೆಗಳು ಹೆಣ್ಣೇ ಆಗಿರುತ್ತದೆ. ಈ ಹೆಣ್ಣು ಸೊಳ್ಳೆಗಳಿಗೆ ಸಂತಾನೋತ್ಪತ್ತಿಗಾಗಿ ರಕ್ತದ ಅಗತ್ಯವಾಗಿ ಬೇಕು. ಮೊಟ್ಟೆ ಇಡಲು ಮತ್ತು ಮೊಟ್ಟೆಗಳನ್ನು ಫಲವತ್ತಾಗಿಸಲು ರಕ್ತವು ಹೆಚ್ಚು ಬೇಕಾದ ಕಾರಣ ಮನುಷ್ಯರನ್ನು ಕಚ್ಚಿ ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುತ್ತದೆ.
- ಹೆಣ್ಣು ಸೊಳ್ಳೆಗಳಿಗೆ ಸಂತಾನೋತ್ಪತ್ತಿ ಮಾಡಲು ಕೇವಲ ಒಂದು ಚಮಚದಷ್ಟು ನೀರಿದ್ದರೆ ಸಾಕಂತೆ.
- ರೋಮನ್ ಸಾಮ್ರಾಜ್ಯವು ಪತನವಾದದ್ದು ಈ ಸೊಳ್ಳೆಗಳಿಂದ ಎಂಬುದನ್ನು ಬಹುತೇಕರಿಗೆ ತಿಳಿದಿಲ್ಲ. ಆಫ್ರಿಕಾದಿಂದ ಮಲೇರಿಯಾ ಕಾಯಿಲೆಯೂ ಯುರೋಪ್ ಖಂಡದ ರೋಮ್‌ಗೆ ಹರಡಿತ್ತು. ಇದರಿಂದ ಅನೇಕ ಜನರು ಸಾವನ್ನಪ್ಪಿದರು. ಮಲೇರಿಯಾ ರೋಗಕ್ಕಿದ್ದ ಹೆಸರು ರೋಮನ್ ಫಿವರ್.
- ಸೊಳ್ಳೆಗಳು ಕಪ್ಪು ಬಣ್ಣಗಳಂತಹ ಗಾಢ ಬಣ್ಣಗಳಿಗೆ ಹೆಚ್ಚು ಆಕರ್ಷಿತರಾಗುತ್ತವೆ. ಈ ಗಾಢ ವರ್ಣಗಳು ಹೆಚ್ಚು ಶಾಖವನ್ನು ಹೀರಿಕೊಳ್ಳುತ್ತವೆ. ಹೀಗಾಗಿ ಈ ಬಣ್ಣದ ಬಟ್ಟೆ ಧರಿಸಿದವರಿಗೆ ಹೆಚ್ಚು ಕಚ್ಚುತ್ತದೆ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ