
ಸೊಳ್ಳೆಗಳು (Mosquito) ನೋಡಲು ಸಣ್ಣದಾಗಿದ್ದರೂ, ಇವುಗಳಿಗೆ ಮನುಷ್ಯನ ಆರೋಗ್ಯವನ್ನೇ ಬುಡಮೇಲು ಮಾಡುವ ಸಾಮರ್ಥ್ಯವಿದೆ. ಹೌದು ಸೊಳ್ಳೆಗಳು ತುಂಬಾನೇ ಡೇಂಜರ್. ಮನುಷ್ಯನ ರಕ್ತ ಹೀರುವ ಸೊಳ್ಳೆಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಇವು ಪ್ರತಿವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಸಾವುಗಳಿಗೆ ಕಾರಣವಾಗುತ್ತದೆ. ಈ ಪರಾವಲಂಬಿ ಜೀವಿಗಳು ಡೆಂಗ್ಯೂ, ಮಲೇರಿಯಾ, ಚಿಕನ್‌ಗುನ್ಯಾದಂತಹ ಮಾರಕ ಕಾಯಿಲೆಗಳನ್ನು ಹರಡುತ್ತವೆ. ಇಂತಹ ಕಾಯಿಲೆಗಳಿಗೆ ತುತ್ತಾಗಿ ಅದೆಷ್ಟೋ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಮಲೇರಿಯಾ ಹಾಗೂ ಸೊಳ್ಳೆಗಳಿಂದ ಹರಡುವ ಇನ್ನಿತರ ರೋಗಗಳನ್ನು ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಆಗಸ್ಟ್ 20 ರಂದು ವಿಶ್ವ ಸೊಳ್ಳೆ ದಿನವನ್ನು (World Mosquito Day) ಆಚರಿಸಲಾಗುತ್ತದೆ. ಈ ಆಚರಣೆಯ ಇತಿಹಾಸ ಮತ್ತು ಮಹತ್ವದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ದಿನದ ಆಚರಣೆಯನ್ನು ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್ 1930 ರಲ್ಲಿ ಪ್ರಾರಂಭಿಸಿತು. ಇದರ ಹಿನ್ನೆಲೆಯನ್ನು ನೋಡುವುದಾದರೆ 1897 ರ ವೇಳೆಯಲ್ಲಿ ಬ್ರಿಟಿಷ್ ವೈದ್ಯ ರೊನಾಲ್ಡ್ ರಾಸ್ ಸೊಳ್ಳೆಗಳು ಮತ್ತು ಅವುಗಳಿಂದ ಹರಡುವ ಮಾರಕ ಕಾಯಿಲೆಗಳ ಕುರಿತು ಅಧ್ಯಯನವನ್ನು ಮಾಡಲಾರಂಭಿಸಿದರು. ಹಾಗೂ 1897 ರ ಆಗಸ್ಟ್ 20 ರಂದು ಹೆಣ್ಣು ಅನಾಫಿಲಿಸ್ ಸೊಳ್ಳೆ ಕಡಿತದಿಂದ ಮನುಷ್ಯರಿಗೆ ಮಲೇರಿಯಾ ಕಾಯಿಲೆ ಹರಡುತ್ತದೆ ಎಂಬ ಮಹತ್ವದ ಸಂಗತಿಯನ್ನು ಅರು ಕಂಡು ಹಿಡಿದರು. ಅವರ ಈ ಆವಿಷ್ಕಾರವು ಮಲೇರಿಯಾ ರೋಗದ ಬಗ್ಗೆ ಜಾಗೃತಿಯನ್ನು ಮೂಡಿಸಲು ಕಾರಣವಾಯಿತು. ಈ ಮಹತ್ವದ ಆವಿಷ್ಕಾರಕ್ಕಾಗಿ ಸರ್ ರೊನಾಲ್ಡ್ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಸಹ ನೀಡಲಾಯಿತು. ಜೊತೆಗೆ ಸರ್ ರೊನಾಲ್ಡ್ ಮತ್ತು ಅವರ ತಂಡದ ಈ ಮಹತ್ವದ ಸಂಶೋಧನೆಯನ್ನು ಶ್ಲಾಘಿಸಿಲು ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್ ವಿಶ್ವ ಸೊಳ್ಳೆ ದಿನದ ಆಚರಣೆಯನ್ನು ಪ್ರಾರಂಭಿಸಿತು. ಈ ದಿನ ಸೊಳ್ಳೆಗಳಿಂದ ಹರಡುವ ಮಾರಣಾಂತಿಕ ಕಾಯಿಲೆಗಳು ಹಾಗೂ ಅದರ ತಡೆಗಟ್ಟುವಿಕೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿಯನ್ನು ಮೂಡಿಸಲಾಗುತ್ತದೆ.
ವಿಶ್ವ ಸೊಳ್ಳೆ ದಿನದ ಉದ್ದೇಶವೆಂದರೆ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ವಿವಿಧ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ, ವೈದ್ಯಕೀಯ ಸೌಲಭ್ಯಗಳು ಎಷ್ಟೇ ಮುಂದುವರೆದಿದ್ದರೂ, ಸೊಳ್ಳೆಗಳಿಂದ ಹರಡುವ ಮಲೇರಿಯಾದಂತಹ ಕಾಯಿಲೆಗಳು ಇಂದಿಗೂ ಮನುಷ್ಯರನ್ನು ಬಲಿ ತೆಗೆದುಕೊಳ್ಳುತ್ತಿವೆ. ಹಾಗಾಗಿ ಸೊಳ್ಳೆಗಳ ಸಂಖ್ಯೆಯನ್ನು ನಿಯಂತ್ರಿಸಲು, ವಿವಿಧ ರೀತಿಯ ಸೊಳ್ಳೆಗಳು ಮತ್ತು ಅವುಗಳ ಕಡಿತದಿಂದ ಉಂಟಾಗುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಈ ದಿನ ಮಾಡಲಾಗುತ್ತದೆ.
ಇದನ್ನೂ ಓದಿ: ಛಾಯಾಚಿತ್ರಣವೆಂಬ ಅದ್ಭುತ ಕಲೆ; ಫೋಟೋಗ್ರಫಿ ದಿನದ ಇತಿಹಾಸ, ಮಹತ್ವವೇನು ತಿಳಿಯಿರಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ