ಮನಶಾಸ್ತ್ರಜ್ಞರ ಪ್ರಕಾರ ಸಂಬಂಧದಲ್ಲಿ ಸಂತೋಷವಾಗಿರುವವರು ಈ ಐದು ಕೆಲಸಗಳನ್ನು ಮಾಡೇ ಮಾಡುತ್ತಾರಂತೆ
ದಾಂಪತ್ಯ, ಪ್ರೇಮ ಸಂಬಂಧ ಆರೋಗ್ಯಕರವಾಗಿರಲು ಸಂಗಾತಿಗಳು ಒಟ್ಟಿಗೆ ಸಮಯ ಕಳೆಯುವಂತಹದ್ದು, ಒಬ್ಬರಿಗೊಬ್ಬರು ಗಿಫ್ಟ್ ಕೊಟ್ಟುಕೊಳ್ಳುವಂತಹದ್ದು ಮಾಡುತ್ತಿರುತ್ತಾರೆ. ಆದರೆ ನಿಜವಾಗಿಯೂ ಸಂಬಂಧದಲ್ಲಿ ತುಂಬಾನೇ ಸಂತೋಷವಾಗಿರುವವರು ಪ್ರತಿನಿತ್ಯ ಈ ಐದು ಕೆಲಸಗಳನ್ನು ಮಾಡುತ್ತಾರಂತೆ. ಮನಶಾಸ್ತ್ರಜ್ಞ ಮಾರ್ಕ್ ಟ್ರಾವರ್ಸ್ ಹೇಳಿರುವ ಯಶಸ್ವಿ ಸಂಬಂಧದ ಆ 5 ವಿಷಯಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮದುವೆಯಾದ ಹೊಸತರಲ್ಲಿ ಅಥವಾ ಪ್ರೀತಿಯ ಬಲೆಗೆ ಬಿದ್ದ ಹೊಸತರಲ್ಲಿ ಸಂಬಂಧದಲ್ಲಿ (relationship) ಸಂಗಾತಿಗಳಿಬ್ಬರು ತುಂಬಾನೇ ಖುಷಿಯಾಗಿರುತ್ತಾರೆ. ನಂತರದ ದಿನಗಳಲ್ಲಿ ಈ ಸಂಬಂಧದಲ್ಲಿ ಮನಸ್ತಾಪ, ಜಗಳಗಳ ಕಾಲ ಸ್ಪಲ್ಪ ಅಂತರ ಎನ್ನುವಂತಹದ್ದು ಸೃಷ್ಟಿಯಾಗುತ್ತದೆ. ನಿಮ್ಮ ಸಂಬಂಧದಲ್ಲೂ ಅಂತರ ಸೃಷ್ಟಿಯಾಗಿದೆಯೇ ಅಥವಾ ನೀವು ನಿಮ್ಮ ಸಂಬಂಧದಲ್ಲಿ ತುಂಬಾನೇ ಖುಷಿಯಾಗಿದ್ದೀರಾ ಎಂಬುದನ್ನು ತಿಳಿಯಬೇಕಾ? ಹಾಗಿದ್ರೆ ಮನಶಾಸ್ತ್ರಜ್ಞ ಮಾರ್ಕ್ ಟ್ರಾವರ್ಸ್ (Mark Travers) ಹೇಳಿರುವ ಈ ಐದು ವಿಚಾರಗಳ ಬಗ್ಗೆ ನೀವು ಸಂಗಾತಿಗಳಿಬ್ಬರು ಮಾತನಾಡುತ್ತೀರಾ ಎಂಬುದನ್ನು ನೋಡಿ. ಮಾರ್ಕ್ ಅವರು ದಂಪತಿಗಳ ಬಗ್ಗೆ ಅಧ್ಯಯನವೊಂದನ್ನು ನಡೆಸಿದ್ದು, ಅವರು ಹೇಳುವಂತೆ ಹೇಳುವಂತೆ ಸಂಬಂಧದಲ್ಲಿ ತುಂಬಾನೇ ಖುಷಿಯಾಗಿರುವ ಜೋಡಿ ಪ್ರತಿನಿತ್ಯ ತಪ್ಪದೆ ಈ ಐದು ವಿಚಾರಗಳ ಬಗ್ಗೆ ಮಾತುಕತೆ ನಡೆಸುತ್ತಾರಂತೆ. ಅವು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಂಬಂಧದಲ್ಲಿ ಖುಷಿಯಾಗಿರುವ ಜೋಡಿಗಳು ಪ್ರತಿದಿನ ಈ ಐದು ವಿಷಯಗಳ ಬಗ್ಗೆ ಮಾತನಾಡುತ್ತಾರೆ:
ಸಂಬಂಧದ ಸ್ಥಿತಿ: ಉತ್ತಮ ಸಂಬಂಧದಲ್ಲಿರುವ ದಂಪತಿಗಳು ಯಾವಾಗಲೂ ಪರಸ್ಪರ ತಮ್ಮ ಸಂಬಂಧದ ಸ್ಥಿತಿಯ ಬಗ್ಗೆ ಮಾತನಾಡುತ್ತಾರಂತೆ. ನಿಜವಾಗಿಯೂ ನನ್ನ ಸಂಗಾತಿ ಸಂತೋಷವಾಗಿದ್ದಾಳೆಯೇ/ ಸಂತೋಷವಾಗಿದ್ದಾನೆಯೇ ಎಂಬುದನ್ನು ಪರಿಶೀಲಿಸುತ್ತಾರಂತೆ. ಇದಲ್ಲದೆ ಕೆಲಸದ ನಡುವೆಯೂ ಕಾಲ್ ಅಥವಾ ಮೆಸೇಜ್ ಮಾಡಿ ಒಬ್ಬರಿಗೊಬ್ಬರು ವಿಚಾರಿಸಿಕೊಳ್ಳುವಂತಹದ್ದನ್ನು ಮಾಡುತ್ತಾರಂತೆ. ಈ ದೈನಂದಿನ ಚೆಕ್-ಇನ್ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ.
ಇಷ್ಟಕಷ್ಟದ ಬಗ್ಗೆ ತಿಳಿದುಕೊಳ್ಳುವು: ಸಂಬಂಧದಲ್ಲಿ ತುಂಬಾನೇ ಖುಷಿಯಾಗಿರುವ ಜೋಡಿಗಳು ತಮ್ಮ ಸಂಗಾತಿಯ ಇಷ್ಟಕಷ್ಟಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಅವರ ನೆಚ್ಚಿನ ಹಾಡು ಯಾವುದು, ನೆಚ್ಚಿನ ಪುಸ್ತಕ ಯಾವುದು, ಅವರಿಗೆ ಏನು ಇಷ್ಟವಿಲ್ಲ ಎಂಬಂತಹ ವಿಚಾರಗಳ ಬಗ್ಗೆ ಪ್ರತಿನಿತ್ಯ ತಿಳಿಯಲು ಬಯಸುತ್ತಾರಂತೆ. ಇಂತಹ ಸಣ್ಣಪುಟ್ಟ ವಿಚಾರಗಳು ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ.
ಅವರ ಭವಿಷ್ಯದ ಕನಸುಗಳು: ಪ್ರೇಮ ಅಥವಾ ದಾಂಪತ್ಯ ಜೀವನದಲ್ಲಿ ಖುಷಿಖುಷಿಯಾಗಿರುವ ಜೋಡಿಗಳು ತಮ್ಮ ಭವಿಷ್ಯದ ಬಗ್ಗೆ ಪ್ರತಿನಿತ್ಯ ಮಾತನಾಡುತ್ತಾರಂತೆ. ಒಳ್ಳೆ ಕೆಲಸ, ಮನೆ-ಮಕ್ಕಳು, ಉಳಿತಾಯ, ಕನಸುಗಳು ಸೇರಿದಂತೆ ತಮ್ಮ ಭವಿಷ್ಯದ ಬಗ್ಗೆ ಸಾಕಷ್ಟು ಮಾತನಾಡುತ್ತಾರಂತೆ. ಇಂತಹ ಮಾತುಗಳು ಕನಸುಗಳನ್ನು ನನಸಾಗಿಸಲು ಸ್ಫೂರ್ತಿ ಅಂತಾನೇ ಹೇಳಬಹುದು.
ಇದನ್ನೂ ಓದಿ: ಗಂಡ ಹೆಂಡತಿ ಹೀಗಿದ್ರೆ ಡಿವೋರ್ಸ್ ಮಾತೇ ಇರೋದಿಲ್ಲ ನೋಡಿ
ಅವರ ಭಯ ಮತ್ತು ಒತ್ತಡಗಳು: ಹೆಚ್ಚಿನವರು ತಮ್ಮ ಭಯ ಮತ್ತು ಒತ್ತಡಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆದರೆ ಸಂಬಂಧದಲ್ಲಿ ಸಂತೋಷವಾಗಿರುವ ದಂಪತಿಗಳು ತಮಗೆ ಕಾಡುವ ಆತಂಕದ ಬಗ್ಗೆ ತಮ್ಮ ಸಂಗಾತಿಯ ಬಳಿ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಮತ್ತು ಆ ಸಮಸ್ಯೆಗಳನ್ನು ಒಟ್ಟಿಗೆ ಪರಿಹರಿಸಲು ಪ್ರಯತ್ನಿಸುತ್ತಾರೆ. ಕೆಲಸದ ಸ್ಥಳದ ವಿಚಾರವಾಗಿರಬಹುದು, ಸಂಬಂಧದ ಬಗ್ಗೆ ಉಂಟಾಗುವ ಅಭದ್ರತೆಯ ಭಾವನೆಯಾಗಿರಬಹುದು ಈ ಎಲ್ಲವನ್ನು ಹಂಚಿಕೊಳ್ಳುತ್ತಾರೆ. ಈ ಮಾತುಕತೆ ಸುರಕ್ಷತೆಯ ಭಾವನೆಯನ್ನು ನಿರ್ಮಿಸುತ್ತದೆ. ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ.
ಸಾಮಾನ್ಯ ಆಲೋಚನೆಗಳು: ಸಂಬಂಧದಲ್ಲಿ ಖುಷಿಯಾಗಿರುವ ಜೋಡಿಗಳು ಪ್ರತಿನಿತ್ಯ ತಮ್ಮ ರಾಂಡಮ್ ಆಲೋಚನೆಗಳ ಬಗ್ಗೆ ಸಂಗಾತಿಯೊಂದಿಗೆ ಹಂಚಿಕೊಳ್ಳುತ್ತಾರೆ. ತಮ್ಮ ತಲೆಯಲ್ಲಿ ಮೂಡುವ ಸಣ್ಣಪುಟ್ಟ ಆಲೋಚನೆಗಳನ್ನು ಸಹ ಸಂಗಾತಿಯೊಂದಿಗೆ ಹಂಚಿಕೊಳ್ಳುತ್ತಾರೆ. ಇಂತಹ ಮಾತುಕತೆಗಳು ಸಿಲ್ಲಿ, ವಿಚಿತ್ರ ಮತ್ತು ತಮಾಷೆಯಂತೆ ಕಾಣಬಹುದು. ಆದರೆ ಇಂತಹ ಮಾತುಕತೆಗಳು ಯಶಸ್ವಿ ಸಂಬಂಧವನ್ನು ನಿರ್ಮಿಸುವಲ್ಲಿ ಪ್ರಮುಖ ಭಾಗವಾಗಿದೆ.
ನೀವು ಈ ಎಲ್ಲಾ ವಿಚಾರಗಳ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡುತ್ತೀರಿ ಎಂದಾದರೆ ನೀವು ನಿಮ್ಮ ದಾಂಪತ್ಯ ಅಥವಾ ಪ್ರೇಮ ಜೀವನದಲ್ಲಿ ತುಂಬಾನೇ ಖುಷಿಯಾಗಿದ್ದೀರಿ ಎಂದರ್ಥ ಎಂದು ಹೇಳುತ್ತಾರೆ ಮನಶಾಸ್ತ್ರಜ್ಞ ಮಾರ್ಕ್ ಟ್ರಾವರ್ಸ್.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








