
ಇಂದಿನ ದಿನಗಳಲ್ಲಿ ಬಹುತೇಕ ಹೆಚ್ಚಿನ ಜನರ ಬಳಿ ಸ್ವಂತ ವಾಹನಗಳು ಇವೆ. ಮೆಟ್ರೋ, ಬಸ್ಸುಗಳ ಬದಲು ದೈನಂದಿನ ದೈನಂದಿನ ಓಡಾಟಕ್ಕೆ ಸ್ವಂತ ವಾಹನಗಳನ್ನೇ ಬಳಸುತ್ತಾರೆ. ಸ್ವಂತ ವಾಹನಗಳಲ್ಲಿ ಓಡಾಡುವವ ಸಂಖ್ಯೆ ಹೆಚ್ಚಾದಂತೆ ಗಣನೀಯ ಪ್ರಮಾಣದಲ್ಲಿ ಸಂಚಾರದಟ್ಟಣೆ ಕೂಡ ಹೆಚ್ಚಾಗುತ್ತದೆ. ಇದರ ಜೊತೆಗೆ ವಾಹನಗಳಿಂದ ಹೊರ ಸೂಸುವ ಹೊಗೆ, ಹಾರ್ನ್ ಸದ್ದುಗಳು ಪರಿಸರದ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಅಂಶವನ್ನೆಲ್ಲಾ ಗಮನದಲ್ಲಿಟ್ಟುಕೊಂಡು, ಪರಿಸರ ಸಂರಕ್ಷಣೆಯ ಮೂಲ ಉದ್ದೇಶದ ಜೊತೆಗೆ ಇಂಧನ ಉಳಿಕೆಗೆ, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲು ಸಾರ್ವಜನಿಕ ಸಾರಿಗೆಗಳನ್ನು (Public Transport) ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ಜನರನ್ನು ಪ್ರೋತ್ಸಾಹಿಸಲು ನವೆಂಬರ್ 10 ರಂದು ವಿಶ್ವ ಸಾರ್ವಜನಿಕ ಸಾರಿಗೆ ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.
ಸ್ವಂತ ವಾಹನಗಳ ಬಳಕೆ ಹೆಚ್ಚಾದಂತೆ ಸಂಚಾರ ದಟ್ಟಣೆ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಇಂಧನದಂತಹ ಸಂಪನ್ಮೂಲಗಳ ಸವಕಳಿ ಸಮಸ್ಯೆಗಳು ಕೂಡಾ ಹೆಚ್ಚಾದವು. ಹೀಗೆ ನಗರೀಕರಣದಿಂದ ಉಂಟಾದ ಈ ಸಮಸ್ಯೆಗಳಿಂದ ಪರಿಸರವನ್ನು ರಕ್ಷಿಸಲು ಜನರು ಹೆಚ್ಚಾಗಿ ಸಾರ್ವಜನಿಕ ವಾಹನಗಳನ್ನು ಉಪಯೋಗಿಸಬೇಕು ಎಂದು ಜಾಗೃತಿ ಮೂಡಿಸಲು 2000 ರ ದಶಕದ ಆರಂಭದಲ್ಲಿ ಮೊದಲ ಬಾರಿಗೆ ವಿಶ್ವ ಸಾರ್ವಜನಿಕ ಸಾರಿಗೆ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ನವೆಂಬರ್ 10 ರಂದು ವಿಶ್ವ ಸಾರಿಗೆ ದಿನವನ್ನು ಆಚರಿಸುತ್ತಾ ಬರಲಾಗುತ್ತದೆ.
ವಿಶ್ವದ ಮೊದಲ ಆಧುನಿಕ ಸಾರ್ವಜನಿಕ ಸಾರಿಗೆ 1662 ರಲ್ಲಿ ಪ್ಯಾರಿಸ್‌ನಲ್ಲಿ ಪ್ರಾರಂಭವಾಯಿತು. ಇದನ್ನು ಫ್ರೆಂಚ್ ವಿಜ್ಞಾನಿ, ಗಣಿತಜ್ಞ ಮತ್ತು ತತ್ವಜ್ಞಾನಿ ಬ್ಲೇಸ್ ಪ್ಯಾಸ್ಕಲ್ ಪ್ರಾರಂಭಿಸಿದರು. ಇದನ್ನು ಕ್ಯಾರೊಸೆಸ್ ಎ ಸಿಂಕ್ ಸೋಲ್ಸ್ ಎಂದು ಕರೆಯಲಾಗುತ್ತಿತ್ತು. ಇದು ಏಕಕಾಲದಲ್ಲಿ ಎಂಟು ಜನರನ್ನು ಕೂರಿಸಬಹುದಾದ ಎತ್ತಿನ ಬಂಡಿಯಾಗಿತ್ತು. ಈ ಸೇವೆ ಪ್ರತಿ ಏಳೂವರೆ ನಿಮಿಷಗಳಿಗೊಮ್ಮೆ ಓಡುತ್ತಿತ್ತು. ಇದು ಕೇವಲ 15 ವರ್ಷಗಳ ಕಾಲ ನಡೆಯಿತು. ನಂತರ ಮೊದಲ ಸಾರ್ವಜನಿಕ ಬಸ್ ಅನ್ನು 1829 ರಲ್ಲಿ ಲಂಡನ್‌ನಲ್ಲಿ ಪರಿಚಯಿಸಲಾಯಿತು.
ಇದನ್ನೂ ಓದಿ: ದೇಶದ ಎಲ್ಲಾ ನಾಗರಿಕರಿಗೂ ನ್ಯಾಯ ಪಡೆಯುವ ಸಮಾನ ಅವಕಾಶವಿದೆ
ಕಾರು, ಬೈಕು ಎಂದು ಇಂದಿನ ದಿನಗಳಲ್ಲಿ ಸ್ವಂತ ವಾಹನಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಇದು ರಸ್ತೆಯಲ್ಲಿ ಸಂಚಾರದಟ್ಟಣೆಯನ್ನು ಉಂಟುಮಾಡುವುದರ ಜೊತೆಗೆ ಶಬ್ದ ಮಾಲಿನ್ಯ, ವಾಯು ಮಾಲಿನ್ಯಕ್ಕೂ ಕಾರಣವಾಗುತ್ತದೆ. ಹೀಗಿರುವಾಗ ಪ್ರತಿಯೊಬ್ಬರೂ ಸಹ ತಮ್ಮ ದೈನಂದಿನ ಓಡಾಟಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಳಸಿದಾಗ, ರಸ್ತೆಯಲ್ಲಿ ವಾಹನಗಳ ಓಡಾಟವು ಕಮ್ಮಿಯಾಗುತ್ತದೆ. ಇದು ಸುಗಮ ಸಂಚಾರಕ್ಕೆ ಕಾರಣವಾಗುವುದು ಮಾತ್ರವಲ್ಲದೆ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಹೌದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಾಗಿ ಬಳಕೆ ಮಾಡಲು ಆರಂಭಿಸಿದಾಗ ಟ್ರಾಫಿಕ್ ಜಾಮ್ ಜಾಮ್ ಸಮಸ್ಯೆಯಿಂದ ಹಿಡಿದು ವಾಹನಗಳಿಂದ ಹೊರಸೂಸುವ ವಿಷಕಾರಿ ಹೊಗೆಗಳಿಂದ ಉಂಟಾಗುವ ಮಾಲಿನ್ಯಗಳು ಸಹ ಕಡಿಮೆಯಾಗುತ್ತದೆ. ಹೀಗೆ ಸಾರ್ವಜನಿಕ ಸಾರಿಗೆಯನ್ನು ಬಳಸುವ ಮೂಲಕ ಪರಿಸರ ರಕ್ಷಣೆಗೆ ಕೊಡುಗೆಯನ್ನು ನೀಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ