
ಕ್ರೀಡೆ, ಮನರಂಜನೆ, ರಾಜಕೀಯ ವಿಷಯಗಳು ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ಒದಗಿಸುವ ಸಮೂಹ ಸಂವಹನದ ಮಾಧ್ಯಮವಾಗಿರುವ ಟಿವಿ (Television) ನಮ್ಮೆಲ್ಲರ ಬದುಕಿನ ಭಾಗವಾಗಿ ಹೋಗಿದೆ. ಕಪ್ಪು ಬಿಳುಪಿನ ಪರದೆಯಿಂದ ಆರಂಭವಾದ ಈ ಪಯಣ ಇಂದು ಸ್ಮಾರ್ಟ್ ಟಿವಿ ಹಂತಕ್ಕೆ ಬಂದು ತಲುಪಿದೆ. ದೂರದರ್ಶನ ಕೇವಲ ಮನರಂಜನೆಯ ಸಾಧನ ಮಾತ್ರವಲ್ಲ, ಅದರ ಮೂಲಕ ನಾವು ಜಗತ್ತಿನ ಮೂಲೆ ಮೂಲೆಗಳನ್ನು ನಡೆಯುವ ಪ್ರಚಲಿತ ಘಟನೆಗಳ ಬಗ್ಗೆಯೂ ತಿಳಿದುಕೊಳ್ಳಬಹುದು. ಈ ಮೂಲಕ ದೂರದರ್ಶನವು ಜಗತ್ತನ್ನು ಒಟ್ಟಿಗೆ ಸಂಪರ್ಕಿಸಿದೆ. ಇಂದಿನ ಈ ಡಿಜಿಟಲ್ ಜಮಾನದಲ್ಲೂ ಟಿವಿಯ ಮಹತ್ವ ಕಡಿಮೆಯಾಗಿಲ್ಲ. ಈ ಮಹತ್ವದ ಬಗ್ಗೆ ತಿಳಿಸಲು, ಸಂವಹನ ಮತ್ತು ಜಾಗತೀಕರಣದಲ್ಲಿ ದೂರದರ್ಶನವು ವಹಿಸಿದ ಮುಖ್ಯ ಪಾತ್ರದ ಬಗ್ಗೆ ತಿಳಿಸಲು ಪ್ರತಿವರ್ಷ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 17, 1996 ರಂದು ವಿಶ್ವ ದೂರದರ್ಶನ ದಿನವನ್ನು ಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿತು. ಇದಕ್ಕೂ ಮೊದಲು, ವಿಶ್ವಸಂಸ್ಥೆಯು ನವೆಂಬರ್ 21 ಮತ್ತು 22, 1996 ರಂದು ವಿಶ್ವ ದೂರದರ್ಶನ ( ಟೆಲಿವಿಷನ್ ಫೋರಂ) ವೇದಿಕೆಯನ್ನು ಸ್ಥಾಪಿಸಿತು. ಪರಿಣಾಮವಾಗಿ, ಇದರಿಂದ ದೂರದರ್ಶನದ ಮಹತ್ವವನ್ನು ಚರ್ಚಿಸಲು ಮಾಧ್ಯಮಗಳಿಗೆ ವೇದಿಕೆ ಸಿಕ್ಕಿತು. ಅಲ್ಲದೆ ಇಲ್ಲಿ ಜಗತ್ತನ್ನು ಬದಲಾಯಿಸಲು ಟೆಲಿವಿಷನ್ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಚರ್ಚೆ ಕೂಡಾ ನಡೆಯಿತು. ಹೀಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದೂರದರ್ಶನದ ಮಹತ್ವದ ಬಗ್ಗೆ ಹಾಗೂ ಸಂವಹನ ಮತ್ತು ಜಾಗತೀಕರಣದಲ್ಲಿ ದೂರದರ್ಶನವು ವಹಿಸಿದ ಮಹತ್ತರ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನವೆಂಬರ್ 21 ರಂದು ವಿಶ್ವ ದೂದರ್ಶನ ದಿನವನ್ನು ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು. ಅಂದಿನಿಂದ ಪ್ರತಿವರ್ಷ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು, ಭವಿಷ್ಯವನ್ನು ರೂಪಿಸುವುದು ನಮ್ಮೆಲ್ಲರ ಹೊಣೆ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ