Universal Children’s Day 2025: ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು, ಭವಿಷ್ಯವನ್ನು ರೂಪಿಸುವುದು ನಮ್ಮೆಲ್ಲರ ಹೊಣೆ
ಭಾರತದಲ್ಲಿ ಜವಾಹರಲಾಲ್ ನೆಹರೂ ಅವರ ಜನ್ಮ ಜಯಂತಿಯ ಸ್ಮರಣಾರ್ಥವಾಗಿ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸುವಂತೆ, ಪ್ರಪಂಚದಾದ್ಯಂತದ ಪ್ರತಿಯೊಂದು ಮಗುವಿನ ಹಕ್ಕುಗಳು, ಯೋಗಕ್ಷೇಮ ಮತ್ತು ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ನವೆಂಬರ್ 20 ರಂದು ಸಾರ್ವತ್ರಿಕ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಹಿನ್ನೆಲೆಯ ಬಗ್ಗೆ ತಿಳಿಯೋಣ ಬನ್ನಿ.

ಮಕ್ಕಳು (Children’s) ಭವಿಷ್ಯದ ಪ್ರಜೆಗಳು ಮಾತ್ರವಲ್ಲ, ಅತ್ಯಮೂಲ್ಯ ಸಂಪತ್ತು ಮತ್ತು ಭವಿಷ್ಯದ ಅತ್ಯುತ್ತಮ ಭರವಸೆ ಕೂಡ ಹೌದು. ಹೀಗಿರುವಾಗ ಸದೃಢ ರಾಷ್ಟ್ರ ರಾಷ್ಟ್ರ ನಿರ್ಮಾಣವಾಗಬೇಕಾದರೆ, ಜಗತ್ತು ಸಕಾರಾತ್ಮಕ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಮಕ್ಕಳನ್ನು ಸಶಕ್ತಗೊಳಿಸುವುದು ತುಂಬಾನೆ ಮುಖ್ಯ. ಹೀಗಾಗಿ ಮಕ್ಕಳು ಆರೋಗ್ಯವಂತ, ವಿದ್ಯಾವಂತ ಮತ್ತು ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಬೇಕು ಎಂಬ ಕಾರಣಕ್ಕಾಗಿ ಹಾಗೂ ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ, ಆರೋಗ್ಯ, ಆಟ, ಸುರಕ್ಷತೆ ಮತ್ತು ಸಬಲೀಕರಣವನ್ನು ಉತ್ತೇಜಿಸುವ ಸಲುವಾಗಿ ನವೆಂಬರ್ 20 ರಂದು ಸಾರ್ವತ್ರಿಕ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಸಾರ್ವತ್ರಿಕ ಮಕ್ಕಳ ದಿನಾಚರಣೆಯ ಇತಿಹಾಸವೇನು?
ಸಾರ್ವತ್ರಿಕ ಮಕ್ಕಳ ದಿನದ ಪರಿಕಲ್ಪನೆಯನ್ನು ಮೊದಲು 1925 ರಲ್ಲಿ ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಪ್ರಸ್ತಾಪಿಸಿತು. ಈ ಸಂದರ್ಭದಲ್ಲಿ ಬಲವಂತವಾಗಿ ದುಡಿತಕ್ಕೆ ಒಳಗಾಗುವ ಮತ್ತು ಶಿಕ್ಷಣವನ್ನು ಪಡೆಯಲು ಆಗದಿರುವ ಮಕ್ಕಳ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿತು. ಇದಾದ ನಂತರ 1954 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಕ್ಕಳ ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದಿಂದ ಸಾರ್ವರ್ತಿಕ ಮಕ್ಕಳ ದಿನವನ್ನು ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು. 1990 ರಿಂದ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಮಕ್ಕಳ ಹಕ್ಕುಗಳ ಘೋಷಣೆ ಮಾಡಿದ ಮತ್ತು ಮಕ್ಕಳ ಹಕ್ಕುಗಳ ಸಮಾವೇಶ ಈ ಎರಡನ್ನೂ ಅಂಗೀಕರಿಸಿದ ದಿನದ ನೆನಪಿಗಾಗಿ ನವೆಂಬರ್ 20 ರಂದೇ ಸಾರ್ವತ್ರಿಕ ಮಕ್ಕಳ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಇಂದಿನ ಮಕ್ಕಳೇ ನಾಳಿನ ದೇಶದ ಉಜ್ವಲ ಭವಿಷ್ಯ; ಮಕ್ಕಳ ದಿನಾಚರಣೆಯ ಹಿನ್ನೆಲೆಯೇನು?
ಸಾರ್ವರ್ತಿಕ ಮಕ್ಕಳ ದಿನದ ಮಹತ್ವವೇನು?
- ಮಕ್ಕಳ ಹಕ್ಕುಗಳ ಬಗ್ಗೆ ಜಾಗತಿಕ ಜವಾಬ್ದಾರಿಯನ್ನು ಹೆಚ್ಚಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
- ಈ ದಿನವು ಪ್ರತಿಯೊಂದು ಮಗುವಿಗೂ ಶಿಕ್ಷಣ, ಆರೋಗ್ಯ, ಆಟ, ಸುರಕ್ಷತೆ ಮತ್ತು ಸಬಲೀಕರಣದ ಹಕ್ಕಿದೆ ಎಂಬುದನ್ನು ನೆನಪಿಸುತ್ತದೆ.
- ಈ ದಿನವು ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಎತ್ತಿ ತೋರಿಸುವುದಲ್ಲದೆ, ರಾಷ್ಟ್ರ ಮತ್ತು ಅದರ ಭವಿಷ್ಯಕ್ಕಾಗಿ ಮಕ್ಕಳಲ್ಲಿ ಹೂಡಿಕೆ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ಸಮಾಜಕ್ಕೆ ನೆನಪಿಸುತ್ತದೆ.
- ಅಲ್ಲದೆ ಸಾರ್ವತ್ರಿಕ ಮಕ್ಕಳ ದಿನವು ಮಕ್ಕಳ ಶಿಕ್ಷಣ ಮತ್ತು ಆರೋಗ್ಯವನ್ನು ಸುಧಾರಿಸುವುದು ಮತ್ತು ಬಾಲ ಕಾರ್ಮಿಕ ಪದ್ಧತಿ ಮತ್ತು ಹಿಂಸಾಚಾರದ ವಿರುದ್ಧ ಜಾಗೃತಿ ಮೂಡಿಸುವುದಕ್ಕೆ ನಿರ್ದಿಷ್ಟವಾಗಿ ಒತ್ತು ನೀಡುತ್ತದೆ.
- ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು, ಅವರ ಕನಸುಗಳನ್ನು ನನಸಾಗಿಸುವುದು, ಸಮೃದ್ಧ ಭವಿಷ್ಯವನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ ಎಂಬುದನ್ನು ಈ ದಿನವು ನಮಗೆ ನೆನಪಿಸುತ್ತದೆ.
- ಸಾರ್ವತ್ರಿಕ ಮಕ್ಕಳ ದಿನವು ಕೇವಲ ಸಾಂಕೇತಿಕ ದಿನವಲ್ಲ, ಬದಲಾಗಿ ಮಕ್ಕಳ ಹಕ್ಕುಗಳು ಮತ್ತು ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಜಾಗತಿಕ ಬದ್ಧತೆಯ ಸಂಕೇತವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




