World Theatre Day 2024: ಪ್ರತಿಭೆಗಳಿಗೆ ವೇದಿಕೆಯಾಗಿರುವ ರಂಗಕಲೆಗೆ ಕಂಟಕ ಕಾಲ

ಮನೋರಂಜನೆಗಾಗಿ ಹಲವಾರು ಮಾಧ್ಯಮಗಳಿದ್ದರೂ ಸೃಜನಶೀಲತೆಯನ್ನು ಅರಳಿಸುವ ಪಾತ್ರವನ್ನು ಈ ರಂಗಭೂಮಿಯು ಮಾಡುತ್ತದೆ. ಆದರೆ ಇಂದು ನೂರಾರು ಮನೋರಂಜನಾ ಮಾಧ್ಯಮಗಳು ತಲೆ ಎತ್ತಿವೆ. ದೃಶ್ಯಮಾಧ್ಯಮಗಳ ಹಾವಳಿಯು ಜೋರಾಗಿದ್ದು, ರಂಗಭೂಮಿ ಕಲೆಯು ನಶಿಸಿ ಹೋಗುತ್ತಿದೆ. ರಂಗ ಕಲೆಯನ್ನು ಉಳಿಸುವ ಸಲುವಾಗಿ ದೇಶದಲ್ಲಿರುವ ಸಾಕಷ್ಟು ರಂಗಭೂಮಿ ತರಬೇತಿ ಕೇಂದ್ರಗಳು ಹಲವಾರು ಪ್ರತಿಭೆಗಳಿಗೆ ಅವಕಾಶ ನೀಡಿ ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಅದಲ್ಲದೇ, ಈ ರಂಗಕಲೆಯನ್ನು ಪ್ರೋತ್ಸಾಹಿಸಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷ ಮಾರ್ಚ್ 27 ರಂದು ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಮಹತ್ವ ಹಾಗೂ ಇತಿಹಾಸದ ಬಗೆಗಿನ ಮಾಹಿತಿಯು ಇಲ್ಲಿದೆ.

World Theatre Day 2024: ಪ್ರತಿಭೆಗಳಿಗೆ ವೇದಿಕೆಯಾಗಿರುವ ರಂಗಕಲೆಗೆ ಕಂಟಕ ಕಾಲ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Mar 26, 2024 | 5:30 PM

ಪ್ರಾಚೀನಕಾಲದ ಮನೋರಂಜನಾ ಮಾಧ್ಯಮವಾಗಿರುವ ರಂಗಭೂಮಿಯು ಸಮಾಜದಲ್ಲಿನ ಗಂಭೀರ ವಿಷಯಗಳತ್ತ ಬೆಳಕು ಚೆಲ್ಲುವ ಕೆಲಸವನ್ನು ಮಾಡುತ್ತಲೆ ಬರುತ್ತಿದೆ. ಆದರೆ ಇಂದಿನ ಜನರು ಮನೋರಂಜನೆಗಾಗಿ ಇನ್ನಿತ್ತರ ಮಾಧ್ಯಮಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ರಂಗಭೂಮಿಯತ್ತ ತೊಡಗಿಸಿಕೊಂಡವರು ಕೆಲವೇ ಕೆಲವು ಮಂದಿಯಷ್ಟೇ. ರಂಗ ಭೂಮಿಯು ಉದ್ಯಮವಾಗಿ ಬೆಳೆದಿಲ್ಲದ ಕಾರಣ, ಇದರಲ್ಲಿಯೇ ಬದುಕು ಕಟ್ಟಿಕೊಳ್ಳುವುದು ಕಷ್ಟ. ಹೀಗಾಗಿ ಬದುಕಿಗಾಗಿ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ನಟನಾ ಜಗತ್ತನ್ನು ಹವ್ಯಾಸವಾಗಿ ತೆಗೆದುಕೊಳ್ಳುವವರ ಸಂಖ್ಯೆಯು ಏರಿಕೆಯಾಗುತ್ತಿದೆ. ಅದೆಷ್ಟೋ ಕಲಾವಿದರು ಈ ರಂಗಭೂಮಿಯ ಹಿನ್ನೆಲೆಯಲ್ಲಿ ಸಿನಿಮಾರಂಗಕ್ಕೆ ಲಗ್ಗೆ ಇಟ್ಟು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಸಿನಿಮಾ ಸೇರಿದಂತೆ ಇನ್ನಿತ್ತರ ಮಾಧ್ಯಮಗಳು ಬೆಳೆಯುತ್ತಿದ್ದಂತೆ ಅನೇಕರ ಬದುಕಿಗೆ ವರದಾನವಾಗಿದ್ದ ಈ ಕಲೆಯು ನಶಿಸಿಹೋಗುತ್ತಿವೆ. ಹೀಗಾಗಿ ಈ ರಂಗಭೂಮಿಯ ಮಹತ್ವದ ಸಾರುವ ನಿಟ್ಟಿನಲ್ಲಿ ವಿಶ್ವ ರಂಗಭೂಮಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ರಂಗಭೂಮಿ ದಿನದ ಇತಿಹಾಸ

1961 ರಲ್ಲಿ ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆ ಅಥವಾ ಇಂಟರ್‌ನ್ಯಾಷನಲ್‌ ಥಿಯೇಟರ್‌ ಇನ್ಸ್ಟಿಟ್ಯೂಟ್‌ (ಐಟಿಐ) ಈ ದಿನವನ್ನು ಪರಿಚಯಿಸಿತು. ವಿಶ್ವ ರಂಗಭೂಮಿ ದಿನದಂದು ಫ್ರೆಂಚ್ ನಾಟಕಕಾರ ಜೀನ್ ಕಾಕ್ಟೋ ಅವರು ಮೊದಲ ಸಂದೇಶವನ್ನು ನೀಡುವ ಕೆಲಸವನ್ನು ಮಾಡಿದರು. ಅಂದಿನಿಂದ ಪ್ರತಿ ವರ್ಷ ಮಾರ್ಚ್ 27 ರಂದು ವಿಶ್ವದೆಲ್ಲೆಡೆ ರಂಗಭೂಮಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಪ್ರತಿ ಮಹಿಳೆಯೂ ಮದುವೆಯ ನಂತರ ಈ ಪರೀಕ್ಷೆ ಮಾಡಲೇಬೇಕು: ಇದು ತಜ್ಞರ ಸಲಹೆ

ವಿಶ್ವ ರಂಗಭೂಮಿ ದಿನದ ಮಹತ್ವ

ವಿಶ್ವ ರಂಗಭೂಮಿ ದಿನದಂದು ರಂಗಭೂಮಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು. ಹಾಗೂ ಪ್ರಪಂಚದಾದ್ಯಂತ ರಂಗಭೂಮಿ ಕಲೆ ಹಾಗೂ ಪ್ರತಿಭೆಯನ್ನು ಫೋತ್ಸಾಹಿಸುವುದು ಈ ದಿನದ ಮಹತ್ವವಾಗಿದೆ. ಪ್ರತಿ ವರ್ಷ ವಿಶ್ವ ರಂಗಭೂಮಿ ದಿನವನ್ನು ಐಟಿಐ ಕೇಂದ್ರಗಳು, ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆಗಳು ಮತ್ತು ಸ್ಥಳೀಯ ರಂಗಭೂಮಿ ಸಂಸ್ಥೆಗಳು ಆಚರಿಸುತ್ತವೆ. ಅದಲ್ಲದೇ ರಂಗಭೂಮಿಯಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸವು ಆಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ