
ಈ ಭೂಮಿಯ ಮೇಲಿರುವ ಪ್ರತಿಯೊಂದು ಜೀವ ವೈವಿಧ್ಯವೂ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸುತ್ತಿವೆ. ಅದೇ ರೀತಿ ಸರೀಸೃಪ ಗುಂಪಿಗೆ ಸೇರಿದ ಸಾದು ಜೀವಿಯಾದ ಆಮೆಗಳು (Turtle) ಸಹ ಪರಿಸರ ವ್ಯವಸ್ಥೆಯನ್ನು ಸ್ಥಿರವಾಗಿಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಹೌದು ಆಲಿವ್ ರಿಡ್ಲಿ, ಲೆದರ್ ಬ್ಯಾಕ್ ಮುಂತಾದ ಸಮುದ್ರ ಆಮೆಗಳು ಕರಾವಳಿ ಪ್ರದೇಶಗಳನ್ನು ಸ್ವಚ್ಛಗೊಳಿಸವಲ್ಲಿ ಮತ್ತು ಸತ್ತ ಮೀನುಗಳನ್ನು ಕೊಳೆತ ಸಸ್ಯರಾಶಿಗಳನ್ನು ತಿನ್ನುವ ಮೂಲಕ ಸಮುದ್ರವನ್ನು ಸ್ವಚ್ಛವಾಗಿಡುವಲ್ಲಿ ಮತ್ತು ಭೂಮಿಯ ಮೇಲೆ ವಾಸಿಸುವ ಆಮೆಗಳು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಇಂದು ಅಕ್ರಮ ಬೇಟೆ, ಆವಸಸ್ಥಾನದ ನಷ್ಟ, ಹವಾಮಾನ ಬದಲಾವಣೆ ಇವೆಲ್ಲದರ ಕಾರಣದಿಂದಾಗಿ ಅವೆಷ್ಟೋ ಜಾತಿಯ ಆಮೆಗಳು ಅಳಿವಿನಂಚಿಗೆ ತಲುಪಿವೆ, ಅವುಗಳ ಅಸ್ತಿತ್ವಕ್ಕೆ ಕಂಟಕ ಎದುರಾಗಿದೆ. ಹಾಗಾಗಿ ಆಮೆಗಳನ್ನು ಸಂರಕ್ಷಿಸಲು, ಪರಿಸರ ವ್ಯವಸ್ಥೆಯಲ್ಲಿ ಅವುಗಳು ವಹಿಸುವ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ 23 ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಆಮೆ ದಿನದ ಆಚರಣೆಯನ್ನು 2000 ನೇ ಇಸವಿಯಲ್ಲಿ ಅಮೆರಿಕನ್ ಟಾರ್ಟಾಯಿಸ್ ರೆಸ್ಕ್ಯೂ ಎಂಬ ಲಾಭರಹಿತ ಸಂಸ್ಥೆ ಪ್ರಾರಂಭಿಸಿತು. ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಆಮೆಗಳನ್ನು ರಕ್ಷಿಸುವ ಅವುಗಳಿಗೆ ಸುರಕ್ಷಿತ ಸ್ಥಳವನ್ನು ಒದಗಿಸಿ ಕೊಡುವ ಉದ್ದೇಶವನ್ನು ಇಟ್ಟುಕೊಂಡು ಈ ದಿನದ ಆಚರಣೆಯನ್ನು ಪ್ರಾರಂಭಿಸಲಾಯಿತು.
ವಿಜ್ಞಾನಿಗಳು ಹೇಳುವ ಪ್ರಕಾರ ಅಮೆಗಳು ಈ ಭೂಮಿಯ ಮೇಲಿರುವ ಅತ್ಯಂತ ಹಳೆಯ ಪ್ರಾಣಿಗಳಾಗಿವೆ. ಆಮೆಗಳು ಭೂಮಿಯ ಮೇಲೆ ಸುಮಾರು 220 ಮಿಲಿಯನ್ ವರ್ಷಗಳಿಂದ ಅಸ್ತಿತ್ವದಲ್ಲಿವೆ. ಅಂದರೆ ಡೈನೋಸಾರ್ ಭೂಮಿಯ ಮೇಲೆ ಬರುವುದಕ್ಕೂ ಮುಂಚೆಯೇ ಇವುಗಳ ಅಸ್ತಿತ್ವವಿತ್ತು. ಆದರೆ ಇಂದು ಇವುಗಳ ಅಸ್ತಿತ್ವಕ್ಕೆ ಬೆದರಿಕೆ ಉಂಟಾಗಿದೆ. ಹಾಗಾಗಿ ಇವುಗಳ ರಕ್ಷಣೆಯ ಉದ್ದೇಶದಿಂದ ಈ ಲಾಭರಹಿತ ಸಂಸ್ಥೆ ಈ ವಿಶೇಷ ದಿನದ ಆಚರಣೆಯನ್ನು 2000 ನೇ ಇಸವಿಯಲ್ಲಿ ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ.
ಇದನ್ನೂ ಓದಿ: ಜೀವ ವೈವಿಧ್ಯತೆಯನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ