ಆಗಾಗ ಅರುಂಧತಿ: ಮನಸ್ಸನ್ನು ಏಕಾಗ್ರಗೊಳಿಸಿಕೊಂಡರೆ ನನಗೆ ನಾನೇ ಮಿತ್ರ, ಇಲ್ಲ ಶತ್ರು
Instagram : ಅವನಿಗೆ ಗೊತ್ತಿಲ್ಲವೆನ್ನಿಸುತ್ತದೆ, ಇನ್ಸ್ಟಾನಲ್ಲಿ ಮೆಸೇಜ್ ಸ್ಕ್ರೀನ್ ಶಾಟ್ ತೆಗೆದುಕೊಂಡಾಗ ಅದು ನೊಟಿಫಿಕೇಶನ್ ಮೂಲಕ ಅಕೌಂಟ್ ಹೋಲ್ಡರ್ಗೆ ಗೊತ್ತಾಗುತ್ತದೆ ಎಂಬುದು. ಕೇಳಿದಾಗ, ನಾನು ಏನೂ ಸ್ಕ್ರೀನ್ ಶಾಟ್ ತೆಗೆದುಕೊಂಡೇ ಇಲ್ಲ ಎಂದು ವಾದಿಸಿದ.
ಆಗಾಗ ಅರುಂಧತಿ : ನಾನು ಭಯದಲ್ಲೇ ಓದಿಕೊಳ್ಳುತ್ತಿದ್ದೆ ಕೋಚಿಂಗ್ನ ನೋಟ್ಸುಗಳನ್ನು ಇನ್ನೂ ಕೆಲವು ಟಿಪ್ಪಣಿಗಳನ್ನು. ಆದರೆ ಹಾಸ್ಟೆಲ್ಲಿನಲ್ಲಿದ್ದ ಉತ್ಸಾಹ ಇರಲಿಲ್ಲ. ಆವರಿಸಿರುವ ಭಯ ಬೆಟ್ಟದಷ್ಟು. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಹಾಸ್ಟೆಲ್ಲಿಗೆ ಹೋಗುವುದು ದುಸ್ತರ. ನನಗೆ ಹಾಸ್ಟೆಲ್ಲಿನ ಮೇಲೆ ಕೊಠಡಿಯ ಮೇಲೆ ಅಸಡ್ಡೆ ಇರಲಿಲ್ಲ. ಆದರೆ ಆ ಕೊಂಕು, ಕಾಲೆಳೆತದ ಮಾತುಗಳು… ನನ್ನ ಮನಸ್ಸನ್ನು ಚೆನ್ನಾಗಿ ಏಕಾಗ್ರತೆಯಿಂದ ಸಾಧನೆಯೆಡೆ ತಿರುಗಿಸಿದರೆ ನನಗೆ ನಾನೇ ಮಿತ್ರ. ಇಲ್ಲದಿದ್ದರೆ ನನಗೆ ನಾನೇ ಶತ್ರುವೆಂಬುದು ನನಗೆ ಅರಿವಿತ್ತು. ಹಾಗಾಗಿ ನಾನು ಪರೀಕ್ಷೆ ಎರಡು ದಿನಗಳಿರುವಾಗ ಯೂನಿವರ್ಸಿಟಿಗೆ ಬಂದು ಹತ್ತಿರದಲ್ಲೇ ಪಿಜಿಗೆ ಸೇರಿದೆ. ಕೊರೊನಾದಿಂದಾಗಿ ಕೊಠಡಿಗಳೆಲ್ಲವೂ ಖಾಲಿಖಾಲಿ ಬಿದ್ದಿದ್ದವು. ಮರುದಿನ ಆಶಾಭಾವನೆಯಿಂದಲೇ ಪರೀಕ್ಷೆ ಮುಗಿಸಿ ಪಿಜಿಗೆ ತೆರಳಿ ಪ್ರಶ್ನೋತ್ತರಗಳನ್ನು ಆನ್ಲೈನ್ನಲ್ಲಿ ಚೆಕ್ ಮಾಡಿದೆ. ಭಾಗಶಃ ಸರಿ ಇದ್ದವು. ಇನ್ನೇನು ಕೊರೊನಾ ಹೋಗಿದೆ ಮಾಸ್ಕ್ ಧರಿಸಿಕೊಂಡು ಮುಂದೆ ಇಂಟರ್ನಲ್ ಪರೀಕ್ಷೆಗೆ ಬಂದರಾಯಿತು ಎಂದು ಅನಿಸಿದರೂ ಹಾಸ್ಟೆಲ್ಲಿನ ಆವರಣ, ಕೊಠಡಿ, ಮೇಜು ನೆನಪಾಯಿತು. ಆದರೆ ಅಲ್ಲಿಯ ವಾತಾವರಣ ನೆನಪಿಸಿಕೊಂಡು ಪಿಜಿಯೇ ವಾಸಿ ಎಂದುಕೊಂಡೆ. ಅರುಂಧತಿ (Arundhathi)
ಆಗಸ್ಟ್ ಮೊದಲ ವಾರ ಇಂಟರ್ನಲ್. ಯಾಕೋ ಒಂಥರಾ ಭಯ ಎಲ್ಲಾ ಓದಿದ್ದರೂ. ಆಗಲೇ ಒಬ್ಬ ನನ್ನ ಹಿಂದೆ ಮುಂದೆ ಸುಳಿದಾಡಿದ, ಇನ್ವಿಜಿಲೇಟರ್ ಇರಬಹುದು ಎಂದುಕೊಂಡೆ. ಸುಮಾರು ನೂರು ಕೇಜಿ ಇದ್ದ ಎನ್ನಿಸುತ್ತದೆ. ಒಂದು ತಾಸು ಇಂಟರ್ನಲ್ ಮುಗಿದ ತಕ್ಷಣ ಹತ್ತು ನಿಮಿಷ ಗ್ಯಾಪು. ಆ ಹತ್ತು ನಿಮಿಷದಲ್ಲಿ ಕಾರಿಡಾರಿನಲ್ಲಿ ಹೋಗಿ ಓದಿಕೊಳ್ಳುವುದು ಪುಂಡಬಳಗದವರ ವರಸೆ. ಹಾಗಾಗಿ ನಾನು ಇಡೀ ದಿನ ಕದಲದೇ ಮೂರು ಇಂಟರ್ನಲ್ಗಳನ್ನು ಬರೆದೆ. ಆಗಲೇ ಆತ ನನ್ನನ್ನು ನೋಡಿದ್ದು. ಸುಮ್ಮನೆ ಕೂತವಳನ್ನು ಪದೇಪದೆ ಮಾತನಾಡಿಸಿದ. ಯಾರು ನೀನು ಎಂಬುದಾಗಿಯೂ, ಹೆಸರನ್ನು, ಊರನ್ನು ಮತ್ತು ಯಾಕೆ ಆ ಹುಡುಗರತ್ತ ನೋಡುತ್ತ ಭಯಪಡುತ್ತಿದ್ದೀ ಎಂದು ಕೇಳಿದ. ಇನ್ವಿಜಿಲೇಟರ್ ಎಂದರೆ ಸಭ್ಯಸ್ಥ, ಜವಾಬ್ದಾರಿಯುಳ್ಳವನು ಎಂದೇ ನನ್ನ ಭಾವನೆ. ಎಲ್ಲವನ್ನೂ ಒಂದೇ ಉಸುರಿಗೆ ಹೇಳಿಬಿಟ್ಟೆ. ಅದೇ ತಪ್ಪಾದದ್ದು. ನನ್ನ ಹೆಸರು ನನ್ನ ಊರು ನನ್ನ ಪಿಜಿ ಎಲ್ಲವನ್ನೂ. ಹೇಳಬಾರದಿತ್ತಾ? ಇಂಟರ್ನಲ್ಸ್ ಮುಗಿಯುವ ನಾಲ್ಕು ದಿನವೂ ಆತ ಹಿಂದೆ ಮುಂದೆ ಸುಳಿದಾಡುತ್ತಲೇ ಇದ್ದ.
ತುಂಬಾ ವಾಚಾಳಿ ಮನುಷ್ಯ. ನಾನು ಮಾತು ಕಡಿಮೆ. ಯಾರ ಜತೆಯೂ ಈ ಎರಡು ವರ್ಷಗಳಲ್ಲಿ ಮಾತನಾಡದ ನಾನು ಅವನ ಜೊತೆ ಮಾತನಾಡಿದರೆ ನೋಡಿದವರು ಏನು ತಿಳಿದಾರು ಎಂದು ಅಳುಕಿದೆ. ಆದರೆ ಆತನಿಗೆ ಆ ಅಳುಕೇ ಇಲ್ಲ. ಸ್ವಲ್ಪ ದೂರ ಇರಿ ಎಂದು ಹೇಳಬೇಕೆನ್ನಿಸಿತು. ಅದಕ್ಕಾಗಿಯೇ ಆತನ ಹೆಸರು ತಿಳಿದುಕೊಂಡೆ. ನನ್ನ ಕ್ಲಾಸಿನ ಹುಡುಗರು ನನಗೆ ತುಂಬಾ ತೊಂದರೆ ಕೊಡುತ್ತಾರೆ ಹಾಗಾಗಿ ನೀವು ಹೀಗೆಲ್ಲ ಮಾತನಾಡಿಸುವುದು ಸರಿ ಅಲ್ಲ ಎಂದು ಗಟ್ಟಿ ಮನಸ್ಸು ಮಾಡಿ ಹೇಳಿದೆ. ನಾನು ಮಾತನಾಡುತ್ತಾ ಕವಿತೆ ಬರೆಯುತ್ತೇನೆ ಎಂದು ಹೇಳಿಬಿಟ್ಟಿದ್ದೆ. ಹಾಗಾದರೆ ನಿಮ್ಮ ಪುಸ್ತಕ ಬೇಕು, ಪಿಜಿಗೆ ಬಂದು ಇಸಿದುಕೊಳ್ಳುವುದಾಗಿಯೂ ಹೇಳಿದ. ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡತೊಡಗಿದ. ಯೂನಿವರ್ಸಿಟಿಗೆ ಬಂದು ಕವನ ಸಂಕಲನ ಕೊಡುತ್ತೇನೆಂದರೆ ಯಾಕೆ ಬೇಡವೆಂದ?
ನಾನು ನನ್ನೂರಿನ ಬಸ್ಸು ಹತ್ತುವವರೆಗೂ ಎಲ್ಲವೂ ಚೆನ್ನಾಗಿತ್ತು. ವಾಟ್ಸ್ಯಾಪ್ ನಂಬರ್ ಗಾಗಿ ದುಂಬಾಲುಬಿದ್ದ. ಆಗ ನಾನು ಮತ್ತೆ ಜಾಗ್ರತಳಾದೆ. ಅಲ್ಲಿಯವರೆಗೂ ನನ್ನ ಭಯಗ್ರಸ್ಥ ಮನಸ್ಸು ಜಾಗ್ರತೆಯನ್ನು ಕಳೆದುಕೊಂಡಿತ್ತು ಎನಿಸುತ್ತದೆ. ಅಷ್ಟರಲ್ಲಿ ಇನ್ಸ್ಟಾ ಮೆಸೇಜುಗಳ ಮೂಲಕ ಅಷ್ಟಿಷ್ಟು ವಿಷಯಗಳನ್ನು ಹಂಚಿಕೊಂಡಾಗಿತ್ತು. ಆ ಮೇಧಾವಿ ಪ್ರೊಫೆಸರ್ ನಲ್ಲಿ ಏನು ಕಾಣಲಿಲ್ಲವೋ ಆ ಆತ್ಮೀಯತೆಯನ್ನು ಈ ವ್ಯಕ್ತಿಯಲ್ಲಿ ಕಂಡಿದ್ದೆ. ಇವನು ಕೂಡ ಪಿಎಚ್.ಡಿ ಮಾಡುತ್ತಿದ್ದವನೇ. ಹೀಗೆ ಚಾಟ್ ಮಾಡುತ್ತಾ, ‘ನಾನು ಮೈಸೂರಿಗೆ ತೆರಳುತ್ತೇನೆ’ ಅಂದಿದ್ದೆ. ಅದಕ್ಕೆ ಅವ, ಅಲ್ಲಿ ಯಾರಿದ್ದಾರೆ? ಇಲ್ಲಿ ನಾನಾದರೂ ಇದ್ದೇನೆ ಎಂದಿದ್ದ. ಹೋಗಬೇಡ ಹೋಗಬೇಡ ಎಂದು ಹಂಬಲಿಸುತ್ತಿದ್ದ. ನನಗೆ ಆಂಗ್ಲೋ ಇಂಡಿಯನ್ ಸ್ಟಡೀಸ್ನಲ್ಲಿ ಆಸಕ್ತಿ ಇದೆ ಎಂದು ತಿಳಿದುಕೊಂಡು ಬರೀ ಅದರ ಬಗ್ಗೆಯೇ ಮಾತನಾಡತೊಡಗಿದ. ರುಡ್ಯಾರ್ಡ್ ಕಿಪ್ಲಿಂಗ್ ಕವಿತೆಗಳು, ಜಾರ್ಜ್ ಆರ್ವೆಲ್ನ ಶೂಟಿಂಗ್ ಗ್ಯಾನ್ ಎಲಿಫೆಂಟ್ ಹೀಗೆ. ಜೆಂಡರ್ ಸ್ಟಡಿ ಇಂಟರ್ನಲ್ ಹಿಂದಿನ ದಿನವಂತೂ ಸಾಕಷ್ಟು ಪ್ರಶ್ನೆಗಳ ಸುರಿಮಳೆಗೈದಿದ್ದ. ಪದೇಪದೆ ‘ದಿ ವೇಲ್’ ಕಥೆಯ ಬಗೆಗೆ ಏನನಿಸಿತು ಎಂದು ಮುಜುಗರವಾಗುವಂತೆ ಕೇಳುತ್ತಲೇ ಇದ್ದ. ನನಗೆ ತಿಳಿದಿರಲೇ ಇಲ್ಲ ಈ ಸ್ನೇಹದ ಕಥೆಯೂ ಹೀಗೇ ಅಂತ್ಯವಾಗುತ್ತದೆ ಎಂದು.
ಅದೇನೋ ನಾಲ್ಕು ದಿನಗಳಲ್ಲಿ ಅದ್ಭುತ ಸಂದೇಶ ಪ್ರವಾಹ ಇಬ್ಬರ ಮಧ್ಯೆಯೂ. ಆದರೆ ಅವ ಸ್ವಲ್ಪ ಚೆಲ್ಲುಚೆಲ್ಲಾಗಿ ಆಡುತ್ತಿದ್ದುದೂ ನಿಜ. ಪಿಎಚ್.ಡಿ ಅಧ್ಯಯನದಲ್ಲಿ ಗಂಭೀರವಾಗಿದ್ದುದೂ ನಿಜ. ಬೈಕಿನಲ್ಲಿ ಸುತ್ತಾಡುವುದು ಪಿಜಿ ಬಳಿ ಸುತ್ತಾಡುವುದು ಅವನಿಗೆ ಅತ್ಯಂತ ಸಹಜ ವಿಷಯ. ಆದರೆ ನನಗೆ ಪ್ರತಿಯೊಂದು ವಿಷಯಗಳೂ ಗಂಭೀರವೇ. ಇನ್ಸ್ಟಾನಲ್ಲಿ ಮೆಸೇಜ್, ಲೈಕ್ ಜೋರಾದವು. ಇಲ್ಲಿದ್ಧೆ ಪಿಎಚ್.ಡಿ ಮಾಡು ಎಂದು ಗೋಗರೆಯುವುದು. ನಾನು ಧರಿಸಿದ್ದ ಬಟ್ಟೆಗಳ ಬಣ್ಣದ ಶರ್ಟ್ ಹಾಕಿಕೊಂಡು ಬರುವುದು. ತುಂಬಾ ಕೇರ್ ಮಾಡಿದ ಹಾಗೆ ಮಾಡುವುದು. ಮನೆಯಲ್ಲಿ ಇರಬೇಡ. ಪಿಜಿಗೆ ಬಂದು ಓದಿಕೋ ಎನ್ನುವುದು. ಅನವಶ್ಯಕ ಹೊಗಳಿಕೆ. ನನಗೂ ಅನ್ನಿಸತೊಡಗಿತು ಈ ಎಲ್ಲದರ ಪರಿಣಾಮ ನಾನು ನನ್ನ ಗಂಭೀರತೆ ಕಳೆದುಕೊಳ್ಳುತ್ತಿದ್ದೇನೆಂದು. ನನಗರಿವಿಲ್ಲದೆ ವಾಟ್ಸಪ್ ನಂಬರ್ ಕೊಟ್ಟುಬಿಟ್ಟಿದ್ದೆ. ಈ ಸಹವಾಸ ಶುರುವಾದಾಗಿನಿಂದ ಒಂದೂ ಕವನ ಬರೆಯಲಾಗಿರಲಿಲ್ಲ.
ಅವನಿಗೆ ಗೊತ್ತಿಲ್ಲವೆನ್ನಿಸುತ್ತದೆ, ಇನ್ಸ್ಟಾನಲ್ಲಿ ಮೆಸೇಜ್ ಸ್ಕ್ರೀನ್ ಶಾಟ್ ತೆಗೆದುಕೊಂಡಾಗ ಅದು ನೊಟಿಫಿಕೇಶನ್ ಮೂಲಕ ಅಕೌಂಟ್ ಹೋಲ್ಡರ್ಗೆ ಗೊತ್ತಾಗುತ್ತದೆ ಎಂಬ ವಿಷಯ. ಆ ಬಗ್ಗೆ ಕೇಳಿದಾಗ, ನಾನು ನಿನ್ನ ಯಾವ ಪೋಸ್ಟ್ ಅನ್ನೂ ಸ್ಕ್ರೀನ್ ಶಾಟ್ ತೆಗೆದುಕೊಂಡೇ ಇಲ್ಲ ಎಂದು ವಾದಿಸಿದ. ಒಂದು ದಿನ ನಡುರಾತ್ರಿ ಮೆಸೇಜ್, ಕವನ ಸಂಕಲನ ಬೇಕು ಎಂದು. ಕೊನೆಗೆ ಇವನನ್ನು ಹೇಗೆ ಅವಾಯ್ಡ್ ಮಾಡುವುದು ಎಂದು ಯೋಚಿಸುತ್ತಾ, ‘ಸಹೋದರನಿಗೆ’ ಎಂದು ಮೊದಲ ಪುಟದಲ್ಲಿ ಬರೆದು ಫೋಟೋ ತೆಗೆದು ವಾಟ್ಸಪ್ ಕಳಿಸಿದೆ. ಇದನ್ನು ಆತ ನಿರೀಕ್ಷಿಸಿಯೇ ಇರಲಿಲ್ಲವೇನೋ. ಗೊಂದಲಕ್ಕೆ ಬಿದ್ದು ಸಂದೇಶ ಕಳಿಸುವುದನ್ನು ನಿಲ್ಲಿಸಿದ. ಕಡುಕೋಪ ಬಂದಿರಬಹುದು ಅವನಿಗೆ. ಒಂದು ದಿನ, ಮೊದಲು ಇಲ್ಲಿಗೆ ಬಾ ಆಮೇಲೆ ಮಾತಾಡೋಣ ಎಂದು ಇಂಗ್ಲಿಷ್ನಲ್ಲಿಯೇ ಕನ್ನಡ ಟೈಪಿಸಿ ಕಳಿಸಿದ.
ಮುಂದೇನಾಯಿತು? ಮುಂದಿನ ಕಂತಿನಲ್ಲಿ ಹೇಳುವೆ.
ಪ್ರತಿಕ್ರಿಯೆಗಾಗಿ : tv9kannadadigital@gmail.com
Published On - 3:05 pm, Sun, 15 May 22