ಆಗಾಗ ಅರುಂಧತಿ : ಸ್ನೇಹಿತೆಯರೂ ಇಲ್ಲ, ಫೋನಿನಲ್ಲಿ ಒಬ್ಬ ಗಂಡಸಿನ ನಂಬರಾದರೂ?
Humanity : ಮೇಲಿನ ಮಹಡಿಗೆ ಹೋದಾಗ ಕಣ್ಣಿಗೆ ಕತ್ತಲು ಬಂದು ಧೊಪ್ಪೆಂದು ನೆಲಕ್ಕೆ ಬಿದ್ದೆ. ಎಚ್ಚರಾದಾಗ ಬ್ರೌನಿ ನನ್ನ ಕಾಲುಕೈ ಮೂಸುತ್ತಾ, ಕೂದಲನ್ನು ಎಳೆಯುತ್ತಾ ಕುಂಯಿಗುಡತೊಡಗಿತ್ತು. ತನ್ನ ಬೆನ್ನನ್ನು ನನ್ನ ಬೆನ್ನಿಗೆ ಉಜ್ಜುತ್ತಿತ್ತು.
ಆಗಾಗ ಅರುಂಧತಿ : ಹಾಸ್ಟೆಲ್ಲಿನಿಂದ ಮನೆಗೆ ಕಾರಿನಲ್ಲಿ ವಾಪಾಸಾಗುವಾಗ, ಮುಂದೆ ಏನು ಕಾದಿದೆಯೋ ಎಂಬ ಆತಂಕ ಇದ್ದೇ ಇತ್ತು. ಕಾರಿನೊಳಗೆ ಸುಯ್ಯನೇ ಗಾಳಿ ಬೀಸುತ್ತಿದೆ, ಹಸಿರು ಮರಗಳು ಹಿಂದೆಹಿಂದೆ ಓಡುತ್ತಿವೆ. ಹೆಬ್ಬಾವಿನಂತೆ ಮೈಚೆಲ್ಲಿಕೊಂಡ ರಸ್ತೆ ಮುಗಿಯುತ್ತಲೇ ಇಲ್ಲ. ಎಂಥ ಚಲನೆ ಇದೆ ಇಲ್ಲಿ ಎಲ್ಲದಕ್ಕೂ. ಆದರೆ ನನಗೇಕೆ ನನ್ನ ಕಣ್ಣಮುಂದಿನ ಕ್ಷಣಗಳನ್ನು ಹಾಯಾಗಿ ಅನುಭವಿಸಲಾಗುತ್ತಿಲ್ಲ? ಪರ್ವತ ಹತ್ತಲು ಪರ್ವತಾರೋಹಿ ಶ್ರಮಿಸುವಂತೆ, ಕುದುರೆ ಸವಾರನ ಆದೇಶದಂತೆ ಓಡುವ ಕುದುರೆಯಂತೆ ಧಾವಂತದಿಂದ ಚಲಿಸುತ್ತಿದ್ದೇನೆ. ಇಂಥ ಕಟ್ಟುನಿಟ್ಟು ನನಗೆ ಒಳ್ಳೆಯದೇ, ಕೆಟ್ಟದ್ದೆ? ಫೇಸ್ಬುಕ್ ಬೇಡವೆಂದು ಲಾಗೌಟ್ ಮಾಡಿದ್ದೇನೆ. ವಾಟ್ಸಪ್ ಗ್ರೂಪ್ಗಳನ್ನು ಮ್ಯೂಟ್ ಮಾಡಿದ್ದೇನೆ. ಎಲ್ಲವನ್ನೂ ಈಗಲೇ ನೋಡಲೇ? ಯುವರತ್ನ ಮೂವಿಗೆ ಹೋಗಬೇಕೆಂದುಕೊಂಡಿದ್ದೆ. ಕೆ-ಸೆಟ್ ಎಕ್ಸಾಮ್ ಮುಗಿದ ಮೇಲೆ ಈ ಕೊರೊನಾದಿಂದಾಗಿ ಥಿಯೇಟರ್ಗಳು ಮುಚ್ಚಿದವು. ಎಷ್ಟು ಕಾದಿದ್ದೆ ನಾನು ಸಿನೆಮಾ ನೋಡಲು ಮತ್ತು ಪುನೀತ್ ರಾಜಕುಮಾರರನ್ನು ನೋಡಲು. ಈಗ ಮುಂದೆ ಹೋದ ಪರೀಕ್ಷೆ ಮತ್ತೆ ಬರುವುದೋ? ಅಲ್ಲಿಯವರೆಗೂ ಓದುತ್ತಲೇ ಇರುವುದಷ್ಟೇ. ಅರುಂಧತಿ (Arundhathi)
(ಸತ್ಯ 7)
ಅಪ್ಪನ ಮನೆಯಲ್ಲಿ ನಾಯಿ ಬ್ರೌನಿ ಇರುತ್ತದೆಯಲ್ಲ? ನನ್ನ ಗಿಡಗಳು? ಎಲ್ಲ ಧಾವಂತದಲ್ಲಿಯೂ ಖುಷಿ, ಕುತೂಹಲವನ್ನು ನೆನಪಿಸಿಕೊಂಡು ಮನೆಗೆ ಹೋಗಲೇಬೇಕಿತ್ತು. ಕಾರು ಮನೆಯ ಮುಂದೆ ಬಂದು ನಿಂತಾಗ ಕತ್ತಲು. ಲಗೇಜುಗಳನ್ನು ಬಿಚ್ಚದೆಯೇ ಹಾಗೇ ಕೊಠಡಿಯಲ್ಲಿ ಇಟ್ಟೆ. ರಾತ್ರಿ ಊಟ ಮಾಡಿದೆ. ಸುಸ್ತಿನಿಂದ ನಿದ್ದೆ ಬಂದಿತು.
ಬೆಳಿಗ್ಗೆ ಏಳುತ್ತಲೇ ದೊಡ್ಡ ಕೂಗು, ‘ಬ್ರೌನಿ ಗೇಟಿನ ಹೊರಗೆ ಹೋಯಿತು, ಬ್ರೌನಿ ಬಾ, ಬಾ…’ ಇನ್ನೇನು ಎದ್ದು ನೋಡುವಷ್ಟರಲ್ಲಿ ದೊಡ್ಡ ಚೀರಾಟ, ‘ಅಯ್ಯೋ ನನ್ನ ಎದೆ! ಅಯ್ಯೋ ನನ್ನ ಕಾಲು ಮುರಿಯಿತು.’
ನಾನು ಕಣ್ಣು ಉಜ್ಜಿಕೊಳ್ಳುತ್ತಾ ಹೊರಗೆ ಹೋದೆ, ತಾಯಿ ತಾನೇ ಗೇಟಿನ ಹೊರಕ್ಕೆ ನಾಯಿಯನ್ನು ಬಿಟ್ಟಿದ್ದಾರೆ. ಆಮೇಲೆ ಅದನ್ನು ಹಿಡಿಯಲು ಅದರ ಬೆನ್ನಟ್ಟಿದ್ದಾರೆ. ನೈಟಿ ಕಾಲಿಗೆ ಸಿಕ್ಕು ಧೊಪ್ಪೆಂದು ಬಿದ್ದು, ಕಾಲಿಗೆ ಕಲ್ಲು ತಾಕಿ ಬಲವಾದ ಪೆಟ್ಟು ಬಿದ್ದು ನೆಲಕ್ಕುರುಳಿದ್ದಾಳೆ. ತಂದೆಯೂ ಓಡಿಬಂದರು. ಇಬ್ಬರ ಕೈಯಲ್ಲೂ ಅವರನ್ನು ಎತ್ತಲು ಆಗಲಿಲ್ಲ. ದಾರಿಹೋಕರ ಸಹಾಯದಿಂದ ಅವಳನ್ನು ಒಳಗೆ ಮಲಗಿಸಿದೆವು.
ಆಕೆಯ ಆಕ್ರಂದನ ಹೆಚ್ಚುತ್ತಲೇ ಇತ್ತು. ಸಣ್ಣ ಏಟು ಎಂದುಕೊಂಡಿದ್ದೆವು. ಅರಿಶಿಣ, ಎಣ್ಣೆ ಕಲಸಿ ಹಚ್ಚಬೇಕೆ ಅನ್ನಿಸುತ್ತಿದ್ದರೆ ಇನ್ನೊಮ್ಮೆ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಕಟ್ಟಬೇಕೆ ಎಂಬ ಗೊಂದಲ. ತಂದೆ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಕಟ್ಟೋದೇ ಸೂಕ್ತ ಎಂದ ತಕ್ಷಣ ಹಾಗೇ ಮಾಡಿದೆ. ಆದರೆ ಆಕೆ ಅದನ್ನೂ ಕಿತ್ತು ಬಿಸಾಕಿದಳು. ಅರಿಶಿಣವನ್ನು ಎಣ್ಣೆಯಲ್ಲಿ ಕಲಸಿ ಹಚ್ಚಿದೆ. ಆಕೆಗೆ ಸ್ವಲ್ಪವೂ ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ‘ಯಾಕೆ ಅರಚಿ ಕಿರುಚುತ್ತೀಯಾ?’ ಅಪ್ಪ ಬೈದರು. ಆಕೆ ಹಲ್ಲುಮಟ್ಟೆ ಕಟ್ಟುತ್ತಾ ಉಸ್ ಉಸ್ ಎಂದು ಉಸಿರು ಬಿಡುತ್ತಾ ಬ್ರೌನಿಗೆ ಕೆಟ್ಟದಾಗಿ ಬೈಯುತ್ತಿದ್ದಳು. ಅಲ್ಲಿಗೆ ಚೆನ್ನಾಗಿ ತಿಳಿಯಿತು ನನಗೆ ಏಳರಾಟ ಶನಿ ಅಪ್ಪಳಿಸಿತೆಂದು!
ನನ್ನ ಓದಿಗೆ ಬ್ರೇಕ್ ಬಿದ್ದಿತು. ಆಸ್ಪತ್ರೆಗೆ ಹೋಗಿ ಬಂದದ್ದಾಯಿತು. ಕಾಲಿಗೆ ಕಟ್ಟು ಹಾಕಿಸಿದ್ದಾಯಿತು. ಅಲ್ಲಿಂದ ಆಕೆಗೆ ಮಂಚದ ಮೇಲೆಯೇ ಎಲ್ಲವೂ. ತಿಂಡಿ, ಚಾ, ಊಟ, ಕೈತೊಳೆಯುವುದು ಅಲ್ಲಿಂದಲೇ. ಕೊರೊನಾ ಸಮಯ ಬೇರೆ. ಊಟಕ್ಕಿಂತ ಮುಂಚೆ ಕೈತೊಳೆಯುವ ಪಾತ್ರೆಯನ್ನು ಆಕೆಯಿದ್ದಲ್ಲಿಗೆ ಕೊಂಡೊಯ್ಯಬೇಕು. ತಂದೆಗೆ ರಜೆ ಇರಲಿಲ್ಲ. ಆತನಿಗೆ ಬೆಳಿಗ್ಗೆ ಎಂಟೂವರೆಯೊಳಗೆ ತಿಂಡಿ ಆಗಬೇಕಿತ್ತು ಮತ್ತು ಆತನಿಗೆ ಊಟಕ್ಕೆ ರೊಟ್ಟಿ ಪಲ್ಯವೇ ಕಟ್ಟಬೇಕಿತ್ತು. ಬೆಳಿಗ್ಗೆ ಎದ್ದ ತಕ್ಷಣ ಕುಕ್ಕರಿನಲ್ಲಿ ಬೇಳೆಗೆ ಇನ್ನೊಂದು ಕುಕ್ಕರಿನಲ್ಲಿ ಕಾಳನ್ನು ಬೇಯಲಿಟ್ಟು, ಮೆಣಸಿನಕಾಯಿ ಈರುಳ್ಳಿ ಹೆಚ್ಚುತ್ತಿದ್ದೆ. ನಂತರ ಅದೇ ಹೆಚ್ಚಿದ ಮೆಣಸಿನಕಾಯಿ ಈರುಳ್ಳಿಯನ್ನು ಉಪಯೋಗಿಸಿಕೊಂಡು ಉಪ್ಪಿಟ್ಟು, ಇನ್ನೊಂದು ಕಡೆ ಬೇಯಿಸಿದ ಕಾಳಿನಿಂದ ಪಲ್ಯವನ್ನು ತಯಾರಿಸಿದರೆ ಇಬ್ಬರಿಗೂ ಕೊಡಲು ತಿಂಡಿ. ನಂತರ ತಾಯಿಗೆ ತಿಂಡಿ ಗುಳಿಗೆ ಕೊಟ್ಟು, ಪಾತ್ರೆಗಳನ್ನೆಲ್ಲ ತೊಳೆಯುವುದು.
ಬ್ರೌನಿ ಚಿಕ್ಕದು. ತುಂಬಾ ತುಂಟತನ. ಮಣ್ಣಿನಲ್ಲಿ ಹೊರಳಾಡಿ ಬಂದು ಒಳಗೆಲ್ಲ ಓಡಾಡುತ್ತಿತ್ತು. ನನಗೆ ಎರಡೆರಡು ಬಾರಿ ನೆಲ ಒರೆಸುವ ಕಷ್ಟ. ಗಿಡಗಳಿಗೆ ನೀರು ಹಾಕುವುದು, ಹೊರಗಿನಿಂದ ಕಿರಾಣಿ ಸಾಮಾನು ತರೋದು, ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು, ಕಟ್ಟುವುದು, ಬಡಿಸುವುದು. ಹೀಗೆ ನನಗೇ ತಿಳಿಯದಂತೆ ನಾನು ಇನ್ನೊಂದು ಬದ್ದತೆಗೆ ಇಳಿಯಬೇಕಾಯಿತು. ಏಕೆಂದರೆ ‘ಅಯ್ಯೋ ಎದೆನೋವು ನನ್ನ ಹಾರ್ಟ್ಗೆ ಏನೋ ಆಗಿದೆ ಒಮ್ಮೆ ಹೋಗಿ ಬರೋಣ ಬಾ’. ನೋಡಿದರೆ ಇಸಿಜಿ ನಾರ್ಮಲ್. ಒಂದೇ ಸಮ ಮುಲಾಮು ಹಚ್ಚುತ್ತಲೇ ಇರಬೇಕು. ಆದರೂ ಸಮಾಧಾನವಿಲ್ಲ. ಜೋರಾಗಿ ಬಯ್ಯುವುದು ಬ್ರೌನಿಯಿಂದಲೇ ಹೀಗಾಯಿತೆಂದು. ಸಾಯಂಕಾಲವಾದರೂ ನನ್ನ ಕೆಲಸಗಳು ಮುಗಿಯುತ್ತಿರಲಿಲ್ಲ. ಏಕೆಂದರೆ ಮಧ್ಯಾಹ್ನ ಆಕೆಗೆ ನಾನು ಮಾಡಿದ ಅನ್ನ ಸಾರು ಪಲ್ಯ ರೊಟ್ಟಿ ರುಚಿ ಬರುತ್ತಿರಲಿಲ್ಲ. ‘ಅಯ್ಯೋ ನನಗೆ ಕೊರೊನಾ ಬಂದಿದೆ. ನೀನು ಮಾಡಿದ ಅಡುಗೆಯ ವಾಸನೆಯೇ ತಿಳಿಯುತ್ತಿಲ್ಲ, ರುಚಿಯೂ ಗೊತ್ತಾಗುತ್ತಿಲ್ಲ’ ಎಂದು ರಾತ್ರಿ ಎಬ್ಬಿಸಿ ಎಬ್ಬಿಸಿ ದಿಗಿಲು ಬೀಳಿಸುತ್ತಿದ್ದಳು.
ಬೆಳಿಗ್ಗೆ ತಂದೆಗೆ ತಿಂಡಿ ಊಟದ ಬಗೆಗೆ ಕೇಳಿದಾಗ , ‘ಈಗಲೇ ನಾನು ಚೆನ್ನಾಗಿ ತಿಂಡಿ ಊಟ ಮಾಡುತ್ತಿರುವುದು, ಆಕೆಗೆ ಕಾಲು ಹಾಗೇ ಆದದ್ದೇ ಒಳ್ಳೆಯದಾಯಿತು ಮೊದಲು ಬರೀ ಊಟ ತಿಂಡಿಯಲ್ಲಿ ಕೂದಲು ಬರುತ್ತಿದ್ದವು ಎನ್ನಬೇಕೆ?’ ಹಾಗಾದರೆ ಆಕೆಗೆ ನಿಜವಾಗಲೂ ಕೊರೊನಾ ಬಂದಿದೆಯೇ? ಅಂದಿದ್ದಕ್ಕೆ ಆತ ನಗುತ್ತಾ, ‘ಸಾಯಲಿ ಬಿಡು’ ಎಂದು ಹೋದ. ಆಕೆಯ ಮಾತುಗಳು ತಂದೆಗೆ ತಮಾಷೆ ಎನ್ನಿಸಿತ್ತು. ಆದರೆ ಆಗ ಎಲ್ಲೆಡೆ ಕೊರೊನಾ ಉಲ್ಬಣಗೊಂಡಿತ್ತು. ತಂದೆ, ಯಾವಾಗಲೂ ಹೀಗೆ ಎಲ್ಲದರಲ್ಲಿಯೂ ಅಸಡ್ಡೆ. ಆದರೆ ನಾವು ಹಾಗೆ ಮಾಡಲಾಗುತ್ತದೆಯೇ. ಮತ್ತೆ ಆಕೆಗೆ ಜಂಡುಬಾಮ್ ನೀಡಿದೆ. ವಾಸನೆ ನೋಡು ಎಂದು. ಆಕೆಗೆ ಅದು ಕೂಡ ವಾಸನೆ ಬರಲಿಲ್ಲ. ಒಂದೇ ಕ್ಷಣಕ್ಕೆ ದಂಗಾಗಿ ಆಟೊ ಕರೆತಂದು ನಿಲ್ಲಿಸಿದೆ.
ಮೆಲ್ಲಗೆ ಆಕೆಯ ರಟ್ಟೆಯನ್ನು ಹಿಡಿದುಕೊಂಡು ಆಟೊದಲ್ಲಿ ಕೂಡಿಸಿದೆ. ತಪಾಸಣೆ ಮಾಡಿಸಿ ಬಂದೆವು. ಮೊಬೈಲಿಗೆ ಮೆಸೇಜ್ ಬರುತ್ತದೆ ಎಂದು ಹೇಳಿಕಳಿಸಿದರು. ಯಾವುದಕ್ಕೂ ಮೇಲಿನ ರೂಮಿಗೆ ಶಿಫ್ಟ್ ಆಗುತ್ತೀಯಾ? ನೀನು ಕ್ವಾರಂಟೈನ್ ಆಗುತ್ತೀಯಾ? ಎಲ್ಲವನ್ನೂ ನಿನ್ನ ರೂಮಿಗೇ ತಂದುಕೊಡುತ್ತೇನೆ. ನಿನಗೆ ಆಗಾಗ ಕಷಾಯವನ್ನೂ ಕೊಡುತ್ತೇನೆ. ಹೇಗಾದರೂ ಮೇಲೆ ಹತ್ತಿ ಅಲ್ಲೇ ಇರು ಅಂದೆ. ಅದಕ್ಕವಳು, ‘ನಾನೇನು ಮಾಡಲಿ? ಬಂದ್ರೆ ಎಲ್ಲರಿಗೂ ಬರಲಿ ಬಿಡು. ನಿಮ್ಮ ಅಪ್ಪನೂ ಹೊರಗಡೆ ಹೋಗಿ ಬರಲ್ವಾ? ನಾನಂತೂ ಮೇಲಿನ ರೂಮಿಗೆ ಶಿಫ್ಟ್ ಆಗಲ್ಲ’ ಎಂದುಬಿಟ್ಟಳು!
ಔಷಧಿಯ ವ್ಯವಸ್ಥೆ ಮಾಡಿದೆ. ‘ಗುಳಿಗೆಗಳು ನನಗೆ ಹಿಡಿಸುತ್ತಿಲ್ಲ, ನಾನಂತೂ ತೆಗೆದುಕೊಳ್ಳುವುದಿಲ್ಲ’ ಎಂದು ಅವುಗಳನ್ನು ಕಾಲಿನಿಂದ ಒದ್ದುಬಿಟ್ಟಳು. ಊಟ ಕೊಟ್ಟವಳೇ, ಆಕೆಗೆ ಕೈತೊಳೆಸಿದವಳೇ, ಆಕೆಗೆ ಬಾಯಿಯನ್ನೂ ಒರೆಸಿ ಅಡುಗೆಮನೆಗೆ ಇಲ್ಲವೇ ಬೇರೆ ಕೆಲಸಕ್ಕೆ ನಡೆದುಬಿಡುತ್ತಿದ್ದೆ. ಆದರೆ ಒಮ್ಮೆ ನಾನು ದಂಗಾಗಿ ಆಕೆಯ ಪಕ್ಕವೇ ಎರಡು ತಾಸು ಕೂತಾಗ ತಿಳಿಯಿತು. ಆಕೆ ಬಿಟ್ಟೂಬಿಡದೆ ನ್ಯೂಸ್ ಚಾನೆಲ್ಲುಗಳನ್ನು ನೋಡುತ್ತಿದ್ದಳು. ಆ ಆಸ್ಪತ್ರೆ, ನೋವು ನರಳಾಟ ಸಾವು, ಹೆಣ ಮತ್ತೀಕೆ 24 ತಾಸು ಮಂಚದ ಮೇಲೆ ಮಲಗಿರುವುದು.. ಪರಿಣಾಮ ರಾತ್ರಿ ಆಕೆಗೆ ಕೆಟ್ಟ ಕೆಟ್ಟ ಕನಸು ಬೀಳುತ್ತಿದ್ದವು. ಆಗೆಲ್ಲಾ ಕಾಲು ನೋವು ಎದೆ ನೋವು ಎಂದು ಅರಚುತ್ತಿದ್ದಳು. ನನ್ನ ನಿದ್ರೆಯೂ ಹಾರಿಹೋಗುತ್ತಿತ್ತು. ನಾನು ಗ್ಯಾಸ್ ಹಚ್ಚಿ ಹಂಚನ್ನಿಟ್ಟು ಬಟ್ಟೆಯಿಂದ ಆಕೆಯ ಎದೆಗೆ ಶಾಖ ನೀಡಬೇಕಿತ್ತು. ಬೆವರು ಬರುತ್ತಲೇ ಉರಿ ಉರಿ ಎಂದು ಚೀರಿ ನಿಂಬೆಪಾನಕ ಬೇಕು ಎನ್ನುತ್ತಿದ್ದಳು.
ಟಿವಿ ಪ್ಲಗ್ ಕಿತ್ತಿಟ್ಟ ಮೇಲೆ ಆಕೆಗೆ ಸ್ವಲ್ಪ ನಿರಾಳವಾಯಿತು. ಇನ್ನೇನು ಆಕೆಯ ಕಾಲುನೋವು ಸಂಪೂರ್ಣ ಗುಣಮುಖವಾಯಿತು ಎಂದಾಗ, ಮೊಬೈಲ್ಗೆ ಮೆಸೇಜ್ ಬಂದುಬಿದ್ದಿತ್ತು. ಕೊರೊನಾ ನೆಗೆಟಿವ್. ಒಂದು ನಿರಾಳದಲ್ಲಿ ಇಬ್ಬರೂ ಟಿವಿಯಲ್ಲಿ ಮಹಾಭಾರತ ನೋಡಲು ಶುರುವಿಟ್ಟುಕೊಂಡೆವು. ಆದರೆ ತಂದೆಯ ಕುಡಿತ ದಿನೇದಿನೆ ಹೆಚ್ಚುತ್ತಲೇ ಹೋಯಿತು. ನನ್ನ ಗಮನ ಬರೀ ಈಕೆಯ ಕಾಲುನೋವು ಎದೆನೋವು ಹಾಗೂ ಸುಳ್ಳು ಕೊರೊನಾ ಮೇಲೆಯೇ ಹೋಯಿತೇ ಹೊರತು ಆತನ ಕುಡಿತದ ಬಗೆಗೆ ಹೋಗಲೇ ಇಲ್ಲ.
ಒಂದು ದಿನ ನಾನು ಮತ್ತು ಆಕೆ ಸಂಜೆ ದೀಪ, ಊದಿನಕಡ್ಡಿ ಹಚ್ಚಿಟ್ಟು ಮಹಾಭಾರತ ನೋಡುತ್ತಾ ಕುಳಿತುಕೊಂಡಿದ್ದೆವು. ಹೊರಗಿನಿಂದ ಬಂದ ತಂದೆ, ರೂಮಿಗೆ ಹೋಗಿ ಕುಡಿಯುತ್ತಿದ್ದ. ಉಪ್ಪಿನಕಾಯಿ ತರುವಂತೆ ತಾಯಗೆ ಹೇಳಿದ. ಬ್ಯಾಗ್ರೌಂಡ್ ಮ್ಯೂಸಿಕ್ ಜಾಸ್ತಿ ಇರುವ ಕಾರಣ ಡೈಲಾಗ್ ಸರಿಯಾಗಿ ಕೇಳುವುದಿಲ್ಲವೆಂದು ತಾಯಿ ಟಿವಿ ಸೌಂಡ್ ಜಾಸ್ತಿ ಕೊಟ್ಟಿದ್ದಳು. ಆಫ್ ಮಾಡಿರಿ ಎಂದ. ಆಕೆ ಮಾಡಲಿಲ್ಲ. ಆಕೆಗೆ ರೂಮಿನಿಂದ ಹೊರಗೆ ಬಂದು ರಪ್ಪೆಂದು ಬಾರಿಸಿದ. ನನಗೆ ಸಿಟ್ಟು ಬಂದಿತ್ತು. ಅವನ ನಡೆಯನ್ನು ಪ್ರಶ್ನಿಸಿದೆ. ನಮ್ಮಷ್ಟಕ್ಕೆ ನಮಗೂ ಮನರಂಜನೆ ಬೇಡವೆ? ಎಂದೆ. ಆತ, ‘ನಿಮ್ಮಿಬ್ಬರನ್ನೂ ಕತ್ತರಿಸಿ ಹಾಕಲು ಹೇಳುತ್ತೇನೆ ಕಂದಲಿಯಿಂದ. ನೀವಿಬ್ಬರೂ ಟಿವಿ ನೋಡಬಾರದು ಅಷ್ಟೇ’ ಎಂದಾಗ ಗಾಬರಿಯಾಯಿತು. ನನಗೆ ಗೃಹಪ್ರವೇಶದ ದಿನ ಕಿವಿ ಹರಿದದ್ದು, ಅಷ್ಟಾದರೂ ಈತ ಸುಮ್ಮನಿದ್ದುದು ನೆನಪಿಗೆ ಬಂತು. ಇಂತಹ ದುಷ್ಟ ಗಂಡಸರು! ನಾನೆಂತಹ ಮೂರ್ಖ ಹುಡುಗಿ. ನಾನು ಹಾವಿಗೆ ಹಾಲೆರದಂತಾಯಿತೇ? ಹಾಸ್ಟೆಲ್ಲಿನಲ್ಲಿ ಎಲ್ಲರ ವಿರೋಧ ಕಟ್ಟಿಕೊಂಡು ಎಲ್ಲರನ್ನು ದೂರವಿರಿಸುತ್ತ ಅಂತರ್ಮುಖಯಾಗುತ್ತ ಬಂದೆ. ಇಲ್ಲಿಗೆ ಬಂದು ಓದನ್ನು ಮರೆತು ಕೊನೆಗೆ ನನ್ನನ್ನೂ ಮರೆತು ಇಬ್ಬರನ್ನೂ ಮಕ್ಕಳಂತೆ ನೋಡಿಕೊಂಡೆ. ನಾನು ಹುಡುಗರನ್ನು ಎಷ್ಟು ದೂರವಿರಿಸಿದ್ದೆನೆಂದರೆ, ಹುಡುಗರ ವಿರೋಧ ಕಟ್ಟಿಕೊಳ್ಳುವಷ್ಟು.
ತಾಯಿ ತನ್ನಷ್ಟಕ್ಕೆ ತಾ ಮಹಾಭಾರತದಲ್ಲಿ ಲೀನ. ನಾನು ಆಕೆಯ ಪರವಾಗಿ ವಾದಿಸಿದ್ದನಷ್ಟೇ! ಆದರೆ ಆಕೆ ಕೊನೆಗೆ ಆತನ ಪರವಾಗಿಯೇ ನಿಂತಳು. ‘ಇಲ್ಲ ಆತ ಕುಡಿದಿದ್ದಾನೆ. ಆತನ ಮಾತನ್ನು ನಂಬಬೇಡ’ ಮುಂತಾಗಿ ಹೇಳತೊಡಗಿದಳೇ ಹೊರತು, ಅವನ ತಪ್ಪನ್ನು ಅವನಿಗೆ ಹೇಳಲೇ ಇಲ್ಲ. ನನ್ನ ಮನಸ್ಸು ತುಂಬಾ ದುರ್ಬಲವಾಗಿ ಹೋಯಿತು. ನಾನು ಎಲ್ಲಿದ್ದೇನೆ? ನಾನು ಯಾರಿಗಾಗಿ ಬದುಕುತ್ತಿದ್ದೇನೆ? ನಾನು ಏನು ಮಾಡುತ್ತಿದ್ದೇನೆ? ನಾನು ಚೆನ್ನಾಗಿ ಓದಲಿಲ್ಲವೆ? ಈ ಮೂರು ತಿಂಗಳು ಇವರನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲವೇ? ಥೇಟ್ ಬಾಣಂತಿಯಂತೆ ನೋಡಿಕೊಂಡಿದ್ದೇನೆ. ಹೋಗಲಿ ಯಾವ ಹುಡುಗನನ್ನಾದರೂ ಮಾತನಾಡಿಸಿದ್ದೇನೆಯೇ? ಮತ್ತೆ ಈತ ಕುಡಿದು ಬಂದು ನನ್ನನ್ನೇ ಕಂದಲಿಯಿಂದ ಕೊಚ್ಚಿಸುತ್ತೇನೆ ಎನ್ನುತ್ತಿದ್ದಾನೆ. ಆತ ಎಲ್ಲಿ ಮನೆಬಿಟ್ಟು ಇನ್ನೊಬ್ಬ ಹೆಂಡತಿಯ ಮನೆಗೆ ಹೋಗುತ್ತಾನೋ ಎಂದು ನನ್ನ ತಾಯಿ, ಆತನ ತಪ್ಪಿದ್ದರೂ ಆತನನ್ನೇ ಸಮರ್ಥಿಸಿಕೊಳ್ಳುತ್ತಿದ್ದಾಳೆ. ಯೋಚಿಸುತ್ತ ನಾನು ಮೇಲಿನ ಮಹಡಿಗೆ ಹೋದಾಗ ಕಣ್ಣಿಗೆ ಕತ್ತಲು ಬಂದಿತ್ತು. ಧೊಪ್ಪೆಂದು ನೆಲಕ್ಕೆ ಬಿದ್ದೆ. ಎಚ್ಚರಾದಾಗ ಬ್ರೌನಿ ಓಡಿ ಬಂದು, ನನ್ನ ಕಾಲುಕೈ ಮೂಸಿ ನೋಡುತ್ತಾ ಕೂದಲನ್ನು ಎಳೆಯುತ್ತಾ ಕುಂಯಿ ಎನ್ನತೊಡಿತ್ತು, ತನ್ನ ಬೆನ್ನನ್ನು ನನ್ನ ಬೆನ್ನಿಗೆ ಉಜ್ಜಿ ಮೇಲೇಳುವಂತೆ ಕುಯಿಂ ಕುಯಿಂ ಮಾಡತೊಡಗಿತ್ತು. ನಾನು ಎದ್ದು ಮಂಚದ ಮೇಲೆ ಮಲಗಿಕೊಂಡೆ. ನನಗೆ ಗೊತ್ತಾಗದಂತೆ ಕಣ್ಣೀರು ಉರುಳತೊಡಗಿದವು. ನನ್ನ ಸಂತೈಸಲು ಯಾರಾದರೂ ಬೇಕೆನ್ನಿಸಿತು. ಸ್ನೇಹಿತೆಯರು ಯಾರಿದ್ಧಾರೆ? ಹೋಗಲಿ ಫೋನಿನಲ್ಲಿ ಒಬ್ಬ ಹುಡುಗ, ಗಂಡಸಿನ ನಂಬರೂ? ಊಹೂಂ.
ಭಯ ಕಾಡತೊಡಗಿತು. ಮತ್ತೆ ಮತ್ತೆ ಈ ಜಗಳಗಳು, ತಂದೆಯ ಕುಡಿತ, ಅವನ ಲಿವರ್ ಡ್ಯಾಮೆಜ್ ಆಇರುವುದು, ಬಿಡದೆ ಸ್ಮೋಕಿಂಗ್. ಅವ ಏನು ಮಾಡಿದರೂ ಹೇಗಿದ್ದರೂ ತಾಯಿ ಮಾತ್ರ ಹುಚ್ಚಿಯಂತೆ ಅವನನ್ನು ಪ್ರೀತಿಸುತ್ತಾಳೆ. ಅವನಿಗೆ ಯಾರೂ ಏನೂ ಅನ್ನುವ ಹಾಗಿಲ್ಲ. ನನಗೆ ಆಕಾಶವೇ ತಲೆಮೇಲೆ ಬಿದ್ದಂತಾಯಿತು. ಇನ್ನೇನು ಲಾಕ್ಡೌನ್ ಮುಗಿಯುತ್ತದೆ ಎಂಬ ಸುದ್ದಿಯನ್ನು ಓದಿದೆ. ಜುಲೈ 25ಕ್ಕೆ ಕೆ-ಸೆಟ್ ಪರೀಕ್ಷೆ ಎಂಬ ಅಧಿಕೃತ ಸುತ್ತೋಲೆ ಬಂದಿತ್ತು. ಆದರೆ ನಾನು ಮಾತ್ರ ನಾನಾಗಿರಲಿಲ್ಲ. ಕುಳಿತರೂ ನಿಂತರೂ ಮಲಗಿದರೂ ನಿದ್ರೆಯಲ್ಲಿಯೂ ಎಲ್ಲೆಲ್ಲಿಯೂ ಭಯವೇ! ನನಗೆ ಯಾರಿದ್ದಾರೆ ಎಂಬ ಆತಂಕ. ಹಾಸ್ಟೆಲ್ಲಿನಲ್ಲಿ ಮಾಡಿದ್ದ ನೋಟ್ಸುಗಳನ್ನು ಹಾಗೂ ಕೋಚಿಂಗ್ ನೋಟ್ಸುಗಳನ್ನು ಭಯದಲ್ಲಿಯೇ ಓದಿಕೊಳ್ಳುತ್ತಿದ್ದೆ. ಭಯವಿದ್ದರೆ ಏನನ್ನೂ ಮಾಡಲಾಗುವುದಿಲ್ಲ, ಪ್ರೀತಿಯನ್ನೂ. ಮುಂದೇನಾಯಿತು? ಕಾಯುತ್ತೀರಲ್ಲ…
(ಮುಂದುವರಿಕೆ ಅರುಂಧತಿ ಬರೆದಾಗ)
ಪ್ರತಿಕ್ರಿಯೆಗಾಗಿ : tv9kannadadigital@gmail.com
Published On - 11:27 am, Thu, 12 May 22