Literature : ಅಭಿಜ್ಞಾನ ; ‘ನಿನಗೆ ಕೆಲವರ ನಾಟಕ ಸೇರೋದಿಲ್ಲ, ಆದರೆ ಅದನ್ನು ಆನಂದಿಸೋದನ್ನು ಕಲಿ ಮಾರಾಯಾ’

Shantinath Desai : ’ಶಾಂತಿನಾಥ್‌ಗೆ ಹತ್ತಿರವಾಗಿದ್ದ ಆದರೆ ವಯಸ್ಸಿನಲ್ಲಿ ಅವರಿಗಿಂತ ತುಂಬಾ ಚಿಕ್ಕವಳಿದ್ದ-ಒಬ್ಬಾಕೆ ಯುವತಿಯನ್ನು ನಾವು ಆಕೆಯ ಮನೆ ಸಮೀಪ ಇಳಿಸಬೇಕಿತ್ತು. ಶಾಂತಿನಾಥ್ ಬಹಳ ಭಾವುಕರಾಗಿದ್ದರು. ಆಕೆಯ ಕೈ ಹಿಡಿದು ಆರ್ತರಾಗಿ, "I don't want to die..." ಎಂದು ಹೇಳತೊಡಗಿದರು.’ ಕೆ. ವಿ. ತಿರುಮಲೇಶ

Literature : ಅಭಿಜ್ಞಾನ ; ‘ನಿನಗೆ ಕೆಲವರ ನಾಟಕ ಸೇರೋದಿಲ್ಲ, ಆದರೆ ಅದನ್ನು ಆನಂದಿಸೋದನ್ನು ಕಲಿ ಮಾರಾಯಾ’
ಡಾ. ಶಾಂತಿನಾಥ ದೇಸಾಯಿ
Follow us
ಶ್ರೀದೇವಿ ಕಳಸದ
|

Updated on: Dec 24, 2021 | 10:43 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com
*
ಡಾ. ರಾಮಚಂದ್ರ ದೇವ ಸಂಪಾದಿಸಿದ ‘ಶಾತಿನಾಥ ದೇಸಾಯಿ ವಾಚಿಕೆ’ಯಲ್ಲಿ ಡಾ. ಕೆ.ವಿ. ತಿರುಮಲೇಶ ಅವರು ಬರಹದಿಂದ ಆಯ್ದ ಭಾಗ. *

ಸಾಹಿತ್ಯ ಸಮಾರಂಭಗಳಲ್ಲಲ್ಲದೆ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸಭೆಗಳಲ್ಲಿ ನಾವು ಹಲವು ಸಲ ಭೇಟಿಯಾಗಿದ್ದೆವು. ಕೆಲವೊಮ್ಮೆ ಅವರು ನನಗೆ ಮುಂದಾಗಿಯೇ ಬರೆದು, ನೀನು ಖಂಡಿತಾ ಬರಬೇಕು ಎಂದು ಒತ್ತಾಯಿಸುತ್ತಿದ್ದರು. ಖಾಸಗಿ ದೋಸ್ತಿಗಳಿಲ್ಲದಿದ್ದರೆ ಶಾಂತಿನಾಥ್ ಕಸಿವಿಸಿಪಡುತ್ತಿದ್ದ ವ್ಯಕ್ತಿ, ಶಾಂತಿನಾಥ್ ಎಲ್ಲಿ ಸಿಕ್ಕಿದ್ದರೂ ನಾನು ಅವರ ಜತೆ ಇದ್ದುಬಿಡುತ್ತಿದ್ದೆ.

ಅಪರೂಪಕ್ಕೆ ನಾವು ಪತ್ರ ವ್ಯವಹಾರ ಮಾಡುವುದಿತ್ತು. ಹೀಗೆ ಶಾಂತಿನಾಥ್ ನನಗೆ ಬರೆದ ಕೊನೆಯ ಪತ್ರ ಇದೇ ಜನವರಿ ಹದಿನೈದರ ತಾರೀಖು ಹೊತ್ತಿದೆ. ಆಗಲೇ ಪುಪ್ಪಸ ಕಾಯಿಲೆಯಿಂದ ನರಳುತ್ತಿದ್ದರು. ಆಕ್ಸಿಜನ್ ಸಿಲಿಂಡರಿನ ಆಶ್ರಯದಿಂದ ಅವರು ಉಸಿರಾಡುತ್ತಿದ್ದುದು, ಹಾಸಿಗೆಯಲ್ಲಿ ಮಲಗಿಕೊಂಡೇ ಅವರು ತಮ್ಮ ಕೊನೆಯ ಕಾದಂಬರಿ “ಓಂ ಣಮೋ’’ ಬರೆದು ಮುಗಿಸಿದ್ದು, ಇದೆಲ್ಲ ನನಗೆ ಅವರ ಆ ಕಾಗದದಿಂದಲೇ ಗೊತ್ತಾದುದು. ಅವರ ಪತ್ರಕ್ಕೆ ನಾನು ಸಕಾಲದಲ್ಲಿ ಉತ್ತರಿಸದ ವ್ಯಥೆ ನನ್ನದು. ಇಂದು ನಾಳೆಯೆಂದು ಮುಂದೆ ಹಾಕುತ್ತಲೇ ಇದ್ದೆ. ಈಗ ಶಾಂತಿನಾಥ್‌ಗೆ ಬರೆಯುವಂತಿಲ್ಲ. ಅವರ ಕೊನೆಯ ಕಾಗದದಲ್ಲಿ ಅವರು ನನ್ನ ಬಗ್ಗೆ ತುಂಬ ಅಭಿಮಾನದಿಂದ ಬರೆದಿದ್ದರು: “ನಿನ್ನಲ್ಲಿಯ ಸೃಜನಶಕ್ತಿಯ ಬಗ್ಗೆ ನನಗೆ ತುಂಬ ವಿಶ್ವಾಸ, ಅಭಿಮಾನ, ಅದನ್ನು ಸಿಕ್ಕಿದತ್ತ ದುಂದುಮಾಡಬೇಡ. ಒಂದು ಒಳ್ಳೆ Concentrationನಿಂದ ಬರೆದ ಕೃತಿ ಬರಲಿ. ನಮ್ಮಂಥವರ ಖುಷಿಗಾದರೂ ಬರಿ” ಎಂದಿದ್ದರು.

ಶಾಂತಿನಾಥ್ ಹೀಗೆ ನನ್ನನ್ನು ಉತ್ತೇಜಿಸುತ್ತಿದ್ದುದು ಇದೇನೂ ಮೊದಲ ಸಲವಲ್ಲ. ಇದಕ್ಕೂ ಮೊದಲು ನಾನೊಮ್ಮೆ ಎರಡು ವರ್ಷಗಳ ಹಿಂದೆ, ನನ್ನ ಯಾವುದೋ ತೊಳಲನ್ನು ಕಾಗದದಲ್ಲಿ ಪ್ರಕಟಪಡಿಸಿದಾಗ, ಅವರು ಬರೆದಿದ್ದರು : ‘‘ನಿನ್ನ ಇತ್ತೀಚಿನ ಪತ್ರಗಳನ್ನೋದಿದರೆ ನಿನ್ನನ್ನು ಒಂದು ರೀತಿಯ ಏಕಾಕಿತನ ಮುತ್ತಿದೆ-ನೀನೇನೋ ಒಂದು Crisis (Psychological) ನಲ್ಲಿ ಇದ್ದಿಯಾ ಅಂತ ಅನಿಸ್ತಾ ಇದೆ. ಏನಾಗಿದೆ ನಿನಗೆ? ಹೈದರಾಬಾದಿನ ವಾತಾವರಣಕ್ಕೆ ನೀನು ಒಗ್ಗಿಲ್ಲ… ಅದು ತೀರ ಸ್ಪಷ್ಟ ಹಾಗೂ ಕನ್ನಡದ ಸದ್ಯದ ಒಲವುಗಳಿಗೂ ನೀನು ಒಗ್ಗಿಲ್ಲ… ನವ್ಯದ ಅರ್ಥಹೀನತೆ, ಭ್ರಮನಿರಸನತೆ…. ಕಿಂಕರ್ತವ್ಯತಾಮೂಢತ್ವ ಇತ್ಯಾದಿ ಕೆಟ್ಟ ಆಯಾಮಗಳಲ್ಲಿ ನೀ ಸಿಲುಕಿದಂತಿದೆ. ಅದಕ್ಕೆ ಉಪಾಯ ಕಾದಂಬರಿ ಬರೆಯೋದು! ನಿನ್ನ ಸ್ವಂತದ ಅನುಭವಗಳಿಗೆ ಸಮೀಪವಾದ ಒಂದು ಕಾದಂಬರಿ ಬರಿ… ನೋಡು ಮಜಾ… ನಿನಗೆ ಕೆಲವರ ‘ನಾಟಕ’ ಸೇರೋದಿಲ್ಲ. ನನಗೆ ಗೊತ್ತು. ಆದರೆ ಆ ಕೆಲವರೂ ತಮ್ಮ ನಾಟಕ ನಾಟಕವೆಂದೇ ಆಡ್ತಿರುತ್ತಾರೆ. ಇದು ನಿನಗೆ ಗೊತ್ತೇ? ನನಗೆ ನಾಟಕ Enjoy ಮಾಡಲು ಬರುತ್ತದೆ. ನಿನಗೆ ಬರೋದಿಲ್ಲ. ಸ್ವಲ್ಪ ನಗಲು ಕಲಿತುಕೋ ಮಾರಾಯ, ನಗೋದು ಕಲಿ. ಜೀವನ ನಿನ್ನ ಪ್ರತಿಭೆಯನ್ನು ಎಲ್ಲೋ By-pass ಮಾಡ್ತಾ ಇದೆ ಎಂಬ ಆತ್ಮ-ಕನಿಕರ ನಿನಗಿದೆ. ಛೇ-ನೀನು ಬಹಳ ಮಹಾತ್ವಾಕಾಂಕ್ಷಿ ಇದ್ದೀಯಾ ಪ್ರಾಮಾಣಿಕವಾಗಿದ್ದೀಯಾ-ಅದೇ ತೊಂದರೆ.”

ನವ್ಯವನ್ನು ಚೆನ್ನಾಗಿ ಬಲ್ಲ ಶಾಂತಿನಾಥ್ ನನ್ನ ವೈಯಕ್ತಿಕ ತಲ್ಲಣಗಳಲ್ಲೂ ನವ್ಯವನ್ನೇ ಕಾಣುತ್ತಿದ್ದುದು ನೋಡಿ ನನಗೆ ಇನ್ನಷ್ಟು ಹತಾಶೆಯಾಗಿತ್ತು. ಏನಿದ್ದರೂ, ಅವರಿಗೆ ಮುಖ್ಯವಾದುದು ನನ್ನನ್ನು ಸಮಾಧಾನಗೊಳಿಸುವುದು ಎನ್ನುವುದು ಕೂಡ ನನಗೆ ಗೊತ್ತಿದ್ದ ವಿಷಯವೆ. ಬಂದಾಗ ನಾನು ‘ಮುಸುಗು’ಎಂಬ ಹೆಸರಿನ ನನ್ನದೇ ಆದ ಕಾದಂಬರಿಯೊಂದನ್ನು ಬರೆದು ಮುಗಿಸಿ, ಅದರ ಬೆನ್ನ ಹಿಂದೆಯೆ ಒಂದು ಜರ್ಮನ್ ಕಾದಂಬರಿಯ ಭಾಷಾಂತರದಲ್ಲಿ ತೊಡಗಿದ್ದೆ. ಇದೇ ಕಾರಣಕ್ಕೆ ನಾನವರಿಗೆ ಉತ್ತರ ಬರೆಯುವುದು ಸಾಧ್ಯವಾಗಲಿಲ್ಲ. ನನ್ನ ಕಾದಂಬರಿಯನ್ನು ಇನ್ನು ಶಾಂತಿನಾಥ್‌ಗೆ ತೋರಿಸಿ ಅವರ ಪ್ರಶಂಸೆಯನ್ನು ನಾನು ಗಿಟ್ಟಿಸುವ ಹಾಗಿಲ್ಲ. ಮಾರ್ಚಿನಲ್ಲಿ ಲಂಕೇಶ್‌ರ ಕುರಿತಾದ ಸಭೆಯೊಂದರಲ್ಲಿ ಬೆಂಗಳೂರಲ್ಲಿ ಭಾಗವಹಿಸಿ ಹೈದರಾಬಾದಿಗೆ ಮರಳಿದ ಮೇಲೆ ಶಾಂತಿನಾಥ್‌ಗೆ ಬರೆಯಬೇಕೆಂದುಕೊಂಡಿದ್ದೆ. ಆದರೆ ವೈಯಕ್ತಿಕ ಕಾರಣಕ್ಕಾಗಿ ನನ್ನ ಮನಸ್ಸು ಈ ಹಿಂದೆಂದೂ ಇಲ್ಲದ ರೀತಿಯಲ್ಲಿ ಪ್ರಕ್ಷುಬ್ಧಗೊಂಡಿತ್ತು. ಬರೆಯುವುದಕ್ಕೆ ಆಗಲೇ ಇಲ್ಲ.

Abhijnana excerpt from Kannada writer KV Tirumalesh article on Shantinath Desai edited by Ramachandra Dev Published by Nudi Pustaka

ಡಾ. ಕೆ.ವಿ. ತಿರುಮಲೇಶ ಮತ್ತು ಡಾ. ರಾಮಚಂದ್ರ ದೇವ

ಬದುಕಿನ ಕುರಿತು ಆಗಾಧವಾದ ಪ್ರೀತಿಯನ್ನಿಸಿರಿಕೊಂಡಿದ್ದ ಶಾಂತಿನಾಥ್ ಕೊನೆಯ ಕಾಲವನ್ನು ಹೇಗೆ ಎದುರಿಸಿದರೆಂದೇ ಗೊತ್ತಾಗುವುದಿಲ್ಲ. ತಮ್ಮ ಕೊನೆಗಾಲ ಸಮೀಪಿಸುತ್ತಿದೆ ಎಂದು ಅವರಿಗೆ ಅರಿವಾಗಿರಬೇಕು. ತಮ್ಮ ಜನವರಿಯ ಕಾಗದದಲ್ಲಿ ಅವರದನ್ನು ಸೂಚಿಸಿಯೂ ಇದ್ದಾರೆ. ಸುಮಾರು ಹತ್ತು ವರ್ಷಗಳ ಹಿಂದೆ ಒಮ್ಮೆ ಮೈಸೂರಲ್ಲಿ ಶಾಂತಿನಾಥ್ ಸೇರಿದಂತೆ ನಾವು ಕೆಲವು ಸಾಹಿತಿಗಳು ಕಿಂಗೈಕೋರ್ಟಿನ ಬಾರಿನಲ್ಲಿ ಸಾಕಷ್ಟು ಕುಡಿದು ಕಾರಿನಲ್ಲಿ ವಾಪಸು ನಮ್ಮ ರೂಮಿಗೆ ಹೋಗುವ ಸಂದರ್ಭ ನೆನಪಾಗುತ್ತಿದೆ. ಶಾಂತಿನಾಥ್‌ಗೆ ಹತ್ತಿರವಾಗಿದ್ದ ಆದರೆ ವಯಸ್ಸಿನಲ್ಲಿ ಅವರಿಗಿಂತ ತುಂಬಾ ಚಿಕ್ಕವಳಿದ್ದ-ಒಬ್ಬಾಕೆ ಯುವತಿಯನ್ನು ನಾವು ಆಕೆಯ ಮನೆ ಸಮೀಪ ಇಳಿಸಬೇಕಿತ್ತು. ಶಾಂತಿನಾಥ್ ಬಹಳ ಭಾವುಕರಾಗಿದ್ದರು. ಆಕೆಯ ಕೈ ಹಿಡಿದು ಆರ್ತರಾಗಿ, “I don’t want to die…” ಎಂದು ಹೇಳತೊಡಗಿದರು. ಸಾಹಿತ್ಯಕ್ಕೆ ಇಂಥ ಆರ್ತತೆಯೂ ಕಾರಣವಿರಬಹುದೇ ಎಂದು ನನಗೆ ಆಶ್ಚರ್ಯವಾಗುತ್ತದೆ. ಪ್ರತಿಯೊಂದು ಕೃತಿಯೂ ಬದುಕಿನ ಭರವಸೆಯನ್ನು ಮತ್ತೆ ಮತ್ತೆ ದೃಢೀಕರಿಸುವ ವಿಧಾನವಿರಬಹುದೆ?

ಸೌಜನ್ಯ : ನುಡಿ ಪುಸ್ತಕ, ಬೆಂಗಳೂರು. 8073321430